ಮಧ್ಯಸ್ಥಿಕೆ ನ್ಯಾಯ ಪಂಚಾಯಿತಿ: ಸಾರ್ವಜನಿಕರಿಗೆ ಅತ್ಯುತ್ತಮ ವ್ಯವಸ್ಥೆ

7

ಮಧ್ಯಸ್ಥಿಕೆ ನ್ಯಾಯ ಪಂಚಾಯಿತಿ: ಸಾರ್ವಜನಿಕರಿಗೆ ಅತ್ಯುತ್ತಮ ವ್ಯವಸ್ಥೆ

Published:
Updated:

ವಿಜಾಪುರ : ವಿವಿಧ ಕಾರಣಗಳಿಗಾಗಿ ನ್ಯಾಯಾಲಯಕ್ಕಾಗಿ ಬರುವ ಕಕ್ಷಿದಾರರ ದೂರುಗಳನ್ನು ನ್ಯಾಯ ಪಂಚಾಯಿತಿ ಮೂಲಕ ವ್ಯಾಜ್ಯ ಪರಿಹರಿಸುವ ಮಧ್ಯಸ್ಥಿಕೆ ನ್ಯಾಯದಾನ ಪದ್ಧತಿ ಅತ್ಯುತ್ತಮ ನ್ಯಾಯ ವಿಧಾನವಾಗಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಸಭಾಂಗಣದಲ್ಲಿ ಶನಿವಾರದಂದು ಕರ್ನಾಟಕ ಉಚ್ಛನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ 6 ದಿನಗಳ ಕಾಲ ಆಯ್ದ ನ್ಯಾಯಾಧೀಶರಿಗೆ ಹಮ್ಮಿಕೊಂಡ 3ನೇ ಹಂತದ ಮಧ್ಯಸ್ಥಿಕೆ ವ್ಯಾಜ್ಯ ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಧ್ಯಸ್ಥಿಕೆ ನ್ಯಾಯ ವಿಧಾನ ನಮ್ಮ ಪರಂಪರೆಯಿಂದ ಬಂದಿದೆ. ಮಹಾಭಾರತದಂತಹ ಕಾಲದಲ್ಲಿ ಧರ್ಮ, ಅಧರ್ಮಗಳನ್ನು ವಿಮರ್ಶಿಸಿ ನ್ಯಾಯಸಮ್ಮತವಾದ ತೀರ್ಮಾನ ನೀಡುವ ಪದ್ಧತಿ ಬೆಳೆದು ಬಂದಿದೆ. ಕುರುಕ್ಷೇತ್ರದಲ್ಲಿ ಶ್ರಿಕೃಷ್ಣ  ಮತ್ತು ಅರ್ಜುನನ ನಡುವೆ ನಡೆದ ಮಾತುಕತೆ ಭಗವದ್ಗಿತೆ ಈ ಮಧ್ಯಸ್ಥಿಕೆ ನ್ಯಾಯ ಪಂಚಾಯಿತಿಯ ಸಂಕೇತವಾಗಿದೆ. ಜನರಲ್ಲಿ ಸಣ್ಣ ಪುಟ್ಟ ವ್ಯಾಜ್ಯಗಳನ್ನು  ನ್ಯಾಯಾಲಯಕ್ಕೆ ತರುವುದರಿಂದ  ವೃಥಾ ಹಣ, ನ್ಯಾಯಾಲಯದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹಾಗೂ ಸಮಾಜದಲ್ಲಿ  ಮನಸ್ಥಾಪ ಹೆಚ್ಚಾಗುತ್ತವೆ. ಮಧ್ಯಸ್ಥಿಕೆ ನ್ಯಾಯ ವಿಧಾನದಿಂದ ಕಕ್ಷಿದಾರರದಲ್ಲಿ ಸೌಹಾರ್ದತೆಯಿಂದ ಇತ್ಯರ್ಥ್ಯ ಪಡಿಸಬಹುದು ಎಂದರು.ಮುಖ್ಯ ಅತಿಥಿಗಳಾಗಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಎ.ಬಿ. ಪ್ರಕಾಶ ಮಾತನಾಡಿ, ಜನರು ಕೋರ್ಟಿಗೆ ನೋವಿನಿಂದ ಬರುತ್ತಾರೆ. ಇಂತಹವರಿಗೆ ತ್ವರಿತವಾಗಿ ವೆಚ್ಚರ ಹಿತವಾಗಿ ನ್ಯಾಯದಾನ ಸಿಗಬೇಕು. ಇದಕ್ಕೆ ಮಧ್ಯಸ್ಥಿಕೆ ನ್ಯಾಯದಾನ ಪದ್ಧತಿ ಪರ್ಯಾಯವಾಗಬಲ್ಲದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಅಶೋಕ ಗದಗ ಮಾತನಾಡಿ, ಜನರಿಗೆ ತ್ವರಿತವಾಗಿ ನ್ಯಾಯವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಲೋಕ ಅದಾಲತ, ಮಧ್ಯಸ್ಥಿಕೆ ಕೇಂದ್ರ, ಇತರ ನ್ಯಾಯದಾನ ಪದ್ಧತಿಗಳನ್ನು ಜಾರಿಗೊಳಿಸಲಾಗಿದೆ. ಮಧ್ಯಸ್ಥಿಕೆ ಕೇಂದ್ರದಿಂದ ಜನರಿಗೆ ತ್ವರಿತವಾಗಿ ಕಡಿಮೆ ಖರ್ಚಿನಲ್ಲಿ ನ್ಯಾಯದಾನ ದೊರಕಿಸಿಕೊಡುವ ಉತ್ತಮ ವ್ಯವಸ್ಥೆಯಾಗಿದೆ ಎಂದು ಹೇಳಿದರು.ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಎಸ್.ಸೋರಗಾಂವಿ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry