ಮನಸ್ಸು ಒಡೆವ ವಿಚಾರ ಸಲ್ಲದು

7

ಮನಸ್ಸು ಒಡೆವ ವಿಚಾರ ಸಲ್ಲದು

Published:
Updated:

ಕಾರವಾರ: ಮಹಾಕವಿ ಪಂಪನ ಹೆಸರಲ್ಲಿ ಬನವಾಸಿ ಕದಂಬೋತ್ಸವದಲ್ಲಿ ಪ್ರದಾನ ಮಾಡುವ ‘ಪಂಪ’ ಪ್ರಶಸ್ತಿಯನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಪ್ರದಾನ ಮಾಡಬೇಕು ಎಂದು 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿರುವ ನಿರ್ಣಯವನ್ನು ಕಸಾಪ ತಾಲ್ಲೂಕು ಘಟಕ ಖಂಡಿಸಿದೆ. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ಸಾಹಿತ್ಯ ಪರಿಷತ್ ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಣಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಸಾಹಿತ್ಯ ಪರಿಷತ್ ಇಂತಹ ಅವಸರದ ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ನಾಡಿನ ಜನರ ಮನಸ್ಸು ಒಡೆಯುವ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಸಾಹಿತಿಗಳು, ಸರಕಾರದ ಪ್ರತಿನಿಧಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಈಗ ಮುರಿಯಬಾರದು. ಸರಕಾರ ಉತ್ತರ ಕರ್ನಾಟಕದವರನ್ನು ಓಲೈಸಲು ಉತ್ತರ ಕನ್ನಡ ಕಡೆಗಣಿಸುವುದು ಸರಿಯಲ್ಲ ಎಂದರು.‘ಆರಂಕುಂಶವಿಟ್ಟೊಡಂ ನೆನೆದೆನ್ನ ಮನಂ ಬನವಾಸಿ ದೇಶಮಂ’ ಎಂದು ಪಂಪ ಹೇಳಿದ್ದಾನೆಯೇ ಹೊರತು ಆರಂಕುಂಶವಿಟ್ಟೊಡಂ ನೆನೆದೆನ್ನ ಮನಂ ಅಣ್ಣಿಗೇರಿ ದೇಶಮಂ’ ಎಂದ ಹೇಳಿಲ್ಲ. ಪಂಪ ಜನ್ಮಸ್ಥಳದ ಬಗ್ಗೆಯೂ ಸಾಕಷ್ಟು ಗೊಂದಲಗಳಿರುವಾಗ ಸಮ್ಮೇಳನ ನಿರ್ಣಯ ತೆಗೆದುಕೊಂಡಿರುವುದು ವಿಷಾದನೀಯ ಎಂದರು.ಈ ನಿರ್ಣಯವನ್ನು ಹಿಂದಕ್ಕೆ ಪಡೆಯದೇ ಇದ್ದಲ್ಲಿ ಕಸಾಪ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಲಿದ್ದೇವೆ ಎಂದ ಅವರು, ಸಮ್ಮೇಳನದಲ್ಲಿ ಇಂತಹ ನಿರ್ಣಯ ತೆಗೆದುಕೊಳ್ಳುವ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ, ಸಮ್ಮೇಳನದ ಕಾರ್ಯಕಾರಿಣಿ ಸದಸ್ಯರಾಗಿದ್ದ ರೋಹಿದಾಸ ನಾಯಕ ಎದ್ದು ನಿಂತು ಖಂಡಿಸಬೇಕಿತ್ತು. ಈ ಘೋಷಣೆ ಹೊರಬಿದ್ದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಿರೋಧ ವ್ಯಕ್ತಪಡಿಸಬೇಕಿತ್ತು ಎಂದರು.ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ಬನವಾಸಿ ದೇಶವನ್ನು ಹಾಡಿಹೊಗಳಿದ ಮಹಾಕವಿ ಪಂಪ  ಮರಿದುಂಬಿಯಾಗಿಯೂ ಬನವಾಸಿಯಲ್ಲಿ ಹುಟ್ಟುವೇ ಎಂದು ಹೇಳಿದ್ದಾನೆ. ಇದು ಪಂಪ ಬನವಾಸಿ ದೇಶವನ್ನು ಎಷ್ಟು ನೆಚ್ಚಿಕೊಂಡಿದ್ದನೆನ್ನುವುದಕ್ಕೆ ಸಾಕ್ಷಿ ಎಂದರು. ಸಾಹಿತ್ಯ ಸಮ್ಮೇಳನದ ನಿರ್ಣಯದ ಬಗ್ಗೆ ಸಚಿವ ಕಾಗೇರಿ ಮೃದು ಧೋರಣೆ ತಳೆದಿದ್ದಾರೆ. ಅದೇರಾಗ ಅದೇ ಹಾಡು ಎನ್ನುವಂತೆ ಮಾಡುತ್ತೇನೆ. ನೋಡುತ್ತೇನೆ ಎನ್ನುವ ದಾಟಿಯಲ್ಲೇ ಮಾತನಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಕಸಾಪದ ಜಗದೀಶ ನಾಯಕ ಮಾತನಾಡಿ, ಸಮ್ಮೇಳನ ಕೈಗೊಂಡ ನಿರ್ಣಯ ಕೈ ಬಿಡದೇ ಇದ್ದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಕೂಡಲೇ ಈ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಕಸಾಪ ಸದಸ್ಯ ಬಾಬು ಶೇಖ್ ಹಾಗೂ ದೀಪಕ ಕುಡಾಳಕರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry