ಶುಕ್ರವಾರ, ಮಾರ್ಚ್ 5, 2021
27 °C

ಮನರಂಜಿಸಿದ ನೃತ್ಯ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನರಂಜಿಸಿದ ನೃತ್ಯ ಹಬ್ಬ

ಇತ್ತೀಚೆಗೆ ‘ವಿಶ್ವ ನೃತ್ಯ ದಿನಾಚರಣೆ’ಯ ಅಂಗವಾಗಿ ಬೆಂಗಳೂರಿನ ನಾನಾ ರಂಗಮಂದಿರಗಳಲ್ಲಿ ನಡೆದ ವಿವಿಧ ನಾಟ್ಯ ಪ್ರಕಾರಗಳ ವೈವಿಧ್ಯಪೂರ್ಣ ನೃತ್ಯ ಕಾರ್ಯಕ್ರಮಗಳು ಮನರಂಜಿಸಿದವು.ಅಂದು ಗಾಯನ ಸಮಾಜದಲ್ಲಿ ನಡೆದ ವಿಭಿನ್ನ ಬಗೆಯ ನೃತ್ಯ ಪ್ರಸ್ತುತಿಗಳು ಆಹ್ಲಾದಕರವಾಗಿದ್ದವು. ಪ್ರತಿಯೊಂದು ನೃತ್ಯವೂ ಬೇರೆ ಬೇರೆ ಅಂಶಗಳಿಂದ ವಿಶೇಷತೆ ಪಡೆದಿದ್ದವು. ಹಾಗಾಗಿ ಅವು ಯಾಂತ್ರಿಕ ಎನಿಸಿಲಿಲ್ಲ. ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಕ್ರಮಗಳು ರಸಿಕ ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದು ಕೂರಿಸಿದ್ದವು.ಮೊದಲಿಗೆ ಗುರು ಪದ್ಮಿನಿ ಶ್ರೀಧರ್ ಅವರ ಶಿಷ್ಯ ತಂಡ ಪುಷ್ಪಾಂಜಲಿ, ಭರತ ಚೂರ್ಣಿಕೆ, ನಟರಾಜ ಪ್ರಬಂಧ, ದೇವರನಾಮಗಳಿಗೆ ಭಾವಪೂರ್ಣವಾಗಿ ಅಭಿನಯಿಸಿ, ‘ಅಭಿನಯ ರಸ ರಾಗ’ದಲ್ಲಿ ನವರಸಗಳನ್ನು ಅಭಿವ್ಯಕ್ತಿಸಿ ಮನೋಲ್ಲಾಸ ನೀಡಿದರು.‘ನೃತ್ಯಾಂತರ’ ಸಂಸ್ಥೆಯ ಗುರು ಮಧುಲಿತಾ ಮಹೋಪಾತ್ರ ತಂಡ ಮನಮೋಹಕ ಭಾವ-ಭಂಗಿಗಳ ಲಾಲಿತ್ಯಪೂರ್ಣ ಒಡಿಸ್ಸಿ ನೃತ್ಯ ಪ್ರದರ್ಶಿಸಿ ರೋಮಾಂಚನಗೊಳಿಸಿತು. ಅರುಣ್ ಮೊಹಂತಿ ನೃತ್ಯ ಸಂಯೋಜಿಸಿದ ಪುರಿ ಜಗನ್ನಾಥನ ಆರಾಧನೆಯ ‘ಪಂಚಭೂತ’ ಕುರಿತ ಕೃತಿಯ ಅರ್ಪಣೆಯಲ್ಲಿ ತಂಡ ಸಾಕಾರಗೊಳಿಸಿದ ನಾನಾ ದೃಶ್ಯರೂಪಕಗಳು ಮನೋಜ್ಞವಾಗಿದ್ದವು. ‘ಕುನಾರ್ ಕಾಂತಿ’- ಕೋನಾರ್ಕ್ ದೇವಾಲಯದ ಸಾಲಭಂಜಿಕೆಯರು ಇರುಳಿನಲ್ಲಿ ಜೀವತಳೆದು ನರ್ತಿಸುವ ಸುಂದರ ಕಲ್ಪನೆಯ ಮಂದಗತಿಯ ಚಲನೆಗಳು ಸಂಚಲನಗೊಳಿಸಿದವು. ಸುಶ್ರಾವ್ಯ ಗಾಯನದ ಶ್ರೀ ಕೃಷ್ಣನ ಲೀಲೆಗಳ ‘ಮಧುರಾಷ್ಟಕಂ’ ನಯನ ಮನೋಹರವಾಗಿದ್ದು ಕುಣಿತದ ಲಯ, ಅತ್ಯಂತ ಚುರುಕಿನ ಹೆಜ್ಜೆ ಗತಿ ಪರಿಣಾಮಕಾರಿಯಾಗಿದ್ದವು. ‘ಕಾಳಿಂಗಮರ್ಧನ’ ಕೂಡ ಅಷ್ಟೇ ಆಕರ್ಷಕವಾಗಿತ್ತು.ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದ ಯಾಮಿನೀ ಮುತ್ತಣ್ಣ ಅವರ ಪಳಗಿದ ನೃತ್ಯ ಛಾಪು ಮೂಡಿಸಿತು. ವಿನೂತನ ಭಂಗಿ-–ಅಡವು, ಖಚಿತ ಹಸ್ತ ಮುದ್ರೆಗಳು, ಭಾವಾಭಿವ್ಯಕ್ತಿ ನರ್ತಕಿಯ ಪರಿಣತಿಗೆ ಕನ್ನಡಿ ಹಿಡಿದವು. ಶಂಕರಾಚಾರ್ಯ ವಿರಚಿತ ರಾಗಮಾಲಿಕೆಯ ‘ನಾಗೇಂದ್ರ ಹರಾಯ’ ಪ್ರಸ್ತುತಿಯಲ್ಲಿ ಯಾಮಿನಿ ಭಾವತನ್ಮಯತೆಯಿಂದ ವಿಶಿಷ್ಟ ಭಂಗಿಗಳನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.ಗುರು ಅನುರಾಧ ವಿಕ್ರಾಂತ್ ಅವರ ಶಿಷ್ಯ ‘ದೃಷ್ಟಿ’ಯ ಚೇತನ ಗಂಗಾಟ್ಕರ್ ಮತ್ತು ಅವರ ಪತ್ನಿ ಚಂದ್ರಪ್ರಭ ದಂಪತಿ ಪ್ರಸ್ತುತಪಡಿಸಿದ ‘ಶ್ರೀರಾಮವೈಭವ’ ನೃತ್ಯರೂಪಕ, ‘ಭೋ ಶಂಭೋ’, ‘ಬ್ರೋಚೇವಾ’ ಮತ್ತು ‘ಕುಂದು ಕಾಣದ ಕಾಯಕೆ ಕುಂದಣದ ಒಡವೆ ಏತಕೆ?’ ಸುಂದರ ಜಾವಳಿಯಲ್ಲಿ ಅವರಿಬ್ಬರ ಸಾಮರಸ್ಯ- ಹೊಂದಾಣಿಕೆಯ ಪ್ರಸ್ತುತಿ ಗಮನ ಸೆಳೆದವು.ಅಂತಿಮ ಭಾಗದಲ್ಲಿ ಗುರು ರಾಧಾ ಶ್ರೀಧರ್ ಅವರ ಶಿಷ್ಯೆಯರಾದ ನಿತಾಷ ಮತ್ತು ಬಿಯಾಂಕ ರಾಧಾಕೃಷ್ಣ ಸೋದರಿಯರು ‘ಮಾತೆ ಮಲಯ ಧ್ವಜೆ’ ವರ್ಣದಲ್ಲಿ ಅತ್ಯಂತ ತನ್ಮಯತೆಯಿಂದ, ಕೋಮಲ ನಡೆಯಿಂದ, ಮೋಹಕ ಭಾವಮುದ್ರೆಗಳಿಂದ, ‘ಚಾಮುಂಡೇಶ್ವರಿ’ಯಲ್ಲಿ ರೌದ್ರಸ್ಫುರಣ, ನವರಸ ಭಾವಾಭಿವ್ಯಕ್ತಿಗಳಿಂದ ನೋಡುಗರನ್ನು ಪರವಶಗೊಳಿಸಿದರು. ಒಟ್ಟಿನಲ್ಲಿ ಆ ನೃತ್ಯಸಂಜೆ ನೀಡಿದ ರಸದೌತಣ ಸ್ಮರಣೀಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.