ಮಧ್ಯಂತರ ಚುನಾವಣೆ ಇಲ್ಲ- ಸಿಎಂ

7

ಮಧ್ಯಂತರ ಚುನಾವಣೆ ಇಲ್ಲ- ಸಿಎಂ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರಕ್ಕಿಂತ ಮೊದಲೇ ರಾಜ್ಯ ಬಜೆಟ್ ಮಂಡಿಸುತ್ತಿರುವುದಕ್ಕೆ ನಾನಾ ಊಹಾಪೋಹಗಳು ಕೇಳಿಬರುತ್ತಿದ್ದು, ಇದರ ಹಿಂದೆ ಮಧ್ಯಂತರ ಚುನಾವಣೆಗೆ ಹೋಗುವ ಯಾವ ಉದ್ದೇಶವೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಇಲ್ಲಿ ಸ್ಪಷ್ಟಪಡಿಸಿದರು.

ಬೇಗ ಬಜೆಟ್ ಮಂಡಿಸಿ ಯಡಿಯೂರಪ್ಪ ಚುನಾವಣೆಗೆ ಹೋಗುತ್ತಾರೆಂದು ಕೆಲವರು ಗುಲ್ಲೆಬ್ಬಿಸುತ್ತಿದ್ದು, ಅದಕ್ಕೆ ಶಾಸಕರು ಸೇರಿದಂತೆ ಯಾರೂ ಕೂಡ ಕಿವಿಗೊಡಬಾರದು ಎಂದು ಅವರು ನಿಗಮ-ಮಂಡಳಿಗಳ ಅಧ್ಯಕ್ಷರ ಸಭೆಯಲ್ಲಿ ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ನಗರದ ಹೋಟೆಲ್‌ವೊಂದರಲ್ಲಿ ನಿಗಮ- ಮಂಡಳಿ ಅಧ್ಯಕ್ಷರ ಸಭೆ ಕರೆದು ಪ್ರಗತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಕೂಡ ಹಾಜರಿದ್ದರು.

‘ರಾಜ್ಯದಲ್ಲಿ ಬಿಜೆಪಿಯೇ ಇನ್ನೂ 15 ವರ್ಷಗಳ  ಕಾಲ ಆಡಳಿತ ನಡೆಸಲಿದೆ. ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸುತ್ತಿದ್ದು, ಯಾವುದೇ ಕಾರಣಕ್ಕೂ ಚುನಾವಣೆಗೆ ಹೋಗುವುದಿಲ್ಲ. ಅತ್ಯುತ್ತಮ ಬಜೆಟ್ ನೀಡುತ್ತೇನೆ. ಉತ್ತಮ ಕೆಲಸ ಮಾಡೋಣ’ ಎಂದು ಎಲ್ಲರಿಗೂ ಯಡಿಯೂರಪ್ಪ ಕಿವಿ ಮಾತು ಹೇಳಿದರು ಎಂದು ಗೊತ್ತಾಗಿದೆ.

‘ಬಹುಮತ ಇಲ್ಲದ ಕಾರಣಕ್ಕೆ ಗೊಂದಲ ಉಂಟಾಯಿತು. ಇನ್ನು ಮುಂದೆ ಆ ರೀತಿ ಆಗಬಾರದೆಂದು ಮುಂದಿನ ಚುನಾವಣೆಗಳಲ್ಲಿ 150 ಸೀಟುಗಳನ್ನು ಗೆಲ್ಲಲು ಯೋಜನೆ ಹಾಕಿಕೊಂಡಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಕೃಷಿ ಬಜೆಟ್: ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಇದೇ 24ರಂದು ಸಾಮಾನ್ಯ ಬಜೆಟ್ ಮಂಡನೆಗೂ ಮುನ್ನ ಕೃಷಿ ಬಜೆಟ್ ಮಂಡಿಸಲಾಗುವುದು. ಇದನ್ನೂ ನಾನೇ ಮಂಡಿಸುತ್ತೇನೆ’ ಎಂದಿದ್ದಾರೆ. ಹಲವು ಇಲಾಖೆಗಳ ಸಹಕಾರದೊಂದಿಗೆ ಕೃಷಿ ಬಜೆಟ್ ರೂಪುಗೊಳ್ಳುತ್ತಿದೆ ಎಂದರು.

ಮುಚ್ಚಲ್ಲ: ನಷ್ಟದಲ್ಲಿರುವ ನಿಗಮ- ಮಂಡಳಿಗಳನ್ನು ಮುಚ್ಚುವುದಿಲ್ಲ. ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಂಸ್ಥೆಗಳು ಈಗ ಲಾಭದತ್ತ ಸಾಗಿವೆ. ಹೀಗಾಗಿ ನಷ್ಟದಲ್ಲಿರುವ ನಿಗಮ ಮಂಡಳಿಗಳಿಗೆ ಚೈತನ್ಯ ತುಂಬಲಾಗುವುದು ಎಂದು ಹೇಳಿದರು.

ಕಾರಣಾಂತರಗಳಿಂದ ಎಲ್ಲಾ ನಿಗಮ- ಮಂಡಳಿಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವ ಕಾರ್ಯ ಪೂರ್ಣಗೊಂಡಿಲ್ಲ. ಹೀಗಾಗಿ ಬಜೆಟ್ ನಂತರ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದರು.

ಈಶ್ವರಪ್ಪ ಸಲಹೆ: ನಿಗಮ-ಮಂಡಳಿ ಅಧ್ಯಕ್ಷರು ಹೇಗೆ ಕೆಲಸ ಮಾಡುತ್ತಿದ್ದಾರೆ, ಅವರ ಮುಂದಿನ ಯೋಜನೆಗಳು ಏನು ಎನ್ನುವುದರ ಬಗ್ಗೆ ಚರ್ಚಿಸಲಾಯಿತು. ಕೆಲ ನಿಗಮಗಳಿಗೆ ಬಜೆಟ್‌ನ ನೆರವು ಬೇಕಾಗಿದ್ದು, ಆ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ನಷ್ಟದಲ್ಲಿದ್ದ ಅನೇಕ ನಿಗಮಗಳು ಲಾಭದತ್ತ ತಿರುಗಿವೆ. ಹೀಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ಸಭೆ ಕರೆದು, ಅವರ  ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಪೂರ್ಣ ಸಹಕಾರ ನೀಡುವಂತೆ ಸಚಿವರಿಗೂ ತಿಳಿಸಲಾಗಿದೆ ಎಂದು ನುಡಿದರು.

ಮುಂಬರುವ ಬಜೆಟ್‌ನಲ್ಲಿ ಕೃಷಿ, ನೀರಾವರಿ, ಇಂಧನ, ಮೂಲ ಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿರುವುದಾಗಿ ಈಶ್ವರಪ್ಪ ಹೇಳಿದರು.

ಸಭೆಯಲ್ಲಿ ಗೃಹ ಸಚಿವ ಆರ್.ಅಶೋಕ, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry