ಮಧ್ಯೆಪ್ರವೇಶಿಸಲು ಸರ್ಕಾರಕ್ಕೆ ಮಂಗಳೂರು ಬಿಷಪ್ ಆಗ್ರಹ

7

ಮಧ್ಯೆಪ್ರವೇಶಿಸಲು ಸರ್ಕಾರಕ್ಕೆ ಮಂಗಳೂರು ಬಿಷಪ್ ಆಗ್ರಹ

Published:
Updated:

ಮಂಗಳೂರು: ಲಂಡನ್‌ನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಜೆಸಿಂತಾ ಸಲ್ಡಾನ ಅವರ ನಿಗೂಢ ಸಾವಿನ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಮೃತದೇಹವನ್ನು ಕೂಡಲೇ ಕುಟುಂಬಸ್ಥರಿಗೆ ಒಪ್ಪಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್ ಅವರು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.ಜೆಸಿಂತಾ ಅವರ ಶಿರ್ವದ ಮನೆಯಿಂದ ಅವರ ಪತಿ ಬೆನೆಡಿಕ್ಟ್ ಬಾರ್ಬೋಜಾ ಅವರನ್ನು  ಸಂಪರ್ಕಿಸುವುದಕ್ಕೆ ಲಂಡನ್ ಪೊಲೀಸರು ಅವಕಾಶ ನೀಡುತ್ತಿಲ್ಲ. ಮೃತದೇಹವನ್ನು ಅವರ ಪತಿ ಮತ್ತು ಮಕ್ಕಳಿಗೆ ಸಹ ನೋಡಲು ಅವಕಾಶ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಕುಟುಂಬದವರಿಗೆ ಬಹಳ ಅನ್ಯಾಯವಾದಂತಾಗಿದೆ.ತಕ್ಷಣ ಭಾರತ ಈ ವಿಚಾರದಲ್ಲಿ ಮಧ್ಯೆಪ್ರವೇಶಿಸಬೇಕು ಎಂದು ಬಿಷಪ್ ಪರವಾಗಿ ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಿಗೂಢ ಸಾವಿನ ವಿಷಯದಲ್ಲಿ ಬ್ರಿಟಿಷ್ ಸರ್ಕಾರ ಇದುವರೆಗೆ ನಡೆದುಕೊಂಡ ಕ್ರಮವನ್ನು ನೋಡಿದರೆ ಭಾರತೀಯರ ಬಗ್ಗೆ ತೀರಾ ನಿರ್ಲಕ್ಷ್ಯ ಭಾವನೆ ತಳೆದಂತೆ ತೋರುತ್ತದೆ. ಭಾರತೀಯರ ಗೌರವ ಕಾಯ್ದುಕೊಳ್ಳುವುದಕ್ಕೆ ದೂತಾವಾಸ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.ಶಿರ್ವಕ್ಕೆ ಲಂಡನ್ ಪೊಲೀಸರು?: ಜೆಸಿಂತಾ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಎರಡು ದಿನಗಳ ಹಿಂದೆ ಶಿರ್ವದ ಅವರ ಮನೆಗೆ ಲಂಡನ್‌ನಿಂದ ಇಬ್ಬರು ಪೊಲೀಸರು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಐವನ್ ಡಿಸೋಜ ಹೇಳಿದರು.ತಾವು ಅವರ ಮನೆಗೆ ಭಾನುವಾರ ಹೋಗಿದ್ದಾಗ ಈ ವಿಷಯ ಗೊತ್ತಾಯಿತು, ಕುಟುಂಬ ದುಃಖದಲ್ಲಿರುವಾಗ ಅವರನ್ನು ಮತ್ತಷ್ಟು ಮಾನಸಿಕ ಹಿಂಸೆಗೆ ಗುರಿಪಡಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದರು. ಆದರೆ ಶಿರ್ವ ಪೊಲೀಸರು ಲಂಡನ್ ಪೊಲೀಸರು ಬಂದಿದ್ದನ್ನು ಖಚಿತಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry