ಮಧುರಾಧರ ರಂಗಿನಾಗರ

7

ಮಧುರಾಧರ ರಂಗಿನಾಗರ

Published:
Updated:

ತುಟಿರಂಗು ಎಂದೊಡನೆ ಹೆಂಗಳೆಯರೊಮ್ಮೆ ನಾಲಗೆಯಂಚಿನಿಂದ ತುಟಿ ಸವರಿಕೊಂಡು ತಮ್ಮ ಗುಟ್ಟು ರಟ್ಟಾಯಿತೆ ಎಂಬಂತೆ ಆಚೀಚೆ ಕಣ್ಣು ಹೊರಳಿಸುತ್ತಾರೆ. ನಮ್ಮಲ್ಲಿ ತುಟಿರಂಗು ಬಳಸುವುದು ಸಾಮಾನ್ಯವಾದರೂ ಹಿಂದಿನಿಂದಲೂ ಅದನ್ನು ಒಪ್ಪಿಕೊಳ್ಳುವುದು ಕಷ್ಟದ ಮಾತು.

ಅದೇ ಕಾರಣಕ್ಕೆ ಸಹಜವಾಗಿಯೇ ಕಾಣಲಿ ಎಂಬಂಥ ಕಂದು ಹಾಗೂ ಗುಲಾಬಿ ಬಣ್ಣದ ಶೇಡುಗಳೇ ಹೆಚ್ಚಾಗಿ ಭಾರತೀಯ ಮಾರುಕಟ್ಟೆಯನ್ನು ಆವರಿಸಿಕೊಂಡಿದ್ದವು. ಆದರೀಗ ಜಮಾನಾ ಬದಲಾಗಿದೆ. ನಗು ಅಂದವಾಗಿರಲಿ, ಆಕರ್ಷಕವಾಗಿರಲಿ ಎಂಬ ಅಂಶದೊಂದಿಗೆ ನಾಲ್ಕು ಜನರ ಗಮನಸೆಳೆಯುವಂತಿರಲಿ ಎಂದು ಬಯಸುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ಗಾಢ ಬಣ್ಣದ ಲಿಪ್‌ಸ್ಟಿಕ್‌ ಮಾರಾಟ ಹೆಚ್ಚುತ್ತಿದೆ.ಹಿಂದೆಲ್ಲ ಮದುವೆ, ಫೋಟೊ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಲಲನೆಯರು ಕೆಂಪು, ಗುಲಾಬಿ, ಗಾಢಗುಲಾಬಿ ಬಣ್ಣಗಳನ್ನು ಬಳಸುತ್ತಿದ್ದರು. ಚಿತ್ರ ತಾರೆಯರಿಗೆ ಮಾತ್ರ ಈ ಬಣ್ಣದ ತುಟಿರಂಗುಗಳ ಹಂಗು ಸದಾ ಇತ್ತು. ಸಾಮಾನ್ಯ ಮಹಿಳೆಯರು, ಯುವತಿಯರು ತುಟಿರಂಗು ಕಣ್ಣರಳಿಸುವಂತಿದ್ದರೆ ಸಾಕು, ಕಣ್ಣಿಗೆ ರಾಚದಂತಿರಲಿ ಎಂದು ಬಯಸುತ್ತಿದ್ದರು. ಇದೇ ಕಾರಣಕ್ಕೆ ಕಂದು, ತಿಳಿಕಂದು, ತಿಳಿಗುಲಾಬಿ ಇವೆರಡೂ ಬಣ್ಣಗಳ ಮಿಶ್ರಣದಂತಿದ್ದ ಕ್ಯಾರಾಮಿಲ್‌ ವರ್ಣದ ಲಿಪ್‌ಸ್ಟಿಕ್ ಮಾರಾಟವೇ ಜೋರಾಗಿರುತ್ತಿತ್ತು.
ಕೆಂದುಟಿಗಾಗಿ...

* ದಾಳಿಂಬೆ ಹಣ್ಣನ್ನು ಹೆಚ್ಚು

    ಸೇವಿಸಬೇಕು.

* ನಿಯಮಿತವಾಗಿ ಬೆಣ್ಣೆ

    ಅಥವಾ ತುಪ್ಪದ ಲೇಪನ

* ಸಾಕಷ್ಟು ನೀರು

    ಕುಡಿಯಬೇಕು

* ಧೂಮಪಾನ,

    ಮದ್ಯಪಾನದಿಂದ

    ದೂರವಿರಬೇಕು.

ಯಾವಾಗ ಯಾವ ಬಣ್ಣ?

ಭಾರತೀಯ ಮಹಿಳೆಯರ ಚರ್ಮದ ಬಣ್ಣವನ್ನು ಆಧರಿಸಿ ನೋಡುವುದಾದರೆ ತಿಳಿಬಣ್ಣದವರಿಗೆ ಗಾಢ ಗುಲಾಬಿ ಚಂದಕಾಣುತ್ತದೆ.ಕಂದು ಮತ್ತು ಕೆಂಬಣ್ಣದ ವಿವಿಧ ಶೇಡ್‌ಗಳು ಎಂಥ ಬಣ್ಣದ ಚರ್ಮವಾದರೂ ಹೊಂದಿಕೊಳ್ಳುತ್ತದೆ.ದಿನದ ಬೆಳಕಿನಲ್ಲಿ ತಿಳಿಬಣ್ಣಗಳು ಚಂದಕಾಣಿಸುತ್ತವೆ. ರಾತ್ರಿಯಲ್ಲಿ ಕಡುಕೆಂಪು, ಗಾಢಗುಲಾಬಿ ಬಣ್ಣಗಳು ಕಳೆಗಟ್ಟಿಸುತ್ತವೆ.ಗಾಢವರ್ಣಗಳನ್ನು ಪ್ರಯತ್ನಿಸುವುದಾದರೆ ಚಳಿಗಾಲ ಅತ್ಯುತ್ತಮ ಸೀಸನ್‌.

ಆದರೀಗ ಜಮಾನಾ ಬದಲಾಗುತ್ತಿದೆ ಎನ್ನುತ್ತಾರೆ ಖ್ಯಾತ ಬಾಲಿವುಡ್‌ ಮೇಕಪ್‌ ಕಲಾವಿದೆ ನೇಹಾ ಖನ್ನಾ. ಕಂದು ಬಣ್ಣದ ಎಲ್ಲ ಶೇಡ್‌ಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿದಷ್ಟೂ ಗಾಢ ವರ್ಣದ ತುಟಿರಂಗಿನ ಮೆರಗು ಹೆಚ್ಚುತ್ತಿದೆ. ಗಾಢ ಕೆಂಪು, ಕಿತ್ತಳೆ, ಗುಲಾಬಿಯೊಂದಿಗೆ ಕಡು ಚಾಕಲೇಟ್‌ ಬಣ್ಣದ ಲಿಪ್‌ಸ್ಟಿಕ್‌ ಸಹ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.ಕಡುಕೆಂಪು ಬಣ್ಣದ ತುಟಿರಂಗು ಬಳಸುವ ಯುವತಿಯರು ಸಾಮಾನ್ಯವಾಗಿ ಆತ್ಮವಿಶ್ವಾಸದಿಂದ ಬೀಗುವ ಧೈರ್ಯಶಾಲಿಗಳಾಗಿರುತ್ತಾರೆ. ಜನರಲ್ಲಿ ಎದ್ದು ಕಾಣಬೇಕು ಎಂಬ ಹಂಬಲದೊಂದಿಗೆ ಯಾರು ಏನೆಂದುಕೊಂಡರೇನು ಎಂಬ ಮನೋಭಾವವೂ ಅವರದ್ದಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕಿತ್ತಳೆ ಬಣ್ಣ ಬಳಸುವ ಯುವತಿಯರು ಜನರ ಗಮನ ಸೆಳೆಯಲು ಇಷ್ಟ ಪಡುತ್ತಾರೆ.

ಅತ್ಯಾಕರ್ಷಕ ವ್ಯಕ್ತಿತ್ವದವರು ಎಂದು ಬಿಂಬಿಸಲು ಇಷ್ಟಪಡುವಂಥವರು ಆಗಿರುತ್ತಾರೆ. ಹೆಚ್ಚು ಪ್ರಯೋಗಗಳಿಗೆ ಮುಂದಾಗುವವರು, ಸವಾಲುಗಳನ್ನು ಸ್ವೀಕರಿಸುವಂಥವರು ಎಂದು ವರ್ಣವೈವಿಧ್ಯದ ಗುಣ ಸ್ವಭಾವವನ್ನು ವಿವರಿಸುತ್ತಾರೆ. ಬದುಕಿನ ಬಣ್ಣಗಳು ಬದಲಾಗುತ್ತಿರುವಾಗ ತುಟಿರಂಗಿನ ಆದ್ಯತೆಗಳೂ ಬದಲಾಗುತ್ತವೆ ಎನ್ನುವುದು ಅವರ ವಿಶ್ಲೇಷಣೆಯಾಗಿದೆ.

ರಂಗಿನೊಲುಮೆ

ಭರತನಾಟ್ಯ ನೃತ್ಯ ಪ್ರದರ್ಶನಕ್ಕಾಗಿ ನಾನು ಎಂಟನೇ ವಯಸ್ಸಿಗೆ ತುಟಿರಂಗು ಹಚ್ಚಿಕೊಂಡೆ. ಅದು ಗಾಢ ಕೆಂಪು ವರ್ಣದ್ದು. ಹೇಗೆ ಕಾಣಿಸುತ್ತೇನೆ ಎಂದು ಪದೇಪದೇ ಕನ್ನಡಿಯತ್ತ ಕುಡಿನೋಟ ಬೀರುತ್ತಿದ್ದೆ. ಆ ಕ್ಷಣದ ಖುಷಿಯೇ ಬೇರೆ ಇತ್ತು ಬಿಡಿ.ಚಿಕ್ಕವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿರಿಸಿದ ಮೇಲಂತೂ ತುಟಿಯ ರಂಗು ಕೂಡ ನನ್ನ ಜೀವನದ ಭಾಗವಾಯ್ತು. ಲಿಪ್‌ಸ್ಟಿಕ್‌, ಕುಂಕುಮ ಇಲ್ಲದೆ ನಾನು ಎಂದೂ ಹೊರಗೆ ಹೋಗುವುದಿಲ್ಲ. ಮನೆಯಲ್ಲಿದ್ದಾಗ ಮಾತ್ರ ಲಿಪ್‌ಸ್ಟಿಕ್‌ ಮುಟ್ಟಲ್ಲ.ನೀವ್ಯಾಕೆ ತುಟಿರಂಗು ಹಚ್ಚಿಕೊಳ್ಳುತ್ತೀರಿ ಎಂದು ತುಂಬಾ ಜನ ಕೇಳಿದ್ದಿದೆ. ಅದು ನನಗಿಷ್ಟ ಎಂದಷ್ಟೇ ಉತ್ತರಿಸಿ ಸುಮ್ಮನಾಗುತ್ತೇನೆ. ವರ್ಷಕ್ಕೆ ಒಂದು ಬಾರಿ ಮಾತ್ರ ನಾನು ಲಿಪ್‌ಸ್ಟಿಕ್‌ ಖರೀದಿಸುತ್ತೇನೆ. ‘ಸಿ.ಡಿ’ ಲಿಪ್‌ಸ್ಟಿಕ್‌ ನನ್ನ ಫೇವರಿಟ್‌. ಕೆಂಪು ಬಣ್ಣ ನನ್ನ ತುಟಿಗೆ ಹೆಚ್ಚು ಹೊಂದುತ್ತದೆ.ಸೀರೆಗೆ ತಕ್ಕಂತೆ ತುಟಿಯ ರಂಗನ್ನು ನಾನು ಯಾವತ್ತೂ ಬದಲಿಸಿಲ್ಲ. ಇತ್ತೀಚೆಗೆ ದಿರಿಸಿಗೆ ಹೊಂದುವ ರಂಗನ್ನು ಅಧರಕ್ಕೆ ಹಚ್ಚಿಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಹಾಗೆ ಹಚ್ಚುವಾಗ ಸ್ವಲ್ಪ ಗಮನ ನೀಡಬೇಕು. ಯಾವ ಕಂಪೆನಿಯ ಲಿಪ್‌ಸ್ಟಿಕ್‌ ನಿಮ್ಮ ತುಟಿಗೆ ಹೊಂದುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿ. ತುಟಿ ತುಂಬಾ ಮೃದುವಾದ ಅಂಗವಾದ್ದರಿಂದ ಆರೈಕೆ ಅತ್ಯಗತ್ಯ.

–ಜಯಮಾಲಾ, ನಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry