ಮಧ್ಯಸ್ಥಿಕೆಯಿಂದ ವ್ಯಾಜ್ಯ ಶೀಘ್ರ ಪರಿಹಾರ

7

ಮಧ್ಯಸ್ಥಿಕೆಯಿಂದ ವ್ಯಾಜ್ಯ ಶೀಘ್ರ ಪರಿಹಾರ

Published:
Updated:

ಬೀದರ್: ಮಧ್ಯಸ್ಥಿಕೆ ಮೂಲಕ ವ್ಯಾಜ್ಯಗಳನ್ನು ಶೀಘ್ರ ಹಾಗೂ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ ಹರೀಶ ಕುಮಾರ್ ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸೋಮವಾರ ಮಧ್ಯಸ್ಥಿಕೆ ಕುರಿತು ನ್ಯಾಯವಾದಿಗಳಿಗೆ ಆಯೋಜಿಸಿರುವ ಒಂದು ವಾರದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಎರಡು ಕಕ್ಷಿದಾರರ ನಡುವಿನ ಸಮಸ್ಯೆಯನ್ನು ಪರಸ್ಪರ ಮಾತುಕತೆಯ ಮೂಲಕ ಸುಲಭವಾಗಿ ಇತ್ಯರ್ಥ್ಯಗೊಳಿಸಲು ಸಹಾಯ ಮಾಡುವ ಪ್ರಕ್ರಿಯೆಯೇ ಮಧ್ಯಸ್ಥಿಕೆ ಆಗಿದೆ. ಇದು ಲೋಕ ಅದಾಲತ್ ಮೊದಲಾದ ವ್ಯವಸ್ಥೆಗಳಿಗೆ ಭಿನ್ನವಾಗಿದೆ. ಇಲ್ಲಿ ಕಕ್ಷಿದಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಮಧ್ಯಸ್ಥಿಕೆದಾರನು ಸಂಧಾನದ ಮೂಲಕ ವಾದ ಇತ್ಯರ್ಥ್ಯಪಡಿಸಲು ನೆರವಾಗುತ್ತಾನೆ ಎಂದು ಹೇಳಿದರು.ಬೆಂಗಳೂರಿನಲ್ಲಿ ಈಗಾಗಲೇ ಆರಂಭಿಸಲಾಗಿರುವ ಮಧ್ಯಸ್ಥಿಕೆ ಕೇಂದ್ರ ಬಹಳಷ್ಟು ಯಶಸ್ವಿಯಾಗಿದ್ದು, ಸಾವಿರಾರು ಪ್ರಕರಣಗಳನ್ನು ಶಾಂತಿಯುತವಾಗಿ ಬಗೆಹರಿಸಲಾಗಿದೆ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಾತನಾಡಿ, ಸಣ್ಣಪುಟ್ಟ ವ್ಯಾಜ್ಯಗಳನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವುದರಿಂದ ಯಾರಿಗೂ ಸಮಾಧಾನ ಇರುವುದಿಲ್ಲ. ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುವ ಮೂಲಕ ದುಡ್ಡು ಹಾಗೂ ಸಮಯ ಉಳಿಸಬಹುದಾಗಿದೆ. ಇದರಿಂದ ಎರಡು ಪಕ್ಷದವರಿಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.ಮಧ್ಯಸ್ಥಿಕೆಗಾಗಿ ನ್ಯಾಯವಾದಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಮಧ್ಯಸ್ಥಿಕೆಯನ್ನು ಸ್ನೇಹಮಯ ವಾತಾವರಣದಲ್ಲಿ ನಡೆಸಲಾಗುತ್ತದೆ. ಎರಡು ಕಕ್ಷಿದಾರರ ವಕೀಲರು ಸಹ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಮಧ್ಯಸ್ಥಿಕೆದಾರನೆಂಬ ಮೂರನೆ ವ್ಯಕ್ತಿ ಸಂವಾದದ ಮೂಲಕ ವಾದವನ್ನು ಬಗೆಹರಿಸಲು ನೆರವಾಗುತ್ತಾನೆ ಎಂದು ನ್ಯಾಯವಾದಿ ಬಿ. ನಂದಗೋಪಾಲ್ ತಿಳಿಸಿದರು.ಮಧ್ಯಸ್ಥಿಕೆಯು ಸ್ವಪ್ರೇರಿತವಾಗಿದ್ದು, ಇದರಲ್ಲಿ ನಿಯಮ ಹಾಗೂ ಸಾಕ್ಷ್ಯಗಳಿಗೆ ಗಮನ ಕೊಡುವುದರ ಬದಲು ಕಕ್ಷಿದಾರರ ಹಿತಾಸಕ್ತಿಗಳಿಗೆ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಯಾದವ ವನಮಾಲಾ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry