ಮನಸ್ಸಿದ್ದರೆ ಎಲ್ಲವೂ ಸುಲಭ

7

ಮನಸ್ಸಿದ್ದರೆ ಎಲ್ಲವೂ ಸುಲಭ

Published:
Updated:
ಮನಸ್ಸಿದ್ದರೆ ಎಲ್ಲವೂ ಸುಲಭ

ಮನೆ ಜಗತ್ತು

ಲಲಿತಾ ಬಿ. ಸಂಗಣ್ಣನವರ್  - ಕರ್ನಾಟಕದ ಪ್ರಥಮ ಮಹಿಳಾ ಅಭಿಯೋಗ ಉಪ ನಿರ್ದೇಶಕಿ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಮತ್ತು ಬಳ್ಳಾರಿ ವಲಯದ ಅಭಿಯೋಗ (ಪ್ರಾಸಿಕ್ಯೂಷನ್)ಉಪ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಬಿಎ, ಎಲ್‌ಎಲ್‌ಬಿ (ಸ್ಪೆಷಲ್) ಪದವೀಧರೆ.ಹಿಂದುಳಿದ ಹಳ್ಳಿ ಕೋಡಾ ಕನ್ನಡ ಶಾಲೆಯಲ್ಲಿ ಹೈಸ್ಕೂಲ್‌ವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದ ಅವರು, ಎಲ್‌ಎಲ್‌ಬಿ ಪೂರೈಸಿದ ನಂತರ ವಕೀಲಿಕೆ ಅಭ್ಯಾಸ ಮಾಡಲು ಹೆದರಿ ಒಂದು ವರ್ಷ ಮನೆಯಲ್ಲೇ ಉಳಿದಿದ್ದರಂತೆ! ಆದರೆ ಈಗ, ಯಾವ ವಶೀಲಿಬಾಜಿಗೂ ರಾಜಿಯಾಗದೆ ಕೆಲಸ ಮಾಡುವ ದಿಟ್ಟತನ ಅವರದು.ನಾಲ್ಕು ಜಿಲ್ಲೆಗಳ ಕೇಸುಗಳನ್ನು ಅಧ್ಯಯನ ಮಾಡಿ, ಮುಖ್ಯ ಸಾಕ್ಷ್ಯಾಧಾರಗಳನ್ನು ಕ್ರೋಡೀಕರಿಸುವುದು, ಮುಖ್ಯ ಸ್ಥಳಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುವುದು ಸೇರಿದಂತೆ ಬಹುತೇಕ ತಿರುಗಾಟದ ಕೆಲಸವೇ ಅಧಿಕ. ಆದರೂ ಕೆಲಸ ನೀಡುವ ತೃಪ್ತಿ ಅನನ್ಯ ಎನ್ನುವ  ಲಲಿತಾ ಬಿ. ಸಂಗಣ್ಣನವರ್ `ಭೂಮಿಕಾ~ ಜೊತೆ ಹಂಚಿಕೊಂಡ ಆಪ್ತ ಮಾತುಗಳು.

                                         ===========

ಅದೊಂದು ಹಳ್ಳಿಯ ಕನ್ನಡ ಸಾಲಿ (ಶಾಲೆ). ಗ್ರಾಮೀಣ ವಿದ್ಯಾರ್ಥಿಗಳಿಗೆ `ನೀವು ದೊಡ್ಡವರಾದ ಮೇಲೆ ಏನಾಗುತ್ತೀರಿ?~ ಎಂಬ ಶಿಕ್ಷಕರ ಪ್ರಶ್ನೆಗೆ ಒಬ್ಬೊಬ್ಬರಿಂದಲೂ ಭಿನ್ನಭಿನ್ನ ಉತ್ತರ. ನನ್ನ ಸರದಿ ಬಂದಾಗ  ಹೇಳಿದ್ದು `ಸರ್, ನಾನು ದೊಡ್ಡವಳಾದ್ಮೇಲೆ ಕಾನೂನು ಮಂತ್ರಿ ಆಗ್ತೀನ್ರೀ~ ಅಂತ. ನನ್ನ ಉತ್ತರದಿಂದ ಶಿಕ್ಷಕರಿಗೆ ಆಶ್ಚರ್ಯವೇನೂ ಆಗಲಿಲ್ಲ. ಏಕೆಂದರೆ, ತರಗತಿಯ ಅಷ್ಟು ಹೆಣ್ಣುಮಕ್ಕಳ ನಡುವೆ ಧೈರ್ಯದಿಂದ ಮುಂದೆ ಮಾತನಾಡುತ್ತಿದ್ದದ್ದೇ ನಾನು.`ತರಗತಿಯಲ್ಲಿ ಅಂದು ಹೇಳಿದಂತೆ ಲಾ ಮಿನಿಸ್ಟರ್ ಅಂತೂ ಆಗಲಿಲ್ಲ. ಆದರೆ, ಅದೇ ಕ್ಷೇತ್ರದಲ್ಲಿ ಇಂದು ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಕೆಲಸ ಮಾಡ್ತಾ ಇದ್ದೀನಿ ಅನ್ನೋ ತೃಪ್ತಿಯಂತೂ ಇದೆ~.ಮೂಲತಃ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ `ಕೋಡಾ~ ಗ್ರಾಮ ನಮ್ಮದು. ರೈತ ದಂಪತಿ ಬಸವಣ್ಣೆಪ್ಪ-ನಾಗಮ್ಮ ಅವರ ಹತ್ತು ಜನರ ಮಕ್ಕಳಲ್ಲಿ ಒಬ್ಬಳು. ದೊಡ್ಡಪ್ಪ, ಚಿಕ್ಕಪ್ಪಂದಿರ ಜತೆ ಕೂಡು ಕುಟುಂಬದಲ್ಲಿ ಬೆಳೆದಾಕೆ ನಾನು. `ಹೆಣ್ಣುಮಕ್ಕಳಿಗೂ ಶಿಕ್ಷಣ ಅಗತ್ಯ~ ಎಂದು ಪ್ರತಿಪಾದಿಸುತ್ತಿದ್ದ ದೊಡ್ಡಪ್ಪನ ಸಾಂಗತ್ಯದಲ್ಲಿ ಬೆಳೆದವಳು. ಅಭಿಯೋಗ ಎಂಬ ಅಷ್ಟಾಗಿ ಪ್ರಸಿದ್ಧಿಯಾಗದ ಆದರೆ, ನ್ಯಾಯಕ್ಕಾಗಿ ಹೋರಾಡುವ ವೃತ್ತಿಯಲ್ಲಿ ಉಪ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆ.ಹಿಂದುಳಿದ ಹಳ್ಳಿ ಕೋಡಾ ಕನ್ನಡ ಶಾಲೆಯಲ್ಲಿ ಹೈಸ್ಕೂಲ್‌ವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದಿದ್ದು. ಎಲ್‌ಎಲ್‌ಬಿ ಪೂರೈಸಿದ ನಂತರ ವಕೀಲಿಕೆ ಅಭ್ಯಾಸ ಮಾಡಲು ಹೆದರಿ ಒಂದು ವರ್ಷ ಮನೆಯಲ್ಲೇ ಉಳಿದ್ದ್ದಿದೆ. ಆಗಿನ ಕಾಲದಲ್ಲಿ ಹೆಣ್ಮಕ್ಕಳು ಓದೋದೇ ದುಸ್ತರವಾಗಿದ್ದಾಗ ಇನ್ನು ಗಂಡಸರ ಮಧ್ಯೆ ಕರಿಕೋಟು ಹಾಕ್ಕೊಂಡು ವಕಾಲತ್ತು ಮಾಡೋದು ದೊಡ್ಡ ಸಂಗತಿಯಾಗಿತ್ತು. ಶಾಲೆ-ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ನಾನು ಹೇಗಪ್ಪಾ ವಕೀಲಿಕೆ ಮಾಡೋದು ಎಂದು ಹೆದರಿದ್ದೆ. ಆದರೆ, ನನಗೆ ಮನೆಯಲ್ಲಿ ಸಿಕ್ಕ ಪ್ರೋತ್ಸಾಹ ಮತ್ತು ಹೊರಗಡೆ ಇತರ ವಕೀಲರು ನೀಡಿದ ಸಹಕಾರದಿಂದ ಆತ್ಮವಿಶ್ವಾಸದಿಂದ ಕೆಲಸ ಆರಂಭಿಸಿದೆ.ಲಿಂಗ ತಾರತಮ್ಯ ಕಂಡುಬಂದಿಲ್ಲ...!


 ಮೂರು ದಶಕಗಳಿಂದ ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದೀನಿ. ಆದ್ರೆ ಇದುವರೆಗೂ ನನ್ನ ಕೆಲಸದಲ್ಲಿ ಯಾವತ್ತೂ ಲಿಂಗ ತಾರತಮ್ಯ ಕಂಡು ಬಂದಿಲ್ಲ!. ನಿಮಗೆ ಆಶ್ಚರ್ಯವಾಗಬಹುದು. ಆದರೆ, ನಾನು ಕೆಲಸ ಮಾಡಿದ ರಾಜ್ಯದ ಹಲವು ಜಿಲ್ಲೆಗಳಿಗೆ ನನಗೆ ಮೇಲಧಿಕಾರಿಯಿಂದ ಹಿಡಿದು ಕೆಳಹಂತದ ನೌಕರರವರೆಗೆ ಇನಿತೂ ತೊಂದರೆ ಉಂಟಾಗಿಲ್ಲ. ನಾನು ಹೆಣ್ಣು ಅನ್ನೋದು ನನಗಾಗಲೀ, ನನ್ನ ಜತೆ ಕೆಲಸ ಮಾಡುವ ಪುರುಷ ಅಧಿಕಾರಿಗಳಿಗಾಗಲೀ ಎಂದಿಗೂ ತೊಡಕಾಗಿಲ್ಲ.ನಾನು ಪ್ರಥಮವಾಗಿ ನೌಕರಿ ಆರಂಭಿಸಿದ್ದು ಧಾರವಾಡ ಜಿಲ್ಲೆ ಕುಂದಗೋಳದಲ್ಲಿ. ಕೇವಲ ಒಂದು ವರ್ಷದಲ್ಲಿ ಅಲ್ಲಿನ ಜನ ನನಗೆ ಎಷ್ಟು ಹಚ್ಚಿಕೊಂಡಿದ್ದರೆಂದರೆ ಅಲ್ಲಿಂದ ಇತೆರೆಡೆ ವರ್ಗವಾದಾಗ ಸಹೋದ್ಯೋಗಿಗಳು, ಜನರೂ ಸೇರಿದಂತೆ ನನ್ನ ಕಣ್ಣಂಚಿನಲ್ಲೂ ನೀರು ತುಂಬಿ ಬಂದಿತ್ತು. ಜನರ ಈ ಪ್ರೀತಿಯೇ ನನ್ನಲ್ಲಿ ಕೆಲಸದ ಬಗ್ಗೆ ಮತ್ತಷ್ಟು ಸ್ಫೂರ್ತಿ ನೀಡುತ್ತದೆ.ಅಡುಗೆ ಮನೆಯೊಳಗೊಂದು ಸುತ್ತು

ಕಚೇರಿ ಕೆಲಸ ನಿರ್ವಹಣೆಗೆ ನನಗೆ ದಿನದ ಇಪ್ಪತ್ತಾಲ್ಕು ಗಂಟೆಯೂ ಕಡಿಮೆ ಅನ್ನಿಸುತ್ತೆ. ನಾಲ್ಕು ಜಿಲ್ಲೆಗಳ ಕೇಸುಗಳನ್ನು ಅಧ್ಯಯನ ಮಾಡಿ, ಮುಖ್ಯ ಸಾಕ್ಷ್ಯಾಧಾರಗಳನ್ನು ಕ್ರೋಡೀಕರಿಸುವುದು, ಮುಖ್ಯ ಸ್ಥಳಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುವುದು ಸೇರಿದಂತೆ ಬಹುತೇಕ ತಿರುಗಾಟದ ಕೆಲಸವೇ ಅಧಿಕ.

 

ಆದರೂ ನನಗೆ ಕೆಲಸ ನೀಡುವ ತೃಪ್ತಿ ಅನನ್ಯ. ನಾನು ಅವಿವಾಹಿತೆ. ಆದರೂ ಮನೆಯಲ್ಲಿ ಸದಾ ಸಂಬಂಧಿಕರು, ಸ್ನೇಹಿತರು ತುಂಬಿರುತ್ತಾರೆ. ಕೆಲಸ ನಡುವೆ ಬಿಡುವು ಪಡೆದು, ನನ್ನ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಕಾಲ ಕಳೆಯುವುದು ನನಗೆ ತುಂಬಾ ಇಷ್ಟ.ಒಮ್ಮಮ್ಮೆ ಅತ್ತಿಗೆ, ಸಹೋದರಿಯರು ಸೇರಿದೆವು ಎಂದರೆ ರಾತ್ರಿ ಆರಂಭಿಸಿದ ಮಾತು ಮುಂಜಾನೆ ತನಕ ಮುಂದುವರಿದಿರುತ್ತದೆ. ಆ ಸಮಯದಲ್ಲಿ ಟಿವಿಯೂ ಗಪ್‌ಚುಪ್!. ಹಾಗಾಗಿ, ನಮ್ಮ ಭಾವ, ಮೈದುನ ಮತ್ತಿತರರು `ರಾತ್ರಿಯಿಡೀ ಲೋಕವಿಹಾರ ಮುಗಿಸಿದ್ರಾ~ ಅಂತ ತಮಾಷೆ ಮಾಡುವುದುಂಟು.ನನಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟದ ಸಂಗತಿ. ಮನೆಗೆ ಎಷ್ಟೇ ಜನರ ಬರಲಿ ಅಷ್ಟೂ ಮಂದಿಗೆ ವೆಜ್, ನಾನ್‌ವೆಜ್ ಅಡುಗೆ ಮಾಡಬಲ್ಲೆ. ಇದು ನನಗೆ ತಾಯಿಯಿಂದ ಬಂದ ಗುಣ. ಹೊಸ ರುಚಿ ಮಾಡುವುದರಲ್ಲೂ ನನಗೆ ಆಸಕ್ತಿ. ಈ ಇಲಾಖೆಯಲ್ಲಿ ವರ್ಷವಿಡೀ ಕೆಲಸ. ಆದರೆ, ಸರ್ಕಾರಿ ರಜೆಗಳಂದು ನಮಗೂ ವಿರಾಮ.ಹಾಗಾಗಿ, ನನ್ನ ಮುಖ್ಯ ಕೆಲಸಗಳನ್ನು ಅಂದು ಮಾಡಿಕೊಳ್ಳುತ್ತೇನೆ. ದಿನನಿತ್ಯ ನನ್ನ ಅಡುಗೆ ನಾನೇ ಮಾಡಿಕೊಳ್ಳುತ್ತೇನೆ. ರಾತ್ರಿ 1ಕ್ಕೆ ಮಲಗಿದರೂ ಬೆಳಿಗ್ಗೆ 6.30ಕ್ಕೆ ಏಳುತ್ತೇನೆ. ಟೀ, ತಿಂಡಿ ಇತರ ಮನೆಕೆಲಸಗಳನ್ನು ಪೂರೈಸಿ, ಬೆಳಿಗ್ಗೆಯೇ ನೆನಸಿಟ್ಟ ಬಟ್ಟೆಗಳನ್ನು ಸಂಜೆ ಕೆಲಸದಿಂದ ವಾಪಸ್ ಬಂದಾಗ ಒಗೆಯುತ್ತೇನೆ. ಇಂಥ ಕೆಲಸ ಮಾಡಬೇಕು ಅಂತ ಮನಸ್ಸಿಗೆ ಬಂದರೆ ಅದು ಎಷ್ಟೇ ಹೊತ್ತಾಗಿರಲಿ ನಾನು ಮಾಡಿಯೇ ತೀರುತ್ತೇನೆ. ಹಾಗಾಗಿ, ಮನೆಯ ಯಾವ ಕೆಲಸವೂ ಬಾಕಿ ಉಳಿಯದು.ಎಲ್ಲಕ್ಕಿಂತ ಕೆಲಸ ಮುಖ್ಯ

ಒಮ್ಮೆ ಹೀಗಾಯಿತು. ನಾನು ಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿದ್ದೆ. ಆಗ, ನಾನು ಕೆಲಸ ಮಾಡುತ್ತಿದ್ದ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದ ಶಾಸಕರೊಬ್ಬರು ಹೇಳಿ ಕಳುಹಿಸಿದರು. ನಾನು ಅದಕ್ಕೆ ಸೊಪ್ಪುಹಾಕಲಿಲ್ಲ.

 

ಆದರೆ, ಅದನ್ನೇ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ ಆ ಶಾಸಕ ಮುಂದೆ ಮಂತ್ರಿಯಾದಾಗ ನನ್ನನ್ನು ಎತ್ತಂಗಡಿ ಮಾಡಿಸಿದರು. ಖುಷಿಯಿಂದಲೇ ಅಲ್ಲಿಂದ ಬೇರೆ ಜಿಲ್ಲೆಗೆ ಹೋಗಿ ಕೆಲಸ ಮಾಡಿ, ಒಳ್ಳೆಯ ಹೆಸರಿನ ಜತೆಗೇ ಬಡ್ತಿಯನ್ನೂ ಪಡೆದು ಪುನಃ ದಾವಣಗೆರೆ ಜಿಲ್ಲೆಗೇ ಬಂದೆ. ಈ ಬಾರಿ ಅವರ ಕೇಸು ನನ್ನ ಬಳಿಯೇ ಬಂದಿತ್ತು.ಆಗ ಇನ್ನೂ ಮಂತ್ರಿಯಾಗಿದ್ದ ಆ ವ್ಯಕ್ತಿ `ಕೇಸು ನನ್ನ ಪರವಾಗಿ ಆಗುವಂತೆ ಮಾಡಮ್ಮಾ~ ಎಂದು ಫೋನ್ ಮಾಡಿದ್ದರು. ಅದಕ್ಕೆ ನಾನು ಕೊಟ್ಟ ಉತ್ತರ ಇಷ್ಟೇ `ಕೇಸು ಅವರ ಪರ ಅಥವಾ ನಿಮ್ಮ ಪರ ಅಂತ ಮಾಡ್ತೀನಿ ಅಂತ ಹೇಳೋಕೆ ಆಗಲ್ಲ. ಕಾನೂನು ಪ್ರಕಾರ ಯಾರಿಗೆ ನ್ಯಾಯ ದೊರೆಯಬೇಕೋ ಅವರಿಗೇ ನ್ಯಾಯ ದೊರೆಯುವಂತೆ ಮಾಡ್ತೀನಿ~ ಎಂದಿದ್ದೆ.ಕೇಸು ಅವರ ಪರವಾಗದೇ ನ್ಯಾಯಯುತವಾಗಿ ಯಾರ ಪರ ಆಗಬೇಕಿತ್ತೋ ಅವರ ಪರವೇ ಆಯಿತು. ಹೀಗೆ ಎರಡು ಪ್ರಕರಣಗಳಲ್ಲೂ ಆ ರಾಜಕಾರಣಿಗೆ ಸೋಲುಂಟಾಗಿತ್ತು. ಆದರೆ, ನಾನು ಅವರ ಬಗ್ಗೆ ಪೂರ್ವಗ್ರಹಪೀಡಿತಳಾಗದೇ ಕೆಲಸ ಮಾಡ್ದ್ದಿದೆ. ಯಾವುದೇ ಶಿಫಾರಸು, ವಶೀಲಿಬಾಜಿಗೆ ರಾಜೀ ಆಗಲಿಲ್ಲ.ಹಾಗಾಗಿ, ಇಂದಿಗೂ ನಾನು ನೆಮ್ಮದಿಯಿಂದ ಇದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ ಕೆಲಸಕ್ಕೇ ಮುಖ್ಯ ಆದ್ಯತೆ ನೀಡಿ, ಪ್ರಾಮಾಣಿಕತೆ ಯಿಂದ ಇದ್ದುದ್ದಕ್ಕೆ ಅದು ನನ್ನನ್ನು ಇಂದಿಗೂ ಕಾಪಾಡುತ್ತಿದೆ. ಹಾಗಾಗಿ, ಇಂದಿಗೂ ಕಕ್ಷಿದಾರರಷ್ಟೇ ಅಲ್ಲ, ಪುರುಷ ಸಹೋದ್ಯೋಗಿಗಳಿಗೂ ನನ್ನ ಬಗ್ಗೆ ಗೌರವವಿದೆ. ಇತರ ಜಿಲ್ಲೆಯ ಅಧಿಕಾರಿಗಳೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಗುರಿ ಸ್ಪಷ್ಟವಿದ್ದಲ್ಲಿ ಎಲ್ಲವೂ ಸರಳ

ಹೆಣ್ಮಕ್ಕಳಿಗೆ ಹಿಂದಿನಂತೆ ಇಂದು ಹೆಚ್ಚಿನ ಚೌಕಟ್ಟುಗಳಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ದೊರೆಯುತ್ತಿದೆ. ಬರೀ ಗೃಹಿಣಿಯಾಗಿಯೇ ಇರಬೇಕೆಂದಿಲ್ಲ. ಮುಖ್ಯವಾಗಿ ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾಗಬೇಕು. ಗುರಿ ಸ್ಪಷ್ಟವಿದ್ದು, ಅದನ್ನು ಮುಟ್ಟುವ ಮನಸ್ಸಿದ್ದಲ್ಲಿ ಮನೆ-ಕಚೇರಿ ಎರಡೂ ಕೆಲಸ ಸುಲಭವಾಗಬಲ್ಲದು.ಇದಕ್ಕೆ ಪೋಷಕರು, ಪತಿ, ಮಕ್ಕಳ ಸಹಕಾರವೂ ಬೇಕು. ಅಲ್ಲದೇ, ಮಹಿಳೆ ಕುಟುಂಬವನ್ನಷ್ಟೇ ಅಲ್ಲ. ತನ್ನ ಬಗ್ಗೆಯೂ ಆದ್ಯತೆ ನೀಡಬೇಕು. ಪೌಷ್ಟಿಕಾಂಶವುಳ್ಳ ಆಹಾರ, ಮನೋರಂಜನೆ, ಕ್ರೀಡೆ, ಓದು ಇತ್ಯಾದಿಗಳಿಗೂ ಸಮಯ ಹೊಂದಿಸಿಕೊಳ್ಳಬೇಕು.ಸಾಮಾನ್ಯವಾಗಿ ನಾನು ಹುಟ್ಟುಹಬ್ಬ ಇತ್ಯಾದಿ ಸಮಾರಂಭಗಳಿಗೆ ಹೋಗುವುದಿಲ್ಲ. ತೀರಾ ಬೇಕಾದವರ ಮದುವೆಗಷ್ಟೇ ಹೋಗುತ್ತೇನೆ. ಕೆಲಸದ ಒತ್ತಡದ ನಡುವೆ ಕುಟುಂಬದ ಹಲವು ಕಾರ್ಯಕ್ರಮಗಳಿಗೆ ಹೋಗಲಾಗದು. ಆದರೆ, ಇದನ್ನು ನನ್ನ ಕುಟುಂಬದವರು ತಪ್ಪಾಗಿ ಭಾವಿಸುವುದಿಲ್ಲ. ಅರ್ಥಮಾಡಿಕೊಳ್ಳುತ್ತಾರೆ.ಇನ್ನು ಬಿಡುವಿನ ಸಮಯದಲ್ಲಿ ಸಂಗೀತ ಕೇಳುತ್ತೇನೆ. ಕಾದಂಬರಿ ಓದುವುದು ಇಷ್ಟ. ಉಷಾ ನವರತ್ನರಾಂ, ತ್ರಿವೇಣಿ, ವಾಗ್ದೇವಿ ಅವರ ಕಾದಂಬರಿ ಓದಿದ್ದೇನೆ. ಈಚೆಗಷ್ಟೇ ತರಾಸು ಅವರ `ದುರ್ಗಾಸ್ತಮಾನ~ ಓದಿದೆ. `ಸುಧಾ~ದಲ್ಲಿನ ಧಾರಾವಾಹಿ ಇಷ್ಟ. ಭಾನುವಾರದಂದು ಸ್ನೇಹಿತರನ್ನು ಭೇಟಿ ಮಾಡ್ತೀನಿ. ಜನರೊಂದಿಗೆ ಬೆರೆಯುತ್ತೇನೆ. ಹಿಂದೆ ಕಚೇರಿಯ ಮಹಿಳೆಯರೆಲ್ಲ ಸೇರಿ ಸಿನಿಮಾಕ್ಕೆ ಹೋಗ್ತಾ ಇದ್ವಿ.ಈಚೆಗೆ ನೋಡಿಲ್ಲ. ಶಾಲೆಯಲ್ಲಿದ್ದಾಗ ರನ್ನಿಂಗ್, ಕೊಕ್ಕೊ ಲಾಂಗ್‌ಜಂಪ್, ಹೈಜಂಪ್ ಆಡುತ್ತಿದ್ದೆ. ಈಗಲೂ ಪುಟ್ಟಮಕ್ಕಳು ಕೊಕ್ಕೊ ಆಡ್ತಾ ಇದ್ರೆ, ಓಡಿ ಹೋಗಿ ಆಡ್ಬೇಕು ಅನ್ಸುತ್ತೆ. ಕೆಲವೊಮ್ಮೆ ಅವರೊಂದಿಗೆ ಆಟವನ್ನೂ ಆಡಿದ್ದೇನೆ! ಎಂದು ಮಾತು ಮುಗಿಸಿದರು ಲಲಿತಾ.

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಭೂಮಿಕೆಯಾಗಿರುವ ಈ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.) 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry