ಮನರಂಜಿಸಿದ ಮಹಿಳಾ ಯುವಜನೋತ್ಸವಸಿದ್ದಯ್ಯ ಹಿರೇಮಠ

7

ಮನರಂಜಿಸಿದ ಮಹಿಳಾ ಯುವಜನೋತ್ಸವಸಿದ್ದಯ್ಯ ಹಿರೇಮಠ

Published:
Updated:
ಮನರಂಜಿಸಿದ ಮಹಿಳಾ ಯುವಜನೋತ್ಸವಸಿದ್ದಯ್ಯ ಹಿರೇಮಠ

ಬಳ್ಳಾರಿ: ಸತತ ಮೂರು ದಿನಗಳ ಕಾಲ ಆ ಕಾಲೇಜು ಆವರಣದಲ್ಲಿ ಪಾಠ– ಪ್ರವಚನಗಳ ಬದಲು ಕಂಡುಬಂದಿದ್ದು ಸಂಗೀತ, ನೃತ್ಯ, ನಾಟಕಗಳ ಕಲರವ. ರಾಜ್ಯದ ವಿವಿಧೆಡೆಯಿಂದ ಅಲ್ಲಿಗೆ ಆಗಮಿಸಿದ್ದ ಯುವತಿಯರ ಹಾಡು, ಮಾತುಗಾರಿಕೆ ಕೇಳಿಬಂತು. ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಹುಡುಗಿಯರ ಸಡಗರ, ಸಂಭ್ರಮ ಕಂಡುಬಂತು.ರೇಷಿಮೆಯ ಸೀರೆಯುಟ್ಟು ನಲಿದ ನೀರೆಯರು, ವಿವಿಧ ರೀತಿಯ ಅತ್ಯಾಕರ್ಷಕವಾದ ಆಭರಣ ತೊಟ್ಟ ಬೆಡಗಿಯರು, ಡೊಳ್ಳಿನ ಸಪ್ಪಳಕ್ಕೂ, ಸಂಗೀತದ ತಾಳಕ್ಕೂ ಹೆಜ್ಜೆ ಹಾಕಿದರು. ಪ್ರೇಕ್ಷಕರ ಸಾಲಿನಲ್ಲಿದ್ದ ಮತ್ತಷ್ಟು ಹುಡುಗಿಯರು ಕುಣಿದು ಕುಪ್ಪಳಿಸಿದರು.ನಗರದ ಅಲ್ಲಂ ಸುಮಂಗಲಮ್ಮ ಮಹಿಳಾ ಕಾಲೇಜಿನಲ್ಲಿ ಕಳೆದ ಶುಕ್ರವಾರದಿಂದ ಭಾನುವಾರದವರೆಗೆ ನಡೆದ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರಸಕ್ತ ಸಾಲಿನ ಯುಜನೋತ್ಸವ ಜನಮನ ರಂಜಿಸಿತು.ಯುವಜನೋತ್ಸವದ ಒಟ್ಟು 24 ವಿಭಾಗಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವಿ ವ್ಯಾಪ್ತಿಯ 17 ಪದವಿ ಕಾಲೇಜುಗಳಿಂದ ಆಗಮಿಸಿದ್ದ 360 ಜನ ವಿದ್ಯಾರ್ಥಿನಿಯರು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ನಾಟಕ, ಸಂಗೀತ, ಜಾನಪದ ನೃತ್ಯ, ಭಾಷಣ, ಚರ್ಚಾಕೂಟ, ಛಾಯಾಗ್ರಹಣ, ಕೊಲಾಜ್‌ ಮತ್ತಿತರ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.ಅತ್ಯಂತ ಹುಮ್ಮಸ್ಸಿನಿಂದ ಭಾಗವಹಿಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವಿವಿಧ ರೀತಿಯ ಸಾಂಸ್ಕೃತಿಕ ಕಲೆ ಪ್ರೇಕ್ಷಕರ ಗಮನ ಸೆಳೆಯಿತು.ಸ್ಥಳೀಯ ಕಾಲೇಜಿನ ತಂಡವಲ್ಲದೆ, ಹಾವೇರಿ, ವಿಜಾಪುರ, ಬಾಗಲಕೋಟೆ, ಜಮಖಂಡಿ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಸಿಂಧನೂರು, ಬಳ್ಳಾರಿ, ಗುಲ್ಬರ್ಗಾ, ಇಳಕಲ್‌, ರಾಣೆಬೆನ್ನೂರು ಮತ್ತಿತರ ಭಾಗದ ಮಹಿಳಾ ಕಾಲೇಜುಗಳ 18ರಿಂದ 24ರ ಹರೆಯದ ನೂರಾರು ವಿದ್ಯಾರ್ಥಿನಿಯರು ನಕ್ಕು ನಲಿದರು.ನಗರದ ವಿವಿಧೆಡೆ ಓಡಾಡಿ ಬಂದ ಛಾಯಾಗ್ರಾಹಕಿಯರು ಪರಿಸರ ಮಾಲಿನ್ಯ ಕುರಿತು ಸೆರೆ ಹಿಡಿದ ಅತ್ಯಾಕರ್ಷಕ ಚಿತ್ರಗಳು, ಶಿಕ್ಷಣದ ಖಾಸಗೀಕರಣ ಕುರಿತು ಪರ, ವಿರೋಧದ ಚರ್ಚಾಕೂಟ, ಮೌಢ್ಯ, ಶಿಕ್ಷಣದ ಮಹತ್ವ, ಮಹಿಳೆಯರ ಮೇಲಿನ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ಕುರಿತ ವಿಷಯ ವಸ್ತುವನ್ನು ಒಳಗೊಂಡ  ನಾಟಕಗಳು, ನಾಡು, ನುಡಿ, ನೆಲ, ಜಲ ಕುರಿತ ಭಾಷಣಗಳು, ದೇಸೀ ಕಲೆ ಮತ್ತು ಜಾನಪದ ಸಂಸ್ಕೃತಿಯ ಮಹತ್ವ ಸಾರಿದ ರೂಪಕಗಳು, ಸಾಂಪ್ರದಾಯಿಕ ಕಲೆಯನ್ನು ಬಿಂಬಿಸಿದ ಜಾನಪದ ಹಾಡುಗಾರಿಕೆ ಮತ್ತು ನೃತ್ಯಕಲೆ ಯುವತಿಯರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಿತು.ಅತ್ಯುತ್ತಮವಾದ ಆತಿಥ್ಯ, ಸಂಘಟಕರ ಸ್ಪಂದನೆ ಮತ್ತು ಸಕಲ ವ್ಯವಸ್ಥೆಗೆ ಮನಸೋತ ಸ್ಪರ್ಧಾಳುಗಳು ನಿರೀಕ್ಷೆಗೂ ಮೀರಿದ ಕಲೆಯನ್ನು ಪ್ರದರ್ಶಿಸಿ ಬಹುಮಾನ  ತಮ್ಮದಾಗಿಸಿ­ಕೊಂಡರು. ಮೊದಲ ಮೂರು ಪ್ರಶಸ್ತಿಗಳಿಂದ ದೂರ ಉಳಿದವರೂ ಬೇಸರ ಪಟ್ಟುಕೊಳ್ಳದೆ ಯುವಜನೋತ್ಸವಲ್ಲಿ ಭಾಗವಹಿಸಿದ್ದಕ್ಕೆ ತೃಪ್ತಭಾವದೊಂದಿಗೆ ತಮ್ಮ ಊರುಗಳತ್ತ ಮರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry