ಮನಮೋಹಕ ಮಂಜಿನ ಮುಂಜಾವು...

6

ಮನಮೋಹಕ ಮಂಜಿನ ಮುಂಜಾವು...

Published:
Updated:

ಶಿಡ್ಲಘಟ್ಟ: ತಾಲ್ಲೂಕಿನ ಎಲ್ಲೆಡೆ ಮುಂಜಾನೆ ಮಂಜು ಆವರಿಸತೊಡಗಿದೆ. `ಮಂಜು ಬಂತೆಂದರೆ ಮಳೆ ಹೋಯ್ತು~ ಎಂಬುದು ಗ್ರಾಮಸ್ಥರ ನಂಬಿಕೆ. ಮುಂಜಾವಿನ ಮಂಜು ಮನಸ್ಸಿಗೆ ಹಿತ ನೀಡಿದರೂ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೇಸರ ಮೂಡಿಸಿದೆ.ಕಳೆದ ಎರಡು ದಿನಗಳಿಂದ ಸೂರ್ಯೋದಯ ತಡವಾಗುತ್ತಿದ್ದು, ಮಂಜು ಆವರಿಸತೊಡಗಿದೆ. ವಾಹನಗಳು ದೀಪ ಹಾಕಿಕೊಂಡು ಹೋಗುವ ಸ್ಥಿತಿಯಿದೆ. ವಾಕಿಂಗ್ ಹೋಗುವವರು ಸ್ವೆಟರ್, ಶಾಲೆಗೆ ಹೋಗುವವರು ಟೊಪ್ಪಿಗಳಲ್ಲಿ ಬಂಧಿಯಾದರೆ, ಬಿಳಲುಗಳೊಂದಿಗಿನ ಆಲದ ಮರ ಮಂಜಿನ ಮರದಂತೆ ಭಾಸವಾಗುತ್ತದೆ. ಪಟ್ಟಣದ ಕಟ್ಟಡಗಳೆಲ್ಲ ಮಂಜಿನ ಮುಸುಕು ಕಳೆದುಕೊಂಡಿದ್ದರೆ, ಅಲ್ಲಲ್ಲಿ ನಿಂತ ತೆಂಗಿನ ಮರಗಳು ಮಾತ್ರ ತಮ್ಮ ಇರುವನ್ನು ತೋರಗೊಡುವಂತೆ ಭಾಸವಾಗುತ್ತದೆ.ಮುಂಜಾನೆಯ ಪ್ರಕೃತಿ ಆರಾಧಕರಿಗೆ, ವಾಯು ಸಂಚಾರಿಗರಿಗೆ ಮಂಜಿನ ಆಗಮನ ಆಹ್ಲಾದ ತಂದರೆ, ಮುಂಜಾನೆಯಲ್ಲಿ ಕಾಯಕದಲ್ಲಿ ನಿರತರಾದ ಹಾಲು, ಪೇಪರ್ ಹಂಚುವರು ಮತ್ತು ಮಳೆಗಾಗಿ ಕಾದ ರೈತರಿಗೆ ಬೇಸರ ಮೂಡಿಸಿದೆ.`ಭೂಮಿಯ ಉಷ್ಣವನ್ನು ರಕ್ಷಿಸುವ ಮೋಡಗಳ ಮುಸುಕು ಇಲ್ಲವಾದಾಗ ಭೂಮಿಯಿಂದ ಹೊರಬಿದ್ದ ಶಾಖ ವಾತಾವರಣದಲ್ಲಿ ಸೇರಿ ಹೋಗುತ್ತದೆ. ಆಗ ಭೂಮಿ ಬೇಗ ತಂಪುಗೊಂಡು ತನಗೆ ಹತ್ತಿರದ ಗಾಳಿಯನ್ನೂ ತಂಪು ಮಾಡುತ್ತದೆ.ಮಂಜು ಉಂಟಾಗುವುದು ಹೀಗೆ. ಮೋಡವೇ ಇಲ್ಲವೆಂದ ಮೇಲೆ ಮಳೆ ಎಲ್ಲಿಂದ ಬರುತ್ತದೆ. ಹಾಗಾಗೇ ನಮ್ಮ ಹಿಂದಿನವರು ಮಂಜು ಬಂದರೆ ಮಳೆ ಹೋಯ್ತು ಎನ್ನುವುದು.ಈಗ ತಾಲ್ಲೂಕಿನಲ್ಲಿ ಮಳೆ ಬರದೆ ಹೊಲವೂ, ತೋಟಗಳೂ ನೀರಿಲ್ಲದೆ ಸೊರಗಿವೆ. ರೈತರನ್ನು ಈ ಬಾರಿ ಪ್ರಕೃತಿ ಸಂಕಷ್ಟಕ್ಕೀಡು ಮಾಡಿದೆ. ಈಗ ಸರ್ಕಾರ ಪರಿಹಾರ ನೀಡದಿದ್ದರೆ, ರೈತರು ಉಳಿಯುವುದು ಕಷ್ಟ~ ಎಂದು ಹಿರಿಯ ರೈತರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry