ಮಂಗಳವಾರ, ಮೇ 17, 2022
25 °C

ಮನಸೂರೆಗೊಂಡ ಕಾವಾ ಮೇಳ...

ಎಂ.ರವಿ Updated:

ಅಕ್ಷರ ಗಾತ್ರ : | |

ಬಿಡಾಡಿ ಹಸುವೊಂದು ಬಾಯಿಗೆ ಸಿಕ್ಕ ಆಹಾರದ ಜೊತೆಗೆ ಪ್ಲಾಸ್ಟಿಕ್ ಚೀಲಗಳನ್ನು ತಿನ್ನುತ್ತಿತ್ತು. ಆಹಾರ ಇಲ್ಲದೆ ಪ್ಲಾಸ್ಟಿಕ್ ಚೀಲಗಳನ್ನು ತಿಂದರೆ ಹಸುವಿನ ಆರೋಗ್ಯದ ಗತಿ ಏನೆಂದು ಇದನ್ನು ನೋಡುತ್ತಿದ್ದವರು ಹಲುಬುತ್ತಿದ್ದರು. ಇವರಲ್ಲಿ ವಿಷಾದದ ಛಾಯೆ ಇತ್ತು!ಇದೇನಿದು ರಸ್ತೆಬದಿ ತಿಪ್ಪೆಯಲ್ಲಿದ್ದ ಪ್ಲಾಸ್ಟಿಕ್ ಚೀಲ ತಿನ್ನುತ್ತಿದ್ದ ಹಸುವನ್ನು ನೋಡಿ ಕೆಲವರು ನೊಂದುಕೊಂಡಿರಬೇಕು ಅಂದುಕೊಂಡಿರಾ? ನಿಮ್ಮ ಊಹೆ ತಪ್ಪು. ಇದು ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಆವರಣದಲ್ಲಿ ಮಾಡಲಾಗಿದ್ದ ಹಸುವಿನ ಕಲಾಕೃತಿ.ಬಿದಿರಿನ ದಬ್ಬೆ ಹಾಗೂ ಗೋಣಿಚೀಲಗಳನ್ನು ಬಳಸಿ ಬೃಹತ್ ಗಾತ್ರದ ಹಸುವಿನ ಕಲಾಕೃತಿಯೊಂದನ್ನು ಮಾಡಲಾಗಿತ್ತು. ನಗರಪ್ರದೇಶಗಳಲ್ಲಿ ತಿರುಗುವ  ಹಸುಗಳು ಆಹಾರ ಸಿಗದೆ ಪ್ಲಾಸ್ಟಿಕ್ ಚೀಲಗಳನ್ನು ತಿನ್ನುತ್ತಿರುವುದನ್ನು ಕಲಾಕೃತಿ ಬಿಂಬಿಸುತ್ತಿತ್ತು.ಈ ಕಲಾಕೃತಿಗಳನ್ನು ನೋಡುವ ಪ್ರೇಕ್ಷಕರಿಗೆ 5 ನಿಮಿಷದ ಕಿರುಚಿತ್ರ ಪ್ರದರ್ಶಿಸುತ್ತಿದ್ದರು. ಪ್ಲಾಸ್ಟಿಕ್ ಚೀಲಗಳನ್ನು ತಿಂದ ಹಸುಗಳು ದೇಶದಲ್ಲಿ ಎಷ್ಟು ಸಾವಿಗೀಡಾಗಿವೆ. ಇದರಿಂದ ಹಸುವಿನ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಕಿರುಚಿತ್ರ ಮನಮುಟ್ಟಿಸಿತು.`ಕಾವಾ~ ಆವರಣದಲ್ಲೇ ಬೈಕ್‌ವೊಂದು ಅತ್ತಿತ್ತ ಸುಳಿದಾಡುತ್ತಿತ್ತು. ಬೈಕ್‌ಗೆ ಪೆಟ್ರೋಲ್ ಟ್ಯಾಂಕ್, ಸೈಲೆನ್ಸರ್, ಸ್ಪೀಡೋ ಮೀಟರ್ ಎಲ್ಲವು ಇದ್ದವು. ಆದರೆ ಬೈಕ್ ಪೆಟ್ರೋಲ್ ಇಲ್ಲದೆ, ಹೊಗೆ ಉಗುಳದೆ ಓಡಾಡುತ್ತಿತ್ತು. ಇದನ್ನು ಕಂಡವರಿಗೆಲ್ಲ ಅಚ್ಚರಿ! ಇದೇನಿದೆಂದು ಹತ್ತಿರ ಹೋಗಿ ನೋಡಿದಲ್ಲಿ ಅರರೆ ಇದು ಸೈಕಲ್ ಬೈಕ್! ಚಕ್ರಗಳು, ಪೆಡಲ್ ನೋಡಿದಾಗ ಇದು ಸೈಕಲ್ ಎಂದು ಖಾತರಿಯಾಯಿತು.ಗಗನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆಯ ನಡುವೆ ಬೈಕ್ ಕೊಳ್ಳದೆ `ಸೈಕಲ್ ಬಳಸಿ ಇಂಧನ ಉಳಿಸಿ~ ಎಂಬ ಸಂದೇಶ ಸಾರುವ ಪ್ರಯತ್ನ ಮಾಡಲಾಗಿತ್ತು. ಸೈಕಲ್‌ನಲ್ಲಿ ಹೋಗಲು ಮುಜುಗರವಾದರೆ ಸೈಕಲ್‌ನ್ನೇ ಬೈಕ್ ರೀತಿ ಮಾಡಿಕೊಳ್ಳಿ. ಹೆಚ್ಚು ಖರ್ಚಿಲ್ಲದೆ ಬೈಕ್‌ನ ಮಜವನ್ನೇ `ಸೈಕಲ್ ಬೈಕ್~ನಲ್ಲಿ ಪಡೆಯಿರಿ ಎಂದರು ಕಲಾವಿದ ಪುನೀತ್.ಇನ್ನು ಎತ್ತ ನೋಡಿದರೂ ವಿವಿಧ ಬಗೆಯ ಕಲಾಕೃತಿಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ದೊಡ್ಡದಾದ ಬಚ್ಚಲು ಮನೆಯ ನೀರು ಹೋಗುವ ಜಾಲರಿಯಲ್ಲಿ ಅನಾಥ ಮಗುವೊಂದು ಬಿದ್ದಿತ್ತು. ಇದ್ಯಾರೊ ನವಜಾತ ಶಿಶುವನ್ನು ಬಿಸಾಡಿ ಹೋಗಿದ್ದಾರೆಂದು ಹತ್ತಿರ ಹೋಗಿ ನೋಡಿದರೆ ಅದು ಕಲಾಕೃತಿ. ಭ್ರೂಣಹತ್ಯೆ ಮಾಡಬಾರದೆಂಬ ಸಂದೇಶ ಇದು ಸಾರುತ್ತಿತ್ತು.ಎ.ರಾಜಾ, ಕನಿಮೋಳಿ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಇತರೆ ರಾಜಕಾರಣಿಗಳು ಸ್ಲೇಟುಗಳನ್ನು ಹಿಡಿದು ಜೈಲಿನ ಕಂಬಿ ಹಿಂದೆ ನಿಂತಿದ್ದ ಕಲಾಕೃತಿಗಳು ಸೂಜಿಕಲ್ಲಿನಂತೆ ಎಲ್ಲರ ಗಮನ ಸೆಳೆದವು. ಭ್ರಷ್ಟರಿಗೆ ಜೈಲೇ ಗತಿ ಎಂದುಕೊಂಡು ಕೆಲವರು ಮುಂದೆ ಸಾಗಿದರು.ಎದುರುಗಡೆ ಕಾಗದಗಳಿಂದ ತಯಾರಿಸಿದ ದೊಡ್ಡ ಗಾಂಧಿ ಟೋಪಿ ಒಳಗೆ ಅಣ್ಣಾ ಹಜಾರೆ ಕೈ ಎತ್ತಿರುವ ದೃಶ್ಯ ಗಮನ ಸೆಳೆಯಿತು. ದೊಡ್ಡ-ಸಣ್ಣ ಗಾತ್ರದ ಕಾಗದದ ಗಾಂಧಿ ಟೋಪಿಗಳು ಅಲ್ಲಿದ್ದವು. ಎಲ್ಲ ವಯೋಮಾನದವರು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಬೆಂಬಲಿಸಬೇಕು ಎಂಬುದು ಇದರ ಸಂದೇಶವಾಗಿತ್ತು.ಕಾವಾ ಮುಂಭಾಗ ಬೃಹತ್ ಕಿಂಗ್‌ಕಾಂಗ್ ಕಲಾಕೃತಿ ರಸ್ತೆಬದಿ ಹೋಗುವವರ ಗಮನ ಸೆಳೆಯುತ್ತಿದೆ. ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಕಿಂಗ್‌ಕಾಂಗ್ ನೋಡಿ ಅನೇಕರು ಕಾವಾ ಮೇಳದತ್ತ ಹೆಜ್ಜೆಹಾಕತೊಡಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.