ಶನಿವಾರ, ಮೇ 28, 2022
24 °C

ಮಧ್ಯಪ್ರದೇಶದಲ್ಲಿ ಇಸ್ರೇಲ್ ಬಂಡವಾಳ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ (ಪಿಟಿಐ): ಕೃಷಿ, ತೋಟಗಾರಿಕೆ, ಮೀನು ಸಾಕಾಣಿಕೆ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ 40 ಸಾವಿರ ಕೋಟಿ ರೂಪಾಯಿಗಳ ಬೃಹತ್ ಬಂಡವಾಳ ಹೂಡಿಕೆಗೆ ಇಸ್ರೇಲ್ ಮುಂದಾಗಿದೆ. ಇದಕ್ಕಾಗಿ ಅದು ಆಯ್ದುಕೊಂಡ ತಾಣ ಭಾರತದ ಮಧ್ಯಪ್ರದೇಶ ರಾಜ್ಯ.

ಇಸ್ರೇಲ್‌ನ ಆರ್ಥಿಕ ಸಲಹೆಗಾರ ಮೌನೀರ್ ಅಗ್ಬರಿಯಾ ಅವರ ನೇತೃತ್ವದಲ್ಲಿ ಇಂಡೊ-ಇಸ್ರೇಲ್ ವಾಣಿಜ್ಯೋದ್ಯಮ ಒಕ್ಕೂಟದ ತಂಡವೊಂದು ಮಧ್ಯಪ್ರದೇಶ ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ, ರೂ. 40,000 ಕೋಟಿ ಬಂಡವಾಳ ಹೂಡಿಕೆ ಕುರಿತಂತೆ ಪ್ರಸ್ತಾವನೆಯನ್ನು ಮುಂದಿಟ್ಟಿದೆ’ ಎಂದು ಪಿಎಚ್‌ಡಿ ವಾಣಿಜ್ಯೋದ್ಯಮ ಒಕ್ಕೂಟ ಹಾಗೂ ರಾಜ್ಯ ಕೈಗಾರಿಕಾ ನಿರ್ದೇಶಕ ರಾಜೇಂದ್ರ ಕೊಠಾರಿ ಸುದ್ದಿಗಾರರಿಗೆ ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ತೋರಿರುವ ಇಸ್ರೇಲ್, ಮಧ್ಯಪ್ರದೇಶದಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭಿಸುವ ಯೋಜನೆ ಹೊಂದಿದೆ. ಈ ಮೂಲಕ ಕೃಷಿ ಉತ್ಪನ್ನಗಳ ಅಭಿವೃದ್ಧಿ ಕುರಿತಂತೆ ರೈತರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ತರಬೇತಿ ನೀಡುವುದು ಹಾಗೂ ಮುಂದಿನ 10 ವರ್ಷಗಳಲ್ಲಿ ಕೃಷಿ ಉತ್ಪನ್ನಗಳ ಉತ್ಪಾದಕತೆ ಹೆಚ್ಚಿಸುವುದರ ಜತೆಗೆ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡುವುದು ಇಸ್ರೇಲ್‌ನ ಮೂಲ ಉದ್ದೇಶವಾಗಿದೆ ಎಂದು ಕೊಠಾರಿ ಹೇಳಿದರು.

ಈಗಾಗಲೇ ಕೃಷಿ ಹಾಗೂ ಸಹಕಾರಿ ಇಲಾಖೆಗಳ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಹಾಗೂ ತೋಟಗಾರಿಕೆ ಇಲಾಖೆಯ ನಿರ್ದೇಶಕರೊಂದಿಗೆ ಒಂದು ಹಂತದ ಮಾತುಕತೆ ಮುಗಿದಿದ್ದು, ಬರುವ ಮಾರ್ಚ್‌ನಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಅವರು ತಿಳಿಸಿದರು.

ಕೃಷಿ ಹಾಗೂ ಹೈನು ಉತ್ಪಾದನಾ ಕ್ಷೇತ್ರದಲ್ಲಿ ಇಸ್ರೇಲ್ ಕಡಿಮೆ ಮೂಲಸೌಕರ್ಯ ಹಾಗೂ ಗರಿಷ್ಠ ತಂತ್ರಜ್ಞಾನ ಬಳಕೆಯಿಂದಾಗಿ ಉತ್ಪಾದನೆ ಹೆಚ್ಚಿಸಿಕೊಳ್ಳುವುದರ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅದೂ ಅಲ್ಲದೆ, ಕೇವಲ 10 ಇಂಚು ಮಳೆ ಬೀಳುವ ಪ್ರದೇಶದಲ್ಲೂ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ ತೋರಿಸಿದೆ.

ಇಸ್ರೇಲ್ ಹಸುಗಳು ಪ್ರತಿನಿತ್ಯ 40 ಲೀಟರ್ ಹಾಲು ಕೊಡುತ್ತವೆ. ಆದರೆ ಮಧ್ಯಪ್ರದೇಶದ ಹಸುಗಳು ಪ್ರತಿನಿತ್ಯ ಕೊಡುವ ಹಾಲಿನ ಪ್ರಮಾಣ ಸರಾಸರಿ ಎರಡು ಲೀಟರ್ ಮಾತ್ರ ಎಂದು ಕೊಠಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.