`ಮನಸಾರೆ' ಹುಡುಗಿಯ ಮನದ ಮಾತು

7

`ಮನಸಾರೆ' ಹುಡುಗಿಯ ಮನದ ಮಾತು

Published:
Updated:
`ಮನಸಾರೆ' ಹುಡುಗಿಯ ಮನದ ಮಾತು

ಚಿಗರೆ ಕಣ್ಣುಗಳನ್ನು ಮಿಣುಕಿಸುತ್ತಾ, ಬಳ್ಳಿಯಂಥ ಮೈಯನ್ನು ಬಳುಕಿಸಿ ಕೇಶರಾಶಿ ಸರಿಪಡಿಸಿಕೊಂಡು ಛಾಯಾಚಿತ್ರಗ್ರಾಹಕರಿಗೆ ಪೋಸ್ ಕೊಡುತ್ತಿದ್ದ ನಟಿ ಐಂದ್ರಿತಾ ರೇ ಈಗ ಬ್ಯುಸಿ. ಚಿತ್ರೀಕರಣಕ್ಕೆ ಬಿಡುವು ನೀಡಿ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ಗೆ ಅವರು ರಾಯಭಾರಿಯಾಗಿದ್ದಾರೆ.ಮಾರ್ಚ್ 10ರವರೆಗೆ ನಡೆಯಲಿರುವ ಮೂರನೇ ಆವೃತ್ತಿಯ ಸೆಲೆಬ್ರೆಟಿ ಕ್ರಿಕ್ರೆಟ್ ಲೀಗ್ (ಸಿಸಿಎಲ್) ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ `ಮನಸಾರೆ'ಯ ಈ ಬೆಡಗಿ ರಾಯಭಾರಿ. ತಂಡದ ಪ್ರಕಟಣೆ ದಿನ ನೀಲಿ ಬಣ್ಣದ ತಂಡದ ಟಿ- ಶರ್ಟ್ ಧರಿಸಿದ್ದ ಅವರು ಬಿಡುವು ಮಾಡಿಕೊಂಡು ಸಹನಟರ ಕ್ರಿಕೆಟ್ ಪಂದ್ಯಗಳಿಗೆ `ಚಿಯರ್' ಮಾಡಲು ಮುಂದಾಗಿದ್ದಾರೆ.ಈ ಸಂದರ್ಭ ಐಂದ್ರಿತಾ `ಮೆಟ್ರೊ'ದೊಂದಿಗೆ ಮಾತಿಗೆ ಸಿಕ್ಕರು. `ನಾನು ಈ ಬಾರಿ ರಾಯಭಾರಿಯಾಗಿ ತಂಡಕ್ಕೆ ಚಿಯರ್ ಮಾಡುತ್ತೇನೆ. ಕಳೆದ ಎರಡು ಆವೃತ್ತಿಗಳಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಬೆಂಬಲ ನೀಡುತ್ತಿದ್ದೇನೆ. ಎಲ್ಲಾ ಆಟಗಾರರನ್ನೂ ಹುರಿದುಂಬಿಸುತ್ತೇನೆ. ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳಿದ್ದ ದಿನ ಸಮಯ ವಿನಿಯೋಗಿಸುತ್ತೇನೆ. ಧ್ರುವ, ಪ್ರದೀಪ್, ದಿಗಂತ್ ಹಾಗೂ ಸುದೀಪ್ ಉತ್ತಮ ಆಟಗಾರರು. ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತಾರೆ' ಎಂದು ತಂಡದ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಕನ್ನಡ ಸಿನಿಮಾಗಳಲ್ಲಿ ಇನ್ನೂ ಬೇಡಿಕೆ ಇರುವ ನಟಿ ಐಂದ್ರಿತಾಗೆ ಬಂಗಾಳಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತಂತೆ. `ರಜನಿಕಾಂತ' ಸಿನಿಮಾಗೆ ಡೇಟ್ ಕೊಟ್ಟಿದ್ದರಿಂದ ಮಿಸ್ ಆಯ್ತು ಎಂದು ಬೇಸರ ವ್ಯಕ್ತಪಡಿಸುವ ಅವರು ದೇಹ ಸೌಂದರ್ಯ ಕಾಪಿಟ್ಟುಕೊಳ್ಳಲು ಡಯಟ್ ಮಾಡುವುದಿಲ್ಲವಂತೆ. `ಸಿಕ್ಕಾಪಟ್ಟೆ ತಿನ್ನುತ್ತೇನೆ, ಸಿಹಿ ತಿನಿಸು ತುಂಬಾ ಇಷ್ಟ. ಅದರಲ್ಲೂ ಇಟಾಲಿಯನ್, ಬೆಂಗಾಲಿ ಹಾಗೂ ಕರ್ನಾಟಕ ಆಹಾರ ಅಚ್ಚುಮೆಚ್ಚು ಎಂದು ಮುಗುಳ್ನಗುತ್ತಾರೆ.ಇನ್ನೂ ಮೂರು ವರ್ಷ ಮದುವೆ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಹೇಳುವ ಐಂದ್ರಿತಾ, ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗುವಂಥ ಸಿನಿಮಾಗಳನ್ನು ಮಾಡುವ ಕಾತುರದಲ್ಲಿದ್ದಾರೆ. ಆ ಮೂಲಕ ಅತ್ಯುತ್ತಮ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ. ಸಿನಿಮಾ ಹೊರತಾಗಿ ಪೇಂಟಿಂಗ್, ಚಾರಣದ ಅಭ್ಯಾಸವಿದೆಯಂತೆ. ಈಗ ಗಿಟಾರ್ ಸಹ ಕಲಿಯುತ್ತಿದ್ದಾರೆ.`ನನಗೆ ನಟಿ ಎಂಬ ಅಹಂ ಇಲ್ಲ, ಸಾಮಾನ್ಯ ಹುಡುಗಿ ಅಷ್ಟೆ. ಬಿಡುವಿನ ವೇಳೆಯಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ನಗರದ ಮಾಲ್‌ಗಳಲ್ಲಿ  ಶಾಪಿಂಗ್ ಮಾಡುತ್ತೇನೆ' ಎನ್ನುವ ಈ ಸುಂದರಿ ನಟಿಸಿರುವ `ರಜನಿಕಾಂತ' ತೆರೆಗೆ ಸಿದ್ಧವಾಗಿದ್ದರೆ, `ಜಿದ್ದಿ', `ಟೋನಿ' ಅವರ ಮುಂದಿನ ಚಿತ್ರಗಳು.ಇತ್ತೀಚೆಗೆ ಕನ್ನಡ ದಿನಪತ್ರಿಕೆಯೊಂದರಲ್ಲಿ ತಮ್ಮ ಮದುವೆ ನಿಶ್ಚಿತಾರ್ಥವಾಗಿದೆ ಎಂಬ ವದಂತಿ ಕುರಿತು ವರದಿ ಪ್ರಕಟವಾದ ಬಗ್ಗೆ ಬೇಸರ ವ್ಯಕ್ತಪಡಿಸಿದ ಐಂದ್ರಿತಾ ರೇ, `ಪತ್ರಿಕೆ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳಲು ಇಂಥ ಕೆಲಸ ಮಾಡುತ್ತಾರೆ. ಇದರಿಂದ ನನ್ನ ವೃತ್ತಿಗೆ ತೊಂದರೆಯಾಗುತ್ತದೆ. ಇಂಥ ವದಂತಿಗಳನ್ನು ಯಾರೂ ನಂಬಬಾರದು' ಎಂದು ವಿನಂತಿಸುತ್ತಾ ಮಾತು ಮುಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry