ಮನಮೋಹಕ ಜಲಪಾತ ಗುಂಡಲಬಂಡಾ

ಮಂಗಳವಾರ, ಜೂಲೈ 23, 2019
20 °C

ಮನಮೋಹಕ ಜಲಪಾತ ಗುಂಡಲಬಂಡಾ

Published:
Updated:

ಹಟ್ಟಿ ಚಿನ್ನದ ಗಣಿ: ಲಿಂಗಸುಗೂರ ತಾಲ್ಲೂಕಿನ ಗುರುಗುಂಟಾ ಗ್ರಾಮದ ಬಳಿಯ ಗೊಲ್ಲಪಲ್ಲಿ ಗುಡ್ಡಗಳಲ್ಲಿ ಭೋರ್ಗರೆಯುತ್ತಿರುವ ಗುಂಡಲಬಂಡಾ ಜಲಪಾತ ನೋಡುಗರ ಕಣ್ಣಿಗೆ ಹಬ್ಬವೇ ಸರಿ.ರಾಯಚೂರು ಜಿಲ್ಲೆಯ ಏಕೈಕ ಜಲಪಾತ ಎಂಬ ಖ್ಯಾತಿ ಪಡೆದ ಗುಂಡಲಬಂಡಾ ಜಲಪಾತ ಸುಮಾರು 100 ಅಡಿ ಎತ್ತರದಿಂದ ಬೃಹತ್ ಬಂಡೆಗಳ ಮೇಲಿಂದ ಧುಮ್ಮಿಕ್ಕುತ್ತಿದೆ.ಮಳೆಗಾಲದಲ್ಲಿ ಈ ಜಲಪಾತದ ಭೋರ್ಗರೆಯುವಿಕೆ 5 ಕಿಲೋ ಮೀಟರ್ ದೂರದವರೆಗಿನ ಪ್ರದೇಶಕ್ಕೆ ಕೇಳಿಸುತ್ತದೆ. ಸದಾ ಕಾಲ ನೀರು ಹರಿಯುವುದರಿಂದ ಈ ಜಲಪಾತದ ನಯನ ಮನೋಹರ ದೃಶ್ಯ ಜನರನ್ನು ತನ್ನತ್ತ ಸೆಳೆಯುತ್ತಿದೆ.ಆದರೆ, ಗುಂಡಲಬಂಡಾ ಜಲಪಾತದ ಸೌಂದರ್ಯ ಕಣ್ತುಂಬಿಸಿಕೊಳ್ಳಬೇಕಿದ್ದರೆ ಒಂದಿಷ್ಟು ಕಷ್ಟ ಪಡಬೇಕು. ಶ್ರೀರಂಗಪಟ್ಟಣ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ಬರುವ ಗುರುಗುಂಟಾದಿಂದ ಸುರಪುರ ಕಡೆ ಸಾಗಿದರೆ 4 ಕಿಲೋ ಮೀಟರ್ ದೂರದಲ್ಲಿ ಬಲಕ್ಕೆ ಗುಡ್ಡದಲ್ಲಿ ಕಚ್ಚಾ ರಸ್ತೆಯೊಂದು ಸಿಗುತ್ತದೆ.ರಸ್ತೆ ಕಲ್ಲು-ಬಂಡೆ, ತಗ್ಗು-ದಿನ್ನೆಗಳಿಂದ ಕೂಡಿರುವುದರಿಂದ ವಾಹನಗಳು ಜಲಪಾತದ ಸಮೀಪಕ್ಕೆ ಹೋಗಲು ಅವಕಾಶ ಇಲ್ಲ. ಬೈಕ್‌ನಲ್ಲಿ ಹೋಗಬೇಕಾದರೆ ಸಾಹಸ ಪಡಬೇಕು. ಸುಮಾರು 1 ಕಿಲೋ ಮೀಟರ ಸಾಗಿದರೆ ಜಲಪಾತ ಕಂಡುಬರುತ್ತದೆ.ಸಂಕ್ರಾಂತಿ ನಿಮಿತ್ತ ಜಲಪಾತದಲ್ಲಿ ಪವಿತ್ರ  ಸ್ನಾನಕ್ಕೆಂದು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತರಾಗಿ ಬರುತ್ತಾರೆ. ಸುತ್ತಮುತ್ತಲಿನ ಜನರು ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಬಂದು ಜಲಪಾತದ ಸೌಂದರ್ಯ ಸವಿಯುತ್ತಾರೆ.ನೀರಿನಲ್ಲಿ ಇಳಿದು ಮೋಜು ಮಸ್ತಿ ಮಾಡುತ್ತಾರೆ. ಈ ಭಾಗದ ಜನರಿಗೆ ಇದು ನೆಚ್ಚಿನ ತಾಣ. ಆದ್ದರಿಂದ ಜಲಪಾತ ನೋಡಲು ಜನರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ.ಈ ಹಿಂದೆ ಜಿಲ್ಲಾಡಳಿತದ ಉನ್ನತಾಧಿಕಾರಿಗಳು ಜಲಪಾತಕ್ಕೆ ಭೇಟಿ ನೀಡಿ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದರು.ಆದರೆ ಅದು ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಬಿಸಿಲು ನಾಡಿನಲ್ಲಿ ಎಲ್ಲಾ ಕಾಲದಲ್ಲೂ ಹರಿಯುವ ಜಿಲ್ಲೆಯ ಏಕೈಕ ಜಲಪಾತವಾದ ಗುಂಡಲಬಂಡಾಕ್ಕೆ ಆಗಮಿಸುವ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ಜಲಪಾತದ ಸುತ್ತಲಿನ ಪ್ರದೇಶ ಮತ್ತು ರಸ್ತೆ ಅಭಿವೃದ್ಧಿ ಪಡಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry