ಶುಕ್ರವಾರ, ಜೂಲೈ 10, 2020
27 °C

ಮನವಿ ಪುರಸ್ಕರಿಸಬೇಡಿ: ರಾಜ್ಯಪಾಲರಿಗೆ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದ ಭೂಹಗರಣಗಳ ಬಗ್ಗೆ ಯಾರು ತನಿಖೆ ನಡೆಸಬೇಕು ಎಂಬ ವಿಷಯ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಮುಖ್ಯಮಂತ್ರಿ ಮತ್ತು ಗೃಹಸಚಿವರ ಮೇಲೆ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕೆಂದು ಜಸ್ಟಿಸ್ ಲಾಯರ್ಸ್ ಫೋರಂ ಮಾಡಿರುವ ಮನವಿಯನ್ನು ಪುರಸ್ಕರಿಸಬಾರದು.’- ಇದು ‘ಪ್ರಜಾಪ್ರಭುತ್ವಕ್ಕಾಗಿ ವಕೀಲರ ವೇದಿಕೆ’ ರಾಜ್ಯಪಾಲರಿಗೆ ಗುರುವಾರ ಸಲ್ಲಿಸಿರುವ ಮನವಿಯ ಸಾರಾಂಶ.ವಕೀಲರ ವೇದಿಕೆಯ ಸದಸ್ಯರಾದ ಎಲ್.ಎನ್. ಹೆಗಡೆ, ವಿವೇಕ್ ರೆಡ್ಡಿ, ವಿನೋದ್ ಕುಮಾರ್, ಪ್ರದೀಪ್ ಸಿಂಗ್, ಸರೋಜಿನಿ ಮುತ್ತಣ್ಣ ಮತ್ತು ಗೀತಾ ನೇತೃತ್ವದ ನಿಯೋಗ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ಎಲ್.ಎನ್. ಹೆಗಡೆ, ‘ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮೇಲೆ ಬಂದಿರುವ ಭೂಹಗರಣಗಳ ಆರೋಪದ ಬಗ್ಗೆ ತನಿಖೆಯನ್ನು ಲೋಕಾಯುಕ್ತರು ಮಾಡಬೇಕೋ ಅಥವಾ ನ್ಯಾ. ಪದ್ಮರಾಜ ಆಯೋಗ ನಡೆಸಬೇಕೋ ಎಂಬ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.ಹೈಕೋರ್ಟ್ ಈ ಕುರಿತು ತೀರ್ಪು ನೀಡುವವರೆಗೂ ಮುಖ್ಯಮಂತ್ರಿ ಮತ್ತು ಗೃಹಸಚಿವರ ಮೇಲೆ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬಾರದು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ’ ಎಂದರು.‘ನ್ಯಾಯಮೂರ್ತಿ ಪದ್ಮರಾಜ ಆಯೋಗ ಮತ್ತು ಲೋಕಾಯುಕ್ತ ತನಿಖೆಯ ವರದಿ ಬರುವ ಮೊದಲೇ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡುವುದು ಸರಿಯಲ್ಲ’ ಎಂದು ಅವರು ಹೇಳಿದರು.‘ಎಲ್ಲ ಅಂಶಗಳನ್ನೂ ಗಮನಿಸಿ ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತೇನೆ. ಕಾನೂನನ್ನು ಮೀರಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯಪಾಲರು ನಮಗೆ ತಿಳಿಸಿದ್ದಾರೆ’ ಎಂದರು.ಪ್ರತಿಭಟನೆ: ಇದಕ್ಕೂ ಮೊದಲು ಹೈಕೋರ್ಟ್‌ನ ಸುವರ್ಣ ಮಹೋತ್ಸವ ಪ್ರವೇಶದ್ವಾರದಿಂದ ಮೆರವಣಿಗೆಯಲ್ಲಿ ಬಂದ ‘ಪ್ರಜಾಪ್ರಭುತ್ವಕ್ಕಾಗಿ ವಕೀಲರ ವೇದಿಕೆ’ ಸದಸ್ಯರು ರಾಜಭವನದ ಎದುರು ಪ್ರತಿಭಟನೆಯನ್ನು ನಡೆಸಿದರು.‘ರಾಜಭವನ ಆಗದಿರಲಿ ರಾಜಕೀಯ ಕೇಂದ್ರ,’ ‘ಜನತಂತ್ರ ಉಳಿಸಿ ಜನಾದೇಶ ರಕ್ಷಿಸಿ’ ಎಂಬ ಪ್ರತಿಭಟನಾ ಫಲಕಗಳನ್ನು ಹಿಡಿದಿದ್ದ ವಕೀಲರು ‘ರಾಜ್ಯಪಾಲರು ಸರ್ಕಾರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.