ಭಾನುವಾರ, ಡಿಸೆಂಬರ್ 8, 2019
25 °C

ಮನಸ್ಸು ಗಾಂಧಿ ಬಜಾರು ನೆನಪು ನೂರಾರು

Published:
Updated:
ಮನಸ್ಸು ಗಾಂಧಿ ಬಜಾರು ನೆನಪು ನೂರಾರು

ಸಂಸ್ಕೃತಿ ಮತ್ತು ನಾಗರಿಕತೆಯ ಸಂಘರ್ಷದಲ್ಲಿ ಬೆಂಗಳೂರಿನ ಹಳೆಯ ತಲೆಯೊಂದು ಜರ್ಜರಿತವಾಗಿದೆ. ಅಭಿವೃದ್ಧಿಯ `ಮಂತ್ರವಾದಿ~ಗಳು ಛೂಬಿಟ್ಟ ಜೆಸಿಬಿಯ ದೈತ್ಯ ಹಲ್ಲುಗಳು ಸೋಮವಾರ ತಡರಾತ್ರಿ ಕಟಕಟನೆ ಕಡಿದುಹಾಕಿದ್ದು ಬರಿಯ ಪೆಟ್ಟಿಗೆಗಳನ್ನಲ್ಲ. ಅನಾಮತ್ತು ನೂರಾರು ಊಟದ ತಟ್ಟೆಗಳನ್ನು! ಹೌದು, ಹಳೆಯ ಬೆಂಗಳೂರಿಗೆ- ಅರ್ಥಾತ್- ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕತೆಗೆ, ಇವೆಲ್ಲವುಗಳ ಹಿಂದಿನ ಸೊಗಡಿಗೆ ದಂತಕತೆಯಂತಿದ್ದ ಗಾಂಧಿ ಬಜಾರು ಆಧುನಿಕತೆಯ ಮೋಹಕ್ಕೆ ಕೊಡಲಿಯೇಟು ತಿನ್ನಲಾರಂಭಿಸಿದೆ.

ಗಾಂಧಿ ಬಜಾರು ಎಂದಾಕ್ಷಣ ನೆನಪಿಗೆ ಬರುವುದು ಬುಟ್ಟಿಯೇ ಕಾಣದಂತೆ ಆವರಿಸಿಕೊಂಡ ಹೂಗುಡ್ಡೆಗಳು, ಹಣ್ಣುಹಂಪಲುಗಳ ಸೋಪಾನಗಳು, ಪುಸ್ತಕದ ಅಂಗಡಿಗಳು, ದೋಸೆ, ಕಾಫಿ ... ಇನ್ನೂ ಏನೇನೋ. ಮನೆಯಲ್ಲಿ ದೀಪದ ಬತ್ತಿ ಮುಗಿದಿದೆ, ಮುಂದಿನ ಯುಗಾದಿಗೆ ಈಗಿಂದಲೇ ಹಣತೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು, ಹಣೆಗೆ ಬಳಿಯುವ `ನಾಮ~ದ ಉಂಡೆ ಮುಯುವ, ಮಗಳು ಮೈನರೆತಿದ್ದಾಳೆ, ಅವಳಿಗೆ ಮೊಗ್ಗಿನ ಜಡೆ ಬೇಕು, ಕೇಶಾಲಂಕಾರಕ್ಕೆ ವಿಶೇಷವಾಗಿ ಕಟ್ಟಿದ ಹೂದಂಡೆ ಬೇಕು ಎಂದರೆ, ಸತ್ಯನಾರಾಯಣನಿಗೂ, ಮನೆದೇವರಿಗೋ, ಇನ್ಯಾವುದೋ ದೇವರಿಗೋ ಪೂಜೆಗಾಗಿ ಪುಷ್ಪಾಲಂಕಾರವಾಗಬೇಕು ಎಂದರೆ ನಿಶ್ಚಿಂತೆಯಿಂದ ಗಾಂಧಿ ಬಜಾರಿನತ್ತ ದೌಡಾಯಿಸುತ್ತಿದ್ದ ಮಂದಿಗೆ ಗಾಂಧಿ ಬಜಾರು ಎಂದಾಕ್ಷಣ ನೆನಪುಗಳ ಮೆರವಣಿಗೆ. ಹಳೆಯ ಬೆಂಗಳೂರಿನ ಪಳೆಯುಳಿಕೆಗಳಾಗಿ ಮಲ್ಲೇಶ್ವರ, ವಿಜಯನಗರ, ರಾಜಾಜಿನಗರವನ್ನು ಲೆಕ್ಕಕ್ಕೆ ಇಟ್ಟುಕೊಳ್ಳಬಹುದಾದರೂ ಗಾಂಧಿ ಬಜಾರಿನ ತೂಕವೇ ಬೇರೆ. ಗ್ರಂಧಿಗೆ ಅಂಗಡಿಗಳಿಗೆ ಗಾಂಧಿ ಬಜಾರು ಹಿರಿಯಣ್ಣ. ಅಮೆರಿಕದಲ್ಲಿ ಮಗಳ ಬಾಣಂತನಕ್ಕೆ ಹೊರಟ ತಾಯಿ ಗಾಂಧಿ ಬಜಾರಿಗೆ ಹೊರಟರೆಂದರೆ ಬಾಣಂತಿ ಮತ್ತು ಮಗುವಿನ ಆರೈಕೆಗೆ ಬೇಕುಬೇಕಾದ `ಎ ಟು ಝಡ್~ ಔಷಧಿಗಳನ್ನು ತಂದರೆಂದೇ ಅರ್ಥ. ಅಷ್ಟು ದೂರ ಹೋದ ಮೇಲೆ ವಿದ್ಯಾರ್ಥಿ ಭವನದ ಕಾಫಿ, ದೋಸೆ ಸವಿಯದೆ ಬಂದರೆಂದರೆ ಗಾಂಧಿ ಬಜಾರು ರೌಂಡು ಅಪೂರ್ಣವೆಂದೇ ಲೆಕ್ಕ. ನೂರಾರು ರೂಪಾಯಿ ಖರ್ಚು ಮಾಡಿ ಇಲ್ಲಿಗೆ ಬರೋ ಹಿರಿತಲೆಗಳೂ, ಯುವಜನರೂ ಸಿಲಿಕಾನ್ ಸಿಟಿಯಲ್ಲಿವೆ. ಹಬ್ಬ ಹರಿದಿನದ ಖರೀದಿಗಷ್ಟೇ ಅಲ್ಲ, ಹಾಗೇ ಸುಮ್ಮನೆ ಸುತ್ತಾಡಿ ಬರಲಿಕ್ಕಾದರೂ ಅವರ ಆಯ್ಕೆ ಗಾಂಧಿ ಬಜಾರು. ಸುತ್ತಮುತ್ತ ಗಾಜಿನ ಕಟ್ಟಡ. ಅದರಾಚೆ ಒಂದು ಹಳೆಯ ಸವಕಲು ಕಟ್ಟಡ. ಅದೇ ಅಲ್ಲಿನ ಲ್ಯಾಂಡ್‌ಮಾರ್ಕ್!

ಜಯನಗರ ನಾಲ್ಕನೇ ಬ್ಲಾಕ್, ಕಮರ್ಷಿಯಲ್ ಸ್ಟ್ರೀಟ್, ಮೆಜೆಸ್ಟಿಕ್ ಪ್ರದೇಶಗಳು ಶಾಪಿಂಗ್ ಹುಚ್ಚರ ನೆಚ್ಚಿನ ತಾಣಗಳು ಎಂಬುದು ಕೆಲವರ ಅಭಿಪ್ರಾಯ. ಆದರೆ ಮಾಲ್‌ಗಳ ಮಾರಾಟದ ಭರಾಟೆಯಿಂದ ದೂರವಿರುವ ಗಾಂಧಿ ಬಜಾರಿನಲ್ಲಿ ಗಾಂಧಿರೇಟು ಇಲ್ಲದಿದ್ದರೂ ಅದೊಂದು ಪಿಕ್‌ನಿಕ್ ತಾಣವಾಗಿಯೂ, ಶಾಪಿಂಗ್ ತಾಣವಾಗಿಯೂ, ಪ್ರೇಮಿಗಳ ನೆಚ್ಚಿನ ಅಡ್ಡಾ ಆಗಿತ್ತು.

ಇಲ್ಲಿ ಹೂ, ಹಣ್ಣು ಮಾರುತ್ತಿದ್ದ ವ್ಯಾಪಾರಿಗಳಾದರೂ ಆಸುಪಾಸಿನವರೇ? ಬಿಲ್‌ಕುಲ್ ಅಲ್ಲ. ಕನಕಪುರ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ... ಹೀಗೆ ಬೆಂಗಳೂರಿನ ನಾಲ್ದೆಸೆಗಳಿಂದಲೂ ಹೂವಿನ ವ್ಯಾಪಾರಿಗಳು ಇಲ್ಲಿ ನೆರೆಯುತ್ತಿದ್ದರು. ಪುಟ್ಟ ಪುಟ್ಟ ಪೆಟ್ಟಿಗೆಗಳೇ ಅವರ ಅಂಗಡಿ.

ನಿನ್ನೆ ನಿನ್ನೆಗೆ/ ಇಂದು ಇಂದಿಗೆ/

ಇರಲು ನಾಳೆಯು ಚಿಂತೆ ಏತಕೆ

ಎಂಬಂತೆ ಇಂದಿನ ಸಾಲ ಇಂದಿನ ಸರಕಿಗೆ, ಇಂದಿನ ಆದಾಯ ಇಂದಿನ ಸಾಲಕ್ಕೆ ಎಂದು ಬದುಕಿದವರು ಈ ವ್ಯಾಪಾರಿಗಳಲ್ಲಿ ಬಹುತೇಕರು. ನಾಳಿನ ಸರಕಿಗೆ, ಸಾಲಕ್ಕೆ ಎಂದು ಎತ್ತಿಟ್ಟದ್ದನ್ನು, ಬಚ್ಚಿಟ್ಟದ್ದನ್ನೂ ಜೆಸಿಬಿ ಬಾಚಿಕೊಂಡಿದೆ. ಇದು ಬೆವರು ಮತ್ತು ದೌಲತ್ತಿನ ನಡುವಿನ ಜಟಾಪಟಿ.

`ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 142ರ ಸುಂಕೇನಹಳ್ಳಿ ವ್ಯಾಪ್ತಿಯ ಗಾಂಧಿಬಜಾರ್ ಮುಖ್ಯರಸ್ತೆ ಟ್ಯಾಗೂರ್ ಸರ್ಕಲ್‌ನಿಂದ ಡಿವಿಜಿ ರಸ್ತೆಯವರೆಗೆ ಸುಮಾರು 500 ಮೀ. ರಸ್ತೆಯ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗದ ಮೇಲೆ ಅತೀವ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದು ಇದರಿಂದ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅನೇಕ ಸಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಗಂಟೆಗಟ್ಟಲೆ ಕಾಯಬೇಕಾದಂತಹ ಪ್ರಸಂಗ ಉಂಟಾಗುತ್ತಿತ್ತು. ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ಗಾಂಧಿ ಬಜಾರ್ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಈ ತೆರವು ಕಾರ್ಯಾಚರಣೆಯಿಂದ ಗಾಂಧಿ ಬಜಾರ್ ಸುತ್ತಮುತ್ತಲಿನ ವಾಹನ ನಿಲುಗಡೆಯ ತೊಂದರೆ ಕಡಿಮೆಯಾಗಿರುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸುಗಮವಾಗಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ~ ಎಂದು ಬಿಬಿಎಂಪಿ ಹೇಳಿಕೊಂಡಿದೆ. `ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ~ ಅಂಗಡಿಗಳ ತೆರವು ಮಾಡಿರುವುದರಿಂದ `ವಾಹನ ನಿಲುಗಡೆಯ ತೊಂದರೆ~ ಕಡಿಮೆಯಾಗಿರುವುದಾಗಿ ಅಪ್ರಿಯ ಸತ್ಯವೊಂದನ್ನೂ ಇಲ್ಲಿ ಬಾಯಿಬಿಟ್ಟಿರುವುದು ಇನ್ನೊಂದು ತಮಾಷೆ. ಅಂದರೆ ಈ ಒತ್ತುವರಿ ಕಾರ್ಯಾಚರಣೆ ನಡೆದಿರುವುದು ಸುಗಮ ವಾಹನ/ಜನ ಸಂಚಾರಕ್ಕಾಗಿ ಅಲ್ಲ; ವಾಹನ ನಿಲುಗಡೆಗೆ ಅನುವು ಮಾಡಿಕೊಡಲು!

ನಡುರಾತ್ರಿಯಲ್ಲಿ ಕಡತಗಳು ಮಾತನಾಡುವುದು, ಸ್ಥಳಾಂತರಗೊಳ್ಳುವುದು, ಬೇಕು-ಬೇಡದ ಸಹಿಗಳು ಗೀಚಿಗೆ ಸಾಕ್ಷಿಯಾಗುವುದು, ಅಲ್ಲಿದ್ದವರು ಇಲ್ಲಿಗೆ ಇಲ್ಲಿಂದ ಇನ್ನೆಲ್ಲಿಗೋ ಎತ್ತಂಗಡಿಯಾಗುವುದು ಬಿಬಿಎಂಪಿಗೇನೂ ಹೊಸತಲ್ಲ ಬಿಡಿ. ಆದರೆ ನಾಳಿನ ಕೂಳಿಗಾಗಿ ತೊಳೆದಿಟ್ಟಿದ್ದ ಊಟದ ತಟ್ಟೆಯಲ್ಲಿ ಮಣ್ಣು ತುಂಬಿದ್ದು ಮಾತ್ರ ಅಮಾನವೀಯವೇ ಅಲ್ಲವೇ?

ಹಳತು ಹೊನ್ನು ಅಂತನ್ನೋ ಮಾತು ಬಿಸಾಕು ದೂರ ಅನ್ನುತ್ತಾರೆ `ಅಭಿವೃದ್ಧಿಶೀಲ~ ಬೆಂಗಳೂರಿನ ನಕಾಶೆ ಹಿಡಿದು ನಿಂತವರು. ನಿತ್ಯೋತ್ಸವ ಕವಿ ನಿಸಾರ್ ಅವರು `ಗಾಂಧಿ ಬಜಾರಿನ ಸಂಜೆ~ ಅಂತ ಕಾವ್ಯಲಹರಿಯನ್ನೇ ಹರಿಸಿದರು.

`ಪೇಟೆ ಬದುಕಿನ ದ್ರೌಪದಿಯ ಘೇರಾಯಿಸಿದ ದುಶ್ಶಾಸನ/

ಫ್ಯಾಷನ್ನುಗಳ ಮೂಕ ಮಾಪನ...~ 

ಎಂಬ ಅವರ ಸಾಲು ಇಂದು ನಿಜವಾಗಿದೆ. ಅಭಿವೃದ್ಧಿ ಒಂದು ಫ್ಯಾಷನ್ನು. ಪರಶುರಾಮ ತನ್ನ ಹಾದಿಗುಂಟ ಸಿಕ್ಕ ಕ್ಷತ್ರಿಯರ ತಲೆ ಸವರಿಹಾಕಿ ದಿಗ್ವಿಜಯ ಸಾಧಿಸಿದಂತೆ ನವನಾಗರಿಕತೆಯೆಂಬ ವ್ಯಾಮೋಹಕ್ಕೆ ಸಂಸ್ಕೃತಿ, ಸಂಸ್ಕಾರ, ಮಾನವೀಯತೆ, ಬದುಕು ಎಲ್ಲವೂ ಬಲಿಪಶುಗಳಾಗುತ್ತಿವೆ. ಇಷ್ಟಕ್ಕೂ ಗಾಂಧಿ ಬಜಾರು ಇರುವುದೇ ಅಂಗೈಯಷ್ಟಗಲ. ಅಂಗೈ ಸಣ್ಣದಾಯಿತು ಅಂತ ಯಾರೋ ಹಲುಬಿದರೆಂದು ಬೆರಳುಗಳನ್ನೇ ತುಂಡರಿಸಿದ ಹಾಗಾಯ್ತು!

ಅಂತೂ ಇಂತೂ ವಾಹನ ನಿಲುಗಡೆಗಾಗಿ ಪೆಟ್ಟಿಗೆ ಅಂಗಡಿಗಳು ತೆರವಾಗಿವೆ. ಆದರೆ ಈ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು? ಶಂಕುಸ್ಥಾಪನೆ ಭಾಗ್ಯವನ್ನಷ್ಟೇ ಕಂಡು ನಿದ್ರಿಸುತ್ತಿರುವ ಮಾರುಕಟ್ಟೆ ಕಟ್ಟಡ ನಿರ್ಮಾಣವಾದರೂ ಮುಗಿದಿದ್ದರೆ ಈ ಮಂದಿ ಅಲ್ಲಿಗೆ ಹೊಸ ಪೆಟ್ಟಿಗೆ ಹೊತ್ತೊಯ್ಯುತ್ತಿದ್ದರೇನೊ? ಈಗ?

ಜೀವಪರ ಚಿಂತನೆಯಿಲ್ಲದ ನಮ್ಮ ಅಭಿವೃದ್ಧಿಯ ಪಥಕ್ಕೆ ಇನ್ನೆಷ್ಟು ಬದುಕುಗಳ ಮಾರಣಹೋಮ ನಡೆಯಬೇಕೋ? ಕಾಲವೇ ಉತ್ತರ ಕೊಡಬೇಕು.

ಪ್ರತಿಕ್ರಿಯಿಸಿ (+)