ಮಧ್ಯಸ್ಥಿಕೆ ಕೇಂದ್ರ: 22 ವಕೀಲರಿಗೆ ತರಬೇತಿ

7

ಮಧ್ಯಸ್ಥಿಕೆ ಕೇಂದ್ರ: 22 ವಕೀಲರಿಗೆ ತರಬೇತಿ

Published:
Updated:

ತುಮಕೂರು: ವಿವಾದ ಮತ್ತು  ವ್ಯಾಜ್ಯಗಳನ್ನು ಸುಲಭ, ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೈಕೋರ್ಟ್ ಆರಂಭಿಸಿರುವ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ತರಬೇತಿಗೆ ಈ ಬಾರಿ ಜಿಲ್ಲೆಯ 22 ಮಂದಿ ಅನುಭವಿ ವಕೀಲರು ಆಯ್ಕೆಯಾಗಿದ್ದಾರೆ. ಫೆ. 14ರಿಂದ 19ರ ವರೆಗೆ ನಗರದಲ್ಲಿ ತರಬೇತಿ   ನೀಡಲಾಗುವುದು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜೆ.ವಿ.ಅಂಗಡಿ ಹಿರೇಮಠ ತಿಳಿಸಿದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ (ಡಯಟ್) ಕೇಂದ್ರದಲ್ಲಿ 14ರಂದು ಬೆಳಿಗ್ಗೆ 10 ಗಂಟೆಗೆ ತರಬೇತಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಈ ಹಿಂದೆ ತರಬೇತಿ ಪಡೆದಿರುವ 16 ವಕೀಲರಿಗೆ ಫೆ. 19ರಂದು 1ದಿನದ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಅವರು ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಳೆದ ಬಾರಿ 16 ವಕೀಲರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ಇತ್ಯರ್ಥವಾಗಿವೆ. ಒಟ್ಟಾರೆ ರಾಜ್ಯದಾದ್ಯಂತ 11 ಜಿಲ್ಲಾ ಕೇಂದ್ರಗಳಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸುಮಾರು 14 ಸಾವಿರ ಪ್ರಕರಣ ಇತ್ಯರ್ಥವಾಗಿವೆ. ಇಡೀ ದೇಶದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಬಾರಿಯಿಂದ ತಾಲ್ಲೂಕುಗಳಿಗೂ ಮಧ್ಯಸ್ಥಿಕೆ ಕೇಂದ್ರ ವಿಸ್ತರಿಸಲು ಅನುದಾನ ಬಿಡುಗಡೆಯಾಗಿದೆ ಎಂದರು.ಸಿವಿಲ್ ಪ್ರಕ್ರಿಯೆ ಸಂಹಿತೆಯ ಕಲಂ 89 ಜಾರಿಗೊಳಿಸಲು ಮಧ್ಯಸ್ಥಿಕೆ ಕೇಂದ್ರವನ್ನು ಒಂದು ಯೋಜನೆಯಾಗಿ ಅನುಷ್ಠಾನಗೊಳಿಸಲಾಗಿದೆ. ಯಾವುದೇ ವ್ಯಾಜ್ಯದಲ್ಲಿನ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗದೆ ಅದರಲ್ಲಿನ ಪಕ್ಷಕಾರರು ತಮ್ಮ ನಡುವಿನ ವಿವಾದಗಳನ್ನು ಮಾತುಕತೆ ಮತ್ತು ಸೌಹಾರ್ದಯುತ, ಸ್ನೇಹಮಯ ವಾತಾವರಣದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮಧ್ಯಸ್ಥಿಕೆ ಕೇಂದ್ರ ನೆರವಾಗಲಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನ್ಯಾಯಾಧೀಶ ಸದಾನಂದ ಎಂ.ದೊಡ್ಡಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry