ಗುರುವಾರ , ಫೆಬ್ರವರಿ 25, 2021
29 °C
ರಂಗಭೂಮಿ

ಮನಸಿನ ಓಣಿಯಲಿ ಘಂ ಎಂದ ಮಲ್ಲಿಗೆ

ಸಂಧ್ಯಾರಾಣಿ Updated:

ಅಕ್ಷರ ಗಾತ್ರ : | |

ಮನಸಿನ ಓಣಿಯಲಿ ಘಂ ಎಂದ ಮಲ್ಲಿಗೆ

ಅವಳೊಬ್ಬಳು ಮಹಾರಾಣಿ, ಗಂಡನೇ ಪ್ರಪಂಚ ಎಂದುಕೊಂಡವಳು. ಮದುವೆಯ ಹೊಸ ಹೊಳಪು ಮಂಕಾಗಿ ಗಂಡನ ಪ್ರಪಂಚದಲ್ಲಿ ತಾನು ಒಂದು ಭಾಗ ಮಾತ್ರ ಎಂದು ಗೊತ್ತಾದಾಗ ಅದಕ್ಕೆ ಒಗ್ಗಿಕೊಳ್ಳದೆ ಕೊರಗುವವಳು. ಅದಕ್ಕಾಗಿ ಅವಳು ಬೆಲೆ ತೆರುತ್ತಾಳೆ.ಇನ್ನೊಬ್ಬಳು ಇಂದಿನ ಹೆಣ್ಣು, ಗಂಡ ತನ್ನ ಇರುವಿಕೆಯ ಒಂದು ಭಾಗ ಎಂದುಕೊಂಡು ಬದುಕುವವಳು.  ತನ್ನ ನಿರ್ಧಾರ ತಾನು ತೆಗೆದುಕೊಳ್ಳುವವಳು.  ಗಂಡನ ಆಚೆಗೂ ತನ್ನ ಬದುಕನ್ನು ವಿಸ್ತರಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಬೆಲೆ ತೆರುತ್ತಾಳೆ.ಹೆಣ್ಣಿನ ದುರಂತ ಇರುವುದು ಇಲ್ಲಿ.  ಗಂಡು ಅವಳನ್ನು ಕೇವಲ ತನ್ನ ಇರುವಿಕೆಯ ಪೂರಕತೆಗೆ ಸೃಷ್ಟಿಯಾಗುವವಳು ಎಂದು ತಿಳಿಯುವುದರಲ್ಲಿ ಮತ್ತು ಹೆಣ್ಣು ತನ್ನ ಇರುವಿಕೆಯ ಸಾರ್ಥಕತೆಯನ್ನು ಅವನ ಅನುಮೋದನೆಯಲ್ಲಿ ಹುಡುಕುವಲ್ಲಿ.ಗಂಡಿನ ದುರಂತ ಇರುವುದು ಹೆಣ್ಣಿನ ನಿಯತ್ತನ್ನು ಕೇವಲ ಅವಳ ದೇಹದಲ್ಲಿ ಹುಡುಕುವುದರಲ್ಲಿ ಮತ್ತು ಅವಳ ಲೈಂಗಿಕ ಶಕ್ತಿ ಮತ್ತು ತನ್ನ ಮಿತಿಯ ಬಗೆಗಿರುವ ಹೆದರಿಕೆಯಲ್ಲಿ.ಕೆ.ವೈ.ನಾರಾಯಣ ಸ್ವಾಮಿ ಮತ್ತು ಪ್ರಕಾಶ್ ಶೆಟ್ಟಿ ಅವರ ಜೋಡಿ ಈಗಾಗಲೇ ಅನಭಿಜ್ಞ ಶಾಕುಂತಲ ಎನ್ನುವ ಕನಸನ್ನು ರಂಗಾಸಕ್ತರ ಮುಂದೆ ಸಿಂಗರಿಸಿ ಇಟ್ಟಿದೆ. ಜೊತೆಗೆ ದೇಸಿ ಕಥೆಗಳು ಕೆವೈಎನ್ ಅವರ ತಾಕತ್ತು. ಸಂಗೀತ ಅವರ ನಾಟಕದಲ್ಲಿ ಅತ್ಯಂತ ಸಹಜವಾಗಿ, ಸಾವಯವವಾಗಿ ಒಡಮೂಡಿರುತ್ತದೆ. ಹಾಗಾಗಿ ಮಲ್ಲಿಗೆ ನಾಟಕದ ಬಗೆಗಿನ ನಿರೀಕ್ಷೆಗಳು ಹೆಚ್ಚೇ ಇದ್ದವು.ಒಂದು ಹುಟ್ಟುಹಬ್ಬದ ಕೇಕ್, ಅದರ ಮುಂದೆ ಕುಳಿತ ಏಕಾಕಿ ಗಂಡು, ಟಕ್ ಟಕ್ ಎಂದು ತಿರುಗುವ ಗಡಿಯಾರ, ಕಾಯುವ ಇವನು ಮತ್ತು ಬಾರದ ಅವಳು.  ಗಡಿಯಾರದ ಜೊತೆಯಲ್ಲೇ ಮೂಕಸಾಕ್ಷಿಗಳಾಗಿರುವ ಎರಡು ಬೊಂಬೆಗಳು.  ನಾಟಕ ಇಲ್ಲಿಂದ ಶುರುವಾಗುತ್ತದೆ. ಆಕೆ ಬರುವುದಿಲ್ಲ, ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.  ವಿಚಾರಣೆಗೆಂದು ಪೊಲೀಸ್ ಇನ್‌ಸ್ಪೆಕ್ಟರ್ ಬರುತ್ತಾನೆ.  ಆ ಪೊಲೀಸ್ ಇನ್‌ಸ್ಪೆಕ್ಟರ್‌ನ ನಿನ್ನೆಗಳಲ್ಲಿ ಇನ್ನೊಂದು ಹೆಣ್ಣಿದ್ದಾಳೆ. ಗಂಡನ ನಿರಾಸಕ್ತಿ ಮತ್ತು ಅನುಮಾನದಿಂದ ಶಿಥಿಲವಾದವಳು.ಆತ ಅವಳಿಗೆ ವಿಚ್ಛೇದನ ಎನ್ನುವ ಶಿಕ್ಷೆಯನ್ನು ಬಿಡುಗಡೆ ಎನ್ನುವ ಉಡುಗೊರೆಯಾಗಿ ಕೊಟ್ಟವನು.  ಅವನ ಕಣ್ಣಿಗೆ ಆ ಕನ್ನಡಕ ಇದೆ.  ಆತ ವಿಚಾರಣೆ ನಡೆಸುವಾಗಲೇ ಆ ಮನೆಯಲ್ಲಿದ್ದ ಎರಡು ಗೊಂಬೆಗಳು ತಮ್ಮ ಲೋಕದಲ್ಲಿ ನಿನ್ನೆ ಇಂದುಗಳ ನಡುವೆ ಓಡಾಡುವ ಕಥೆ ಇದು.ಇಲ್ಲಿರುವುದು ಒಂದು ಗೊಂಬೆ ಮತ್ತು ಅದರ ಸೂತ್ರಧಾರ.  ಗೊಂಬೆಗೆ ಕಣ್ಣುಗಳಿವೆ ದನಿ ಇಲ್ಲ, ಸೂತ್ರಧಾರನಿಗೆ ದನಿ ಇದೆ ಆದರೆ ಕಣ್ಣುಗಳಿಲ್ಲ.  ದನಿ ಇಲ್ಲದ ನೋಟ ಮತ್ತು ನೋಟ ದಕ್ಕದ ಮಾತು, ಈ ಅವಸ್ಥೆಯೇ ನಾಟಕಕ್ಕೆ ಒಂದು ರೂಪಕ.  ಕಣ್ಣು ಕಿವಿ ಎರಡೂ ಸೇರಿದಾಗಲೇ ಸತ್ಯ ಸಂಪೂರ್ಣ ಎನ್ನುವುದನ್ನು ನಾಟಕ ಕಟ್ಟಿಕೊಡುತ್ತಾ ಹೋಗುತ್ತದೆ.ದನಿ ಇರುವ ಗೊಂಬೆಗಳ ಮೂಲಕವೇ ನಾಟಕವನ್ನು ನೋಡುವ ನಾವು ಅವುಗಳ ಮೂಲಕವೇ ನಾಟಕವನ್ನು ಅನುಸಂಧಾನ ಮಾಡಿಕೊಳ್ಳಬೇಕಾಗುತ್ತದೆ.  ಆ ಗೊಂಬೆ ಮತ್ತು ಸೂತ್ರಧಾರ ಇಡೀ ನಾಟಕವನ್ನು ಆವರಿಸಿಕೊಂಡಿದ್ದಾರೆ.ನಾಟಕವನ್ನು ಕೊಂಡೊಯ್ಯುವುದು ಆ ಗೊಂಬೆ ಮತ್ತು ಸೂತ್ರಧಾರ ಇಬ್ಬರೇ.  ನಾಟಕ ನೋಡುವವರಿಗೆ ಮೊದಲು ನಾಟಕ ದಕ್ಕುವುದು ಒಂದು ರೀತಿ, ಆದರೆ ಆಮೇಲೆ ಆ ನಾಟಕವನ್ನು ಹೀಗೆ ನೋಡಿ ಎಂದು ಗೊಂಬೆ ನಮ್ಮನ್ನು ನಿರ್ದೇಶಿಸುತ್ತದೆ.  ನಾಟಕದ ಮೊದಲಿನಿಂದ ಕಡೆಯವರೆಗೂ ರಂಗದ ತುಂಬಾ ಓಡಾಡುವ ಗೊಂಬೆ ಮತ್ತು ಸೂತ್ರಧಾರನ ಎನರ್ಜಿ ಲೆವೆಲ್ ಅದ್ಭುತ.  ಅವುಗಳ ವಿನ್ಯಾಸ ಮತ್ತು ಚಲನೆಗೆ ಬೆರಗಾಗುವ ಜೊತೆಜೊತೆಯಲ್ಲಿಯೇ ನಾಟಕಕ್ಕೆ ಅದೇ ಒಂದು ಮಿತಿಯಾಗಬಹುದೇ ಎನ್ನುವ ಸಂದೇಹ ಸಹ ಕಾಡುತ್ತದೆ. ನಾಟಕದಲ್ಲಿ ಸ್ಥಳೈಕ್ಯ ಮತ್ತು ಭಾವೈಕ್ಯ ಹೇಗೆ ಮೇಳೈಸಿರಬೇಕೆಂದರೆ ಅಲ್ಲಿ ಪಾತ್ರಗಳು ಮತ್ತು ವಿಕ್ಷಕರ ನಡುವೆ ಯಾವುದೇ ತರ್ಜುಮೆದಾರ ಇರಬಾರದು.  ಪಾತ್ರಗಳ ನೋವು, ನಲಿವು, ಸಂಕಟ, ದುರಂತ ನಮ್ಮ ನೋಟ ಮತ್ತು ನಮ್ಮ ಕೇಳುವಿಕೆಗಳಿಂದ ನಮ್ಮದಾಗುತ್ತಾ ಹೋಗಬೇಕು.  ಆದರೆ ಇಲ್ಲಿ ಅವು ನಮ್ಮದಾಗುತ್ತವೆಯೋ ಅಥವಾ ಬೊಂಬೆ ಹೇಗೆ ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ನಿರ್ದೇಶಿಸುತ್ತದೆಯೋ ಎನ್ನುವ ಪ್ರಶ್ನೆ ನಾಟಕ ಮುಗಿದ ಮೇಲೆ ನಮ್ಮನ್ನು ಕಾಡುತ್ತದೆ.ಸೂತ್ರಧಾರ ಇಲ್ಲಿ ನಾಟಕಕ್ಕೆ ಮೊದಲು ಅಥವಾ ಕಡೆಗೆ ಬರುವುದಿಲ್ಲ, ಇಡೀ ನಾಟಕದುದ್ದಕ್ಕೂ ಇರುತ್ತಾನೆ. ನಾಟಕದ ಒಂದು ದೃಶ್ಯದಲ್ಲಿ ಮಲ್ಲಿಗೆರಾಯ ‘ನನ್ನ ನಿನ್ನ ಸಂಬಂಧದಲ್ಲಿ ಇನ್ನೊಬ್ಬರು ನುಸುಳುವಷ್ಟು ತೆರಪಿದ್ದಿದ್ದಾದರೂ ಎಲ್ಲಿ’ ಎಂದು ಮಿಡುಕುತ್ತಾನೆ. ನಾಟಕದಲ್ಲಿ ಸಹ ನಮ್ಮ ಮತ್ತು ಪಾತ್ರಗಳ ನಡುವಿನ ಈ ತೆರೆಪಿನಲ್ಲಿ ಬೊಂಬೆ ನುಸುಳಿ ಆಡುತ್ತಲೇ ಇರುತ್ತದೆ. 

ಮಲ್ಲಿಗೆರಾಯ ಚೆಂದುಳ್ಳಿ ಚೆಲುವ, ಅವನು ನಕ್ಕರೆ ಮಲ್ಲಿಗೆ ಅರಳುತ್ತಾವೆ.  ಮಲ್ಲಿಗೆ ಅವನ ರಾಣಿ. ಅವನು ನಕ್ಕರೆ ಮಲ್ಲಿಗೆ, ಅವಳೋ ತಾನೇ ಮಲ್ಲಿಗೆ.  ತನ್ನ ನಗುವನ್ನು ತಾನೇ ಮೋಹಿಸುವ ಮಲ್ಲಿಗೆರಾಯ ತನ್ನ ಗೆಳೆಯ ಚೆನ್ನಿಗರಾಯನ ಆಸ್ಥಾನಕ್ಕೆ ಹೋಗುತ್ತಾನೆ. ಆದರೆ ಅಲ್ಲಿ ಅವನಿಗೆ ನಗಲು ಆಗುವುದಿಲ್ಲ. ಅವನ ಎದೆಯ ಮಲ್ಲಿಗೆ ಗಿಡ ಸತ್ತಿರುತ್ತದೆ.  ಎದೆಯಲ್ಲಿನ ಮಲ್ಲಿಗೆ ಗಿಡ ಹೂದುಂಬಲು ನೀರೆರೆಯುವುದು ತನ್ನ ಪವಾಡಶಕ್ತಿಗಿಂತ ಮಿಗಿಲಾಗಿ ತನ್ನನ್ನು ಪ್ರೀತಿಸುವವರ ಪ್ರೀತಿ ಎನ್ನುವುದು ಮಲ್ಲಿಗೆರಾಯನಿಗೆ ಅರ್ಥವಾಗುವುದೇ ಇಲ್ಲ. ಸಿಟ್ಟಾದ ಚೆನ್ನಿಗರಾಯ ಮಲ್ಲಿಗೆರಾಯನನ್ನು ಸೆರೆಮನೆಗೆ ದೂಡುತ್ತಾನೆ.ಅಲ್ಲಿ ಇನ್ನೊಂದು ಕಥೆ ಇದೆ.  ಅಪರಾಧವೇ ಮಾಡದೆ ಅಪರಾಧಿಯಾದ ಮತ್ತೊಂದು ಹೆಣ್ಣಿನ ಕಥೆ ಅದು. ಅಲ್ಲಿಯವರೆಗೂ ಸೂತ್ರಧಾರ ಕಥೆ ಹೇಳುತ್ತಾ ಬಂದಿರುತ್ತಾನೆ, ಈಗ ಬೊಂಬೆ ಅವನು ಒಂದು ಕ್ಷಣ ತೂಕಡಿಸಿದಾಗ  ನಡೆದ ಘಟನೆಗಳನ್ನು ತಾನು ಅನಾವರಣಗೊಳಿಸುತ್ತಾ ಹೋಗುತ್ತದೆ.  ಸೂತ್ರಧಾರನಿಗೆ ಗೊಂಬೆ ಕಥೆ ಹೇಳುವ ದೃಶ್ಯವನ್ನು ನಿರ್ದೇಶಕರು ತುಂಬಾ ಸುಂದರವಾಗಿ ಕಟ್ಟಿಕೊಡುತ್ತಾರೆ.ಮಲ್ಲಿಗೆರಾಯ ನಕ್ಕಾಗ ಭೂಮಿಯಲ್ಲೆಲ್ಲಾ ಮಲ್ಲಿಗೆ ಅರಳಿ ಗಂಧದ ಘಮಲು ಆವರಿಸುವ ಸೊಗಸನ್ನು ಪದಗಳಲ್ಲಿ ಕಟ್ಟಿಕೊಡುವುದು ಬೇರೆ, ಆದರೆ ಅದನ್ನು ದೃಶ್ಯದಲ್ಲಿ ಕಟ್ಟಿಕೊಡುವುದು ಒಂದು ಸವಾಲಿನ ಕೆಲಸ. ಆ ದೃಶ್ಯ ರಂಗದ ಮೇಲೆ ಒಂದು ಕನಸಿನಂತೆ ಚಿತ್ತಾರವಾಗಿದೆ. ಇಡೀ ರಂಗದ ಮೇಲೆ ಮಲ್ಲಿಗೆ ನಕ್ಷತ್ರದ ಹೂಗಳಂತೆ ಅರಳಿಕೊಳ್ಳುತ್ತದೆ. ಬಾನಿನಿಂದ ಮಲ್ಲಿಗೆ ಹೂಗಳು ಮಂಜು ಉದುರಿದಂತೆ ಹನಿಯುತ್ತದೆ. ಅದಕ್ಕಾಗಿ ದೃಶ್ಯ ಕಲ್ಪನೆ ಮಾಡಿದ ನಿರ್ದೇಶಕ ಪ್ರಕಾಶಶೆಟ್ಟಿಯವರನ್ನು ಮತ್ತು ಬೆಳಕು ವಿನ್ಯಾಸಗೊಳಿಸಿದ ವಿನಯಚಂದ್ರ ಅವರನ್ನು ಅಭಿನಂದಿಸಬೇಕು.ಆದರೆ ಆ ಇಡೀ ದೃಶ್ಯಕ್ಕೆ ಹೊಂದದೆ ಇದ್ದಿದ್ದು ಅಲ್ಲಿದ್ದ ಮಾನಿಟರ್ ಪರದೆಯ ಮೇಲೆ ಅರಳುತ್ತಿದ್ದ ಮಲ್ಲಿಗೆ ಹೂಗಳು. ಪಯಣದ ದೃಶ್ಯಗಳಲ್ಲಿ ಕುದುರೆ ಏರಿ ಪಯಣಿಸುವ ಮಲ್ಲಿಗೆ ರಾಯ ಮತ್ತು ಸೈನಿಕರ ಆಂಗಿಕದ ಎದುರು ಆ ಮಾನಿಟರ್ ಮೇಲಿನ ಬೊಂಬೆಯಾಟ ಸಪ್ಪೆಯಾಗಿ ಬಿಡುತ್ತದೆ.ಮೊದಲೇ ಹೇಳಿದ ಹಾಗೆ ಜಾನಪದ ಕಥೆಗಳು ಕೆವೈಎನ್ ಅವರ ತಾಕತ್ತು, ಅದಕ್ಕೆ ಸರಿಸಾಟಿಯಾಗಿ ಅಂದರೆ ಮಲ್ಲಿಗೆಯ ನೋವಿಗೆ ಸರಿಸಾಟಿಯಾಗಿ ಇಲ್ಲಿ ನಂದಿನಿಯ ದುರಂತ ನಮ್ಮನ್ನು ಅಲ್ಲಾಡಿಸುವುದಿಲ್ಲ.  ನಿನ್ನೆಗೂ ಇಂದಿಗೂ ಕೊಂಡಿ ಆಗುವುದು ಗೊಂಬೆ ಮಾತ್ರವೇ ಹೊರತು ಅಂದಿನ ಮಲ್ಲಿಗೆ ಇಂದಿನ ನಂದಿನಿ ಆಗುವುದಿಲ್ಲ. ಇಲ್ಲಿರುವ ಎಲ್ಲಾ ಹೆಣ್ಣುಗಳೂ ‘ನಿರಪರಾಧಿ’ಗಳೇ. ಹಾಗಾಗಿ ಅವರಿಗೆ ಶಿಕ್ಷೆಯಾಗಿದ್ದು ತಪ್ಪು ಎಂದು ಗೊಂಬೆ ಹಾಗು ಸೂತ್ರಧಾರ ಭರತವಾಕ್ಯ ಹಾಡುತ್ತಾರೆ.ಆದರೆ ಈ ‘ಅಪರಾಧಿ ಮತ್ತು ‘ನಿರಪರಾಧಿ’ ಎನ್ನುವ ಕಪ್ಪು ಬಿಳಿ ನಡವಳಿಕೆಗಳನ್ನು ನಿರ್ಧರಿಸುವವರು ಯಾರು? ಅಕಸ್ಮಾತ್ ಮಲ್ಲಿಗೆರಾಯನ ವಿಮುಖತೆಗೆ ಬೇಸರಾದ ಮಲ್ಲಿಗೆ ತಾನೊಂದು ಪ್ರೇಮಕ್ಕೆ ಸೋತಿದ್ದರೆ ಅಥವಾ ರಾಜುವಿನ ಕೀಳರಿಮೆಯಿಂದ ನೊಂದ ನಂದಿನಿ ಮೋಹನನಲ್ಲಿ ‘ಕೇವಲ’ ಸ್ನೇಹದ ಆಚೆಗೂ ಒಂದು ಬಂಧವನ್ನು ಹುಡುಕಿಕೊಂಡಿದ್ದರೆ ಆಗ ಅವರಿಬ್ಬರದೂ ಶಿಕ್ಷಾರ್ಹ ಅಪರಾಧ ಎನ್ನುವಂತಹ ಸಂದೇಶವನ್ನು ಇದು ಕೊಡುವುದಿಲ್ಲವೇ? ಇಲ್ಲಿ ಹೆಣ್ಣುಗಳ ‘ನಿರಪರಾಧಿತ್ವದ’ ವ್ಯಾಖ್ಯಾನವನ್ನು ಮತ್ತೆ ಪಿತೃಪರ ವ್ಯವಸ್ಥೆ ಮಾಡುತ್ತಿಲ್ಲ ತಾನೆ? ತಮ್ಮ ಬರವಣಿಗೆಗಳಲ್ಲಿ ಸದಾ ಒಂದು ಹೆಣ್ಣು ನೋಟವನ್ನು ಕಾಪಿಟ್ಟುಕೊಂಡು ಬಂದವರು ಕೆವೈಎನ್.  ಅಂತಹ ಒಂದು ಸಾಧ್ಯತೆ ಈ ನಾಟಕದ ಆಶಯವನ್ನು ಮತ್ತಷ್ಟು ವಿಸ್ತರಿಸಬಹುದಿತ್ತು ಅನ್ನಿಸುತ್ತದೆ. ಈಗ ನಾಟಕದಲ್ಲಿ ಹೆಣ್ಣಿನ ಮಾತುಗಳನ್ನು ಬೇರೆಯವರೇ ಆಡಿದ್ದಾರೆ, ಆ ಹೆಣ್ಣುಗಳೇ ಮಾತನಾಡಿದ್ದರೆ ಅವರು ಬಿಚ್ಚಿಡುತ್ತಿದ್ದ ಸತ್ಯಗಳು ಏನಿರುತ್ತಿದ್ದವೋ ಬಲ್ಲವರು ಯಾರು?ಇವೆಲ್ಲಾ ನಾಟಕ ನೋಡುತ್ತಿದ್ದಾಗ ಮೂಡಿದ ಪ್ರಶ್ನೆಗಳು.  ಆದರೆ ಅದರಾಚೆಗೂ ನಾಟಕ ಒಂದು ರಂಗಾನುಭವವನ್ನು ಪ್ರೇಕ್ಷಕರಿಗೆ ದಾಟಿಸುತ್ತದೆ.

ಮೊದಲೇ ಹೇಳಿದ ಹಾಗೆ ಗೊಂಬೆ ಮತ್ತು ಸೂತ್ರಧಾರನ ಮೂಲಕ ಇಡೀ ನಾಟಕವನ್ನು ವಿನ್ಯಾಸಗೊಳಿಸಿರುವುದು ಸೊಗಸಾಗಿದೆ.  ಮೀರಾ ಅರುಣ್ ಮತ್ತು ಮಾನಸಾ ಮುಸ್ತಫಾರ ವಸ್ತ್ರವಿನ್ಯಾಸ, ರಾಮಕೃಷ್ಣ ಬೆಳ್ತೂರರ ಪ್ರಸಾಧನ ಚಮತ್ಕಾರ ಹುಟ್ಟಿಸುತ್ತದೆ.  ಶಶಿಧರ ಅಡಪರ ಕಲಾವಿನ್ಯಾಸದ ಬಗ್ಗೆ ಹೆಚ್ಚಿಗೇನು ಹೇಳಲಿ, ಅವರು ಕನಸನ್ನು ಕಾಣಬಲ್ಲರು, ಅಷ್ಟೇ ಅಲ್ಲ, ಕಟ್ಟಬಲ್ಲವರು ಸಹ.  ಗಜಾನನ ನಾಯ್ಕ ಮತ್ತು ಪ್ರಕಾಶ್ ಶೆಟ್ಟಿಯವರ ಸಂಲಗ್ನದಲ್ಲಿ ಸಂಗೀತ ಕಳೆಗಟ್ಟುತ್ತದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.