ಮನಸೆ ಓ ಮನಸೇ

7

ಮನಸೆ ಓ ಮನಸೇ

Published:
Updated:

ಅಕ್ಟೋಬರ್ *ರಿಂದ 10ರವರೆಗೆ ವಿಶ್ವ ಮಾನಸಿಕ ಆರೋಗ್ಯ ಸಪ್ತಾಹ. 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯೂ ಇದೆ. ಸಣ್ಣ ಪುಟ್ಟ ದೈಹಿಕ ಸಮಸ್ಯೆಗಳಿಗೂ ವೈದ್ಯರ ಬಳಿ ಓಡುವ ನಮಗೆ, ಮಾನಸಿಕ ಕಾಯಿಲೆಗಳ ಬಗ್ಗೆ ಮಾತ್ರ ಯಾಕೆ ಅನಾದರ? ಇಡೀ ದೇಹವನ್ನು ನಿಯಂತ್ರಿಸುವುದೇ ಮನಸ್ಸು.ಹಲವಾರು ದೈಹಿಕ ಸಮಸ್ಯೆಗಳಿಗೂ ಮನಸ್ಸೇ ಕಾರಣ. ಈ ಸತ್ಯವನ್ನು ಮನದಟ್ಟು ಮಾಡಿ, ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಪ್ರಯತ್ನ ಇಲ್ಲಿದೆ. 


                             ------------------ಸಂದೀಪ 10ನೇ ತರಗತಿಯಲ್ಲಿ ಓದುತ್ತಿದ್ದ ಪ್ರತಿಭಾಶಾಲಿ. ಒಂದು ದಿನ ಶಾಲೆಗೆ ಹೋಗಲು ಬೇಜಾರು ಎಂದ. ಪೋಷಕರು ಗಾಬರಿಯಾದರು. ಸಾವರಿಸಿಕೊಂಡು ಗದರಿದರು. ನಮ್ಮ ಪರಿಶ್ರಮದಿಂದ ಒಳ್ಳೆ ಖಾಸಗಿ ಶಾಲೆಗೆ ಹಣ ಸುರಿದು ಸೇರಿಸಿದ್ದೇವೆ, ಹೋಗಿ ಬರಲು ವಾಹನ ವ್ಯವಸ್ಥೆ ಮಾಡಿದ್ದೇವೆ, ಓದಲು ಎಲ್ಲ ಸೌಕರ್ಯಗಳನ್ನೂ ನೀಡಿ ಮನೆ ಮೇಷ್ಟ್ರನ್ನೂ ಗೊತ್ತು ಮಾಡಿದ್ದೇವೆ, ನಿನಗೆ ಎಂಥ ಬೇಜಾರು ಎಂದು ದಬಾಯಿಸಿದರು.ಈ ಒಂದು ದಿನ ರಜೆ ಮಾಡು, ನಾಳೆಯಿಂದ ಸರಿಯಾಗಿ ಶಾಲೆಗೆ ಹೋಗಬೇಕು ಎಂದು ತಾಕೀತು ಮಾಡಿದರು. ಪೋಷಕರಿಬ್ಬರೂ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಷ್ಟರಲ್ಲಿ ಏಕೈಕ ಪುತ್ರ ಸಂದೀಪ ನೇಣಿಗೆ ಶರಣಾಗಿದ್ದ.ಇನ್ನು ಎರಡನೇ ಪಿ.ಯು.ಸಿ ಓದುತ್ತಿದ್ದ ಸೌಜನ್ಯ, ಅಪ್ಪ ತನ್ನಿಷ್ಟದ ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಳು. ಇವಳು ಸಹ ಪೋಷಕರಿಗೆ ಏಕಮಾತ್ರ ಪುತ್ರಿ.ಇಂತಹ ಘಟನೆಗಳು ನಮ್ಮ ಸುತ್ತ ಸರ್ವೇಸಾಮಾನ್ಯವಾಗಿ ಕಂಡು ಬರುತ್ತಿವೆ. ಇಂತಹ ಕೃತ್ಯ ಎಸಗಿದ ಈ ಮಕ್ಕಳನ್ನೇ ನಂಬಿಕೊಂಡಿದ್ದ ತಂದೆ-ತಾಯಿಯ ಗತಿಯೇನು? ಅವರ ಮನಃಸ್ಥಿತಿ ಏನಾಗಿರಬೇಡ? ಯುವ ಜನಾಂಗವನ್ನು ನಂಬಿರುವ ಈ ದೇಶದ ಗತಿಯೇನು? ಅವರ ಸಾವಿನಿಂದಾದ ನಷ್ಟವನ್ನು ತುಂಬುವವರು ಯಾರು?ಇಂತಹ ಪ್ರಕರಣಗಳಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಮಕ್ಕಳಿಗೆ ಸ್ವಲ್ಪ ಹುಶಾರಿಲ್ಲ ಎಂದ ಕೂಡಲೇ ಕರೆದುಕೊಂಡು ಆಸ್ಪತ್ರೆಗೆ ಓಡುತ್ತೇವೆ, ಆದರೆ ಅದೇ ಅವರು ಮನಸ್ಸಿಗೆ ಬೇಜಾರು ಎಂದಾಗ ಮಾತ್ರ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರನ್ನು ಗದರಿಸಿ ಬಾಯಿ ಮುಚ್ಚಿಸಲು ಮುಂದಾಗುತ್ತೇವೆಯೇ ಹೊರತು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ರೀತಿಯಲ್ಲಿ ತಿಳಿ ಹೇಳಲು ಯತ್ನಿಸುವುದಿಲ್ಲ.

 

ಯಾಕೆ ಹೀಗೆ? ದೈಹಿಕ ತೊಂದರೆಗಳಂತೆ ಮಾನಸಿಕ ತೊಂದರೆಗಳನ್ನು ಗುಣಪಡಿಸುವುದೂ ಅಷ್ಟೇ ಮುಖ್ಯ ಎಂಬುದನ್ನು ನಾವು ಅರಿಯಬೇಕು. ದೇಹ- ಮನಸ್ಸು ನಾಣ್ಯದ ಎರಡು ಮುಖಗಳಿದ್ದಂತೆ, ಇವೆರಡೂ ಇದ್ದರೆ ಮಾತ್ರ ಜೀವನಕ್ಕೆ ನೆಲೆ- ಬೆಲೆ.ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ `ಮಾನಸಿಕ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ~. ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟ 1992ರಿಂದ ಆಚರಿಸಿಕೊಂಡು ಬರುತ್ತಿರುವ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಈ ಬಾರಿಯ ಉದ್ಘೋಷ `ಖಿನ್ನತೆ: ಜಾಗತಿಕ ಬಿಕ್ಕಟ್ಟು~.ಭಾರತದಲ್ಲಿ ನಡೆದ ಸಮೀಕ್ಷೆಯ ಪ್ರಕಾರ, ಪ್ರತಿ ಸಾವಿರ ಜನರಲ್ಲಿ 10ರಿಂದ 370 ಮಂದಿ ಮಾನಸಿಕ ಅಸ್ವಾಸ್ಥ್ಯಕ್ಕೆ ಒಳಗಾಗುತ್ತಿದ್ದಾರೆ. ಇಷ್ಟು ಅಗಾಧ ಸಂಖ್ಯೆಯಲ್ಲಿ ಜನರು ಮಾನಸಿಕ ತೊಂದರೆಗೆ ಒಳಗಾಗುತ್ತಿರುವುದನ್ನು ಗಮನಿಸಿದಾಗ ಮನೋವ್ಯಾಧಿಯ ಬಗ್ಗೆ, ಅದರಲ್ಲೂ ಈ ಬಾರಿಯ ಘೋಷಣೆ `ಖಿನ್ನತೆ~ಯ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ ಎನಿಸುತ್ತದೆ.

 

ಖಿನ್ನತೆ ಯಾವ ವಯಸ್ಸಿನಲ್ಲಿ ಯಾರಿಗೆ ಬೇಕಾದರೂ ಬರಬಹುದು. ಆದರೆ ಗಂಡಸರಿಗೆ ಹೋಲಿಸಿದರೆ ಹೆಂಗಸರಲ್ಲಿ ಇದು ಹೆಚ್ಚು. ಅದೂ ನಮ್ಮಂತಹ ಪ್ರಗತಿಶೀಲ ದೇಶದಲ್ಲಿ ಉದ್ಯೋಗಸ್ಥ ಮಹಿಳೆಯರು ಹೆಚ್ಚಾಗಿ ಖಿನ್ನತೆಗೆ ಗುರಿಯಾಗುತ್ತಾರೆ.ನಮ್ಮ  ಹಲವು ರಾಜ್ಯಗಳಲ್ಲಿ ಶೇ *0ರಷ್ಟು ಮಹಿಳೆಯರಿಗೆ ಖಿನ್ನತೆ ಇರುವುದು ಸಾಬೀತಾಗಿದೆ. ಇದು ದೀರ್ಘ ಕಾಯಿಲೆಗಳು ಇದ್ದವರಲ್ಲಿ, ಮಧುಮೇಹಿಗಳು, ಹೃದಯಾಘಾತ ಆದವರು, ಪಾರ್ಶ್ವವಾಯು ಇದ್ದವರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಶೇ *5ರಷ್ಟು ಹೆಚ್ಚು. ಪ್ರತಿ ವರ್ಷ 20 ಜನರಲ್ಲಿ ಒಬ್ಬರಂತೆ ಈ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಖಿನ್ನತೆ ಸಾಮಾನ್ಯ ಕಾರಣ.ಖಿನ್ನತೆಗೆ ಒಳಗಾದವರನ್ನು ದೈಹಿಕ ಕಾಯಿಲೆಗಳು ಸಹ ಬಹಳ ಬೇಗ ಆವರಿಸಿಕೊಳ್ಳುತ್ತವೆ. ಖಿನ್ನತೆಗೆ ಒಳಗಾದ ವ್ಯಕ್ತಿ ಜೀವಂತ ಶವವಿದ್ದಂತೆ. ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಆತ ಜೀವಕ್ಕೇ ಅಪಾಯ ಮಾಡಿಕೊಳ್ಳಬಹುದು. ಮನಸ್ಸಿನ ಕ್ಷೋಭೆಯಿಂದ ಇತರ ಮಾನಸಿಕ ಕಾಯಿಲೆಗಳೂ ಕೂಡಿಕೊಂಡು ದುಶ್ಚಟ ವ್ಯಸನಿಯಾಗಬಹುದು.ಇಲ್ಲವೇ ದೈಹಿಕ ಅಂಟು ಜಾಡ್ಯಗಳಿಗೆ ಗುರಿಯಾಗಬಹುದು. ಹೀಗಾಗಿ ಖಿನ್ನತೆಗೆ ಒಳಗಾದವರಿಗೆ ತ್ವರಿತ ಚಿಕಿತ್ಸೆ ಅತ್ಯಗತ್ಯ. ಅಲ್ಲದೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದ ಪ್ರಗತಿಗಾಗಿ ಮಾನಸಿಕ ಆರೋಗ್ಯ ಪ್ರತಿಯೊಬ್ಬರಿಗೂ ಬೇಕೇ ಬೇಕು ಹಾಗೂ ಅದು ನಮ್ಮೆಲ್ಲರ ಪ್ರಮುಖ ಆದ್ಯತೆ ಕೂಡ ಆಗಬೇಕು. ಮನೋಬಲಕ್ಕೆ ಇಲ್ಲಿದೆ ಹತ್ತು ಸೂತ್ರ

ಮಾನಸಿಕ ಆರೋಗ್ಯ ವೃದ್ಧಿಗೆ ವಿಶ್ವ ಆರೋಗ್ಯ ಸಂಸ್ಥೆ ಸಿದ್ಧಪಡಿಸಿರುವ ಹತ್ತು ಸೂತ್ರಗಳು ಇಲ್ಲಿವೆ:

*ಸಮಸ್ಯೆಯ ಪರಿಹಾರ: ಯಾವುದೇ ಸಮಸ್ಯೆ ಇರಲಿ, ಅದರ ಹುಟ್ಟು, ಸ್ವರೂಪವನ್ನು ವಿಶ್ಲೇಷಿಸಿ. ಅದಕ್ಕೆ ಯಾರು, ಯಾವ ಸನ್ನಿವೇಶ, ಧೋರಣೆ ಕಾರಣವಾಯಿತು, ಯಾವ ಅಂಶಗಳು ಅದನ್ನು ಉಲ್ಬಣಗೊಳಿಸಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.ಭಯ, ತಪ್ಪಿತಸ್ಥ ಮನೋಭಾವ, ಕೋಪ, ದುಃಖವನ್ನಾಗಲೀ ಪಡದೆ, ಪರಿಹಾರ ಮಾರ್ಗವೇನು ಎಂದು ಚಿಂತಿಸಿ, ನಿಮಗೆ ಹೊಳೆಯದಿದ್ದರೆ ಇತರರ ನೆರವು ಕೇಳಿ ಕಾರ್ಯೋನ್ಮುಖರಾಗಿ. ಪರಿಹಾರವಿಲ್ಲದ ಸಮಸ್ಯೆಯಾದರೆ ಅದರೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿಯಿರಿ.*ನಿರ್ಧಾರ ಮಾಡುವುದು: ಜೀವನದುದ್ದಕ್ಕೂ ಪ್ರತಿ ದಿನ ನಾವು ಅನೇಕ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಮಾಡಬೇಕೇ ಬೇಡವೇ, ಯಾವುದನ್ನು ಆಯ್ಕೆ ಮಾಡಬೇಕು, ಯಾವ ದಾರಿ ಹಿಡಿಯಬೇಕು, ಏನು ಗುರಿ, ಇತ್ಯಾದಿ ಸಾಧಕ ಬಾಧಕಗಳನ್ನು ಪಟ್ಟಿ ಮಾಡಿ. ಯಾವುದು ಹೆಚ್ಚು ಅನುಕೂಲಕರವೋ, ಕಡಿಮೆ ಹಾನಿಕಾರಕವೋ ಅಂತಹ ನಿರ್ಧಾರಕ್ಕೆ ಬನ್ನಿ.*ವಿಮರ್ಶಾತ್ಮಕ ಆಲೋಚನೆ: ಪ್ರತಿ ವಸ್ತು, ವಿಷಯ, ಸನ್ನಿವೇಶ, ಘಟನೆ, ಇತರರ ಸಲಹೆ, ಬುದ್ಧಿವಾದಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಚಿಂತನೆ ಮಾಡುವುದನ್ನು ಕಲಿಯಬೇಕು. ಇತರರು ಹೇಳಿದ್ದನ್ನು ಸುಲಭವಾಗಿ ನಂಬಬಾರದು. ಜಾಹೀರಾತಿಗೆ ಮೋಸ ಹೋಗಬಾರದು. ಆಡಂಬರ, ಹೊರ ರೂಪಕ್ಕೆ ಮರುಳಾಗಬಾರದು.*ಸೃಜನಾತ್ಮಕ ಚಿಂತನೆ: ಹಳೆಯ ಧಾಟಿಯಲ್ಲಿ, ಸೀಮಿತ ರೀತಿಯಲ್ಲಿ, ಸಂಪ್ರದಾಯಬದ್ಧವಾಗಿ, ಜಿಗುಟಾಗಿ ಚಿಂತಿಸುವ ಬದಲು ಹೊಸ ರೀತಿಯಲ್ಲಿ, ಸೃಜನಾತ್ಮಕವಾಗಿ, ಪೂರ್ವಗ್ರಹಪೀಡಿತರಾಗದೇ ಮುಕ್ತವಾಗಿ ಆಲೋಚಿಸಬೇಕು. ಹೊಸ ವಿಧಾನ, ಮಾರ್ಗಗಳ ಆವಿಷ್ಕಾರ ಮಾಡಬೇಕು.*ಪರಿಣಾಮಕಾರಿ ಸಂವಹನ: ಹೇಳಬೇಕಾದದ್ದನ್ನು, ಅಭಿಪ್ರಾಯ, ಅನಿಸಿಕೆಗಳನ್ನು, ಪ್ರತಿಭಟನೆಯನ್ನು ನೇರವಾಗಿ, ನಿಖರವಾಗಿ, ಗೊಂದಲಕ್ಕೆಡೆ ಇಲ್ಲದಂತೆ,  ಕಸಿವಿಸಿಯಾಗದಂತೆ, ಮನಸ್ಸು ನೋಯದಂತೆ ಹೇಳುವ, ಬರೆಯುವ ಅಭಿವ್ಯಕ್ತಗೊಳಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು.*ಸ್ನೇಹ ಸಂಬಂಧ: ಮನೆಯವರು, ಬಂಧು ಮಿತ್ರರು, ಸಹೋದ್ಯೋಗಿಗಳು, ನೆರೆಹೊರೆಯವರೊಂದಿಗೆ, ನಮ್ಮಡನೆ ತಾತ್ಕಾಲಿಕವಾಗಿ ಅಥವಾ ದೀರ್ಘವಾಗಿ ವ್ಯವಹರಿಸುವ ಎಲ್ಲರೊಂದಿಗೆ ಆದಷ್ಟೂ ಸ್ನೇಹ, ವಿಶ್ವಾಸ, ಗೌರವ ಇಟ್ಟುಕೊಳ್ಳಬೇಕು. ವಿರಸ, ದ್ವೇಷ, ತಿರಸ್ಕಾರಗಳಿಗೆ ಎಡೆಮಾಡಿ ಕೊಡಬಾರದು.*ಸ್ವಯಂ ವಿಮರ್ಶೆ: ನಾವು ನಮ್ಮ ಇತಿಮಿತಿ ಮತ್ತು ಸಾಮರ್ಥ್ಯವನ್ನು ವಸ್ತುನಿಷ್ಠವಾಗಿ ತಿಳಿದುಕೊಳ್ಳಬೇಕು. ಅವುಗಳ ಚೌಕಟ್ಟಿನಲ್ಲೇ ವ್ಯವಹರಿಸಬೇಕು.*ಅರ್ಥ ಮಾಡಿಕೊಳ್ಳುವುದು: ಇತರರ ಇತಿಮಿತಿ, ಸಾಮರ್ಥ್ಯ, ಅವರ ನೋವು ಭಾವನೆಗಳನ್ನು ಅವರಂತೆಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು, ಸಹಾನುಭೂತಿ ತೋರಿಸಬೇಕು.*ಭಾವನೆಗಳ ಹತೋಟಿ: ಪ್ರೀತಿ, ಪ್ರೇಮ, ದಯೆ, ಅನುಕಂಪ, ಸ್ವಾಭಿಮಾನ, ಸಂತೋಷಗಳಂತಹ ಸಕಾರಾತ್ಮಕ ಭಾವನೆಗಳನ್ನು ರೂಢಿಸಿಕೊಳ್ಳುವುದು ಮತ್ತು ದುಃಖ, ಕೋಪ, ಭಯ, ಮತ್ಸರ, ಕೀಳರಿಮೆ, ಅತಿ ವಿಕೃತ ಕಾಮ, ಅತಿ ನಾಚಿಕೆ, ಆಕ್ರಮಣಕಾರಿ ಭಾವನೆಗಳನ್ನು ಹತೋಟಿಯಲ್ಲಿಡುವುದು ನಮ್ಮೆಲ್ಲರಿಗೂ ಮುಖ್ಯ. ನಮಗೂ ಮತ್ತು ಇತರರಿಗೂ ಸಹ್ಯವಾಗುವಂತೆ ನಮ್ಮ ಭಾವನೆಗಳನ್ನು ಪ್ರಕಟಿಸುವುದನ್ನು ಕಲಿಯಬೇಕು.*ಒತ್ತಡ ನಿಭಾವಣೆ: ಮಾನಸಿಕ ಒತ್ತಡಗಳನ್ನು ನಿಭಾಯಿಸಿ, ಸದಾ ಸಮಾಧಾನ ಚಿತ್ತರಾಗಿರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry