ಬುಧವಾರ, ಅಕ್ಟೋಬರ್ 16, 2019
22 °C

ಮಧ್ಯಮ ಗಾತ್ರದ ಕಾರಿಗೆ ಆದ್ಯತೆ

Published:
Updated:
ಮಧ್ಯಮ ಗಾತ್ರದ ಕಾರಿಗೆ ಆದ್ಯತೆ

ನವದೆಹಲಿ: ಕಾರುಗಳ ತಯಾರಿಕೆಯಲ್ಲಿ ಶೇ 40ರಷ್ಟು ಮಾರುಕಟ್ಟೆ ಪಾಲುದಾರಿಕೆ ಹೊಂದಿರುವ ಮಾರುತಿ ಸುಜುಕಿ, ಯುಟಿಲಿಟಿ ಕಾರುಗಳ ವಿಭಾಗದಲ್ಲಿ ಮಧ್ಯಮ ಗಾತ್ರದ      `ಎರ್ಟಿಗಾ~ ಕಾರನ್ನು ಇಲ್ಲಿನ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ 11ನೇ ವಾಹನ ಮೇಳದ ಎರಡನೇ ದಿನವಾದ ಶುಕ್ರವಾರ  ಬಿಡುಗಡೆ ಮಾಡಿತು.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಷಿನ್ಜೊ  ನಕನಾಷಿ ಹಾಗೂ ಜಾಗತಿಕ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಕೆನೆಚಿ ಅಕಾವಾ `ಎರ್ಟಿಗಾ~ ಕಾರನ್ನು ಪರಿಚಯಿಸಿದರು.`2020ರ ವೇಳೆಗೆ ವಾಹನ ಕ್ಷೇತ್ರದಲ್ಲಿ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗುವ ಸಂಭವ ಇರುವುದರಿಂದ ಹಾಗೂ ಭವಿಷ್ಯದಲ್ಲಿ ಎದುರಾಗುವ ಸವಾಲುಗಳಿಗೆ ಸಂಸ್ಥೆ ಸರ್ವ ಸನ್ನದ್ಧವಾಗಿದೆ~ ಎಂದರು. `ಭಾರತದಲ್ಲಿ ಮಧ್ಯಮ ಗಾತ್ರದ ಕಾರುಗಳ ಪಾಲು ಶೇ 5ರಷ್ಟು ಇರುವುದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ.ಇಂಡೋನೇಷ್ಯಾ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಈ ವಿಭಾಗದ ಕಾರುಗಳಿಗೆ ಭಾರಿ ಬೇಡಿಕೆ ಇರುವುದರಿಂದ ಹಾಗೂ ಭಾರತದಲ್ಲಿ `ಎಸ್‌ಯುವಿ~ ಹಾಗೂ `ಎಂಪಿವಿ~ ಕಾರುಗಳ ಬೇಡಿಕೆ ಕಳೆದ ನಾಲ್ಕು ವರ್ಷಗಳಲ್ಲಿ 12 ಪಟ್ಟು ಏರಿರುವುದರಿಂದ ಮಾರುತಿ ಸುಜುಕಿ ತನ್ನ ಬೆಳವಣಿಗೆ ದೃಷ್ಟಿಯಿಂದ ಈ ಕ್ಷೇತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ~ ಎಂದು ಭಾರತೀಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಶಶಾಂಕ ಶ್ರೀವಾತ್ಸವ ತಿಳಿಸಿದರು.`ಕೆ ಸರಣಿಯ 1.4 ಲೀಟರ್ ಸಾಮರ್ಥ್ಯದ ವಿವಿಟಿ ಪೆಟ್ರೋಲ್ ಎಂಜಿನ್ ಅನ್ನು ಇದೇ ಮೊದಲ ಬಾರಿಗೆ ಕಂಪೆನಿ ಪರಿಚಯಿಸುತ್ತಿದೆ. ಜತೆಯಲ್ಲಿ 1.3 ಲೀಟರ್ ಸಾಮರ್ಥ್ಯದ ಡಿಡಿಐಎಸ್ ಎಂಜಿನ್ ಹೊಂದಿರುವ `ಎರ್ಟಿಗಾ~ ತನ್ನ ಇತರ ಕಾರುಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ. ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 16 ಕಿ.ಮೀ ಹಾಗೂ ಡೀಸೆಲ್ 20 ಕಿ.ಮೀ ಇಂಧನ ದಕ್ಷತೆ ಹೊಂದಿದೆ. ಮೂರು ಮಾದರಿ ಹೊಂದಿರುವ `ಎರ್ಟಿಗಾ~ ಕಾರುಗಳ ನೋಂದಣಿ ಏಪ್ರಿಲ್ ಮೊದಲ ವಾರದಲ್ಲಿ ಆರಂಭವಾಗಲಿದೆ~ ಎಂದು ಮಾರುತಿ ಸುಜುಕಿ ಅಧಿಕಾರಿಗಳು ತಿಳಿಸಿದರು. ಮೂರು ಸಾಲಿನ ಏಳು ಆಸನಗಳ ವ್ಯವಸ್ಥೆ ಇರುವ ಈ ಕಾರಿನ ಕಾಲ್ಪನಿಕ ವಿನ್ಯಾಸ ಕಳೆದ ಸಾಲಿನ ವಾಹನ ಮೇಳದಲ್ಲಿಯೇ ಅನಾವರಣಗೊಳಿಸಲಾಗಿತ್ತು. ಗುರಗಾಂವ್‌ನಲ್ಲಿರುವ ಮಾರುತಿ ಸುಜುಕಿ ತಯಾರಿಕಾ ಕೇಂದ್ರದಲ್ಲಿ ಈಗಾಗಲೇ ವಾಹನಗಳ ತಯಾರಿಕೆ ಆರಂಭವಾಗಿದೆ. ಆದರೆ, ಇದರ ಬೆಲೆಯನ್ನು ಮಾರ್ಚ್ ಅಂತ್ಯದ ವೇಳೆಗೆ ನಿರ್ಧರಿಸಲಾಗುವುದು ಎಂದು ಶಶಾಂಕ್ ತಿಳಿಸಿದರು.

Post Comments (+)