ಮನರಂಜನೆಯ ಮಹಾಪೂರ..!

7

ಮನರಂಜನೆಯ ಮಹಾಪೂರ..!

Published:
Updated:

ಕಾಲೇಜುಗಳಲ್ಲಿ ನಡೆಯುವ `ವೆಲ್‌ಕಂ ಡೇ~, ಕಾಲೇಜ್  ಫೆಸ್ಟ್~ಗಳಿಗೆ ಹೋಲಿಸಿದರೆ ಇದೊಂದು ವಿಶೇಷ ಕಾರ್ಯಕ್ರಮ. ಈ ಕಾರ್ಯಕ್ರಮ ನಡೆದದ್ದು ಬೆಂಗಳೂರಿನ ಒಎಂಬಿಆರ್ ಲೇಔಟ್‌ನ ಸಿಎಂಆರ್ ಕಾಲೇಜು ಕ್ಯಾಂಪಸ್‌ನಲ್ಲಿ. ಅಂದು ಸಿಎಂಆರ್ ಸಮೂಹ ವಿದ್ಯಾಸಂಸ್ಥೆಗಳ ಸುಮಾರು 12 ಸಾವಿರ ವಿದ್ಯಾರ್ಥಿಗಳು ಜತೆಗೆ ಸೇರಿದ್ದರು.ಎಲ್ಲರಲ್ಲೂ ಅದೇನೋ ಉತ್ಸಾಹ. ಎದ್ದು ಕಾಣುವ ಆತ್ಮವಿಶ್ವಾಸ.  ದಿನವಿಡೀ ಓದು, ಪ್ರಾಯೋಗಿಕ ಚಟುವಟಿಕೆಗಳ ಜಂಜಾಟದಲ್ಲಿ ಮುಳುಗಿ ಹೋಗಿರುವ ವಿದ್ಯಾರ್ಥಿಗಳಿಗೆ ಎರಡು ದಿನಗಳಮಟ್ಟಿಗೆ ಬಿಡುವು ಸಿಕ್ಕಿತ್ತು. ನಿರಂತರ  ಓದಿಗೆ ಸ್ವಲ್ಪ ವಿರಾಮ ನೀಡಿ, ಒಮ್ಮೆ ನಿಟ್ಟುಸಿರು ಬಿಡುವಂತಾಗಲು ಇಂಥ ಮನರಂಜನಾ ಕಾರ್ಯಕ್ರಮಗಳು ಬೇಕೇ ಬೇಕು.`ಸಿಎಂಆರ್‌ಗೂ ಪ್ರತಿಭೆಯಿದೆ~ ಎಂಬ ಹೆಸರಿನಡಿ ಎರಡು ದಿನಗಳ ಕಾಲ ನಡೆದ ಈ ಪ್ರತಿಭಾ ಪ್ರದರ್ಶನ ಮನೋರಂಜನೆಯ ಮಹಾಪೂರವನ್ನೇ ವಿದ್ಯಾರ್ಥಿಗಳಿಗೆ ಉಣಬಡಿಸಿತು. ಸಿಎಂಆರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸಿಎಂಆರ್ ಪ್ರೌಢಶಾಲೆ, ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿಎಂಆರ್ ಲಾ ಸ್ಕೂಲ್, ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಸಿಎಂಆರ್ ಕಾಲೇಜ್ ಆಫ್ ಎಜುಕೇಶನ್,

 

ಸಿಎಂಆರ್ ಕಾಲೇಜ್ ಆಫ್ ನರ್ಸಿಂಗ್, ಸಿಎಂಆರ್ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್, ಸಿಎಂಆರ್ ಸೆಂಟರ್ ಫಾರ್ ಬ್ಯುಸಿನೆಸ್ ಸ್ಟಡೀಸ್ ಮತ್ತು ಸಿಎಂಆರ್ ನ್ಯಾಷನಲ್ ಜೂನಿಯರ್ ಕಾಲೇಜುಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ದೊರಕುತ್ತದೆ ಎಂದ ಮೇಲೆ ವಿದ್ಯಾರ್ಥಿಗಳು ಸುಮ್ಮನೆ ಕುಳಿತುಕೊಳ್ಳುತ್ತಾರೆಯೇ? ಸಂಗೀತ, ನೃತ್ಯ, ಫ್ಯಾಷನ್, ಕಲೆ ಹೀಗೆ ಕಾರ್ಯಕ್ರಮಗಳು ರಂಗೇರಿದವು. ಹನ್ನೆರಡೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಎರಡು ದಿನಗಳ ಕಾಲದ ಈ ಕಾರ್ಯಕ್ರಮ ನಿಜಕ್ಕೂ ಸಾಂಸ್ಕೃತಿಕ ಹಬ್ಬವೇ ಆಗಿತ್ತು.

ಅಲ್ಲದೆ ಭಾಗವಹಿಸಿದವರೆಲ್ಲರಿಗೂ ರಸದೌತಣವನ್ನೇ ನೀಡಿತು. ಕ್ಯಾಂಪಸ್‌ನೊಳಗೆ ಎಲ್ಲಿ ನೋಡಿದರೂ ವಿದ್ಯಾರ್ಥಿಗಳು ವಿವಿಧ ವೇಷದೊಂದಿಗೆ, ತಂಡದೊಂದಿಗೆ ನೆರೆದಿದ್ದರು. ಒಟ್ಟಿನಲ್ಲಿ ಸಮಸ್ತ ಭಾರತವೇ ಅಲ್ಲಿ ನೆರೆದಿದೆಯೇನೋ ಎಂಬಂತೆ ಕಾಣುತ್ತಿತ್ತು.ವಿದ್ಯಾರ್ಥಿಗಳಲ್ಲಿ ಆರೋಗ್ಯಕರವಾದ ಸ್ಪರ್ಧೆಗಳು ನಡೆದವು. ಸುಮಾರು 32 ವೇದಿಕೆಗಳು ಸಿದ್ಧವಾಗಿದ್ದವು. ಸುಮಾರು 800 ವಿದ್ಯಾರ್ಥಿಗಳು ವೇದಿಕೆ ಹೊರತುಪಡಿಸಿದ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಮೊದಲನೆಯ ದಿನ ನೃತ್ಯ, ಸಂಗೀತ ಮುಂತಾದ ಸ್ಪರ್ಧೆಗಳು ವೇದಿಕೆ ಮೇಲೆ ನಡೆದರೆ, ವೇದಿಕೆ ಹೊರಗೆ ಹೂಗಳ ಜೋಡಣೆ, ಮುಖಕ್ಕೆ ಬಣ್ಣ ಹಚ್ಚುವುದು, ಫ್ಯಾಬ್ರಿಕ್ ಪೇಂಟಿಂಗ್, ಕೇಶ ವಿನ್ಯಾಸ, ಉಗುರ ಮೇಲಿನ ಕಲೆ, ಇಂಧನವಿಲ್ಲದೆ ಅಡುಗೆ ಮಾಡುವುದು, ಕಸದಿಂದ ರಸ, ವಧುವಿನ ಅಲಂಕಾರ ಮತ್ತು ಭಾರತದ ಹುಡುಕಾಟ ಮುಂತಾದ ಸ್ಪರ್ಧೆಗಳು ನಡೆದವು.  ಇನ್ನು ವಧುವಿನ ಅಲಂಕಾರದಲ್ಲಂತೂ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ವಧುವಿನ ವೇಷದಲ್ಲಿ ಕಂಗೊಳಿಸಿದ್ದರು.ಇದರ ಜತೆಗೆ, ಶಾಸ್ತ್ರೀಯ ನೃತ್ಯ, ಪಾಶ್ಚಾತ್ಯ ಸಮೂಹ ನೃತ್ಯ, ವಾದ್ಯ ಸಂಗೀತ, ಏಕಪಾತ್ರಾಭಿನಯ, ಜಾನಪದ ನೃತ್ಯ ಮತ್ತು ರಾಕ್‌ಬ್ಯಾಂಡ್ ಕಾರ್ಯಕ್ರಮಗಳು ನಡೆದವು. ಕಳೆದ ಒಂದು ತಿಂಗಳಿಂದಲೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸಿದ್ದರು.ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳು ದೊರೆಯುವುದು ಬಲು ಅಪರೂಪ. ಹಾಗಾಗಿ ಉತ್ಸಾಹದಿಂದ ಭಾಗವಹಿಸಿ ಸಂತಸಪಟ್ಟರು. ಇನ್ನು ರಾಕ್‌ಬ್ಯಾಂಡ್‌ನಲ್ಲಂತೂ ವಿದ್ಯಾರ್ಥಿಗಳು ತಾವೇ ಸಂಯೋಜಿಸಿದ ಹಾಡುಗಳನ್ನು ಹಾಡಿ ಸಭಿಕರನ್ನು ನಿಬ್ಬೆರಗಾಗಿಸಿದರು.ಎರಡನೇ ದಿನವಂತೂ ಪೆನ್ಸಿಲ್ ಸ್ಕೆಚ್, ಕೊಲಾಜ್, ಮಡಕೆ ಮೇಲೆ ಚಿತ್ರ ಬರೆಯುವುದು, ಮೆಹೆಂದಿ ವಿನ್ಯಾಸ, ಕಾರ್ಟೂನ್ ಬಿಡಿಸುವುದು, ತರಕಾರಿ ಕೆತ್ತನೆ, ಜೇಡಿಮಣ್ಣಿನ ಕಲಾಕೃತಿ, ರಂಗೋಲಿ ಮುಂತಾದ ಸ್ಪರ್ಧೆಗಳ ಜತೆಗೆ ತಮಾಷೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ವೇದಿಕೆ ಮೇಲೆ ನಡೆದವು.

 

ಮೊದಲ ವರ್ಷದ ವಿದ್ಯಾರ್ಥಿಗಳ ಉತ್ಸಾಹ ಮೇರೆ ಮೀರಿತ್ತಲ್ಲದೆ ಎಲ್ಲಾ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದರು. ಕೆಲವು ವಿದ್ಯಾರ್ಥಿಗಳಂತೂ ಪರಿಸರ ರಕ್ಷಣೆ ಮುಂತಾದ ಉತ್ತಮ ಸಂದೇಶ ಸಾರುವ ನಾಟಕವನ್ನು ಪ್ರದರ್ಶಿಸಿದರು. ಓದು ಎಷ್ಟು ಮುಖ್ಯವೋ ಮನರಂಜನೆಯೂ ಅಷ್ಟೇ ಮುಖ್ಯ. ಇವರೆಡೂ ಜತೆಜತೆಯಲ್ಲೇ ಸಾಗಬೇಕು. ಆಗ ಓದು ಹೊರೆಯಾಗದೆ, ಅಡೆತಡೆಯಿಲ್ಲದೆ ಮುಂದಕ್ಕೆ ಸಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry