ಮನಸಾರೆ ಅತ್ತುಬಿಟ್ಟಿದ್ದೆ...

7

ಮನಸಾರೆ ಅತ್ತುಬಿಟ್ಟಿದ್ದೆ...

Published:
Updated:

ನಾನು ಈಗ ಇರುವ ಜಾತಿಯಲ್ಲಿಯೇ ಮುಂದೆಯೂ ಇರಬಯಸುತ್ತೇನೆ. ಜಾತಿ ಬದಲಾಯಿಸಬೇಕಾದರೆ ನಮ್ಮ ಶರೀರದ ಬಣ್ಣ, ರೂಪ, ಗುಣ, ಆಚಾರ, ವಿಚಾರ ಎಲ್ಲವನ್ನೂ ಬದಲಾಯಿಸಬೇಕು. ಇಲ್ಲದಿದ್ದರೆ ಮನುಷ್ಯನ ಹೆಸರು ಬದಲಾಯಿಸಿದಂತೆ. ಜಾತಿಯ ಹೆಸರು ಬದಲಾಗುವುದರಿಂದ ಏನೂ ಪ್ರಯೋಜನವಿಲ್ಲ. ನನ್ನದು ಕೀಳು ಜಾತಿಯೇ ಆಗಿದ್ದರೂ ಉತ್ತಮ ರೀತಿಯ ಆಚಾರ, ವಿಚಾರ, ಗುಣಗಳನ್ನು ಅನುಸರಿಸಿಕೊಂಡು ಉತ್ತಮನೆನಿಸಿಕೊಳ್ಳಲು ಪ್ರಯತ್ನಿಸುತ್ತೇನೆಯೇ ಹೊರತು ಮೇಲ್ಜಾತಿಗೆ ಬದಲಾಗುವುದಿಲ್ಲ.ಪ್ರಾಥಮಿಕ ಶಾಲೆಯಲ್ಲಿ  ನಾನು ಯಾವ ಜಾತಿಗೆ ಸೇರಿದವಳೆಂದು ತಿಳಿದು ಛೇಡಿಸಿದಾಗ ಯಾವುದೇ ತರಹದ ನೋವಾಗಿರಲಿಲ್ಲ. ಯಾಕೆಂದರೆ ನನ್ನ ತಂದೆ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದರು. ಆದರೆ ನಾನು ಮಾಧ್ಯಮಿಕ ಶಾಲೆಗೆ ಬಂದಾಗ ನಾನು ಹರಿಜನರ ಜಾತಿಗೆ ಸೇರಿದವಳೆಂದು ತಿಳಿದು  ಸ್ನೇಹಿತರು  ನಡೆದುಕೊಳ್ಳುವ ರೀತಿ ನೋಡಿ ಮನೆಗೆ ಬಂದು ಮನಸಾರೆ ಅತ್ತುಬಿಟ್ಟಿದ್ದೆ. ನೋವನ್ನು ತಾಳಲಾರದೆ ನಮ್ಮ ತಂದೆಯವರಲ್ಲಿ, ಈ ಜಾತಿಯಲ್ಲಿ ನಾನ್ಯಾಕೆ ಹುಟ್ಟಿದೆ? ಈ ಜಾತಿಯನ್ನು ಯಾರು ಮಾಡಿದವರು? ಯಾಕೆ ಮಾಡಿದ್ದಾರೆ? ಎಂದು ಕೇಳಿದ್ದೆ. ವಿದ್ಯಾವಂತರಾದ ನನ್ನ ತಂದೆ  ಸರಿಯಾದ ತಿಳಿವಳಿಕೆ ನೀಡಿದರು. `ಈ ಜಾತಿಯಲ್ಲಿ ಹುಟ್ಟಿದೆನೆಂದು ಕೊರಗಬಾರದು, ವಿದ್ಯಾವಂತೆಯಾಗಿ, ಬುದ್ಧಿವಂತೆಯಾಗಿ ಒಳ್ಳೆಯ ರೀತಿಯಲ್ಲಿ ಬದುಕುವುದು ಮುಖ್ಯ. ಆಗ ಅದೇ ಶಿಕ್ಷಕರೂ ಸಹಪಾಠಿಗಳೂ ನಿನ್ನನ್ನು ಪ್ರೀತಿಸುತ್ತಾರೆ, ಸ್ನೇಹಿತರಾಗುತ್ತಾರೆ' ಎಂದು ಅವರು ಹೇಳಿದ್ದರು.  ತಂದೆ ಹೇಳಿದ ಮಾತಿನಂತೆ ನಡೆದುಕೊಂಡು ಬಂದಿದ್ದೇನೆ. ಈಗ ನನಗೆ ಅರವತ್ತು ವರ್ಷ.   ಈಗ ನನಗೆ ನನ್ನ ಜಾತಿ ಕೀಳೆಂದು ಅನ್ನಿಸುವುದೂ ಇಲ್ಲ. ಕೀಳು ಮನಸ್ಸಿನ ಮೇಲ್ಜಾತಿಯವರನ್ನು ನೋಡಿದಾಗ ಇವರಿಗೆ ನನ್ನ ತಂದೆಯಂತಹ ತಂದೆ ಸಿಕ್ಕಿಲ್ಲ ಎಂದನಿಸುತ್ತದೆ. ಮೇಲ್ಜಾತಿಯವರನ್ನು ನೋಡಿ ಅಸೂಯೆಯೂ ಆಗುವುದಿಲ್ಲ.ಜಾತಿಯಿಂದ ಹಲವು ಬಾರಿ ಅವಮಾನಿತಳಾಗಿದ್ದೇನೆ. ಹಾಗೆ ಆದಾಗಲೆಲ್ಲಾ ನಾನು ಜಾತಿಯ ಬಗ್ಗೆ ಗಟ್ಟಿಯಾಗಿದ್ದೇನೆ. ಉದಾ: ಶಾಲೆಯಲ್ಲಿದ್ದಾಗ ಹರಿಜನರಿಗೆ ನೀಡುವ ಸ್ಕಾಲರ್‌ಷಿಪ್‌ನ ಮೆಮೋ ತರಗತಿಗೆ ಬಂದಾಗ `ಯಾರ‌್ಯಾರು ಈ ಜಾತಿಗೆ ಸೇರಿದವರು ಎದ್ದು ನಿಲ್ಲಿ' ಎಂದಾಗ ಮುಜುಗರವೆನಿಸುತ್ತಿತ್ತು. ಬೇರೆ ಯಾವುದೇ ಜಾತಿಯವರಿಗೆ ಇಂತಹ ಸನ್ನಿವೇಶ ಎದುರಾಗುತ್ತಿರಲಿಲ್ಲ. ತಹಲ್ದಾರ್ ಮಗಳೆಂದು ಸ್ಕಾಲರ್‌ಷಿಪ್ ಸಿಗದಿದ್ದರೂ ಅಂದಿನಿಂದ ನನ್ನ ಜಾತಿ ಎಲ್ಲರಿಗೂ ತಿಳಿಯುತ್ತಿತ್ತು. ಆಗ ಕೆಲವರು ಸ್ನೇಹಿತರು ಮತ್ತು ಶಿಕ್ಷಕರ ನಡವಳಿಕೆಗಳು ಬದಲಾಗುತ್ತಿದ್ದವು.

ಇನ್ನು ಮದುವೆಯಾದ ಮೇಲೊಂದು ಬಾರಿ ನನ್ನ ಮಗುವಿನ ಜನ್ಮದಿನಕ್ಕೆ ಕುಂಕುಮಕ್ಕೆ ಕರೆಯಲು ಅಕ್ಕಪಕ್ಕದ ಮನೆಗೆ ನನ್ನ ಸೋದರಿಯನ್ನು ಕಳಿಸಿದೆ. ಅವಳೇನೋ ಕರೆದು ಬಂದಳು. ಆದರೆ ಯಾರೊಬ್ಬರೂ ಬರಲಿಲ್ಲ. ಆಗ ನಾವು ಆ ಊರಿಗೆ (ಕುಣಿಗಲ್) ಇನ್ನೂ ಹೊಸಬರಾಗಿದ್ದೆವು. ಇದರಿಂದ ನನ್ನ ಸಹೋದರಿ ತನಗೆ ಅವಮಾನವಾಯಿತೆಂದು ಬೇಸರ ವ್ಯಕ್ತಪಡಿಸಿದಳು.

ಇಲ್ಲೂ ನಾನು ಗಟ್ಟಿ ಮನಸ್ಸಿನವಳಾದೆ. ನಾನು ಕಲಿತಿದ್ದ ಕರಕುಶಲಕಲೆಗಳಿಂದ ನೆರೆ ಹೊರೆಯವರೆಲ್ಲ ತಾವೇ ನನ್ನ ಬಳಿ ಬರುವಂತಾಯಿತು.  ಅದರಲ್ಲಿ ಕೆಲವರು ಜಾತಿ ಬದಿಗೊತ್ತಿ ಆಪ್ತರೂ ಆದರು. ಆದರೆ ಅವರಲ್ಲಿ ಬ್ರಾಹ್ಮಣರು ಸ್ನೇಹಿತೆಯರಾದರೂ ಆತ್ಮೀಯರೆನಿಸಲಿಲ್ಲ.  ಇದರಿಂದ ತಲೆ ಕೆಡಿಸಿಕೊಳ್ಳುವುದೇ ಆಗಲಿ, ದ್ವೇಷ ಮಾಡುವುದೇ ಆಗಲಿ ನಾನು ಮಾಡಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry