ಮನಸ್ಸು ಪ್ರಶಾಂತವಾಗಿರಲಿ

7
ವಿದ್ಯಾರ್ಥಿ ಮೇಳದಲ್ಲಿ ಡಾ. ಸಿ.ಆರ್. ಚಂದ್ರಶೇಖರ ಅಭಿಮತ

ಮನಸ್ಸು ಪ್ರಶಾಂತವಾಗಿರಲಿ

Published:
Updated:
ಮನಸ್ಸು ಪ್ರಶಾಂತವಾಗಿರಲಿ

 ಭಾಲ್ಕಿ: ಮಾನವನ ವ್ಯಕ್ತಿತ್ವ ವಿಕಸನಕ್ಕಾಗಿ ಮನಸ್ಸನ್ನು ಪ್ರಕ್ಷುಬ್ದವಾಗಿಡದೇ ಸದಾ ಪ್ರಶಾಂತವಾಗಿಡಬೇಕು. ಇದಕ್ಕಾಗಿ ಯೋಗ, ಧ್ಯಾನ, ಓದು, ಉತ್ತಮ ಆಹಾರ ಸೇವನೆ ಮತ್ತು ಪರಿಶ್ರಮದ ಅಗತ್ಯವಿದೆ ಎಂದು ಖ್ಯಾತ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ ನುಡಿದರು.

ಭಾಲ್ಕಿಯ ಚನ್ನಬಸವ ಆಶ್ರಮದಲ್ಲಿ ಶನಿವಾರ ಲಿಂ.ಡಾ. ಚನ್ನಬಸವ ಪಟ್ಟದ್ದೇವರ 123ನೇ ಜಯಂತ್ಯುತ್ಸವ ನಿಮಿತ್ತ ನಡೆದ ಮಕ್ಕಳ ಮೇಳ ಹಾಗೂ ವ್ಯಕ್ತಿತ್ವ ವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈಗ ಪರೀಕ್ಷಾ ಸಮಯ ಆರಂಭವಾಗಿದ್ದರಿಂದ ವಿದ್ಯಾರ್ಥಿಗಳು ಭಯಾತಂಕಕ್ಕೆ ಒಳಗಾಗದೇ ರಿಲ್ಯಾಕ್ಸ್ ಆಗಿರಲು ಪ್ರಯತ್ನಿಸಬೇಕು. ಓದಿದ್ದನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೇಲೆ ಸ್ವಲ್ಪ ಹೊತ್ತು ಪುನರ್‌ಮನನ ಮಾಡಿಕೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.ಪಾಲಕರೂ ಸಹ ತಮ್ಮ ಮಕ್ಕಳನ್ನು ಇತರರೊಡನೆ ಹೋಲಿಕೆ ಮಾಡಿ ಹಿಯಾಳಿಸಬಾರದು. ಇದರಿಂದ ಮಕ್ಕಳಲ್ಲಿ ಖಿನ್ನತೆ ಮತ್ತು ಕೀಳರಿಮೆ ಉಂಟಾಗುತ್ತದೆ ಎಂದು ತಿಳಿಸಿದರು. ಪರಸ್ಪರ ಪ್ರೀತಿ ವಿಶ್ವಾಸ ಬೆಳೆಯಬೇಕಾದರೆ ಅನಗತ್ಯ ಭಯವನ್ನು ಬಿಡಬೇಕು.ಮೌಢ್ಯತೆಗೆ ಒಳಗಾಗದೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮನ್ನು ಗೌರವಿಸಿಕೊಂಡು ಸ್ವಾಭೀಮಾನದಿಂದ ಇರುವದನ್ನು ಕಲಿಯಬೇಕು. ಕಷ್ಟ,ನಷ್ಟ, ಬೇಸರದ ಘಟನೆಗಳನ್ನು ವಿಶ್ವಾಸದಿಂದ ಪಾಲಕರ ಮುಂದೆ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ ಎಂದರು.ಶೇ.80ರಷ್ಟು ಕಾಯಿಲೆಗಳಿಗೆ ಪ್ರಕ್ಷುಬ್ದ ಮನಸ್ಸೇ ಕಾರಣ. ಧರ್ಮದ ಹೆಸರಿನಲ್ಲಿ ಮಾಧ್ಯಮಗಳು ಬಿತ್ತರಿಸುವ ಮೌಢ್ಯಗಳಿಗೆ ಮೊರೆ ಹೋಗಬಾರದು. ನಿತ್ಯವೂ ನಿರ್ಮಲ ಮನಸ್ಸಿನಿಂದ ಪ್ರಾರ್ಥನೆ ಮಾಡಿ. ಇಂದಿನ ಕಷ್ಟ ಶಾಶ್ವತವಲ್ಲ. ಅದು ತಾತ್ಕಾಲಿಕ. ಮುಂದೆ ಖಂಡಿತ ಒಳ್ಳೆಯದಾಗುತ್ತದೆ ಎಂಬ ಅಚಲ ವಿಶ್ವಾಸದಿಂದ ಮುಂದುವರೆದಲ್ಲಿ ಜಯ ಖಂಡಿತ ನಮ್ಮದಾಗುತ್ತದೆ. ಸಂತೋಷವಾಗಿರಲು ಜಾಸ್ತಿ ಹಣದ ಅವಶ್ಯಕತೆ ಇಲ್ಲ. ಪ್ರಸನ್ನ, ಪ್ರಶಾಂತ ಮನಸ್ಸು ಕಾಯ್ದುಕೊಳ್ಳುವದು ಅವಶ್ಯಕ ಎಂದು ಸಿ.ಆರ್. ಚಂದ್ರಶೇಖರ ವಿದ್ಯಾರ್ಥಿ ಸಮುದಾಯಕ್ಕೆ ವಿಶ್ವಾಸ ತುಂಬಿದರು.ತಾಲೂಕಿನ ನೂರಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ನೆರೆದಿದ್ದರು. ಡಾ. ಬಸವಲಿಂಗ ಪಟ್ಟದ್ದೇವರು, ಸಿದ್ಧಲಿಂಗೇಶ್ವರ ಸ್ವಾಮೀಜಿ, ಡಾ. ಜಿ.ಬಿ. ವಿಸಾಜಿ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ರಾಜಶೇಖರ ಅಷ್ಟೂರೆ ಮುಂತಾದವರು ವೇದಿಕೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry