ಸೋಮವಾರ, ಮೇ 23, 2022
26 °C

ಮನಶಾಂತಿಗೆ ಸಂಗೀತ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ದೇಶದ ಜನರಲ್ಲಿ ಶಾಂತಿ, ಸಹಬಾಳ್ವೆಯ ಭಾವನೆ ಮೂಡಿಸುವಲ್ಲಿ ಸಂಗೀತ ಕೂಡ ಪರಿಣಾಮಕಾರಿ ಸಾಧನವೆನಿಸಿದೆ. ಹಾಗಾಗಿ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.ನಗರದ ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ಭಾನುವಾರ ನಡೆದ 43ನೇ ಸಂಗೀತ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಾ.ನೇದನೂರಿ ಕೃಷ್ಣಮೂರ್ತಿ ಅವರಿಗೆ `ಸಂಗೀತ ಕಲಾರತ್ನ~ ಬಿರುದು ನೀಡಿ ಸನ್ಮಾನಿಸಿದ ಬಳಿಕ ಅವರು ಮಾತನಾಡಿದರು.`ಭಾರತಕ್ಕೆ ಶ್ರೇಷ್ಠ ಸಂಗೀತ ಪರಂಪರೆ ಇದ್ದು, ತನ್ನದೇ ಆದ ಮಹತ್ವ ಪಡೆದಿದೆ. ಹಾಗಾಗಿ ಇಂದಿನ ಪರಿಸ್ಥಿತಿಯಲ್ಲಿ ಸಂಗೀತ, ಭಜನೆ, ಕೀರ್ತನೆಗಳತ್ತ ಜನತೆ ಒಲವು ತೋರಬೇಕಿದೆ. ಭಜನೆ, ಕೀರ್ತನೆಗಳ ಪಠನದಿಂದ ಶಾಂತಿ- ಸಹಬಾಳ್ವೆಯ ಮನೋಭಾವ ಮೂಡುತ್ತದೆ~ ಎಂದರು.`ಇತ್ತೀಚೆಗೆ ಕೆಲ ಸಂಗೀತದಲ್ಲಿ ಮಾಧುರ್ಯವೇ ಇರುವುದಿಲ್ಲ. ಅಬ್ಬರದ ಸಂಗೀತವೇ ಪ್ರಧಾನವಾಗಿ ಗದ್ದಲಮಯವಾಗಿರುತ್ತದೆ~ ಎಂದು ಬೇಸರ ವ್ಯಕ್ತಪಡಿಸಿದರು.`ಆ ಹಿನ್ನೆಲೆಯಲ್ಲಿ ಯುವ ಸಂಗೀತಗಾರರಿಗೆ ಸೂಕ್ತ ತರಬೇತಿ ನೀಡಬೇಕು. ಸಂಗೀತ ಮತ್ತು ನೃತ್ಯಕ್ಕೆ ತಲೆದೂಗದವರೇ ಇಲ್ಲ. ಹಾಗಾಗಿ ಉತ್ತಮ ಸಂಗೀತದ ಮೂಲಕ ಎಲ್ಲರೂ ಸಹಬಾಳ್ವೆಯ ಮನೋಭಾವ ಮೂಡಿಸಬೇಕು~ ಎಂದರು.ನೇದನೂರಿ ಕೃಷ್ಣಮೂರ್ತಿ ಅವರಿಗೆ ಜ್ಯೋತಿ ಸುಬ್ರಹ್ಮಣ್ಯ ಪ್ರಶಸ್ತಿ, ಭ್ರಮರಾಂಭ ನಾಗರಾಜರಾವ್ ಸ್ಮಾರಕ ಪ್ರಶಸ್ತಿ, ವಿ.ಟಿ. ಶ್ರೀನಿವಾಸನ್ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ಸಂಗೀತ ಕಲಾರತ್ನ ಬಿರುದು ನೀಡಿ ಸನ್ಮಾನಿಸಿರುವುದು ಸಂತಸ ತಂದಿದೆ. ಸುಮಾರು 60 ವರ್ಷಗಳಿಂದ ನನಗೆ ಕರ್ನಾಟಕದೊಂದಿಗೆ ಒಡನಾಟವಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ~ ಎಂದರು.`ಯುವ ಸಂಗೀತಗಾರರು ಭಜನೆ ಅಭ್ಯಾಸಕ್ಕೆ ಒತ್ತು ನೀಡಬೇಕು. ಸಂತರು, ದಾಸರು ಹಾಗೂ ಹಿರಿಯ ಸಂಗೀತಗಾರರ ಸಂಗೀತ ಸಂಯೋಜನೆಗಳನ್ನು ಅಭ್ಯಸಿಸಬೇಕು. ನಾಲ್ಕು ತಿಂಗಳಿಗೊಮ್ಮೆಯಾದರೂ ಸಂಗೀತಕ್ಕೆ ಸಂಬಂಧಪಟ್ಟ ತರಗತಿಗಳನ್ನು ನಡೆಸಬೇಕು. ಯುವ ಸಂಗೀತಗಾರರಿಗೆ ಆಗಾಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು~ ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಪದ್ಮಭೂಷಣ ಡಾ.ಆರ್.ಕೆ. ಶ್ರೀಕಂಠನ್ ಅವರನ್ನು ಅಭಿನಂದಿಸಲಾಯಿತು. ನಂತರ ಮಾತನಾಡಿದ ಅವರು, `106 ವರ್ಷಗಳಷ್ಟು ಹಳೆಯದಾದ ಬೆಂಗಳೂರು ಗಾಯನ ಸಮಾಜವು ಕರ್ನಾಟಕ ಸಂಗೀತವನ್ನು ಅತಿ ಉಜ್ವಲವಾಗಿ ಬೆಳೆಸಿಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಆದರ್ಶಪ್ರಾಯ ಸಂಸ್ಥೆ ಎನಿಸಿದೆ~ ಎಂದರು.ಸಮಾರಂಭದಲ್ಲಿ ಎಂಟು ಮಂದಿಗೆ ವರ್ಷದ ಕಲಾವಿದರು ಪ್ರಶಸ್ತಿ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ. ಪ್ರಸಾದ್, ಉಪಾಧ್ಯಕ್ಷೆ ಕನಕಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.