ಮಧ್ಯಮ ವರ್ಗಕ್ಕೆ ಮಧ್ಯಮ ಮಾರ್ಗ!

7

ಮಧ್ಯಮ ವರ್ಗಕ್ಕೆ ಮಧ್ಯಮ ಮಾರ್ಗ!

Published:
Updated:
ಮಧ್ಯಮ ವರ್ಗಕ್ಕೆ ಮಧ್ಯಮ ಮಾರ್ಗ!ಭಾರತದಲ್ಲಿ 100 ಸಿಸಿ ಇಂದ ಆರಂಭವಾಗಿ ಕೇವಲ 500 ಸಿಸಿ ಎಂಜಿನ್‌ವರೆಗಿನ ಬೈಕ್‌ಗಳಿವೆ. ಸ್ಕೂಟರ್‌ಗಳಲ್ಲಿ ಇನ್ನೂ 150 ಸಿಸಿ ದಾಟಿದ ವಾಹನ ಬಂದಿಲ್ಲ. ಕೈನೆಟಿಕ್ ಸಂಸ್ಥೆ ಈ ಹಿಂದೆ ಇಟಲಿಯ ಹ್ಯೋಸಂಗ್ ಜತೆಗೂಡಿ 190 ಸಿಸಿಯ ಸ್ಕೂಟರ್ ಒಂದನ್ನು ಬಿಡುಗಡೆ ಮಾಡಿದ್ದು ಮಾತ್ರ ಸ್ಮರಣೀಯ.ಆದರೆ ಅಚ್ಚರಿ ಎಂಬಂತೆ ಕೆಲವೇ ದಿನಗಳ ಹಿಂದೆ ಬೈಕುಗಳಿಗೇ ಹೆಸರಾಗಿರುವ ಯಮಹಾ ಕೂಡಾ ಭಾರತೀಯ ಸ್ಕೂಟರ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಮಾತ್ರ ಅಚ್ಚರಿ ಮೂಡಿಸಿದೆ. ಯಮಹಾ ಜಪಾನ್‌ನಲ್ಲಿ ಇದು ಸ್ಕೂಟರ್‌ಗಳನ್ನು ತಯಾರಿಸುತ್ತಾದರೂ, ಅಲ್ಲಿಯೂ ಈ ಕಂಪೆನಿ ಬೈಕ್‌ಗಳಿಗೇ ಪ್ರಸಿದ್ಧ. ಹಾಗಾಗಿ ಭಾರತದಲ್ಲಿ ಯಮಹಾ ಸ್ಕೂಟರ್ ಎಂದಾಗ 1000 ಸಿಸಿಯಲ್ಲಿ ಚಿಂತಿಸಿದವರೇ ಹೆಚ್ಚು. ಆದರೆ ಈ ನಿರೀಕ್ಷೆಯೇ ತಪ್ಪು ಎಂಬುದನ್ನು ಸಾಬೀತು ಮಾಡಲೆಂಬಂತೆ ಯಮಹಾ ಜನಸಾಮಾನ್ಯರ ಸ್ಕೂಟರ್ ಮಾರುಕಟ್ಟೆಗೆ ಬಿಟ್ಟಿದೆ.ಶ್ರೀಸಾಮಾನ್ಯನ ದರ್ಜೆಯ ಸ್ಕೂಟರ್‌ಗಳ ತಯಾರಿಕೆಯ ವಿಷಯದಲ್ಲಿ ಯಮಹಾ ಇನ್ನೂ ಹಸುಗೂಸು. ಇಲ್ಲಿ ವೆಸ್ಪಾ, ಬಜಾಜ್, ಹೋಂಡಾ, ಸುಜುಕಿ ಕಂಪೆನಿಗಳು ತಮ್ಮ ಸ್ಕೂಟರ್‌ಗಳನ್ನು ಹೊರಬಿಟ್ಟು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದೆ. ಈ ಮಧ್ಯೆ ಯಮಹಾ ಏಕೆ ಸ್ಕೂಟರ್ ತಯಾರಿಕೆಗೆ ಹೊರಟಿತು?ಈ ಮೇಲಿನ ಕಂಪೆನಿಗಳು ಹೊರಬಿಟ್ಟಿರುವುದು ಕಡಿಮೆ ಸಾಮರ್ಥ್ಯದ ಸ್ಕೂಟರ್‌ಗಳನ್ನೇ. ಬಜಾಜ್‌ನ ಸೂಪರ್, ಚೇತಕ್ ಇರಬಹುದು. ಅಥವಾ ಈಗ ಅತಿ ಪ್ರಸಿದ್ಧಿಯ ಶಿಖರದಲ್ಲಿರುವ ಹೋಂಡಾದ ಆಕ್ಟಿವಾ, ಡಿಯೋ ಇರಬಹುದು. ಹಿಂದೆ ಇದ್ದ ಕೈನೆಟಿಕ್ ಹೋಂಡಾ ಇರಬಹುದು.

 

ಈ ಸ್ಕೂಟರ್‌ಗಳೆಲ್ಲವೂ 100-110 ಸಿಸಿ ಎಂಜಿನ್ ಸಾಮರ್ಥ್ಯ ಇದ್ದವು. ಬೆಲೆ ಕಡಿಮೆಯಾದರೂ, ಮೈಲೇಜ್ ಹೇಳಿಕೊಳ್ಳುವಂತದ್ದೇನಲ್ಲ. ಇತ್ತೀಚೆಗೆ ಮತ್ತೆ ವೆಸ್ಪಾ ಕೂಡೇ ಮತ್ತೆ ತನ್ನ ಸ್ಕೂಟರ್‌ಗಳನ್ನು ಭಾರತಕ್ಕೆ ತಂದಿದಿದೆ. ಹೀಗಿರುವಾಗ ಯಮಹಾದ ರೇ ಎಂತಹ ಬದಲಾವಣೆ ತರಬಲ್ಲದು ಎಂಬುದೇ ಇಲ್ಲಿನ ಪ್ರಶ್ನೆ.ಯಮಹಾದ ರೇ ಒಂದು ತೀರಾ ಸಾಮಾನ್ಯ ಸ್ಕೂಟರ್. ಅತ್ಯಾಧುನಿಕ ಹೊರ ನೋಟ ಹೊಂದಿರುವ ಈ ಸ್ಕೂಟರ್, 113 ಸಿಸಿಯ  4 ಸ್ಟ್ರೋಕ್ ಎಂಜಿನ್ ಹೊಂದಿದೆ. ಆಟೋ ಗಿಯರ್ ಸಿಸ್ಟಂ ಇದೆ. ಕಂಪೆನಿ ಹೇಳಿಕೊಳ್ಳುವಂತೆ ಲೀಟರ್ ಪೆಟ್ರೋಲ್‌ಗೆ 50 ಕಿಲೋಮೀಟರ್ ಆಜುಬಾಜಿನ ಮೈಲೇಜ್ ಸಿಗುತ್ತದೆ. ವಾಸ್ತವದಲ್ಲಿ ಇದಿಷ್ಟೇ ಇದರ ಲಕ್ಷಣ. ವಿಶೇಷ ಎಂಬಂತೆ ಇದರಲ್ಲಿ ಡಿಸ್ಕ್ ಬ್ರೇಕ್ ಇದೆ. ಇತರ ಸ್ಕೂಟರ್‌ಗಳಲ್ಲೂ ಈಗ ಡಿಸ್ಕ್ ಬ್ರೇಕ್ ಇರುವುದನ್ನು ಗಮನಿಸಬಹುದು.ನೋಡಲು ಹೋಂಡಾದ  ಡಿಯೊ  ಇದ್ದಂತಿದೆ. ಆದರೆ ಯಮಹಾದ ಸ್ಟಿಕರ್ ಹಾಗೂ ಲೋಗೊಗೇ ಬೆಲೆ. ಅತಿ ನಯವಾದ ಎಂಜಿನ್ ಯಮಹಾದ ಭರವಸೆ. ಜತೆಗೆ ಅತ್ಯುತ್ತಮ ಶಕ್ತಿ ಸಿಕ್ಕೇ ಸಿಗುತ್ತದೆ. ಹಾಗಾಗಿ ಕಡಿಮೆ ಅವಧಿಯಲ್ಲೇ ಹೆಚ್ಚು ಬುಕಿಂಗ್‌ಗಳನ್ನೂ ಪಡೆದ ಹೆಗ್ಗಳಿಕೆ ರೇಗೆ ಸಿಗುತ್ತಿದೆ.ಆದರೆ ಯಮಹಾ ಖ್ಯಾತಿಯ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಇದರಲ್ಲಿ ಇಲ್ಲ. ಬದಲಿಗೆ ಸಾಂಪ್ರದಾಯಿಕ ಕಾರ್ಬುರೆಟರ್ ಇದೆ. ಇದೊಂದು ಮೈನಸ್ ಪಾಯಿಂಟ್. ಕೇವಲ 104 ಕಿಲೋಗ್ರಾಂ ತೂಕವಿದ್ದು, ದುರ್ಗಮ ರಸ್ತೆಗಳಿಗೆ ಒಗ್ಗದ ಸ್ಕೂಟರ್ ಇದು. ಏನಿದ್ದರೂ, ನಗರಮಿತಿಯಲ್ಲಿ ಬಳಸಿಕೊಳ್ಳಬಹುದಾದ ಉತ್ತಮ ಸ್ಕೂಟರ್ ಎನ್ನಬಹುದು. ಇದರ ಎಕ್ಸ್‌ಶೋರೂಂ ಬೆಲೆ 46000 ರೂಪಾಯಿಗಳು. ಆನ್ ರೋಡ್ 52000 ರೂಪಾಯಿ ಆಗಲಿದೆ.  

 

ಆಟೊ ಬದಲಿಗೆ ಕ್ಯಾಬ್!

ನಾಲ್ಕು ಚಕ್ರದ ವಾಹನಗಳೂ ಶ್ರೀಸಾಮಾನ್ಯನ ಕಡೆಗೆ ವಾಲಿರುವುದು ವಿಶೇಷ. ಕಡಿಮೆ ಬೆಲೆಗೆ ಸಿಗುತ್ತದೆ ಎಂಬುದನ್ನೇ ಮಾರುಕಟ್ಟೆ ತಂತ್ರ ಮಾಡಿಕೊಂಡ ಟಾಟಾ ನ್ಯಾನೋ ಪ್ರಸಿದ್ಧಿ ಆದದ್ದು ಅಷ್ಟರಲ್ಲೇ ಇದೆ. ಆದರೆ ಯಾವುದೇ ತಂತ್ರವನ್ನೂ ಮಾಡದ ಮಾರುತಿ 800 ಪ್ರಸಿದ್ಧಿ ಪಡೆದದ್ದು ಕೇವಲ ಗುಣಮಟ್ಟದಿಂದ ಮಾತ್ರ ಎಂಬುದನ್ನು ಮರೆಯಬಾರದು.ಆದರೂ ನ್ಯಾನೋ ತೋರಿಸಿಕೊಟ್ಟಿದ್ದು, ಕಡಿಮೆ ಬೆಲೆಗೆ ಗ್ರಾಹಕನಿಗೆ ನೀಡಬಹುದು ಎಂದು. ಇದನ್ನು ಅರಿತುಕೊಂಡ ವಾಹನ ಕಂಪೆನಿಗಳು ಒಂದೊಂದಾಗಿ ತಾವೂ ಕಡಿಮೆ ಬೆಲೆಯ ವಾಹನ ನೀಡಲು ಮುಂದಾಗುತ್ತಿರುವುದನ್ನು ಗಮನಿಸಬಹುದು. ಮಹಿಂದ್ರ ಕಂಪೆನಿ ಒಂದು ಹೆಜ್ಜೆ ಮುಂದೆ ಹೋಗಿ ಆಟೊರಿಕ್ಷಾ ಬದಲಿಗೆ ನಾಲ್ಕು ಚಕ್ರದ ಕ್ಯಾಬ್ ನೀಡುತ್ತಿರುವುದು ಹುಬ್ಬೇರಿಸಿದೆ. ಇದು ಮಹಿಂದ್ರ ಜಿಯೊ ಕ್ಯಾಬ್.ಲೀಟರ್ ಡೀಸೆಲ್‌ಗೆ 30 ಕಿಲೋಮೀಟರ್ ಮೈಲೇಜ್ ನೀಡಬಲ್ಲ ನಾಲ್ಕು ಚಕ್ರದ ವಾಹನವಿದು. ಇದನ್ನು ಕಾರು ಎನ್ನಲು ಕಷ್ಟವೇ. ಆದರೆ ಕಾರಿನ ಸೌಲಭ್ಯಗಳಂತೂ ಇವೆ. ಸುಖಾಸೀನಗಳಿವೆ. ಅತ್ಯುತ್ತಮ ಶಕ್ತಿಯ 9.1 ಬಿಎಚ್‌ಪಿ ಎಂಜಿನ್ ಇದೆ. 7 ಜನ ಆರಾಮಾಗಿ ಕೂರಬಹುದಾಗಿದೆ. ಹಾಗಾಗಿ ಇದು ಅತ್ಯುತ್ತಮ ಪ್ರಯಾಣಿಕ ವಾಹನವೂ ಆಗಲಿದೆ.ಟಾಟಾದ ಇಂಡಿಕ್ಯಾಬ್ ನಂತರ ಟ್ಯಾಕ್ಸಿ ಆಗಬಲ್ಲ ಉತ್ತಮ ವಾಹನ ಭಾರತೀಯರಿಗೆ ಸಿಕ್ಕಿರುವುದು ವಿಶೇಷವೇ ಸರಿ. ಏಕೆಂದರೆ ಇಂಡಿಕ್ಯಾಬ್‌ಗೆ ಭಿನ್ನವಾಗಿ ನಗರ ಮಿತಿಯಲ್ಲಿ ಟ್ಯಾಕ್ಸಿ ಚಾಲನೆ ಮಾಡುವವರಿಗೆ ಇದು ವರದಾನ. ಆಟೊ ರಿಕ್ಷಾಗಿಂತಲೂ ಕಡಿಮೆ ಬೆಲೆ. ಕೇವಲ 1.95 ಲಕ್ಷ ರೂಪಾಯಿಯ ಎಕ್ಸ್ ಶೋರೂಂ ಬೆಲೆಗೆ ಈ ಕ್ಯಾಬ್ ಸಿಗುತ್ತದೆ. ಆಟೊದಂತೆ ಟಾರ್ಪಾಲ್ ಹೊರಗವಚದ ಸೂರು ಇದಕ್ಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry