ಮನದ ಮುಂದಿನ ಮಾಯೆ

ಶುಕ್ರವಾರ, ಜೂಲೈ 19, 2019
28 °C
ಕಥೆ

ಮನದ ಮುಂದಿನ ಮಾಯೆ

Published:
Updated:

ಆ ಪೇಟೆಯಲ್ಲಿ ಮೂರು ಡಿಪಾರ್ಟ್‌ಮೆಂಟಲ್ ಸ್ಟೋರ್ಸ್‌ ಹೊಂದಿರುವ ಅಥವಾ ಅವುಗಳ ಮಾಲೀಕರಾದ ಸದಾನಂದರಾಯರನ್ನು ಯಾರಾದರೂ ಇವರು ಆ ಪೇಟೆಯ ಪ್ರತಿಷ್ಠಿತ ಭುವನಪ್ರಸಾದ್ ಕಾಲೇಜಿನಲ್ಲಿ ಹಿಸ್ಟರಿ ಲೆಕ್ಚರರ್ ಆಗಿದ್ದರು ಎಂದರೆ ನಂಬುವುದು ಕಷ್ಟ. ಹುಟ್ಟುವಾಗಲೇ ಮಾರ್ವಾಡಿಯೇ ಆಗಿ ಹುಟ್ಟಿದಂತಿದ್ದ ಅವರು ಆ ಪೇಟೆಯ ವ್ಯಾಪಾರವನ್ನೆಲ್ಲ ಕಬಳಿಸಿದ್ದ ಗೌಡ ಸಾರಸ್ವತ ಬ್ರಾಹ್ಮಣರನ್ನು ಇಲ್ಲವೇ ಬ್ಯಾರಿಗಳನ್ನು ಹಿಂದಿಕ್ಕಿ ಆ ಇಡೀ ಪೇಟೆಯಲ್ಲಿ ಪ್ರತಿಷ್ಠಿತ ವ್ಯಾಪಾರಿ ಎನಿಸಿದ್ದರು.ಆದರೆ ಆಮೆಯ ಹಾಗೆ ತನ್ನ ವ್ಯಕ್ತಿತ್ವವನ್ನು ಒಳಗೆ ಎಳೆದುಕೊಂಡಿರುವ ಅವರನ್ನು ಆ ಪೇಟೆಯ ರೋಟರಿ ಕ್ಲಬ್ಬಿನವರಾಗಲೀ ಲಯನ್ಸ್ ಕ್ಲಬ್ಬಿನವರಾಗಲೀ ಆಕರ್ಷಿಸಿ ಅವರನ್ನು ಸಾರ್ವಜನಿಕವಾಗಿ ಉಪಯೋಗಿಸಿಕೊಳ್ಳಲು ಆಗಲಿಲ್ಲ ಎನ್ನುವ ಭಾವನೆ ಈಗಲೂ ಅನೇಕರ ಮುಖದಲ್ಲಿದೆ.ಅವರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕಾಲದಲ್ಲಿ ಅವರ  ಕಿರಿಯ ಸಹೋದ್ಯೋಗಿಯಾಗಿದ್ದ ಶಿವಾನಂದ ಕಾಮತರು ಮಾತ್ರ ಈಗಲೂ ಅವರ ಅಂತರಂಗದ ಸ್ನೇಹಿತರಾಗಿಯೇ ಇರುವುದು ಆ ಕಾಲೇಜಿನ ಪ್ರಾಂಶುಪಾಲರಿಗೆ ಮಾತ್ರವಲ್ಲ ಪೇಟೆ ಬಲಾಢ್ಯರಿಗೂ ಕುತೂಹಲದ ವಿಷಯವಾಗಿತ್ತು. ಹಾಗೆಂದು ರಾಯರು ಜಿಪುಣರಲ್ಲ. ಕಾಮತರು ನೀವು ಅವರಿಗೆ ಒಂದಿಷ್ಟು ನೆರವಾಗಬಹುದಲ್ಲ? ಅಥವಾ ನೀವು ಯಾಕೆ ಇದಕ್ಕೆ ಒಂದಿಷ್ಟು ಸಹಾಯ ಮಾಡಬಾರದು? ಎಂದದ್ದಕ್ಕೆಲ್ಲ  ಸದಾನಂದರಾಯರು ಸಹಾಯ ಮಾಡಿದ್ದೂ ಉಂಟು.ಇಂಥ ಸದಾನಂದರಾಯರಿಗೆ ಇನ್ನೊಂದು ಮುಖ ಇದೆ ಎನ್ನುವುದು ಕಾಮತರನ್ನು ಬಿಟ್ಟರೆ ಪೇಟೆಯಲ್ಲಿ ಯಾರೊಬ್ಬರಿಗೂ ತಿಳಿದ ಹಾಗಿಲ್ಲ. ಅವರೊಬ್ಬ ಅತ್ಯುತ್ತಮ ಕನ್ನಡದ ಕತೆಗಾರರು ಎನ್ನುವುದು ಆ ಪೇಟೆಯ ಮಂದಿ ಬಿಡಿ, ಸಾಹಿತ್ಯ ಕ್ಷೇತ್ರಕ್ಕೆ ಹೊಸತಾಗಿ ಪ್ರವೇಶಿಸಿದವರಿಗೆ ಗೊತ್ತಿಲ್ಲ. ಆದರೆ ಅವರು ಬರೆದದ್ದು ಕೇವಲ ಹದಿನಾಲ್ಕು ಕತೆಗಳು. ಅವುಗಳಲ್ಲಿ `ಹದ್ದು' ಎನ್ನುವ ಕತೆಗೆ ರಾಷ್ಟ್ರಮಟ್ಟದ ಕಥಾಪ್ರಶಸ್ತಿ ಬಂದಿದ್ದರೆ, ಅವರ ಕಥಾಸಂಕಲನ `ಮುಖ'ಕ್ಕೆ ಸಾಹಿತ್ಯ ಅಕಾಡೆಮಿಯ ಗೌರವ ಬಂದಿತ್ತು.ಅವರ ಏಳು ಆಯ್ದ ಕತೆಗಳು ಮಂಗಳೂರು, ಬೆಂಗಳೂರು, ಮೈಸೂರು ವಿ.ವಿಗಳಲ್ಲಿ ಪದವಿ ತರಗತಿಯ ಪಠ್ಯಗಳಲ್ಲಿ ಸೇರ್ಪಡೆಗೊಂಡದ್ದುಂಟು. ಆದರೆ ಇದಾವುದನ್ನೂ ಅವರು ಯಾರಲ್ಲೂ ಹೇಳಿದ್ದಿಲ್ಲ, ಹೇಳುವುದೂ ಇಲ್ಲ. `ದಿಗ್ಗಜ' ಎನ್ನುವ ಕಾವ್ಯನಾಮದಲ್ಲಿ ಮೂರು ನಾಲ್ಕು ವರುಷಕ್ಕೊಮ್ಮೆ ಅವರು ಒಂದೋ ಎರಡೋ ಕತೆ ಬರೆದಿರುವುದರಿಂದ `ದಿಗ್ಗಜ' ಎನ್ನುವ ಹೆಸರು ದಿಗಂತ ವ್ಯಾಪ್ತಿಯಾಗಿರಲಿಲ್ಲ.ಆದರೆ ಅವರ ಸ್ನೇಹಿತರಾದ ಕಾಮತರು ಮಾತಿನ ಮಧ್ಯೆ ತಮ್ಮ ಸ್ನೇಹಿತ ವರ್ಗದಲ್ಲಿ ಏನಾದರೂ ಸದಾನಂದರಾಯರ ಬಗ್ಗೆ ಸಾಹಿತಿ ಎಂದು ಮೆಚ್ಚುಗೆಯ ಮಾತನಾಡಿದರೆ `ಇವನೊಬ್ಬ ಅವರ ಬಾಲಂಗೋಚಿ! ಅವರು ಯಾವ ದೊಡ್ಡ ಸಾಹಿತಿ?' ಎಂದು ಕಾಮತರ ಎದುರು ಹೇಳದೇ ಇದ್ದರೂ ಹೌದಾ, ಹೌದಾ? ಎಂದು ಹೂಂಗುಟ್ಟುವುದೂ ಇತ್ತು.ಸದಾನಂದ ಡಿಪಾರ್ಟ್‌ಮೆಂಟಲ್ ಸ್ಟೋರ್ಸ್‌ ಮೊದಲು ಇದ್ದದ್ದು ಆ ಪೇಟೆಯಲ್ಲಿರುವ ಮಾರಿಗುಡಿಗೆ ಹೋಗುವ ಓಣಿಯ ತುತ್ತತುದಿಯಲ್ಲಿ. ಅದನ್ನು ಈ ನಮ್ಮ ಸದಾನಂದರಾಯರ ತಂದೆ ಸುಬ್ಬರಾಯರು ಸ್ಥಾಪಿಸಿ ತಮ್ಮ ತಂದೆಯ ಹೆಸರು ಶಾಶ್ವತವಾಗಿರಲಿ ಎಂದು ತನ್ನ ತಂದೆಯಾದ ಸದಾನಂದರಾಯರ ಹೆಸರನ್ನೇ ಅದಕ್ಕೆ ಇರಿಸಿದ್ದರು.ಸುಬ್ಬರಾಯರ ಕಾಲದಲ್ಲಿ ಅದಕ್ಕೆ ಹೇಳಿಕೊಳ್ಳುವಂಥ ವ್ಯಾಪಾರ ಇಲ್ಲದೇ ಇದ್ದುದರಿಂದ ಸದಾನಂದರಾಯರು ಹಿಸ್ಟರಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಮೈಸೂರು ವಿ.ವಿಯಲ್ಲಿ ರ‍್ಯಾಂಕ್ ಪಡೆದು ಗಳಿಸಿಕೊಂಡಾಗ ಅವನನ್ನು ಓದಿಸಿದ್ದು ಸಾರ್ಥಕವಾಯಿತು ಎಂದುಕೊಂಡ ಸುಬ್ಬರಾಯರು `ನೀನು ಈ ವ್ಯವಹಾರಕ್ಕೆ ಬರಬೇಡ. ಕಾಲೇಜಿನಲ್ಲಿ ಮೇಸ್ಟ್ರಾಗು!' ಎಂದು ಆಗ ತಾನೇ ಸ್ಥಾಪನೆಯಾದ ಆ ಪೇಟೆಯ ಭುವನಪ್ರಸಾದ್ ಕಾಲೇಜಿಗೆ ಉಪನ್ಯಾಸಕರಾಗಿ ಸೇರಿಸಿದ್ದರು.ಸದಾನಂದರಾಯರು ಕಾಲೇಜು ಬಿಟ್ಟು ಬಂದ ಮೇಲೆ ಅಪ್ಪನ ಜೊತೆ ಡಿಪಾರ್ಟ್‌ಮೆಂಟಲ್ ಸ್ಟೋರಿನಲ್ಲಿ ಕುಳಿತುಕೊಳ್ಳಲು ಪ್ರಾರಂಭಿಸಿದಂದಿನಿಂದ ವ್ಯಾಪಾರಕ್ಕೆ ಹೆಚ್ಚು ಬೆಲೆ ಬಂತು. ವರುಷದೊಳಗೆ ತಮ್ಮ ಕೈಕೆಳಗೆ ಇಬ್ಬರನ್ನೇ ಇಟ್ಟುಕೊಂಡಿದ್ದ ಸುಬ್ಬರಾಯರು ಮತ್ತೆ ಎರಡು ಜನರನ್ನು ಇಟ್ಟುಕೊಳ್ಳುವ ಮಟ್ಟಕ್ಕೆ ಏರಿತು. ಮುಂದೆ ಅದಕ್ಕೆ ಮತ್ತೂ ಎರಡು ಜನ ಬೇಕೆನ್ನುವಾಗ ಸದಾನಂದರಾಯರಿಗೆ ಇನ್ನೊಂದು ಡಿಪಾರ್ಟ್‌ಮೆಂಟಲ್ ಸ್ಟೋರ್‌ಅನ್ನು ಪೇಟೆಯ ಮಧ್ಯಭಾಗದಲ್ಲಿ ಯಾಕೆ ತೆರೆಯಬಾರದು? ಅನಿಸಿತು. ಅದನ್ನೇ ಅವರು ತನ್ನ ತಂದೆಯ ಮುಂದೆ ಇಟ್ಟಾಗ `ನೀನು ಕೆಲಸ ಬಿಟ್ಟು ಅಲ್ಲಿ ಇರುವುದಾದರೆ ಮಾತ್ರ ಅದಕ್ಕೆ ಕೈ ಹಾಕು' ಎಂದರು.ರಾಯರಿಗೆ ಆ ಕಾಲದಲ್ಲಿ ಉಪನ್ಯಾಸಕ ವೃತ್ತಿಯಲ್ಲಿ ಸಿಗುವ ಆರೇಳು ಸಾವಿರಕ್ಕಿಂತ ಇದು ಎಷ್ಟೋ ಪಾಲು ಮೇಲೆನಿಸಿ ಒಂದು ದಿನ ಸಿಂಡಿಕೇಟ್ ಬ್ಯಾಂಕಿನ ಮೇನೇಜರರನ್ನು ಭೇಟಿಯಾದಾಗ, ಬ್ಯಾಂಕ್ ಮೇನೇಜರ್ ಬಂದು `ನಿಮಗೆಷ್ಟು ದುಡ್ಡು ಬೇಕು ಹೇಳಿ, ಅಷ್ಟನ್ನೂ ಕೊಡಿಸುತ್ತೇನೆ' ಎಂದರು.ಅಲ್ಲಿಗೆ ತನ್ನ ನಿರ್ಧಾರ ಸರಿ ಎಂದುಕೊಂಡ ಸದಾನಂದರಾಯರು ಹಿಂದು ಮುಂದು ನೋಡದೇ ಪೇಟೆಯ ಮಧ್ಯಭಾಗದಲ್ಲಿ ಆ ಪೇಟೆಯಲ್ಲೇ ದೊಡ್ಡದೆನ್ನಬಹುದಾದ ಡಿಪಾರ್ಟ್‌ಮೆಂಟಲ್ ಸ್ಟೋರ್ ಸ್ಥಾಪಿಸಿ ಈಗ ಮಾಲ್ (ಚ್ಝ್ಝ)ನಲ್ಲಿ ನಾವು ಏನೇನೆಲ್ಲ ಪಡೆಯಬಹುದೋ ಅದನ್ನೆಲ್ಲ ಆ ಕಾಲದಲ್ಲೇ ಅಲ್ಲಿ ಪೂರೈಸಹತ್ತಿದ್ದರು.ನಾಲ್ಕು ವರುಷದಲ್ಲಿ ಸದಾನಂದರಾಯರ ಡಿಪಾರ್ಟ್‌ಮೆಂಟಲ್ ಸ್ಟೋರ್ ಆ ಪೇಟೆಯಲ್ಲಷ್ಟೇ ಅಲ್ಲದೆ, ಪಕ್ಕದ ಮೂಡಬಿದ್ರೆ, ಕಾರ್ಕಳದ ಮಂದಿಗೂ ಆಶ್ಚರ್ಯ ಹುಟ್ಟುವ ಹಾಗೆ ಬೆಳೆಯಿತು. ಅದನ್ನು ನೋಡಿದ ಕೆಲವು ವ್ಯಾಪಾರಸ್ಥರು ಕಾರ್ಕಳ, ಮೂಡಬಿದ್ರೆಯೂ ಸೇರಿದಂತೆ ನಾಲ್ಕಾರು ಕಡೆಗಳಲ್ಲಿ ಅಂಥ ಡಿಪಾರ್ಟ್‌ಮೆಂಟಲ್ ಸ್ಟೋರ್ಸ್‌ ನಡೆಸಲು ಮುಂದೆ ಬಂದರೂ, ಅದು ಐದಾರು ತಿಂಗಳು ನೆಲಕಚ್ಚಿತು.ಅವರಲ್ಲಿ ಒಬ್ಬಿಬ್ಬರು ಸದಾನಂದರಾಯರನ್ನು ಸಂಪರ್ಕಿಸಿ ನೀವು ಇದನ್ನು ನಡೆಸಲು ಮುಂದೆ ಬಂದರೆ, ನಾವು ಲಾಭ ಇಲ್ಲದೆ ಅದನ್ನು ನಿಮಗೆ ವಹಿಸಿಕೊಡುತ್ತೇವೆ ಎಂದರು. ರಾಯರು ಮುಗುಳುನಕ್ಕು `ಬೇಡ' ಎಂದು ಹೇಳಿದರೂ ಮುಂದೊಂದು ದಿನ ತಾನು ಅಂಥ ಕಡೆಗಳಲ್ಲಿ ಮಾಲ್ ತೆರೆಯಬೇಕೆಂದು ಸಂಕಲ್ಪಿಸಿದರು.ಇದೇ ಸುಮಾರಿಗೆ ಅವರ ಮಗ ಅನಂತ ಬಿ.ಕಾಂ ಓದುತ್ತಿದ್ದ. ಅವನನ್ನು ಎಂ.ಬಿ.ಎ. ಮಾಡಿಸಿದರೆ, ಖಂಡಿತವಾಗಿಯೂ ತನ್ನ ಸಂಕಲ್ಪವನ್ನು ನೆರವೇರಿಸಬಹುದೆಂದುಕೊಂಡ ಅವರು ಮಗನಲ್ಲಿ ಆ ವಿಚಾರವನ್ನು ಮುಂದಿಟ್ಟಾಗ ಅವನು `ಸರಿ' ಎಂದ. ಅನಂತ ಎಂ.ಬಿ.ಎ. ಮುಗಿಸಿ ಬಂದ ಮೇಲೆ, ಸದಾನಂದರಾಯರ ವ್ಯವಹಾರವನ್ನು ಗಮನಿಸಿದ್ದ. ಎರಡು ಮೂರು ಬ್ಯಾಂಕುಗಳು ತಾವು ಆರ್ಥಿಕ ನೆರವು ನೀಡುತ್ತೇವೆ ಎಂದು ಮುಂದೆ ಬಂದವು.ಸದಾನಂದರಾಯರು `ಮೊದಲಿಗೆ ಆ ಪೇಟೆಯಲ್ಲೇ ಇನ್ನೊಂದು ಮಾಲನ್ನು ತೆರೆದು ಬೇರೆ ಪೇಟೆಗಳಲ್ಲೂ ನೀನು ಪ್ರಯತ್ನಿಸಬಹುದಲ್ಲ?' ಎಂದರು. ಅನಂತ `ಎರಡು ವರುಷದ ಮೇಲೆ ನೋಡೋಣ' ಎಂದ. ಎರಡು ವರುಷದ ಮೇಲೆ ಅನಂತನ ನಿರೀಕ್ಷೆ ಹುಸಿಯಾಗಲಿಲ್ಲ. ಆತ ಮೂಡಬಿದ್ರೆ, ಕಾರ್ಕಳದಲ್ಲೂ ಎರಡು ಮಾಲ್‌ಗಳನ್ನು ತೆರೆದು ಸದಾ ಹೊಂಡಾಸಿಟಿ ಕಾರಿನಲ್ಲೇ ಓಡಾಡುವುದನ್ನು ನೋಡಿದ ಸದಾನಂದರಾಯರು ಎಲ್ಲಾ ಜವಾಬ್ದಾರಿಯನ್ನೂ ಅವನಿಗೆ ವಹಿಸಿಕೊಟ್ಟು ನನ್ನ ತಂದೆ ಸ್ಥಾಪಿಸಿದ್ದ ಅಂಗಡಿಯಲ್ಲಿ ದಿನದಲ್ಲಿ ಒಂದಷ್ಟು ಹೊತ್ತು ಮಾತ್ರ ಕುಳಿತುಕೊಳ್ಳಹತ್ತಿದರು.ಐದು ಕಡೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸದಾನಂದರಾಯರ ಡಿಪಾರ್ಟ್‌ಮೆಂಟಲ್ ಸ್ಟೋರಿಗೆ ಸದಾ ಕೆಲಸಗಾರರ ತೊಂದರೆ ಇದಿರಾದಾಗ ಮಗನಿಗೆ `ಇದು ಬಹಳ ಸಿಂಪಲ್ ವಿಚಾರ ಕಣೋ ಅನಂತ. ನೀನು ಹೆಚ್ಚಾಗಿ ಅವಿವಾಹಿತ ಹುಡುಗಿಯರನ್ನೇ ಕೆಲಸಕ್ಕೆ ಸೇರಿಸಿಕೊಳ್ಳುತ್ತಿ! ಆ ಹುಡುಗಿಯರು ತಮಗೆ ಮದುವೆ ನಿಶ್ಚಯವಾದ ಕೂಡಲೇ ಕೆಲಸ ಬಿಟ್ಟು ಹೋಗುವುದು ಸಹಜ. ಈ ನಿಯಮವನ್ನು ನಾವು ಬದಲಾಯಿಸಬೇಕು.ವಿವಾಹಿತ ಮಹಿಳೆಯರಿಗೆ ಮಾತ್ರ ಕೆಲಸ ಎಂಬ ನಿಯಮ ಜಾರಿಗೊಳಿಸೋಣ. ಆಗ ಅನೇಕ ಗೃಹಿಣಿಯರು ಕಾಯಂ ಆಗಿ ನಮ್ಮಲ್ಲೇ ಉಳಕೊಳ್ಳುತ್ತಾರೆ ಮತ್ತು ಅಂಥ ನಮ್ಮ ನೌಕರರಿಗೆ ಲಾಭದಲ್ಲಿ ಇಂತಿಷ್ಟು ಪಾಲು ಎಂದು ನೌಕರರಲ್ಲೂ ಆಸೆ ಹುಟ್ಟಿಸೋಣ!' ಎಂದರು. ತನ್ನ ಅಪ್ಪ ಎಂ.ಬಿ.ಎ. ಓದದಿದ್ದರೂ ತನಗಿಂತ ಹೆಚ್ಚು ಪ್ರಾಕ್ಟಿಕಲ್ ಆಗಿದ್ದಾರೆ ಎಂದು ಅನಂತನಿಗೆ ಅನಿಸಿ ಖುಷಿಯಾಯಿತು.ಆದರೆ `ನೌಕರರನ್ನು ಆಯ್ಕೆ ಮಾಡುವಾಗ ನೀವು ವಿವಾಹಿತರೋ ಅಲ್ಲವೋ ಎಂದು ಕೇಳುವುದು ನನಗೆ ಮುಜುಗರದ ವಿಚಾರ. ಅದು ನನ್ನಿಂದಾಗದು!' ಎಂದು ಆತ ತನ್ನ ತಂದೆಗೆ ಹೇಳಿದ. ರಾಯರು ಮುಗುಳುನಕ್ಕು `ಆ ವಿಚಾರ ನನಗೆ ಬಿಡು. ನಿನ್ನ ಎಲ್ಲಾ ಮಾಲ್‌ಗಳ ನೌಕರರ ಆಯ್ಕೆ ನಾನೇ ನಡೆಸುತ್ತೇನೆ' ಎಂದರು. ಅನಂತನಿಗೆ ಇದು ಹಾಸ್ಯಾಸ್ಪದ ಅನಿಸಿದರೂ, ಸರಿ ಎಂದು ಒಪ್ಪಿಕೊಂಡ.ಸದಾನಂದರಾಯರು ತಾವು ದಿನಾ ಬಂದು ಕುಳಿತುಕೊಳ್ಳುವ ಕೌಂಟರಿನ ಎದುರು ನಮ್ಮ ಮಾಲ್‌ಗಳಿಗೆ ಸಿಬ್ಬಂದಿ ಬೇಕಾಗಿದ್ದಾರೆ. ಆದರೆ ವಿವಾಹಿತರಿಗೆ ಮಾತ್ರ ಅವಕಾಶ ಎಂದು ಒಂದು ಬೋರ್ಡ್ ಹಚ್ಚಿದರು. ಅವರ ಅಂಗಡಿಯಲ್ಲಿ ಅಕೌಂಟೆಂಟರಾಗಿರುವ ಅವರಷ್ಟೇ ವಯಸ್ಸಿನ ದಯಾನಂದ ಪ್ರಭುಗಳು `ಇದೇನು ಸ್ವಾಮಿ ಹೀಗೆ? ತೆಗೆಸಿಬಿಡಿ' ಎಂದರು.ರಾಯರು ಅವಿವಾಹಿತರನ್ನು ತೆಗೆದುಕೊಂಡರೆ ಸಂಸ್ಥೆಗೆ ಆಗುವ ನಷ್ಟವನ್ನೆಲ್ಲ ಪ್ರಭುಗಳಿಗೆ ವಿವರಿಸಿ `ನಾಲ್ಕು ದಿನ ಜನ ನನ್ನನ್ನು ನೋಡಿ ನಕ್ಕಾರು. ಆದರೆ ನಾನು ಇತಿಹಾಸ ಓದಿದವ ನೋಡಿ. ಇತಿಹಾಸದಿಂದ ನೀವು ಯಾರೂ ಏನೂ ಕಲಿತಿಲ್ಲ!' ಎಂದು ಪ್ರಭುಗಳ ಬಾಯಿ ಮುಚ್ಚಿಸಿದರು. ಪೇಟೆಯ ಮಂದಿ ಆ ಎಪ್ಪತ್ತರ ಮುದುಕನಿಗೆ ಅರಳು ಮರಳು! ಎಂದು ನಕ್ಕರೂ, ಆರು ತಿಂಗಳಲ್ಲಿ ರಾಯರು ತಮ್ಮ ಎಲ್ಲಾ ಮಾಲ್‌ಗಳಲ್ಲಿ ವಿವಾಹಿತರನ್ನೇ ನೇಮಿಸಿಕೊಂಡಾಗ `ಹೌದಲ್ಲ?' ಎಂದು ತಾವೇ ನಾಚಿಕೊಂಡರು.ಇದರಿಂದಾಗಿ ರಾಯರು ಬಂದು ಕುಳಿತುಕೊಳ್ಳುವ ಡಿಪಾರ್ಟ್‌ಮೆಂಟಲ್ ಸ್ಟೋರ್ ಎಲ್ಲಾ ಮಾಲ್‌ಗಳ ಆಡಳಿತ ಕಚೇರಿಯ ಹಾಗೆ ಆಗಿ ಹೋಯಿತು. ಆದರೆ ರಾಯರು ತಮ್ಮ ಸ್ಟೋರ್‌ನಲ್ಲಿ ಚೀಫ್ ಅಕೌಂಟೆಂಟ್ ಪ್ರಭುಗಳೂ ಸೇರಿ ಇನ್ನು ನಾಲ್ಕು ಮಂದಿ ಗಂಡಸರನ್ನೇ  ನೌಕರಿಯಲ್ಲಿಟ್ಟಿದ್ದರು. ಇನ್ನೊಂದಿಬ್ಬರ ಅವಶ್ಯಕತೆ ಅವರಿಗೆ ಕಂಡು ಬಂದಿದ್ದರೂ ಸದ್ಯಕ್ಕೆ ಬೇಡ ಎಂದು ರಾಯರು ಹೆಚ್ಚು ಹೊತ್ತು ಸ್ಟೋರ್‌ನಲ್ಲೇ ಉಳಿದು ತಾನು ಇನ್ನೂ  ದುಡಿಯಬಲ್ಲೆ ಎಂಬಂತಿದ್ದರು.ಒಂದು ದಿನ ಗೀತಾ ಎನ್ನುವ ಅವಿವಾಹಿತ ಹುಡುಗಿಯೊಬ್ಬಳು ನೌಕರಿಯನ್ನು ಅರಸಿ ಬಂದು `ಸರ್, ನನಗೊಂದು ಕೆಲಸ ಬೇಕಿತ್ತು, ಕೊಟ್ಟರೆ ತುಂಬಾ ಉಪಕಾರ ಇತ್ತು' ಎಂದು ವಿನಂತಿಸಿದಳು. ರಾಯರು ಅವಳಿಗೆ ತಾನು ಹಚ್ಚಿದ್ದ `ಅವಿವಾಹಿತರಿಗೆ ಕೆಲಸ ಇಲ್ಲ' ಎಂಬ ಬೋರ್ಡನ್ನು ತೋರಿಸಿ `ಇದನ್ನು ನೀನು ನೋಡಲಿಲ್ಲ ಅಂತ ಕಾಣುತ್ತದೆ!' ಎಂದು ಮುಗುಳುನಕ್ಕರು. ಗೀತಾ ನಗದೆ `ಆ ಬೋರ್ಡನ್ನು ನಾನು ನಾಲ್ಕಾರು ಸಲ ಇಲ್ಲಿಗೆ ಬಂದಾಗಲೆಲ್ಲ ನೋಡಿದ್ದೇನೆ ಸರ್' ಎಂದಳು.ರಾಯರಿಗೆ  ಎಲಾ ಇವಳೇ ಎಂದು ಕಸಿವಿಸಿಯಾಗಿ `ನೀನು ಇನ್ನೂ ಮದುವೆಯಾಗದ ಹುಡುಗಿ, ಒಂದೆರಡು ವರುಷ ಇಲ್ಲಿ ಇದ್ದು ಹೋಗುತ್ತೀಯಾ. ಆಗ ನೀನು ಇಲ್ಲಿ ಕಲಿತದ್ದೆಲ್ಲ ವೇಸ್ಟ್! ನಾವು ಮತ್ತೊಬ್ಬಳನ್ನು ಮತ್ತೆ ಆಯ್ಕೆ ಮಾಡಬೇಕು. ಅದಕ್ಕಾಗಿಯೇ ನಾವು ವಿವಾಹಿತರಿಗೇ ಮಾತ್ರ ಕೆಲಸ ಕೊಡುವುದು. ಹಾಗೇ ಬೋನಸ್ ಕೂಡಾ. ನಿನ್ನಂಥ ಅವಿವಾಹಿತರಿಗೆ  ಕೆಲಸ ಕೊಟ್ಟರೂ ಬೋನಸ್ಸಿನ ಪ್ರಯೋಜನ ಸಿಕ್ಕುವುದಿಲ್ಲ!' ಎಂದರು. ಗೀತಾ ಮುಗುಳುನಕ್ಕು `ಸರ್ ನನ್ನನ್ನು ಕಾಮತರು ನಿಮ್ಮಲ್ಲಿಗೆ ಕಳುಹಿಸಿದ್ದು. ನಾನು ಅವರ ವಿದ್ಯಾರ್ಥಿನಿ.ನಾನು ಪಿಯುಸಿ ಪಾಸ್ ಮಾಡಿದ್ದೇನೆ. ಕಂಪ್ಯೂಟರ್ ಕ್ಲಾಸಿಗೂ ಹೋಗಿದ್ದೇನೆ. ಮುಂದೆ ಓದಬೇಕೆಂದರೆ ನನ್ನಲ್ಲಿ ಅನುಕೂಲ ಇಲ್ಲ. ನಾನು ಖಾಸಗಿಯಾಗಿ ಓದುತ್ತಿದ್ದೇನೆ. ನಾವು ನಮ್ಮಪ್ಪನಿಗೆ ನಾಲ್ಕು ಮಂದಿ ಹುಡುಗಿಯರು. ಯಾರಿಗೂ ಮದುವೆಯಾಗಲಿಲ್ಲ. ನನ್ನ ಮದುವೆಗೆ ಇನ್ನೂ ಹತ್ತು ವರುಷ ಬೇಕಾಗಬಹುದು' ಎಂದು ಹೇಳಿ, `ನಿಮ್ಮ ಕಾನೂನನ್ನೂ ಸ್ವಲ್ಪ ರಿಲ್ಯಾಕ್ಸ್ ಮಾಡಿ ಸರ್. ಬೇಕಾದರೆ ನಿಮ್ಮ ಉಳಿದ ನೌಕರರಿಗೆಲ್ಲ ನಾನು ವಿವಾಹಿತೆ ಅಂತಲೇ ಅನ್ನಿ' ಎಂದಳು.ರಾಯರು ಆ ತನಕ ಇಂಥ ಹುಡುಗಿಯನ್ನು ನೋಡಿರಲಿಲ್ಲ. ಅವಳನ್ನು ಅಪಾದಮಸ್ತಕ ನೋಡಿದ ಅವರು, `ತುಂಬ ಚೂಟಿ ಇದ್ದಾಳೆ ಈಕೆ. ಬಡವಳು ಬೇರೆ. ಓದುವ ಹುಚ್ಚಿದೆ. ಯಾಕೆ ಒಂದು ಅವಕಾಶ ಕೊಡಬಾರದು?' ಎಂದು ಯೋಚಿಸಿದರು. ಆಮೇಲೆ `ನಾಳೆ ಬಾ, ಹೇಳುತ್ತೇನೆ'  ಎಂದರು.ಸಂಜೆ ಮಗ ಮತ್ತು ಹೆಂಡತಿಯ ಮುಂದೆ ಈ ಪ್ರಸ್ತಾಪ ಇಟ್ಟ ರಾಯರು `ಅವಳನ್ನು ತನ್ನ ಆಪ್ತಸಹಾಯಕಿ ಅಂತ ನೇಮಿಸಿಕೊಳ್ಳುತ್ತೇನೆ. ಸ್ವಲ್ಪ ಹೊತ್ತು ಕಚೇರಿಯಲ್ಲಿ ಇದ್ದು ಆಕೆ ನನಗೆ ನೆರವಾಗಲಿ, ಬಡಹುಡುಗಿ ಪಾಪ!' ಎಂದರು. ಅನಂತ `ಗುಡ್ ಐಡಿಯಾ. ನೀವು ಇನ್ನು ಮನೆಯಲ್ಲೇ ಇದ್ದು ಅವಳಿಂದ ದುಡಿಸಿಕೊಳ್ಳಿ ಅಪ್ಪ. ಏಜ್ ಆಗಿದೆ ನಿಮಗೆ. ವಿಶ್ರಾಂತಿ ಬೇಕು' ಎಂದ. ರಾತ್ರಿ ರಾಯರ ಪತ್ನಿ `ನಿಮಗೆ ಯಾಕೆ ಇನ್ನು ಆಪ್ತ ಸಹಾಯಕಿ? ಅದೂ ಮದುವೆಯಾಗದ ಹುಡುಗಿ?' ಎಂದು ಆಕ್ಷೇಪ ಎತ್ತಿದರು.`ಅಯ್ಯೋ ಯಾಕೆ ಬೇಕು ಅಂದರೆ ಅವಳಿಗೆ ಟೈಪಿಂಗ್ ಬರುತ್ತೆ. ಲೆಕ್ಕ ಪತ್ರ ಇಡಲೂ ಗೊತ್ತಿದೆಯಂತೆ. ಇಷ್ಟಕ್ಕೂ ನಮ್ಮ ಅಕೌಂಟರರಿಗೆ ಈಗ ನನ್ನ ಹಾಗೆ ಎಪ್ಪತ್ತು ವರುಷ ಆಯ್ತು. ಅವರಿಗೆ ಒಂದು ಪತ್ರವನ್ನು ಸಿದ್ಧ ಮಾಡಿಕೊಡಲು ಅರ್ಧ ದಿನ ಬೇಕು' ಎಂದು ಸಮಜಾಯಿಷಿ ನೀಡಿದರು. ರಾಯರ ಪತ್ನಿ ಸಿಟ್ಟಿನಲ್ಲಿ `ಸರಿ ನಿಮ್ಮ ಇಷ್ಟ. ಇನ್ನು ನೀವು ಅವಳ ಮುಖ ಮತ್ತು ತಿಕ ನೋಡುತ್ತಾ ಕುಳಿತರೆ, ನನಗೆ ದೇವರೇ ಗತಿ!' ಎಂದರು. ರಾಯರು ಮುಗುಳುನಕ್ಕರೂ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.ಗೀತಾ ಕೆಲಸಕ್ಕೆ ಸೇರಿದಂದಿನಿಂದ ಬೆಳಿಗ್ಗೆ ರಾಯರು ಸ್ಟೋರಿಗೆ ಹೊರಡುವ ಮೊದಲೇ ಅವರ ಮನೆಗೆ ಬಂದು, ಕಚೇರಿಗೆ ಬೇಕಾದುವುಗಳನ್ನೆಲ್ಲ ಹಿಡಿದುಕೊಂಡು ಅವರ ಜೊತೆ ಕಾರಿನಲ್ಲಿ ಹೋಗುವುದು, ಸಂಜೆ ಅವರು ಕಚೇರಿಯಿಂದ ಮರಳುವ ಮುಂಚೆ ಮಾಡಬೇಕಾದ ಪತ್ರ ವ್ಯವಹಾರಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಡುವುದರಲ್ಲಿ ಪಳಗಿದಳು. ಬ್ಯಾಂಕಿನ ಲೇವಾದೇವಿಯನ್ನೆಲ್ಲ ಸ್ವತಃ ಹೋಗಿ ಮಾಡಿಕೊಂಡು ಬರುವ ಜವಾಬ್ದಾರಿಯನ್ನು ರಾಯರು ಅವಳಿಗೆ ವಹಿಸಿಕೊಟ್ಟರು.ಆರು ತಿಂಗಳಾಗುವಷ್ಟರಲ್ಲಿ ಆಕೆ ಜಾಣೆ ಎನ್ನುವುದು ರಾಯರಿಗೆ ಮನದಟ್ಟಾಯಿತು. ಅಷ್ಟೇ ಅಲ್ಲ, ಅವಳು ಕಚೇರಿಗೆ ಅವಶ್ಯ ಬೇಕಾದವಳು ಎಂಬಂತಾದಳು. `ಈ ಹುಡುಗಿ ಬಂದದ್ದು ತುಂಬಾ ಉಪಕಾರವಾಯಿತು!' ಎಂದು ರಾಯರು ನಾಲ್ಕಾರು ಬಾರಿ ಕಾಮತರಲ್ಲೂ ಹೇಳಿದ್ದೂ ಅಲ್ಲದೆ, ಮಗನ ಮುಂದೆ ಆ ಮಾತನ್ನೇ ಆಡಿದರು. ಹೆಂಡತಿಯ ಮುಂದೆ ಅವಳ ಗುಣಗಾನವನ್ನು ಮಾಡಹತ್ತಿದರು.ವರುಷವೊಂದಾಗುವಷ್ಟರಲ್ಲಿ ಡಿಪಾರ್ಟ್‌ಮೆಂಟಲ್ ಸ್ಟೋರಿನ ನೌಕರ ರಮೇಶ, ಗೀತಾಳ ಸ್ನೇಹ ಸಂಪಾದಿಸಿಕೊಂಡ. ಎಲ್ಲರಿಗಿಂತ ಹೆಚ್ಚಿನ ಸಲುಗೆಯನ್ನು ಆತ ಅವಳಲ್ಲಿ ಹೇಗೆ ಬೆಳೆಸಿಕೊಂಡ ಎನ್ನುವುದು ಉಳಿದವರಿಗೆ ಅಚ್ಚರಿ ಹುಟ್ಟಿಸಿತು. ಮಧ್ಯಾಹ್ನ ಆಕೆ ಟಿಫಿನ್ ಬಾಕ್ಸ್ ತೆಗೆದು ಊಟ ಮಾಡಲು ಹೊರಟಾಗ ಆತ ಅವಳಿಗೆ ಕಂಪೆನಿ ಕೊಡಲು ಹತ್ತಿದ. `ಇದು ನನ್ನ ಹೆಂಡತಿ ಮಾಡಿದ ಸ್ಪೆಶಲ್ ಕರಿ. ನೀವೂ ಸ್ವಲ್ಪ ರುಚಿ ನೋಡಿ' ಎನ್ನತೊಡಗಿದ.ಆಕೆ `ಬೇಡ' ಅಂದರೆ, `ಇದೊಳ್ಳೆ ಕತೆಯಾಯಿತಲ್ಲ ಮಾರಾಯ್ತಿ' ಎಂದು ಒತ್ತಾಯಿಸಹತ್ತಿದ.ಅಕೌಂಟೆಂಟ್ ಪ್ರಭುಗಳು ಗೀತಾ ಮತ್ತು ರಮೇಶನ ಸ್ನೇಹ ಸಲುಗೆಯನ್ನು ನಿಧಾನವಾಗಿ ಗಮನಿಸಹತ್ತಿದರು. `ಈ ರಮೇಶನಿಗೆ ಮಂಡೆ ಸಮ ಉಂಟಾ? ಈ ಹುಡುಗಿಯ ತಲೆ ಕೆಡಿಸುತ್ತಿದ್ದಾನಲ್ಲ?' ಎಂದು ಅವರಿಗೆ ಅನಿಸಿತು. ರಾಯರಲ್ಲಿ ಹೇಳಬೇಕೆಂದುಕೊಂಡರೆ, ರಾಯರು `ಛೆ! ಹಾಗೆಲ್ಲ ತಪ್ಪು ತಿಳಿಯಬಾರದು, ಸುಮ್ಮನಿರಿ' ಎಂದಾರು ಎಂದುಕೊಂಡು ಸುಮ್ಮನಾದರು.ಮತ್ತೊಂದು ವರುಷ ಕಳೆಯುವಷ್ಟರಲ್ಲಿ ರಮೇಶ ಒಂದೆರಡು ಬಾರಿ ಅವಳನ್ನು ತನ್ನ ಸ್ಕೂಟರಿನಲ್ಲಿ ಅವಳ ಮನೆಗೆ ಬಿಟ್ಟು ಬಂದ. ಅವಳ ಜೊತೆ ಸಲುಗೆಯ ಮಾತುಗಳನ್ನು ಎಲ್ಲರ ಎದುರೇ ಆಡತೊಡಗಿದ. ಅದು ರಾಯರ ಗಮನಕ್ಕೆ ಬಂದರೂ ಕಾಲ ಬದಲಾಗಿದೆಯಲ್ಲ ಇರಲಿ ಬಿಡಿ ಎಂದು ಅವರು ಸುಮ್ಮನಾದರು. ಆದರೆ ರಮೇಶ ಅವಳನ್ನು ಅತಿಯಾಗಿ ಹಚ್ಚಿಕೊಂಡದ್ದನ್ನು ಗಮನಿಸಿದ ಪ್ರಭುಗಳು ಮಾತ್ರ ಧೈರ್ಯ ಮಾಡಿ ಒಂದು ದಿನ ರಾಯರಿಗೆ `ನೀವು ರಮೇಶನಿಗೆ ಸ್ವಲ್ಪ ಹೇಳುವುದು ಒಳ್ಳೆಯದು!' ಎಂದರು.ರಾಯರು ರಮೇಶನನ್ನು ಮನೆಗೆ ಕರೆದು `ನೋಡಿ ಇವರೇ ನೀವು ಆ ಹುಡುಗಿಯನ್ನು ಬೆನ್ನು ಹತ್ತಿದ ಹಾಗೆ ಇದೆ ಎಂಬ ತಕರಾರು ನಮ್ಮ ಅಂಗಡಿಯಲ್ಲಿ ಪ್ರಾರಂಭವಾಗಿದೆ. ಇದು ಸರಿಯಲ್ಲ!' ಎಂದು ಎಚ್ಚರಿಸಿದರು. ಆಗ ಅಲ್ಲೇ ಇದ್ದ ರಾಯರ ಪತ್ನಿ, `ಇದು ಹೀಗಾಗುತ್ತದೆ ಎನ್ನುವುದು ನನಗೆ ಮೊದಲೇ ಗೊತ್ತಿತ್ತು. ನಿಮ್ಮ ಮತ್ತು ಅವಳ ಸಲುಗೆಯೂ ಈಗೀಗ ಜಾಸ್ತಿಯಾಗಿದೆ. ನನಗೆ ಅದನ್ನು ನೋಡಲಿಕ್ಕಾಗುವುದಿಲ್ಲ!' ಎಂದರು.ರಾಯರು ಪತ್ನಿಯ ಮಾತಿಗೆ ಕ್ಯಾರೆ ಅನ್ನಲಿಲ್ಲ. ಎರಡು ದಿನದ ಮೇಲೆ ರಾಯರು ಬೆಳಗ್ಗೆ ಸ್ಟೋರ್‌ಗೆ ಹೊರಟಾಗ ಗೀತಾಳಲ್ಲಿ `ರಮೇಶನ ಮತ್ತು ನಿನ್ನ ವ್ಯವಹಾರ ಏನದು?' ಎಂದು ಮುಖಕ್ಕೆ ಮುಖ ಕೊಟ್ಟು ಪ್ರಶ್ನಿಸಿದರು. ಗೀತಾ ಮುಜುಗರಪಡುತ್ತಾ `ಇಲ್ಲ ಸರ್, ನಾನು ದೂರ ಸರಿಸಿದಷ್ಟೂ ಅವರು ಹತ್ತಿರವಾಗುತ್ತಿದ್ದಾರೆ. ಬೇಡದ್ದನ್ನೆಲ್ಲ ನನ್ನ ಮುಂದೆ ಪಿಸುಗುಡುತ್ತಾರೆ.

 ಸ್ಕೂಟರಿನಲ್ಲಿ ಬರುವುದಿಲ್ಲ ಅಂದರೆ, ನನ್ನ ಜೊತೆ ನೀನು ಒಮ್ಮೆ ಬಂದಿದ್ದಾಗ ನೀನು ನನಗೆ ಕಿಸ್ ಕೊಟ್ಟೆ ಎಂದೂ ಹೇಳುತ್ತಾರೆ' ಎಂದು ತನ್ನನ್ನು ಆತ ಬ್ಲಾಕ್‌ಮೈಲ್ ಮಾಡುತ್ತಿದ್ದ ರೀತಿಯನ್ನು ಹೇಳಿ ಕಣ್ಣೀರು ಹಾಕಿದಳು. ರಾಯರಿಗೆ  ಹುಡುಗಿಯದ್ದು ತಪ್ಪಿಲ್ಲ  ನಿಸಿತು. ರಮೇಶನಿಗೆ ಮರುದಿನದಿಂದ `ನಿನಗೆ ಇಲ್ಲಿ ಕೆಲಸ ಇಲ್ಲ' ಎಂದು ಮನೆಗೆ ಕಳುಹಿಸಿದರು.ಇದೆಲ್ಲ ನಡೆದು ಆರು ತಿಂಗಳಾಗುವಷ್ಟರಲ್ಲಿ ರಾಯರಿಗೆ ಇದ್ದಕ್ಕಿದ್ದ ಹಾಗೆ ಒಂದು ದಿನ `ಈ ಹುಡುಗಿಗೆ ತನ್ನ ಮೇಲೆ ಎಂಥ ಅಭಿಪ್ರಾಯ ಇದೆ?' ಎಂದು ತಿಳಿಯಬೇಕೆನ್ನುವ ಮನಸ್ಸಾಯಿತು. ಯಾಕೆ ಎನ್ನುವುದು ಅವರಿಗೇ ಗೊತ್ತಿರಲಿಲ್ಲ. ಅದನ್ನೇ ಅವಳಲ್ಲಿ ಅವರು ಕೇಳಿದಾಗ `ನಾನು ನಿಮ್ಮನ್ನು ಜೀವಮಾನದಲ್ಲಿ ಮರೆಯಲಿಕ್ಕೆ ಇಲ್ಲ ಸರ್, ಅಷ್ಟು ಗಾಢವಾಗಿ ನೀವು ನನ್ನ ಮೇಲೆ ಪ್ರಭಾವ ಬೀರಿದ್ದೀರಿ' ಎಂದಳು.ಆಕೆ ಮುಖ ಅರಳಿಸಿ ಆ ರೀತಿಯಲ್ಲಿ ಆಡಿದಾಗ ಸುಂದರಿ ಅಲ್ಲದ ಆಕೆ ರಾಯರಿಗೆ ಆಗ ವಿಶ್ವಸುಂದರಿಯ ಹಾಗೆ ಕಂಡಳು. ಅವಳ ಕೈಯನ್ನು ಮೆತ್ತಗೆ ಅಮುಕಿ ತನ್ನ ಪ್ರೀತಿಯನ್ನು ಆಕೆಗೆ ತೋರಿಸಬೇಕೆಂದುಕೊಂಡ ಅವರು ಅದು ಶಿಷ್ಟಾಚಾರ ಅಲ್ಲ ಎಂದು ಸುಮ್ಮನಾದರು.ಈ ಘಟನೆಯ ಮೇಲೆ ರಾಯರ ಮನಸ್ಸಿನೊಳಗೆ ಗೀತಾ ನಿಧಾನವಾಗಿ ಪ್ರವೇಶಿಸಿದಂತಾಯಿತು. ಅವಳು ಸದಾ ಅವರನ್ನು ಮಾನಸಿಕವಾಗಿ ಕಾಡಹತ್ತಿದಳು. ಆಕೆಯ ಪ್ರತಿ ಮಾತುಕತೆಯಲ್ಲೂ ಆಕೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಕಲ್ಪಿಸಿಕೊಂಡ ರಾಯರು ಆಗಾಗ ಬಾಯಿತಪ್ಪಿ ತನ್ನ ಪತ್ನಿಗೆ ರಮೇಶ ಅವಳಿಗೆ ಕೊಡುತ್ತಿದ್ದ ಪೀಡೆಯನ್ನು ಮತ್ತೆ ಮತ್ತೆ ವಿವರಿಸಿ ಆ ಫಟಿಂಗನನ್ನು ಕೆಲಸದಿಂದ ತೆಗೆದುಹಾಕಿದೆ ನೋಡು  ಎನ್ನಹತ್ತಿದರು.ರಾಯರ ಪತ್ನಿ `ಫಟಿಂಗ ಆತ ಅಲ್ಲ, ನೀವು! ನೀವು ಆಕೆಯನ್ನು ಪ್ರೀತಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆಕೆಯೂ ನಿಮ್ಮನ್ನು ಪ್ರೀತಿಸುತ್ತಿದ್ದಾಳೆ. ಆಕೆಯ ಕಣ್ಣು ಅದನ್ನು ಹೇಳುತ್ತದೆ. ನಾನು ನಿಮ್ಮನ್ನು ಪ್ರೀತಿಸಿಯೇ ಮದುವೆ ಆದವಳು ತಾನೇ? ನನಗೆ ಅದು ಅರ್ಥ ಆಗುತ್ತದೆ' ಎಂದು ಛೇಡಿಸಿದಾಗ ರಾಯರಿಗೆ ಇದೂ ಇರಬಹುದೇನೋ ಎಂಬ ಸಂಶಯ ತನ್ನ ಬಗೆಗೇ ಬರತೊಡಗಿತು.ಅಂದಿನಿಂದ ರಾಯರು ಗೀತಾಳ ನಡೆನುಡಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದರು. ಅಲ್ಲೆಲ್ಲ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎನ್ನುವುದು ಅವರಿಗೆ ಖಾತ್ರಿಯಾದಂತಾಯಿತು. ಅವರು ಶಾಂತಿನಾಥ ದೇಸಾಯಿಯವರ `ರಾಕ್ಷಸ' ಕಥಾಸಂಗ್ರಹವನ್ನು ಮತ್ತೆ ಕೈಗೆತ್ತಿಕೊಂಡು ಓದತೊಡಗಿದರು.ಅವರು ಮತ್ತೆ ಮತ್ತೆ ಅದನ್ನು ಓದುತ್ತಿದ್ದುದನ್ನು ಗಮನಿಸಿದ ಅವರ ಪತ್ನಿ `ಈ ಪ್ರಾಯದಲ್ಲಿ ಎಂಥ ಹುಚ್ಚು ನಿಮಗೆ? ನೀವು ಈಗ ಓದುವ ಕತೆಗಳಾ ಅವು?' ಎಂದಾಗ,  `ಸುಮ್ಮನೇ ಓದುತ್ತಿದ್ದೇನೆ ಕಣೇ. ನೀನು ಗೀತಾಳನ್ನು ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಅದಕ್ಕಾಗಿ ಇದನ್ನು ಮತ್ತೆ ಓದಲು ಹತ್ತಿದ್ದೇನೆ' ಎಂದು ನಕ್ಕು, `ನಾನು ಈಗ ಅವಳನ್ನು ಬಯಸಿದೆ ಎಂದು ಇಟ್ಟುಕೋ ಅಥವಾ ಅವಳು ನನ್ನನ್ನು ಬಯಸಿದಳು ಅಂತಲೂ ಇಟ್ಟುಕೋ, ನಾನೀಗ ದೈಹಿಕವಾಗಿ ಅಸಮರ್ಥ ಎನ್ನುವುದು ನಿನಗೇ ಗೊತ್ತು. ಮತ್ತೆ ಯಾಕೆ ನಿನಗೆ ಇಂಥ ಮತ್ಸರ?' ಎಂದರು ಪತ್ನಿಗೆ.ರಾಯರ ಪತ್ನಿ `ಕೆಲವರಿಗೆ ಹೆಣ್ಣನ್ನು ನೋಡುವುದರಲ್ಲಿ ಇಷ್ಟ. ಕೆಲವರಿಗೆ ಹೆಣ್ಣಿನ ಸಾಮೀಪ್ಯ ಇರುವುದು ಇಷ್ಟ. ಇನ್ನು ಕೆಲವರಿಗೆ ಹೆಣ್ಣನ್ನು ಕೂಡುವುದರಲ್ಲಿ ಇಷ್ಟ ಎನ್ನುವುದು ನನಗೆ ಗೊತ್ತು. ಅಲ್ಲಮ ಹೇಳಿದ್ದಾನೆ- ಹೆಣ್ಣು ಮಾಯೆಯಲ್ಲ ಹೊನ್ನು ಮಾಯೆಯಲ್ಲ ಮಣ್ಣು ಮಾಯೆಯಲ್ಲ, ಮನದ ಮುಂದಿನ ಮಾಯೆಯೇ ಇವೆಲ್ಲ ಎಂದು ನೀವೇ ಒಂದು ಕತೆ ಬರೆದಿದ್ದೀರಿ. ಮತ್ತೆ ಇದನ್ನು ಸಮರ್ಥಿಸುವ ಹಾಗೆ ನೀವು ಈಗ ವರ್ತಿಸುತ್ತಿದ್ದೀರಿ. ಆದರೆ ಅದು ನಿಮಗೆ ತಿಳಿಯುತ್ತಿಲ್ಲ. ನನಗೆ ತಿಳಿಯುತ್ತಿದೆ' ಎಂದರು.ರಾಯರಿಗೆ ಅದು ಸರಿಯೋ ಹೌದೋ ಅಲ್ಲವೋ ಎನ್ನುವುದನ್ನು ನಿಷ್ಕರ್ಷಿಸಲಾಗಲಿಲ್ಲ. ಅದೊಂದು ದಿನ ರಾಯರು ಪತ್ನಿ ಇಲ್ಲದ ಹೊತ್ತಿನಲ್ಲಿ ಮನೆಗೆ ಬಂದ ಗೀತಾಳಲ್ಲಿ `ಗೀತಾ ನನಗೆ ನಿನ್ನನ್ನೊಮ್ಮೆ ಅಪ್ಪಿ ಮುದ್ದಿಸಬೇಕು ಎಂದು ಬಹಳ ದಿನಗಳಿಂದ ಅನಿಸಹತ್ತಿದೆ. ಅವಕಾಶ ಕೊಡುವೆಯಾ?' ಎಂದು ವಿನಂತಿಸಿದರು. ತತ್‌ಕ್ಷಣ ಬೆದರಿ ಚಿಗರೆಯಂತಾದ ಗೀತಾ `ಸರ್, ನೀವು ಏನು ಮಾತನಾಡುತ್ತಿದ್ದೀರಿ ಎಂದು ನನಗೆ ಅರ್ಥ ಆಗುತ್ತಿಲ್ಲ. ನಾನು ಅಂಥವಳಲ್ಲ. ನೀವು ಇಂಥ ಬೇಡಿಕೆಯನ್ನು ಇನ್ನು ಮುಂದೆ ನನ್ನ ಎದುರು ಇಟ್ಟರೆ ನಾನು ನನ್ನ ಕೆಲಸಕ್ಕೆ ಖಂಡಿತ ರಾಜೀನಾಮೆ ನೀಡುತ್ತೇನೆ' ಎಂದಳು. ರಾಯರು ಪೆಚ್ಚಾದರು.ಮರುದಿನ ಗೀತಾ ಕೆಲಸಕ್ಕೆ ಬರುವುದಿಲ್ಲ ಎಂದುಕೊಂಡಿದ್ದ ರಾಯರಿಗೆ ಎಂದಿನ ಹಾಗೆ ಆಕೆ ಕೆಲಸಕ್ಕೆ ಬಂದು ಅದೇ ನಗುಮುಖದಿಂದ ನಡೆದುಕೊಳ್ಳುತ್ತಿರುವುದು ನೋಡಿ ಸಮಾಧಾನವಾಯಿತು. ಆದರೆ ಅವರ ಅಂತರಂಗದಲ್ಲಿ ತಾನೆಂಥ ತಪ್ಪು ಮಾಡಿದೆ. ತನ್ನ ಮೊಮ್ಮಗಳ ಪ್ರಾಯದ ಇವಳ ಮೇಲೆ ಯಾಕೆ ಮೋಹಗೊಂಡೆ ಎನ್ನುವುದನ್ನು ಅರ್ಥೈಸಲು ಹೊರಟರೂ ಅದು ಅವರಿಗೆ ಅರ್ಥವೇ ಆಗಲಿಲ್ಲ.ಉತ್ತರ   ಸಿಗದಿದ್ದಾಗ ಆ ಯೋಚನೆ ಮತ್ತು ಭಾವನೆಗಳು ಹೊಸರೂಪ ಪಡೆದು `ಮನದ ಪರಿಣಾಮ ಎಂಬುದೇ ಪರಿಣಾಮ' ಎಂದು ಅಲ್ಲಮ ಆಡಿದ ಮಾತಿನ ಹಿನ್ನೆಲೆಯಲ್ಲಿ ಅವರು `ಪರಿಣಾಮ' ಎನ್ನುವ ಕಥೆ ಬರೆದು ನಿಟ್ಟುಸಿರುಬಿಟ್ಟರು. ಆ ಕಥೆ `ದರ್ಪಣ' ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ರಾಯರು ಅದನ್ನು ಮತ್ತೆ ಮತ್ತೆ ಓದಿ ತಾನು ಇದನ್ನು ಬರೆದೆನೇ ಎಂದು ಹೆಮ್ಮೆ ಪಟ್ಟುಕೊಂಡರು. ಗೀತಾಳಿಗೆ ಅದನ್ನು ತೋರಿಸಬೇಕು ಎಂದುಕೊಂಡರು. ಆಕೆ ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬಹುದು? ಎಂದು ಒಂದು ವಾರ ಸುಮ್ಮನಾದರು.`ಸರ್, ನೀವು ಇಂಥ ಕಥೆಯನ್ನೂ ಬರೆಯುವುದಾ?' ಎಂದು ಆಕೆ ಕೇಳಿದರೆ ಎಂದು ಮುಜುಗರಪಟ್ಟುಕೊಂಡರೂ `ದಿಗ್ಗಜ' ಎನ್ನುವ ಹೆಸರಿನಲ್ಲಿರುವ ಈ ಕಥೆಯನ್ನು ತಾನು ಬರೆದದ್ದೆಂದು ಆಕೆ ಅರ್ಥ ಮಾಡಿಕೊಳ್ಳಲಾರಳು ಎಂದುಕೊಂಡ ಅವರು, `ಒಂದು ಅದ್ಭುತ ಕತೆ ಇದೆ, ಓದು' ಎಂದು  ದರ್ಪಣವನ್ನು ಅವಳ ಕೈಗಿತ್ತರು.ಆ ಕಥೆಯಲ್ಲಿ ಕಥಾನಾಯಕ ರಾಯರ ಹಾಗೆ ಎಳೆಪ್ರಾಯದ ತನ್ನ ಆಪ್ತಸಹಾಯಕಿಯನ್ನು `ಒಮ್ಮೆ ನನಗೆ ನಿನ್ನನ್ನು ಅಪ್ಪಿ ಮುದ್ದಾಡಬೇಕು ಎಂದು ಅನಿಸಹತ್ತಿದೆ. ಅವಕಾಶ ಕೊಡುವೆಯಾ?' ಎಂದು ಕೇಳುತ್ತಾನೆ. ಅದಕ್ಕೆ ಆಕೆ ಇಲ್ಲ ಎನ್ನುತ್ತಾಳೆ. ಆದರೆ ಕಥಾನಾಯಕ, `ನೀನು ನೀತಿಗೆಟ್ಟವಳು ಎಂದು ನಾನು ಭ್ರಮಿಸಬಹುದೆಂದು ನೀನು ಒಪ್ಪಿಗೆ ಕೊಡುತ್ತಿಲ್ಲ ಎಂದು ನನಗೆ ಅರ್ಥ ಆಗಿದೆ. ನೀನು ನೀತಿ ಗೆಟ್ಟವಳು ಅಲ್ಲ ಎಂದೇ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನನ್ನ ಪ್ರೀತಿಯ ಹಿಂದೆ ಇರುವುದು ಕೇವಲ ಕಾಮ ಅಲ್ಲ ಟ್ಟಜಿ . ಅದಕ್ಕಾಗಿ ನಿನ್ನನ್ನು ಅಪ್ಪಿ ಮುದ್ದಿಡುತ್ತೇನೆ ಅಂದದ್ದು. ಆದರೆ ಮುತ್ತಿಡಲು ಬಯಸಿದ್ದು ನೀನು ಕಲ್ಪಿಸಿಕೊಂಡ ಹಾಗೆ ತುಟಿಗಲ್ಲ, ಹಣೆಗೆ!' ಎನ್ನುತ್ತಾನೆ.ಆ ಮಾತಿಗೆ ಆಕೆ ಏನೂ ಆಡದೆ ಸುಮ್ಮನಾಗುತ್ತಾಳೆ. ಎರಡು ದಿನದ ಮೇಲೆ ಆಕೆ ಖುಷಿಯಲ್ಲಿ `ಸಾರಿ ಸರ್, ನಾನು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡೆ. ನೀವು ನಿಷ್ಕಾಮದಿಂದ ನನ್ನನ್ನು ಮುತ್ತಿಡುವುದಾದರೆ ನಾನು ಅದನ್ನು ಸ್ವಾಗತಿಸುತ್ತೇನೆ. ನಿಮಗೆ ಗೊತ್ತಿದೆಯೋ ಇಲ್ಲವೋ ಸತ್ಯಕಾಮ ಎನ್ನುವ ಲೇಖಕರೊಬ್ಬರನ್ನು ಲೇಖಕಿಯೊಬ್ಬರು ಆತನೇ ತನ್ನ ತಂದೆ, ಆತನೇ ತನ್ನ ಗಂಡ ಎಂಬಂತೆ ಪರಿಭಾವಿಸಿದ್ದನ್ನು ನಾನು ಓದಿದ್ದೇನೆ. ನಮ್ಮದೂ ಹಾಗೆ ಆಗಲಿ ಎಂದು ಒಪ್ಪಿಗೆ ನೀಡುತ್ತಿದ್ದೇನೆ' ಎಂದು ಕಥಾನಾಯಕನ ಮೊಬೈಲಿಗೆ ಎಸ್.ಎಂ.ಎಸ್. ಮಾಡುತ್ತಾಳೆ.ಆ ಎಸ್.ಎಂ.ಎಸ್. ತಲುಪುವ ಮೊದಲೇ ಆ ಕಥಾನಾಯಕ ಹೃದಯಾಘಾತಕ್ಕೆ ಒಳಗಾಗಿ ವಿಧಿವಶನಾಗುತ್ತಾನೆ. ಆಕೆಗೆ ಅಯ್ಯೋ ಅನಿಸುತ್ತದೆ. ಅವಳ ತುಟಿಗಳು ಕಥಾನಾಯಕನನ್ನು ಸದಾ ನೆನಪಿಸಿಕೊಂಡು ಸ್ಫುರಿಸುತ್ತಲೇ ಇದೆ ಎನ್ನುವಲ್ಲಿಗೆ ರಾಯರ ಕಥೆ ಮುಕ್ತಾಯಗೊಳ್ಳುತ್ತದೆ.ಗೀತಾ ಮರುದಿನ ರಾಯರಿಗೆ ಎಸ್.ಎಂ.ಎಸ್.ನಲ್ಲಿ `ನೀವು ನನ್ನ ದೇಹದ ಯಾವ ಭಾಗವನ್ನು ಬೇಕಾದರೂ ಚುಂಬಿಸಬಹುದು ಸರ್. ವಾಹ್! ಎಂದು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ' ಎಂದು ಖುಷಿಯಿಂದಲೇ ಬರೆದಳು.

ರಾಯರು ಅದಕ್ಕೆ ಪ್ರತಿಕ್ರಿಯೆ ಕೊಡಲು ಹೋಗಲಿಲ್ಲ. ಅವಳು ಕಾದು ಸೋತು ಹೋದಳು ಎನ್ನುವಾಗ ಒಂದು ದಿನ ಬೆಳಗ್ಗೆ ಅವಳಿಗೆ ರಾಯರ ಎಸ್.ಎಂ.ಎಸ್. ಬಂತು. ಆಕೆ ಢವಗುಟ್ಟುವ ಎದೆಯ ಬಡಿತವನ್ನು ಢಾಳಾಗಿ ಕೇಳಿಸಿಕೊಳ್ಳುತ್ತಲೇ ಅದನ್ನು ಓದಿದಳು.ಅದರಲ್ಲಿ ಇದ್ದುದು ಇಷ್ಟು. `ನಾನು ನಿನ್ನನ್ನು ಹೂವು ಎಂದು ಭ್ರಮಿಸಿದ್ದೆ. ಅದರೆ ನೀನು ಹೂವಲ್ಲ ಹೆಣ್ಣು ಎನ್ನುವುದು ಈಗ ನನಗೆ ತಿಳಿಯಿತು. ನಾನು ಈಗ ಹೆಣ್ಣನ್ನು ಆಘ್ರಾಣಿಸುವ ಸ್ಥಿತಿಯಲ್ಲಿ ಇಲ್ಲ, ಕ್ಷಮಿಸು!'.ಜೊತೆಗೆ ಒಂದು ಪುಟ್ಟ ಷರಾ ಕೂಡ ಎಸ್.ಎಂ.ಎಸ್.ನಲ್ಲಿ ಇತ್ತು. `ಕಾವ್ಯದ ಭಾಷೆಯೇ ಬೇರೆ. ದೇಹದ ಭಾಷೆಯೇ ಬೇರೆ ಎನ್ನುವುದು ಈ ತನಕ ನಿನಗೆ ಗೊತ್ತಿರಲಿಲ್ಲ. ಗೊತ್ತಾಗಲಿ ಎಂದೇ ನಾನೇ ಆ ಕಥೆಯಲ್ಲಿ ನನ್ನ ಮನಸ್ಸನ್ನು ತೆರೆದಿದ್ದೆ. ಈಗ ನಿನ್ನನ್ನು ಸ್ಪರ್ಶಿಸದೆ ಚುಂಬಿಸುತ್ತಿದ್ದೇನೆ. ಸಾಕು!'.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry