ಶನಿವಾರ, ಮೇ 15, 2021
24 °C

ಮನರಂಜನೆ ಜತೆಗೆ ವ್ಯಕ್ತಿತ್ವ ನಿರ್ಮಾಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನರಂಜನೆ ಜತೆಗೆ ವ್ಯಕ್ತಿತ್ವ ನಿರ್ಮಾಣ...

ಗುಲ್ಬರ್ಗ: ವಿಶ್ವವಿದ್ಯಾಲಯದ ಹಿಂಭಾಗದಲ್ಲಿನ ಸರಸ್ವತಿಪುರ ಬಡಾವಣೆಯ ಮನೆಯೊಂದು ಜ್ಞಾನದಾಹ ತಣಿಸಿಕೊಳ್ಳುವವರ ಕೇಂದ್ರ. ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದ ಬಸವರಾಜ ಸಗರ, (ನಿಧನ: 7.10.2009) ತಮ್ಮಲ್ಲಿದ್ದ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿ `ಫ.ಗು.ಹಳಕಟ್ಟಿಯವರ ಗ್ರಂಥಭಂಡಾರ~ ಎಂದೇ ನಾಮಕರಣ ಮಾಡಿದ್ದರು. `ಪ್ರತಿಯೊಂದು ಪುಸ್ತಕ ಪ್ರಕಟಣೆ ಹಿಂದೆ ಅಪಾರ ಶ್ರಮ ಇರುತ್ತದೆ.ಪುಸ್ತಕವನ್ನು ಖರೀದಿಸಿ ಓದುವುದರಿಂದ ಅದರ ಲೇಖಕ- ಪ್ರಕಾಶಕನಿಗೆ ಗೌರವ ಸಲ್ಲಿಸಿದಂತಾಗುತ್ತದೆ~ ಎಂದು ಪ್ರತಿಪಾದಿಸುತ್ತಿದ್ದ ಬಸವರಾಜ ಸಗರ, ಪುಸ್ತಕ ಕೊಂಡು ಓದಲು ಪ್ರೇರೇಪಿಸುತ್ತಿದ್ದರು.

ಸಗರ ಅವರ ಮನೆಯ ಒಂದು ಕೊಠಡಿಯ ತುಂಬ ಪುಸ್ತಕಗಳೇ ತುಂಬಿವೆ. ಬಸವರಾಜ ಅವರ ಪತ್ನಿ ಸಾವಿತ್ರಿಬಾಯಿ ಅವರು ಪತಿಯ ಜೀವಾಳವಾಗಿದ್ದ ಗ್ರಂಥಾಲಯವನ್ನು ಅವರಷ್ಟೇ ಜತನದಿಂದ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿರುವ ಪುಸ್ತಕಗಳ ಪ್ರಕಾರಗಳಂತೂ ಬೆರಗುಗೊಳಿಸುವಂತಿವೆ.ಶರಣ- ದಾಸ ಸಾಹಿತ್ಯದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಬಸವರಾಜ ಸಗರ ಅವರು, ವಚನಕ್ಕೆ ಸಂಬಂಧಿಸಿದ ನೂರಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. `ವಚನ ಸಾಹಿತ್ಯ ಪಿತಾಮಹ~ ಎಂದೇ ಹೆಸರಾಗಿದ್ದ ಫ.ಗು.ಹಳಕಟ್ಟಿ ಅವರ ಕೃತಿಗಳಿಂದ ಸಗರ ಹೆಚ್ಚು ಪ್ರಭಾವಿತರಾಗಿದ್ದರು. ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅನೇಕ ಲೇಖಕರ ನೂರಾರು ಕೃತಿಗಳು ಇವರ ಸಂಗ್ರಹದಲ್ಲಿವೆ.“ಆ ಪ್ರಕಾರ, ಈ ಪ್ರಕಾರ ಎಂದು ತಾರತಮ್ಯ ಮಾಡುವುದು ಸರಿಯಲ್ಲ. ಯಾವುದೇ ಒಂದು ಪುಸ್ತಕ ಪ್ರಕಟವಾಗುವಲ್ಲಿ ಲೇಖಕನ ಶ್ರಮ ಹೆಚ್ಚು. ಹಾಗಾಗಿ ಎಲ್ಲ ಪುಸ್ತಕಗಳೂ ಮೌಲ್ಯಯುತವಾದವುಗಳೇ” ಎಂಬುದು ಸಗರ ಅವರು ಖಚಿತ ಅಭಿಪ್ರಾಯವಾಗಿತ್ತು. ಅದು ಅವರ ಸಂಗ್ರಹದ ಕೃತಿಗಳಲ್ಲಿ ಎದ್ದು ಕಾಣಿಸುತ್ತದೆ.

 

ವಚನ ಸಾಹಿತ್ಯ, ಶರಣರ ಜೀವನ ಚರಿತ್ರೆ, ಮಹಾನ್ ವ್ಯಕ್ತಿಗಳ ಬದುಕು- ಬರಹ, ಕೃಷಿ, ಆಹಾರ, ಪ್ರವಾಸ, ಜನಪದ, ಕಥೆ, ಕಾದಂಬರಿ, ಧಾರ್ಮಿಕ, ಕಾನೂನು, ಆಡಳಿತ... ಒಂದೇ ಎರಡೇ..? ಒಂದರ್ಥದಲ್ಲಿ ಎಲ್ಲ ಬಗೆಯ ಪ್ರಕಟಣೆಗಳ ಪ್ರತಿನಿಧಿ ಎಂಬಂತೆ ಅನೇಕ ಪುಸ್ತಕಗಳು ಇಲ್ಲಿ ಕಾಣಿಸುತ್ತವೆ. ವಿಶ್ವಕೋಶ (ಎನ್‌ಸೈಕ್ಲೋಪಿಡಿಯಾ), ರೀಡರ್ಸ್ ಡೈಜೆಸ್ಟ್, ದಿ ವೀಕ್ ಪತ್ರಿಕೆಯ ಸರಣಿ ಪ್ರಕಟಣೆಗಳ ಸಂಗ್ರಹ ಈ ಗ್ರಂಥಾಲಯದ ವಿಶೇಷ.ಮಹಾತ್ಮ ಗಾಂಧೀಜಿ ಪತ್ರಗಳು, ನೆಹರೂ ಲೇಖನಗಳ ಸಂಗ್ರಹ, 1909ರಲ್ಲಿ ಲಂಡನ್‌ನ ಪ್ರಕಾಶನ ಸಂಸ್ಥೆ ಪ್ರಕಟಿಸಿದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಶಾಸನಗಳ ಸಂಗ್ರಹದಂಥ ಅಪರೂಪದ ಕೃತಿಗಳು ಇಲ್ಲಿವೆ.ಖರೀದಿ- ಧಾರಾಳಿ: “ಪುಸ್ತಕ ಖರೀದಿಗೆ ಅವರು (ಬಸವರಾಜ ಸಗರ) ಎಂದೂ ಹಿಂಜರಿಯುತ್ತಿದ್ದಿಲ್ಲ” ಎಂದು ನೆನಪಿಸಿಕೊಳ್ಳುತ್ತಾರೆ ಸಾವಿತ್ರಿಬಾಯಿ. “ಮನೆಗೆ ಕಿರಾಣಿ- ತರಕಾರಿ ತರಲು ಹೋದ ಸಂದರ್ಭದಲ್ಲಿ ಇನ್ನೊಬ್ಬ ಪುಸ್ತಕ ಆಸಕ್ತರು ಸಿಕ್ಕಿದರೆ ತಾಸುಗಟ್ಟಲೇ ಚರ್ಚೆ ನಡೆಸಿ, ಕೊನೆಗೆ ಅಂಗಡಿಯಲ್ಲಿ ಏನೂ ಸಿಗದೇ ಖಾಲಿ ಕೈಯಲ್ಲಿ ಬರುತ್ತಿದ್ದರು. ಯಾರಾದರೂ ಓದಲು ಪುಸ್ತಕ ಕೇಳಿದರೆ ಧಾರಾಳವಾಗಿ ಕೊಟ್ಟು ಬಿಡುತ್ತಿದ್ದರು. ವಾಪಸು ಕೊಟ್ಟರೆ ಸರಿ; ಇಲ್ಲದಿದ್ದರೂ ಸರಿ. ಹೇಗಿದ್ದರೂ ಇನ್ನೊಬ್ಬರು ಆ ಪುಸ್ತಕ ಓದುತ್ತಾರಲ್ಲ? ಎಂಬ ಮನೋಭಾವ ಅವರದಾಗಿತ್ತು” ಎಂದು ವಿವರಿಸುತ್ತಾರೆ ಸಾವಿತ್ರಿಬಾಯಿ.ಯಾವುದೇ ಒಂದು ಅಪರೂಪದ ಪುಸ್ತಕ ಸಿಗುತ್ತದೆ ಎಂದು ಗೊತ್ತಾದರೆ ತಕ್ಷಣ ಹೊರಟು, ಅದನ್ನು ಪಡೆದುಕೊಳ್ಳುತ್ತಿದ್ದುದು ಸಗರ ಅವರಲ್ಲಿನ ಪುಸ್ತಕ ಪ್ರೀತಿ ದ್ಯೋತಕವಾಗಿತ್ತು. “ಶಾಲೆಯೊಂದರಲ್ಲಿ ಇದ್ದ ಅತ್ಯಂತ ಹಳೆಯದಾದ ಕನ್ನಡ- ಉರ್ದು ಡಿಕ್ಷನರಿ ಇನ್ನೇನು ಸಂಪೂರ್ಣ ಹಾಳಾಗಲಿದೆ.

 

ಬೇಕಿದ್ದರೆ ಅದನ್ನು ತೆಗೆದುಕೊಂಡು ಹೋಗಿ ಎಂದು ಆ ಶಾಲೆಯ ಕ್ಲರ್ಕ್ ಸೂಚಿಸಿದರು. ಆ ಕ್ಷಣದಲ್ಲೇ ನನ್ನನ್ನು ಕರೆದುಕೊಂಡು ಸುಡುಬಿಸಿಲನ್ನೂ ಲೆಕ್ಕಿಸದೇ ಶಾಲೆಗೆ ಹೋಗಿ ತಂದೆವು” ಎಂದು ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಅಂದಿನ ಪ್ರಸಂಗ ಮೆಲುಕು ಹಾಕುತ್ತಾರೆ.ಬಸವರಾಜ ಸಗರ ನಿಧನಾನಂತರ ಅವರ ಪತ್ನಿ ಸಾವಿತ್ರಿಬಾಯಿ ಗ್ರಂಥಾಲಯ ನಿರ್ವಹಿಸುತ್ತಿದ್ದಾರೆ. ಪುಸ್ತಕ ಬರೀ ಮನೋರಂಜನೆಗೆ ಅಷ್ಟೇ ಅಲ್ಲ; ಮನುಷ್ಯನೊಬ್ಬನ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಅದರ ಪಾತ್ರ ಬಹು ಮುಖ್ಯ. ಶಿಕ್ಷಣ ಪಡೆದ ಪ್ರತಿಯೊಬ್ಬನ ಮನೆಯಲ್ಲೂ ಒಂದು ಗ್ರಂಥಾಲಯ ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಬಸವರಾಜ, ಅದನ್ನು ತಮ್ಮ ಮನೆಯಲ್ಲೂ ಸಾಧಿಸಿ ತೋರಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.