ಬುಧವಾರ, ಜೂನ್ 23, 2021
30 °C

ಮನಸೂರೆಗೊಂಡ ಸಮೃದ್ಧ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸೂರೆಗೊಂಡ ಸಮೃದ್ಧ ಕಾರ್ಯಕ್ರಮ

ಲಯಲಾಸ್ಯ

ಕುವೆಂಪು ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಆಕಾಶವಾಣಿ ಸಂಗೀತ ಹಬ್ಬ ಏರ್ಪಾಟಾಗಿತ್ತು. ಭಾರತೀಯ ಸಂಗೀತದ ಕರ್ನಾಟಕ ಮತ್ತು ಹಿಂದೂಸ್ತಾನಿ  ಪದ್ಧತಿಗಳ ಸಾಮ್ಯ, ವೈಶಿಷ್ಟ್ಯ ಹಾಗೂ ವೈವಿಧ್ಯದ ದರ್ಶನ ಅದರಲ್ಲಿ ಏಕಕಾಲಕ್ಕೆ ಆಯಿತು.ಪಂಡಿತ್ ವಿನಾಯಕ ತೊರವಿ ಮತ್ತು ಎಸ್. ಶಂಕರ್ ಅವರ ಗಾಯನದ ನಂತರ ನಡೆದ ಪ್ರವೀಣ್ ಗೋಡ್ಖಿಂಡಿ ಮತ್ತು ಎಂ.ಕೆ.ಪ್ರಾಣೇಶ್ ಅವರ ಕೊಳಲು ವಾದನ ಕಛೇರಿಗಳು ನೆರೆದವರ ಗಮನ ಸೆಳೆದವು.ಕರ್ನಾಟಕ- ಹಿಂದೂಸ್ತಾನಿ ಸಂಗೀತ ಸಂಗಮ ಸಂಗೀತ ಪ್ರೇಮಿಗಳ ಮನಸೂರೆಗೊಂಡವು.  ಸೃಜನಶೀಲ ಕಲಾವಿದರು ಆಶು ವಿಸ್ತರಣವನ್ನು ಕೈಗೊಂಡರು. ಅವರ ಕಲ್ಪನಾ ಶಕ್ತಿ ವಿಶಾಲವಾಗಿತ್ತು. ಸಂಗೀತ ಮತ್ತು ರಂಗಕ್ರಿಯೆಗಳ ಸಾಮರಸ್ಯದ ಮೂಲಕ  ತಮ್ಮ ಸಮಸ್ತ ಪ್ರತಿಭೆಯನ್ನು ಕೇಳುಗರಿಗೆ ಧಾರೆಯೆರೆದರು.ಈ ಪ್ರಕ್ರಿಯೆಯಲ್ಲಿ ಆಯಾ ಪದ್ಧತಿಗಳ ಕೆಲವು ಪ್ರಧಾನ ಅಂಶಗಳೊಂದಿಗೆ ಕಲಾವಿದರು ರಾಜೀ ಮಾಡಿಕೊಳ್ಳಬೇಕಾಗಿ ಬಂತಾದರೂ ಒಟ್ಟಾರೆ ಶಾಸ್ತ್ರೀಯ ಸಂಗೀತದ ಸೊಬಗು, ಸದಭಿಪ್ರಾಯ, ಪ್ರಭಾವ- ಪರಿಣಾಮಗಳು ಸಕಾರಾತ್ಮಕವಾಗಿಯೇ ಉಂಟಾದವು. ಅಲ್ಪಾವಧಿಯ ಕಛೇರಿಗಳಾದರು ಸಹ ಕಲಾವಿದರ ಪ್ರತಿಭೆ ಮತ್ತು ಪರಿಣತಿಗಳು ಅವುಗಳನ್ನು ಸಮಗ್ರವನ್ನಾಗಿಸಿದವು.ಅಂದಿನ ಮೊದಲ ಕಾರ್ಯಕ್ರಮ ನೀಡಿದ ಪಂ. ವಿನಾಯಕ ತೊರವಿ ಮತ್ತು ವಿದ್ವಾನ್ ಶಂಕರ್ ಯಮನ್ ಕಲ್ಯಾಣಿ ಹಾಗೂ ಅದಕ್ಕೆ ಸಮಾನಾಂತರವಾದ ಕರ್ನಾಟಕ ಸಂಗೀತದ ಕಲ್ಯಾಣಿ ರಾಗರಸದ ವೈಶಿಷ್ಟ್ಯ, ಮಹತ್ವ, ವ್ಯಾಪ್ತಿ, ವೈಶಾಲ್ಯಗಳನ್ನು ಮನಗಾಣಿಸಿದರು. `ನಾದರೂಪಮೆ~ ಸಾಲನ್ನು ವೇಗದ ಗತಿಯ ಆಲಾಪನೆಯ ಮುನ್ನುಡಿಯೊಂದಿಗೆ ವಿಸ್ತರಿಸಿದರು. ರಾಗವು ಎಲ್ಲಾ ಸ್ಥಾಯಿಗಳಲ್ಲೂ ಹಾಸುಹೊಕ್ಕಾಗಿದ್ದು, ಸಾಹಿತ್ಯದ ಭಾವಾರ್ಥಗಳು ಸ್ಪಷ್ಟಗೊಂಡವು.ತೊರವಿ ಅವರ `ಸರಿಗಮ್~ಗಳು ಮತ್ತು ಶಂಕರ್ ಅವರ ಕಲ್ಪನಾಸ್ವರಗಳು ಗಾಯಕದ್ವಯರ ಪಾಂಡಿತ್ಯವನ್ನು ಸಾರಿ ಹೇಳಿದವು. ಮುಂದಿನ ಪ್ರಸ್ತುತಿ ಆಕರ್ಷಿಸಿತು. ದಾಸರ ರಚನೆಗಳ ಕೆಲವು ಪಂಕ್ತಿಗಳನ್ನು ಉಭಯ ಪದ್ಧತಿಗಳಿಗೂ ಸಮಾನವಾದ ರಾಗಗಳಲ್ಲಿ ಹಾಡಲಾಯಿತು. ಚಕ್ರವಾಕ/ ಆಹಿರ್‌ಭೈರವ್, ಹಿಂದೋಳ/ ಮಾಲ್‌ಕೌನ್ಸ್ ಮತ್ತು ಕಾಪಿ ರಾಗಗಳ ಮೂಲಕ ತಮ್ಮ ಕಲಾಜ್ಞಾನವನ್ನು ಗಾಯಕರು ವಿದ್ವತ್‌ಪೂರ್ಣವಾಗಿ ಪ್ರಚುರಪಡಿಸಿರು.ಸಿಂಧುಭೈರವಿ/ ಭೈರವಿ ತಿಲ್ಲಾನ ತೊರವಿ ಮತ್ತು ಶಂಕರ್ ಅವರ ಗಾಯನಕ್ಕೆ ತಿಲಕಪ್ರಾಯವಾಗಿ ಆನಂದವನ್ನು ಸಂವರ್ಧಿಸುವಂತಹ ನಿಚ್ಚಳ ಅಭಿವ್ಯಕ್ತಿಯನ್ನು ಹೊಂದಿತ್ತು. ಅವರೊಂದಿಗೆ ಭಾಸ್ಕರ್(ಪಿಟೀಲು), ಇದೀಗ ಆಕಾಶವಾಣಿಯ ಟಾಪ್ ಗ್ರೇಡ್ ಮಾನ್ಯತೆಯನ್ನು ಪಡೆದಿರುವ ಚೆಲುವರಾಜು (ಮೃದಂಗ), ಭರದ್ವಾಜ್ ಸಾತ್ವಲ್ಲಿ (ಮೋರ್ಸಿಂಗ್), ವ್ಯಾಸಮೂರ್ತಿಕಟ್ಟಿ (ಹಾರ್ಮೋನಿಯಂ) ಮತ್ತು ವಿಶ್ವನಾಥ ನಾಕೋಡ್ (ತಬಲ) ಅವರ ಸಹಕಾರ ಕಳೆ ಕಟ್ಟಿತು.ಪ್ರತಿಭಾನ್ವಿತ ವಾದಕ ಜೋಡಿ


ಇದಾದ ನಂತರ ಯುವ ಪ್ರತಿಭಾನ್ವಿತ ವಾದಕ ಜೋಡಿಯಾದ ಪ್ರಾಣೇಶ್ ಮತ್ತು ಪ್ರವೀಣ್ ಗೋಡ್ಖಿಂಡಿ ಕರ್ಣಾನಂದವಾಗುವಂಥ ಸಂಗೀತ ಒದಗಿಸಿದರು. ಸಾಕಷ್ಟು ಅನುಭವಿಗಳಾದ ಅವರು ತಮ್ಮ ಮೆಚ್ಚಿನ ಕೃತಿಗಳನ್ನೇ ಮಂಡಿಸಿದರೆನ್ನಬಹುದು. ಕರ್ನಾಟಕ ಸಂಗೀತದ ಅಭೋಗಿ ವರ್ಣವನ್ನು ಒಟ್ಟಾಗಿ ಹಾಗೂ ಹಂಚಿಕೊಂಡು ನುಡಿಸುತ್ತಾ ವಿಭಿನ್ನ ಕಾಲಗಳಲ್ಲಿ ನಿರೂಪಿಸಿದರು.ಸ್ವರ ಮತ್ತು ಸಾಹಿತ್ಯವನ್ನು ಪರ್ಯಾಯವಾಗಿ ಎರಡು ಕಾಲಗಳಲ್ಲಿ ನಮೂದಿಸಿದ ಆ ಕಲಾವಿದರ ಸಮಬಲ ಮತ್ತು ಸಾಮರ್ಥ್ಯಗಳ ಪ್ರಕಟಣೆ ಸಹಜತೆಯಿಂದ ಕೂಡಿತ್ತು. ಪ್ರವೀಣ್ ಅವರು ಬೇರೆಬೇರೆ ಕೊಳಲುಗಳನ್ನು ಪರಿಣಾಮಕಾರಿಯಾಗಿ ಬಳಸಿದರು. ನಿರೀಕ್ಷೆಯಂತೆ ಹೇಮಾವತಿ ರಾಗದಲ್ಲಿ ರಾಗ, ತಾನ ಮತ್ತು ಸ್ವರಪಲ್ಲವಿಯನ್ನು ಪ್ರತಿಪಾದಿಸಲಾಯಿತು. ಸ್ವರಪಲ್ಲವಿಯಲ್ಲಿ ಸಾಹಿತ್ಯದ ಬಳಕೆಯಾಗದೆ ಸ್ವರಗಳನ್ನು ಮಾತ್ರ ನುಡಿಸುತ್ತಾ ಪಲ್ಲವಿಯಂತೆಯೇ ನಾನಾ ರೀತಿಗಳಲ್ಲಿ ಆ ಸ್ವರಗಳ ಜಾಲವನ್ನು ಹೆಣೆಯಲಾಯಿತು. ಸ್ವರಕಲ್ಪನೆಯಲ್ಲಿ ಅವರಿಬ್ಬರ ಲಯ ಪ್ರೌಢತೆ ಬೆರಗುಗೊಳಿಸಿತು.ರಾಗಮಾಲಿಕೆಯಲ್ಲಿ `ಬಾರೋ ಕೃಷ್ಣಯ್ಯ~ ರಚನೆಯನ್ನು ಅಂದಗಾಣಿಸಿದರು. ಅವರಿಬ್ಬರ ಗಾಯನ ಪ್ರಧಾನ ವಾದನ ಶೈಲಿಯಿಂದಾಗಿ ಸಾಹಿತ್ಯವು ಸುಖ ನೀಡಿತು. ಬಹು ಅನುಭವೀ ಶ್ರೇಷ್ಠ ಲಯವಾದ್ಯಗಾರರಾದ ಅರ್ಜುನ್‌ಕುಮಾರ್ (ಮೃದಂಗ) ರವೀಂದ್ರ ಯಾವಗಲ್ (ತಬಲಾ) ಮತ್ತು ಕಾರ್ತಿಕ್‌ಮಣಿ (ಡ್ರಮ್ಸ) ಸಮಯೋಚಿತ ಸ್ಪಂದನೆಗಳಿಂದ ಸಂಗೀತದ ಆರಾಧಕರನ್ನು ಆಕರ್ಷಿಸಿದರು.ಖುಷಿ ಕೊಟ್ಟ ಗಾಯನ


ಹದವಾದ ಕಂಠ, ಮಾಗಿದ ವಿದ್ವತ್ತು, ಪಕ್ವವಾದ ಮನೋಧರ್ಮ, ಗೆಲುವಿನ ಉಲ್ಲಾಸದ ಲಯಹಿಡಿತ ಇರುವ ಯುವ ಗಾಯಕಿ ಅಮೃತಾ ವೆಂಕಟೇಶ್ ಅನನ್ಯ ಸಭಾಂಗಣದಲ್ಲಿ ಶನಿವಾರ ಹಾಡಿದಾಗ ಪ್ರೇಕ್ಷಕರಿಗೆ ಆನಂದ. ಶಾಸ್ತ್ರ ಸಂಪ್ರದಾಯಗಳ ಮಜಬೂತಾದ ಚೌಕಟ್ಟಿನಲ್ಲೇ ತನ್ನ ಸವಿಶೇಷ ಪ್ರತಿಭೆಯನ್ನು ಆಕೆ ತೋರಿದ್ದು ಶ್ಲಾಘನೀಯ.

 

ತಮ್ಮ ಸಂಗೀತ ಸಾಧನೆಯ ಪಥದಲ್ಲಿ ಗಂಭೀರತೆ ಮತ್ತು ಗಹನತೆಗಳನ್ನು ಮೈಗೂಡಿಸಿಕೊಂಡು ರಸಾನಂದವನ್ನು ಮೂಡಿಸುವಲ್ಲಿ ಆಕೆ ಯಶಸ್ವಿಯಾದರು. ಅತ್ಯಂತ ಪ್ರಭಾವಕಾರಿಯಾಗಿ ಮೃದಂಗ ವಾದನವನ್ನು ಮಾಡಿದ್ದು ಬಿ.ಸಿ.ಮಂಜುನಾಥ್. ಘಟ ವಾದಕ ಜಿ. ಓಂಕಾರ್ ಉತ್ಕೃಷ್ಟವಾಗಿದ್ದ ಪಕ್ಕವಾದ್ಯ ಸಹಕಾರ ನೀಡಿದರು. ಆನಂದ ವಿಶ್ವನಾಥನ್ ಅವರ ಪಿಟೀಲು ಸಹಕಾರವಿತ್ತು.ಸ್ವಾತಿ ತಿರುನಾಳರ ಕಾಂಭೋಜಿ ರಾಗದ ಅಟತಾಳ ವರ್ಣವನ್ನು ತ್ರಿಶ್ರದಲ್ಲಿ ಹಾಡಿ ವಿವಿಧ ಕಾಲಗಳಲ್ಲಿ ಅದರ ಸೊಬಗನ್ನು ಸೆರೆಹಿಡಿದು ಅಮೃತಾ ಅವರು ತಮ್ಮ ಕಛೇರಿಗೆ ಭದ್ರ ಬುನಾದಿ ಹಾಕಿಕೊಂಡರು. ತಾವು ಹಾಡಿದ ರಚನೆಗಳ ಬಗೆಗೆ ಟಿಪ್ಪಣಿಯನ್ನು ಕೊಟ್ಟಿದ್ದು ಮಿಶ್ರಫಲದಾಯಕವಾಗಿತ್ತು. ಧೇನುಕಾ ರಾಗದ ಪರಿಚಯಾತ್ಮಕ ಆಲಾಪನೆಯ ನಂತರ ತ್ಯಾಗರಾಜರ `ತೆಲಿಯಲೇನು ರಾಮ~ ಕೀರ್ತನೆಯನ್ನು ಭಾವಪೂರ್ಣವಾಗಿ ಹಾಡಿದರು. ನೆರವಲ್ ಇಲ್ಲದೆ ನಾಲ್ಕೈದು ಆವರ್ತನ ಸ್ವರಗಳನ್ನೂ ಸೇರಿಸಲಾಯಿತು.

 

ತಿಲ್ಲಂಗ್ ರಾಗದ ಆಲಾಪನೆ ಪ್ರಬುದ್ಧವಾಗಿತ್ತು. ಅದರ ಜೀವಸ್ವರಗಳನ್ನು ಸರಿಯಾಗಿ ಹಿಡಿದು ರಾಗಛಾಯೆಯು ಸತ್ವಯುತವಾಗಿರುವಂತೆ ಮಾಡಿದರು. ಪುರಂದರದಾಸರ (ರಾಮ) ಕೃಷ್ಣಯ್ಯ ಮನೆಗೆ ಬಂದರು ಬಾಗಿಲ ತೆಗೆಯಿರಿ ಪದವನ್ನು ಮಾತಿನಲ್ಲಿ ಹೇಳುವಂತೆ ಮಿಶ್ರದಲ್ಲಿ ಆತ್ಮೀಯವಾಗಿ ನಿರೂಪಿಸಿದರು. ಮೇಲ್ಕಾಲದ ಸ್ವರಗಳು ಶ್ರೋತೃಗಳನ್ನೂ ಲಯವಾದ್ಯಕಾರರನ್ನೂ ಪುಳಕಗೊಳಿಸಿದವು. ಜಿಎನ್‌ಬಿ ಅವರ  ಸರಸ್ವತಿ ನಮೋಸ್ತುತೆ (ಸರಸ್ವತಿ) ಚುರುಕಾದ ಲಯದಲ್ಲಿತ್ತು.       

  

ಅತ್ಯಂತ ಸಂಯಮದಿಂದ ಸುಲಲಿತವಾಗಿ ಹಾಗೂ     ನಿರಾಳವಾಗಿ ಮಾಯಾಮಾಳವಗೌಳ ರಾಗದ ವಿನ್ಯಾಸದಲ್ಲಿ ಅಮೃತಾ ಅವರ ಸಂಗೀತ ಊಹೆಯ ಆಳ-ಹರಹುಗಳು ಸುವ್ಯಕ್ತಗೊಂಡವು. ಕ್ರಮವಾಗಿ ತ್ರಿಸ್ಥಾಯಿಗಳೂ ಸಂಕ್ರಮಿಸಿ ರಾಗವು ಪೂರ್ಣತ್ವನ್ನು ಪಡೆದುಕೊಂಡಿತು. ಸುಪರಿಚಿತ `ಮೇರು ಸಮಾನ~ ಕೀರ್ತನೆ ಮನೋಧರ್ಮದ ಎಲ್ಲಾ ಅಂಶಗಳ ವ್ಯಾಪಕತೆಯಲ್ಲಿ ರಾರಾಜಿಸಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.