ಮನತಣಿಸಿದ ಬಾನುಲಿ ಸಂಗೀತ ಸಂಜೆ

ಬೆಳಗಾವಿ: ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಇಳಿಹೊತ್ತಿನಲ್ಲಿ ಆರಂಭಗೊಂಡ ಗಾಯನ ಕಾರ್ಯಕ್ರಮ ಗಂಧರ್ವ ಲೋಕವನ್ನೇ ಸೃಷ್ಟಿಸಿತ್ತು. ಸಂಗೀತದ ರಸದೌತಣ ಸವಿಯಲು ಸಂಗೀತ ಪ್ರೇಮಿಗಳ ದಂಡೇ ಹರಿದುಬಂದಿತ್ತು. ಸಂಗೀತ ವಿದ್ವಾಂಸರ ಸುಶ್ರಾವ್ಯ ವಾದ ಗಾಯನ ಹಾಗೂ ವಾದನ ಪ್ರಸ್ತುತ ಪಡಿಸಿದ್ದು ಸಂಗೀತ ಪ್ರೇಮಿಗಳನ್ನು ರಂಜಿಸುವ ಜೊತೆಗೆ ಮಂತ್ರಮುಗ್ಧರನ್ನಾಗಿಸಿತು.
ಮೃದು ಕಂಠದಲ್ಲಿ ತಮ್ಮ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಕುಮಾರ ದಾಸ ಹಾಗೂ ಬಾಲಚಂದ್ರ ನಾಕೋಡ ಅವರು ಕುಂದಾನಗರಿಯ ಸಂಗೀತ ಪ್ರೇಮಿಗಳ ಮನ ತಣಿಸುವಲ್ಲಿ ಯಶಸ್ವಿಯಾದರು. ಬಳಿಕ ಕೆಲವೇ ನಿಮಿಷಗಳಲ್ಲಿ ವೇದಿಕೆ ಏರಿದ ಕದ್ರಿ ಗೋಪಾಲನಾಥ ಅವರು ಸ್ಯಾಕ್ಸೋಫೋನ್ ವಾದನದ ಮೂಲಕ ಜನರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ಕ್ಲಿಷ್ಟಕರವಾದ ರಾಗಗಳನ್ನು ಸುಲಲಿತವಾಗಿ ನುಡಿಸುವ ಮೂಲಕ ಸಂಗೀತ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾದರು.
ಸಂಗೀತ ವಿದ್ವಾಂಸರ ಗಾಯನ ಹಾಗೂ ವಾದನದ ಮೋಡಿಗೆ ಮರುಳಾದ ಕೇಳುಗರು ರಾಗಕ್ಕೆ ತಕ್ಕಂತೆ ತಲೆಯಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕ್ಷಣ, ಕ್ಷಣಕ್ಕೂ ಬದಲಾಗುತ್ತಿದ್ದ ರಾಗ, ತಾಳ, ಗಾಯನದ ಶೈಲಿ ನೆರೆದಿದ್ದ ಕಲಾಸಕ್ತರಲ್ಲಿ ಸಂಚಲನವನ್ನುಂಟು ಮಾಡಿತು. ಗಾಯನ ಹಾಗೂ ವಾದನದ ನಡುವೆ ಕಲಾವಿದರು ಅಭಿವ್ಯಕ್ತಪಡಿಸುತ್ತಿದ್ದ ಪರಿ ಕಲಾಸಕ್ತರಲ್ಲಿ ಪುಳಕವನ್ನುಂಟು ಮಾಡಿತು. ಭಿನ್ನ, ವಿಭಿನ್ನ ಸಂಗೀತಕ್ಕೆ ಮನಸೋತ ಜನರಿಂದ ಚಪ್ಪಾಳೆಗಳ ಸುರಿಮಳೆಯೇ ಹರಿಯಿತು.
ಕಲೆಗಳ ಅನಾವರಣ: ರಂಗಮಂದಿರದ ಸಭಾಂಗಣವು ಗುರುವಾರ ಸಂಗೀತದಿಂದ ಪ್ರತಿಧ್ವನಿಸಿತು. ಗಾಯನ ಹಾಗೂ ವಾದನ ಸಮ್ಮಿಲನದಿಂದ ಕಲಾಸಕ್ತರನ್ನು ರಂಜಿಸಿದ ವೇದಿಕೆಯು ಸಂಗೀತ ಪ್ರೇಮಿಗಳಿಗೆ ವಿಶಿಷ್ಟ ಅನುಭವ ತಂದುಕೊಟ್ಟಿತು.
ಎ. ಕನ್ಯಾಕುಮಾರಿ ವಾಯಲಿನ್, ಪತ್ರಿ ಸತೀಶಕುಮಾರ ಮೃದಂಗ, ಬಿ. ರಾಜಶೇಖರ ಮೋರ್ಚಿಂಗ್, ಡಾ. ರವೀಂದ್ರ ಕಾಟೋಟೆ ಹಾರ್ಮೋನಿಯಂ ಹಾಗೂ ರಾಜೇಂದ್ರ ನಾಕೋಡ ಮತ್ತು ಡಾ. ರವಿಕಿರಣ ನಾಕೋಡ ತಬಲಾ ನುಡಿಸುವ ಮೂಲಕ ಎಲ್ಲರ ಗಮನಸೆಳೆದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಬೆಳ್ಳಕ್ಕಿ, ‘ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಬೆಳಗಾವಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕಲಾಸಕ್ತರಿದ್ದಾರೆ. ಹೀಗಾಗಿ 3 ವರ್ಷಗಳಿಂದ ಕಾರ್ಯಕ್ರಮ ನೀಡುತ್ತ ಬಂದಿದ್ದೇವೆ, ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.
‘ಧಾರವಾಡದ ಆಕಾಶವಾಣಿ ಕೇಂದ್ರದ ಹೆಚ್ಚಿನ ಕಾರ್ಯಕ್ರಮಗಳನ್ನು ಆಲಿಸುವವರು ಬೆಳಗಾವಿ ಯಲ್ಲಿದ್ದಾರೆ. ಹೀಗಾಗಿ ನಮ್ಮ ಕೇಂದ್ರವು ಧಾರವಾಡದ ಬದಲಾಗಿ ಆಕಾಶವಾಣಿ ಬೆಳಗಾವಿ ಎಂದಾಗಬೇಕಿತ್ತು’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.