ಮನಸೆಳೆದ ಸ್ತಬ್ಧಚಿತ್ರ:ಮೈಸೂರಿಗೆ ಬಂದ ನಮ್ಮ ಮೆಟ್ರೊ!

7

ಮನಸೆಳೆದ ಸ್ತಬ್ಧಚಿತ್ರ:ಮೈಸೂರಿಗೆ ಬಂದ ನಮ್ಮ ಮೆಟ್ರೊ!

Published:
Updated:

ಮೈಸೂರು: ಮೈಸೂರು ಅರಮನೆಗೆ ಬಂದ `ನಮ್ಮ ಮೆಟ್ರೊ~.., ಅರಮನೆ ಆವರಣದಲ್ಲಿ ಸಾಹಿತಿಗಳಾದ ಡಿ.ವಿ.ಗುಂಡಪ್ಪ, ಕುವೆಂಪು, ತರಾಸು, ಮಧುರಚೆನ್ನ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ದಂಡು..ಸಂಗೀತ ಕ್ಷೇತ್ರದ ದಿಗ್ಗಜರ ನಾದಸ್ವರ..ಮಂಜಿನ ನಗರಿ ಮಡಿಕೇರಿಯ ದೃಶ್ಯಕಲಾ ವೈಭವ..-ಇವು ಅರಮನೆ ಆವರಣದಲ್ಲಿ ಗುರುವಾರ ನಡೆದ ಜಂಬೂಸವಾರಿ ಯಲ್ಲಿ ಕಂಡು ಬಂದ ದೃಶ್ಯ. ರಾಜ್ಯದ 30 ಜಿಲ್ಲೆ ಹಾಗೂ ಪ್ರವಾಸೋ ದ್ಯಮ ಇಲಾಖೆ, ವಾರ್ತಾ ಇಲಾಖೆ, ಕಾವೇರಿ ನೀರಾವರಿ ನಿಗಮ ಮತ್ತು ಸ್ತಬ್ಧಚಿತ್ರ ಉಪಸಮಿತಿಯ 4 ಸ್ತಬ್ಧಚಿತ್ರಗಳು ಜಂಬೂಸವಾರಿ ಮೆರವಣಿಗೆಗೆ ಮೆರುಗು ತಂದವು.ಈ ಪೈಕಿ, ಉಡುಪಿ, ಬೆಂಗಳೂರು ನಗರ, ಮೈಸೂರು, ಪ್ರವಾಸೋದ್ಯಮ ಇಲಾಖೆ, ವಾರ್ತಾ ಇಲಾಖೆ, ಮಡಿಕೇರಿ, ಧಾರವಾಡ, ಬಳ್ಳಾರಿ ಜಿಲ್ಲೆಗಳ ಸ್ತಬ್ಧಚಿತ್ರ ಗಳು ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು. ವಿದೇಶಿ ಪ್ರವಾಸಿಗರು ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಗಮನಸೆಳೆದ ಭೂತಾರಾದನೆ:ಉಡುಪಿ ಜಿಲ್ಲೆಯ ಭೂತಾರಾಧನೆ ಕಲೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಅತ್ಯಂತ ಆಕರ್ಷಕವಾಗಿತ್ತು. ಮರ ಹಾಗೂ ಲೋಹದಿಂದ ತಯಾರಿಸಿದ ದೇವಸ್ಥಾನ ಹಾಗೂ ಮೂರ್ತಿ ಗಳು ಜೀವಂತಿಕೆಯ ಪ್ರತೀಕವಾಗಿದ್ದವು. ಸ್ತಬ್ಧಚಿತ್ರದ ಮುಂಭಾಗದಲ್ಲಿ ನಿರ್ಮಿಸಿದ್ದ `ಪಂಜುರ್ಲಿ ದೈವ~ದ ದೃಶ್ಯ ರೋಚಕವಾಗಿತ್ತು.ಕರಾವಳಿ ಕಂಬಳ: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಕಂಬಳ ಹಾಗೂ ಯಕ್ಷಗಾನ ಪ್ರೇಕ್ಷಕರನ್ನು ನೈಜಲೋಕಕ್ಕೆ ಕರೆದೊಯ್ದವು. ಮುಂಗಾರಿನ ಕೊಯ್ಲು ಮುಗಿಯುತ್ತಿದ್ದಂತೆ ಕರಾವಳಿಯಲ್ಲಿ ಕಂಬಳದ ಸುಗ್ಗಿ ಆರಂಭವಾಗುತ್ತದೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಸ್ಪರ್ಧೆ ಅತ್ಯಂತ ನೈಜವಾಗಿ ಮೂಡಿಬಂದಿದ್ದು, ಪ್ರವಾಸಿಗರ ಗಮನಸೆಳೆಯಿತು. ಅದೇ ರೀತಿ ಯಕ್ಷಗಾನ ಕಲೆಯೂ ಅದ್ಭುತವಾಗಿತ್ತು. ಈ ಸ್ತಬ್ಧಚಿತ್ರದ ನಿರ್ಮಾಣದ ಹೊಣೆಯನ್ನು ವಾರ್ತಾ ಇಲಾಖೆ ವಹಿಸಿತ್ತು.ಒಂದು ರಾಜ್ಯ ಹಲವು ಜಗತ್ತು!: ಜನಪದ ಕಲೆಗಳ ಶ್ರೀಮಂತಿಕೆ ಯನ್ನು ಬಿಂಬಿಸುವ, ಎಲ್ಲ ಶಿಷ್ಟ ಕಲೆಗಳಿಗೂ ನಾಂದಿಯಾಗಿರುವ ಜಾನಪದ ಕಲೆಯನ್ನು ಬಿಂಬಿಸುವ ಪ್ರವಾಸೋದ್ಯಮ ಇಲಾಖೆಯ ಸ್ತಬ್ಧಚಿತ್ರ ಕಣ್ಣಿಗೆ ರಸದೌತಣ ನೀಡಿತು. ಸುಗ್ಗಿ ಕುಣಿತ, ಡೊಳ್ಳುಕುಣಿತ, ಕಂಸಾಳೆ, ನಗಾರಿ, ಪೂಜಾ ಕುಣಿತ, ಕರಗ, ಗೊರವರ ಕುಣಿತ, ಯಕ್ಷಗಾನ ಕಲೆಯನ್ನು ಬಿಂಬಿಸುವ ಸ್ತಬ್ಧಚಿತ್ರ `ಒಂದು ರಾಜ್ಯ ಹಲವು ಜಗತ್ತು~ ಎಂಬ ಮಾತಿಗೆ ಸಾಕ್ಷಿಯಾಯಿತು.`ಪೌರಾಣಿಕ ಲೋಕ~ದ ಅನಾವರಣ: ಮೈಸೂರು ಜಿಲ್ಲಾ ಪಂಚಾಯಿತಿ ನಿರ್ಮಿಸಿದ್ದ ಸ್ತಬ್ಧಚಿತ್ರ ಅರಮನೆ ಅಂಗಳದಲ್ಲಿ ಪೌರಾಣಿಕ ಲೋಕವನ್ನೇ ಅನಾವರಣಗೊಳಿಸಿತ್ತು. ಮೈಸೂರು ಅರಸರು, ದರ್ಬಾರ್, ಆಯುಧ ಪೂಜೆ, ವಿಜಯದಶಮಿ ಮೆರವಣಿಗೆ, ದಸರಾ ಬೊಂಬೆಗಳು, ಜಂಬೂ ಸವಾರಿಯನ್ನು ಬಿಂಬಿಸುವ, ಒಂದೇ ಮಾತಿನಲ್ಲಿ ಹೇಳುವುದಾದರೆ ಇಡೀ ದಸರೆಯನ್ನು ಒಂದು ಸ್ತಬ್ಧಚಿತ್ರದಲ್ಲಿ ಪ್ರಚುರ ಪಡಿಸಿದ್ದು ನಿಜಕ್ಕೂ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಮುಂಭಾಗದಲ್ಲಿ ನಿರ್ಮಿಸಿದ್ದ ಬೊಂಬೆಗಳು ಸ್ತಬ್ಧಚಿತ್ರದ ಮೆರುಗು ಹೆಚ್ಚಿಸಿದವು.ಸಂಗೀತ ಲೋಕದ ದಿಗ್ಗಜರು: ಸಂಗೀತ ಸಾಮ್ರಾಟರಾದ ಗಂಗೂಬಾಯಿ ಹಾನಗಲ್, ಸವಾಯಿ ಗಂಧರ್ವ, ಬಸವರಾಜು ರಾಜಗುರು, ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ ಅವರನ್ನು ಒಳಗೊಂಡ ಧಾರವಾಡದ ಸ್ತಬ್ಧಚಿತ್ರ ಸಂಗೀತ ದಿಗ್ಗಜರ ಲೋಕವನ್ನೇ ಕರೆತಂದಿತ್ತು. ಇವರ ಜೊತೆಯಲ್ಲೇ ಕವಿ/ ಸಾಹಿತಿಗಳಾದ ದ.ರಾ. ಬೇಂದ್ರೆ, ಚನ್ನವೀರ ಕಣವಿ, ವಿ.ಕೃ.ಗೋಕಾಕ್, ಆಲೂರು ವೆಂಕಟರಾಯ, ಗಿರೀಶ್ ಕಾರ್ನಾಡ್, ಡಾ.ಚನ್ನಬಸಪ್ಪ, ಡಿ.ಸಿ.ಪಾವಟೆ ಹಾಗೂ ಡಿ.ವಿ.ಹಾಲ ಬಾವಿ ಅವರ ಭಾವಚಿತ್ರಗ ಳನ್ನು ಅಳವಡಿಸಿದ್ದು ಅರ್ಥವತ್ತಾಗಿತ್ತು.ನಮ್ಮ ಮೆಟ್ರೊ...: ಬೆಂಗಳೂರು ನಗರದಲ್ಲಿ ನಿರ್ಮಿಸಲಾಗಿರುವ, ಅ.20ರಿಂದ ಸಾರ್ವಜನಿಕರ ಸಂಚಾ ರಕ್ಕೆ ಮುಕ್ತವಾಗಲಿರವ `ನಮ್ಮ ಮೆಟ್ರೊ~ವನ್ನು ಹೋಲುವ ಸ್ತಬ್ಧಚಿತ್ರ ಮೆಟ್ರೊ ರೈಲಿನ ಪೂರ್ಣ ಚಿತ್ರಣವನ್ನು ನೀಡಿತು. ಬೆಂಗ ಳೂರು ನಿರ್ಮಾಪಕ ಕೆಂಪೇಗೌಡ, ಕುಂಭ ಪ್ರಾಧಾನ್ಯದ ದುರ್ಗೆಯ ಕತೆ ಹೇಳುವ ದ್ರೌಪದಿ ಕರಗ ಪ್ರವಾಸಿಗರನ್ನು ಆಕರ್ಷಿಸಿದವು.ಕೃಷ್ಣದೇವರಾಯನ ದಸರಾ ಆಚರಣೆ: ವಿಜಯನಗರ ವೈಭವವನ್ನು ಸಾಕ್ಷೀಕರಿಸುವ, ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀಕೃಷ್ಣದೇವರಾಯನ ದಸರಾ ಆಚರಣೆಯನ್ನು ಹೊತ್ತುತಂದ ಬಳ್ಳಾರಿಯ ಸ್ತಬ್ಧಚಿತ್ರ ಅರಸರ ವೈಭವೋಪೇತ ದಿನಗಳನ್ನು ನೆನಪಿಸಿತು. ಜನಪದ ನೃತ್ಯ, ಸಾಹಸ ಕ್ರೀಡೆ, ಕುಸ್ತಿ, ಮಲ್ಲಯುದ್ಧ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳನ್ನು ವೀಕ್ಷಿಸುತ್ತಿರುವ ರಾಜಕುಟುಂಬ ದೃಶ್ಯ ಮನಸೂರೆಗೊಂಡಿತು.ಚಂದವಳ್ಳಿಯ ತೋಟ: ಖ್ಯಾತ ಕಾದಂಬರಿಕಾರ ತರಾಸು (ತಳುಕಿನ ರಾಮಸುಬ್ಬಯ್ಯ ಸುಬ್ಬರಾವ್) ಅವರನ್ನು ಒಳಗೊಂಡ ಚಿತ್ರದುರ್ಗದ ಸ್ತಬ್ಧಚಿತ್ರ ಮೊಳಕಾಲ್ಮೂರು ರೇಷ್ಮೆ  ಸೀರೆಗಳ ನೇಯ್ಗೆಯನ್ನು ಪರಿಚಯಿಸಿತು. ಕೈಮಗ್ಗದಿಂದ ರೇಷ್ಮೆ ಸೀರೆ ತಯಾರಿಸುತ್ತಿರುವ ದೃಶ್ಯ ಮೊಳಕಾಲ್ಮೂರು ಸೀರೆಗಳ ಖ್ಯಾತಿಯನ್ನು ಸಾದರಪಡಿಸಿತು.ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿ.ವಿ.ಗುಂಡಪ್ಪನವರ ಬದುಕು ಜಟಕಾ ಬಂಡಿ ದೃಶ್ಯ, ಬಾಗಲಕೋಟೆಯ ರನ್ನ ಮಹಾಕವಿ ರಚಿಸಿರುವ ಗದಾಯುದ್ಧದ ದೃಶ್ಯ, ಬಸವ ಕಲ್ಯಾಣದ ಅನುಭವ ಮಂಟಪ (ಬೀದರ್), ಮಧುರಚೆನ್ನ ಮತ್ತು ಹಲಸಂಗಿ ಗೆಳೆಯರ ಬಳಗ (ವಿಜಾಪುರ), ಮಾಯಕಾರ ಮಾದಪ್ಪ, ಸಿದ್ದಪ್ಪಾಜಿ, ಮಂಟೇಲಿಂಗಯ್ಯ, ದಿವಂಗತ ಡಾ.ರಾಜ್‌ಕುಮಾರ್ ಅವರನ್ನು ಒಳಗೊಂಡ ಚಾಮರಾಜನಗರ ಜಿಲ್ಲೆಯ ಸ್ತಬ್ಧಚಿತ್ರ, ಕೈವಾರದ ಶ್ರೀನಾರಾಯಣ ಯೋಗೀಂದ್ರರ ಸಂದೇಶ (ಚಿಕ್ಕಬಳ್ಳಾಪುರ), ಸರ್ವಧರ್ಮ ಸಮನ್ವಯ ಸಾರುವ ಸ್ತಬ್ಥಚಿತ್ರ ಹಾಗೂ ಕಾವೇರಿ ನೀರಾವರಿ ನಿಗಮದ ಜೀವನದಿ ಕಾವೇರಿ ಉಗಮದ ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry