ಶುಕ್ರವಾರ, ಆಗಸ್ಟ್ 23, 2019
22 °C
ಬೆಳೆ ಹಾನಿಗೆ ಸರ್ಕಾರದ ಪರಿಹಾರ ಧನ

ಮಧ್ಯವರ್ತಿಗಳಿಂದ ರೈತರ ಚೆಕ್ ಖರೀದಿ!

Published:
Updated:

ಕುಷ್ಟಗಿ: ಕಳೆದ ವರ್ಷದ ಮಳೆ ಇಲ್ಲದೇ ಬೆಳೆ ಹಾನಿ ಅನುಭವಿಸಿದ ತಾಲ್ಲೂಕಿನ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಾಜ್ಯ ಸರ್ಕಾರ ನೀಡಿದ ಪರಿಹಾರ ಧನ ಚೆಕ್‌ಗಳನ್ನು ಕೆಲ ಮಧ್ಯವರ್ತಿಗಳು ಸಾರಾಸಗಟಾಗಿ ಖರೀದಿಸುತ್ತಿರುವುದು ಬೆಳಕಿಗೆ ಬಂದಿದೆ.ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಅನುಭವಿಸಿದ ಸಣ್ಣ ರೈತರಿಗೆ ಇನ್‌ಪುಟ್ ಸಬ್ಸಿಡಿ ಪರಿಹಾರ ಧನದ ರೂ 4,82,98,000 ಕೋಟಿಗಳನ್ನು ಕೊಪ್ಪಳ ಜಿಲ್ಲಾಧಿಕಾರಿ ಸ್ಥಳೀಯ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಲ್ಲಿನ  ತಹಶೀಲ್ದಾರರ ಖಾತೆಗೆ ಜಮೆ ಮಾಡಿದ್ದಾರೆ. ಒಟ್ಟು 33,944 ರೈತ ಫಲಾನುಭವಿಗಳನ್ನು ಗುರುತಿಸಿದ್ದು, ಕನಿಷ್ಠ ರೂ 500-2000 ವರೆಗೆ ಪರಿಹಾರ ನೀಡಲು ಸರ್ಕಾರದ ಆದೇಶವಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನೀಡುವ (ಸುವರ್ಣಭೂಮಿ ಫಲಾನುಭವಿಗಳನ್ನು ಹೊರತುಪಡಿಸಿ) ಹಿಡುವಳಿದಾರರ ಪಟ್ಟಿಯಂತೆ ಚೆಕ್‌ಗಳನ್ನು ಆ್ಯಕ್ಸಿಸ್ ಬ್ಯಾಂಕ್ ಕಂದಾಯ ಇಲಾಖೆಗೆ ಹಸ್ತಾಂತರಿಸಿದ್ದು, ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಈಗಾಗಲೇ 97 ಹಳ್ಳಿಗಳ 19,448 ರೈತರಿಗೆ ಚೆಕ್‌ಗಳನ್ನು ನೀಡಲಾಗಿದೆ.ಮಧ್ಯವರ್ತಿಗಳ ಲಗ್ಗೆ: ಸರ್ಕಾರದ ಪರಿಹಾರ ಧನದ ಚೆಕ್‌ಗಳು ರೈತರಿಗೆ ತಲುಪುತ್ತಿದ್ದಂತೆಯೇ ಹಳ್ಳಿಗಳಿಗೆ ಲಗ್ಗೆ ಇಟ್ಟಿರುವ ಕೆಲ ಮಧ್ಯವರ್ತಿಗಳು ರೈತರಿಂದ ಅವುಗಳನ್ನು ಪಡೆದು ರೂ 100-300 ರಂತೆ ಕಡಿತ ಮಾಡಿ ಸ್ಥಳದಲ್ಲೇ ಹಣ ನೀಡುತ್ತಿರುವ ಬಗ್ಗೆ `ಪ್ರಜಾವಾಣಿ'ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಕಡಿಮೆ ಮೊತ್ತದ ಚೆಕ್‌ಗಳನ್ನು ಹಿಡಿದು ಬ್ಯಾಂಕ್‌ಗಳಿಗೆ ಅಲೆದು ಹಣ ಮತ್ತು ಸಮಯ ವ್ಯರ್ಥ ಮಾಡುವುದಕ್ಕಿಂತ ಒಂದಷ್ಟು ಕಡಿಮೆಯಾದರೂ ಸರಿ ಮನೆಬಾಗಿಲಲ್ಲೇ ಹಣ ದೊರೆಯುತ್ತದೆ ಎಂಬ ಕಾರಣಕ್ಕೆ ರೈತರು ಚೆಕ್‌ಗಳನ್ನು ಮದ್ಯವರ್ತಿಗಳಿಗೆ ಒಪ್ಪಿಸುತ್ತಿದ್ದಾರೆ.ಗಂಗಾವತಿ ತಾಲ್ಲೂಕಿನ ಗೌರಿಪುರ ಗ್ರಾಮಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಕಳೆದ ಒಂದು ವಾರದಿಂದಲೂ ಟೆಂಗುಂಟಿ, ಬಸಾಪುರ, ತೆಗ್ಗಿಹಾಳ, ಕೆ.ಗೋನಾಳ, ಗುಮಗೇರಿ, ಚಳಗೇರಿ, ತಳುವಗೇರಿ, ಹಿರೇಮನ್ನಾಪುರ, ತಾವರಗೇರಾ ಸೇರಿದಂತೆ ಪಕ್ಕದ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಹೋಬಳಿ ವ್ಯಾಪ್ತಿಯ ಹಳ್ಳಿಗಳ ರೈತರಿಂದಲೂ ಚೆಕ್‌ಗಳನ್ನು ಖರೀದಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲ ರೈತರು ತಿಳಿಸಿದ್ದಾರೆ.ಸತ್ತವರ ಚೆಕ್‌ಗಳು: ಚೆಕ್‌ಗಳಲ್ಲಿ ಹೆಸರು ತಪ್ಪಾಗಿದ್ದರೆ, ಬದುಕಿದ ಅಥವಾ ಸತ್ತವರು-ಹೀಗೆ ಯಾರ ಹೆಸರಾದರೂ ಸರಿ, ಹಿಂದೆ ಮುಂದೆ ನೋಡದೇ ಖರೀದಿಸಿ ರೈತರ ಕೈಗೆ ಹಣ ಇಡುವ ಮಧ್ಯವರ್ತಿಗಳ ಬಳಿ ಗುರುವಾರ ಚೆಕ್‌ಗಳ ರಾಶಿಯೇ ಇತ್ತು ಎಂಬುದನ್ನು ಟೆಂಗುಂಟಿ, ಕೆ.ಗೋನಾಳ ಗ್ರಾಮದ ಪ್ರತ್ಯಕ್ಷದರ್ಶಿಗಳು ತಿಳಿಸಿದರು.ಚೆಕ್‌ಗಳಿಗೆ ಕ್ರಾಸ್ ಮಾಡಲಾಗಿದ್ದು, ಸಂಬಂಧಿಸಿದ ವ್ಯಕ್ತಿಯ ಖಾತೆಗೆ ಜಮೆಯಾಗಬೇಕು. ಆದರೆ ಈ ರೀತಿ ಸಹಸ್ರ ಸಂಖ್ಯೆ ಚೆಕ್‌ಗಳನ್ನು ಖರೀದಿಸುತ್ತಿರುವ ಮಧ್ಯವರ್ತಿಗಳು ಅವುಗಳನ್ನು ಹೇಗೆ? ಯಾರ ಹೆಸರಿನಲ್ಲಿ ನಗದೀಕರಿಸಿಕೊಳ್ಳುತ್ತಾರೆ? ಎಂಬುದು ಅಚ್ಚರಿಯ ಸಂಗತಿಯಾಗಿದೆ. `ಚೆಕ್‌ಗಳನ್ನು ಬಳ್ಳಾರಿ ಜಿಲ್ಲೆಯ ಆ್ಯಕ್ಸಿಸ್ ಬ್ಯಾಂಕ್‌ಗಳಿಗೆ ನೀಡಿ ಹಣ ಪಡೆಯುತ್ತೇವೆ ಎಂದಷ್ಟೇ ಹೇಳಿದರು' ಎನ್ನುತ್ತಾರೆ ಜನರು.ವ್ಯವಸ್ಥಾಪಕರು ಹೇಳಿದ್ದು: ಈ ಕುರಿತು ಸ್ಥಳೀಯ ಶಾಖೆ ಆ್ಯಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಗೋವರ್ದನ ರೂಪನಗುಡಿ ಅವರನ್ನು `ಪ್ರಜಾವಾಣಿ' ಸಂಪರ್ಕಿಸಿದಾಗ `ಚೆಕ್‌ಗಳು ದುರ್ಬಳಕೆಯಾಗುವುದು ಗಮನಕ್ಕೆ ಬಂದಿಲ್ಲ. ಆನ್‌ಲೈನ್ ವ್ಯವಸ್ಥೆ ಇರುವುದರಿಂದ ಯಾರು, ಎಲ್ಲಿ ಚೆಕ್ ನೀಡಿದರು ಎಂಬುದು ಗೊತ್ತಾಗುವುದಿಲ್ಲ' ಎಂದು ಹೇಳಿದರು.ತಹಶೀಲ್ದಾರ್ ಹೇಳಿಕೆ: `ಚೆಕ್ ಖರೀದಿಸುತ್ತಿರುವ ವಿಷಯ ತಿಳಿದಿಲ್ಲ. ಯಾರಾದರೂ ದೂರು ನೀಡಿದರೆ ಮಧ್ಯವರ್ತಿಗಳನ್ನು ಪೊಲೀಸರಿಗೆ ಒಪ್ಪಿಸುತ್ತೇವೆ' ಎಂದು ತಹಶೀಲ್ದಾರ್ ವೀರೇಶ ಬಿರಾದಾರ ತಿಳಿಸಿದರು.ಕ್ರಿಮಿನಲ್ ಕೇಸ್: 2010ರಲ್ಲಿ ಸರ್ಕಾರದ ನೆರೆಪೀಡಿತ ರೈತರಿಗೆ ಸೇರಿದ ಪರಿಹಾರ ಧನ ಚೆಕ್‌ಗಳನ್ನು ದಾವಣಗೆರೆ ಜಿಲ್ಲೆ ಹರಪನಹಳ್ಳಿ ಖಾಸಗಿ ಬ್ಯಾಂಕ್ ಮೂಲಕ ನಗದೀಕರಿಸಿಕೊಂಡು ದುರುಪಯೋಗಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ `ಪ್ರಜಾವಾಣಿ'ಯಲ್ಲಿ ವರದಿ ಪ್ರಕಟವಾದ ನಂತರವಷ್ಟೇ ಎಚ್ಚೆತ್ತ ಕಂದಾಯ ಇಲಾಖೆ ನೌಕರರನ್ನು ಅಮಾನತುಗೊಳಿಸಿ ಅವರ ಮತ್ತು ಮಧ್ಯವರ್ತಿ ಹಾಗೂ ಬ್ಯಾಂಕ್ ವ್ಯವಸ್ಥಾಪಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

 

Post Comments (+)