ಮಧ್ಯವರ್ತಿ ಹಾವಳಿ ತಡೆಗಟ್ಟಲು ಆಗ್ರಹ

7

ಮಧ್ಯವರ್ತಿ ಹಾವಳಿ ತಡೆಗಟ್ಟಲು ಆಗ್ರಹ

Published:
Updated:

ಚಿತ್ರದುರ್ಗ: ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿನ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಟೋ ಚಾಲಕರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಜೈ ಭಾರತ್ ರಕ್ಷಣಾ ವೇದಿಕೆಯ ಜಿಲ್ಲಾ ಆಟೋ ಚಾಲಕರ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆಟೋ ಚಾಲಕರಿಗೆ ತೊಂದರೆಯಾಗದಂತೆ ಚಾಲನಾ ಪರವಾನಗಿಯನ್ನು ನೀಡಬೇಕು. ವಾಹನಗಳ ನೋಂದಣಿ ಮುಂತಾದ ಕಾರ್ಯಗಳು ನೇರವಾಗಿ ಮತ್ತು ಸರಳವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.ಮಧ್ಯವರ್ತಿಗಳಿಂದಾಗಿ ಆಟೋ ಚಾಲಕರು ದುಪ್ಪಟ್ಟು ಹಣ ನೀಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಲಂಚದ ಹಾವಳಿಯನ್ನು ತಪ್ಪಿಸಬೇಕು ಎಂದರು.ಜಿಲ್ಲೆಯಲ್ಲಿ ಸರ್ಕಾರದಿಂದಲೇ ಮೋಟಾರ್ ಡ್ರೈವಿಂಗ್ ಶಾಲೆಯನ್ನು ಸ್ಥಾಪಿಸಬೇಕು. ಪರವಾನಗಿ ಪಡೆದ ಆಟೋ ಚಾಲಕರು ಮತ್ತು ಮಾಲೀಕರಿಗೆ ನಿವೇಶನಗಳನ್ನು ನೀಡಬೇಕು. ಆಟೋಚಾಲಕರಿಗೂ ಮಾಸಾಶನ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ಎಲ್ಲ ಆಟೋ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸರ್ಕಾರದಿಂದ ವಿಶೇಷ ಅನುಕೂಲಗಳನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ವ್ಯವಸ್ಥಿತವಾದ ಆಟೋ ನಿಲ್ದಾಣಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಆಟೋ ಚಾಲಕರಿದ್ದಾರೆ. ದಿನನಿತ್ಯ ಹಗಲು-ರಾತ್ರಿ ದುಡಿದರೂ ಆಟೋ ಚಾಲಕರ ಕುಟುಂಬಗಳು ಬಡತನದಿಂದ ದೂರವಾಗಿಲ್ಲ. ಪ್ರಸ್ತುತ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರಿರುವುದರಿಂದ ಆದಾಯ ಯಾವುದಕ್ಕೂ ಸಾಲುತ್ತಿಲ್ಲ. ಆದ್ದರಿಂದ ಸರ್ಕಾರ ಆಟೋಚಾಲಕರಿಗೂ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಕೆಂಚಪ್ಪ, ಉಪಾಧ್ಯಕ್ಷ ಪ್ರಕಾಶ್, ಶೇಖ್ ಜಬಿವುಲ್ಲಾ, ಜಿ. ಕೊಟ್ರೇಶ್, ಟಿ. ಪ್ರಕಾಶ್, ಬಸವರಾಜ್, ಚಿದಾನಂದಪ್ಪ, ನಾಗರಾಜ್, ಪಾಲಯ್ಯ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry