ಮನುಕುಲದ ಉತ್ಥಾನವೆ ಮೂಲ ಉದ್ದೇಶ

7

ಮನುಕುಲದ ಉತ್ಥಾನವೆ ಮೂಲ ಉದ್ದೇಶ

Published:
Updated:

ಗುಲ್ಬರ್ಗ: ಉನ್ನತ ಮೌಲ್ಯಗಳ ಪ್ರತಿಪಾದನೆ, ಒಂದು ದಿನವೂ ಕುಂದದ ಸೇವಾ ಉತ್ಸಾಹ,  ಜಗತ್ತಿನಾದ್ಯಂತ ವ್ಯಾಪಿಸಿದ ರಾಜಯೋಗ ಕೇಂದ್ರಗಳ ಸ್ಥಾಪನೆ, ವ್ಯವಸ್ಥಿತ ಆಡಳಿತ, ಅವುಗಳನ್ನು ನಿರ್ವಹಿಸುವ ಸಹೋದರ- ಸಹೋದರಿಯರಿಗೆ ತರಬೇತಿ... ಒಂದೇ; ಎರಡೇ!87 ವರ್ಷ ವಯಸ್ಸಿನ ರಾಜಯೋಗಿನಿ ರತನ್ ಮೋಹಿನಿ ದಾದೀಜಿ ಅವರ ವ್ಯಕ್ತಿತ್ವದ ವೈಶಿಷ್ಟ್ಯವಿದು. 12ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಸೇವಾ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡ ದಾದೀಜಿ, ಕಳೆದ 75 ವರ್ಷಗಳಿಂದಲೂ ಮಾನವಕುಲಕ್ಕೆ ಅಧ್ಯಾತ್ಮದ ಜ್ಞಾನವನು ಉಣಬಡಿಸುತ್ತಿದ್ದಾರೆ.ಮೌಂಟ್ ಅಬುವಿನ ಬ್ರಹ್ಮಕುಮಾರಿ ಕೇಂದ್ರದ ಜಂಟಿ ಮುಖ್ಯಸ್ಥೆಯಾಗಿರುವ ದಾದೀಜಿ, ಇಂದು (ಫೆ. 13) ಚಂದ್ರಕಾಂತ ಪಾಟೀಲ ಶಾಲೆ ಆವರಣದಲ್ಲಿ ನಡೆಯಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಗುಲ್ಬರ್ಗಕ್ಕೆ ಆಗಮಿಸಿದ್ದಾರೆ. `ಪ್ರಜಾವಾಣಿ~ ಜತೆ ಅವರು ಹಂಚಿಕೊಂಡ ಕೆಲವು ಅನಿಸಿಕೆಗಳು ಇಲ್ಲಿವೆ:ಪ್ರಜಾವಾಣಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾಪನೆ ಉದ್ದೇಶ..?

ದಾದೀಜಿ: ಈ ವಿಶ್ವವಿದ್ಯಾಲಯ ಒಂದು ಅಧ್ಯಾತ್ಮಿಕ ಜ್ಞಾನ ನೀಡುವ ಸಂಸ್ಥೆಯಾಗಿದ್ದು, ಇದು ಯಾವುದೇ ಧರ್ಮ, ಭಾಷೆ, ದೇಶ, ವರ್ಣ ಅಥವಾ ಆಚರಣೆಗಳ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಮನಕುಲದ ಉತ್ಥಾನವೇ ಮೂಲ ಉದ್ದೇಶ. ಈ ಸಂಸ್ಥೆ ಯಾವುದೇ ವ್ಯಕ್ತಿಯಿಂದ ಸ್ಥಾಪನೆಗೊಂಡಿಲ್ಲ. ಪರಮಪಿತ ಪರಮಾತ್ಮನ ಮಹಾವಾಕ್ಯಗಳೇ ಸಂಸ್ಥೆಯ ಸ್ಥಾಪನೆಗೆ ಕಾರಣ. ಇಂದಿನ ಸಿಂಧ ಕರಾಚಿಯ ವಜ್ರದ ವ್ಯಾಪಾರಿ ಲೇಖರಾಜ ಅವರು ಸ್ಥಾಪನೆಗೆ ನಿಮಿತ್ಯರಾದರು, ಅಷ್ಟೇ.ಪ್ರ.ವಾ: ಆರಂಭದಲ್ಲಿ ಪ್ರತಿಕ್ರಿಯೆ ಹೇಗಿತ್ತು?


ದಾದೀಜಿ: ಸಂಸ್ಥೆ ಪ್ರಾರಂಭಗೊಂಡಿದ್ದು 1936ರಲ್ಲಿ. ಪ್ರಾರಂಭದಲ್ಲಿ ಕೆಲವು ಸಾಂಪ್ರದಾಯಿಕ ವ್ಯಕ್ತಿಗಳಿಂದ ವಿರೋಧದ ದನಿ ಕೇಳಿಬಂತು. ಆದರೆ ಬರುಬರುತ್ತ ಸುಮಾರು 400 ಕುಟುಂಬಗಳು ತಮ್ಮನ್ನು ಸಂಸ್ಥೆಗೆ ಸಮರ್ಪಿಸಿಕೊಂಡವು.ಪ್ರ.ವಾ: ಸ್ಥಾಪನೆಗೊಂಡ 75 ವರ್ಷಗಳ ಬಳಿಕ, ಅದರ ಉದ್ದೇಶ ಎಷ್ಟರ ಮಟ್ಟಿಗೆ ಸಫಲವಾಗಿದೆ?

ದಾದೀಜಿ: 1936ರಲ್ಲಿ `ಓಂ ಮಂಡಳಿ~ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಚಿಕ್ಕ ಸತ್ಸಂಗ ಇಂದು ವಿಶ್ವದಾದ್ಯಂತ ಬೆಳೆದಿರುವುದೇ ಇದರ ಸಫಲತೆಯನ್ನು ಸಾರಿ  ಸಾರಿ ಹೇಳುತ್ತಿದೆ. ಜಗತ್ತಿನ 140 ರಾಷ್ಟ್ರಗಳಲ್ಲಿ (ಇವುಗಳಲ್ಲಿ ರಷ್ಯಾ ಹಾಗೂ ಅರಬ್ ದೇಶಗಳೂ ಸೇರಿವೆ) 9,000ಕ್ಕೂ ಹೆಚ್ಚಿನ ರಾಜಯೋಗ ಶಿಕ್ಷಣ ಕೇಂದ್ರಗಳ ಮೂಲಕ ಸಂಸ್ಥೆಯಿಂದ 10 ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಸುಖ, ಶಾಂತಿ, ಸಮೃದ್ಧಿಯ ಜೀವನವನ್ನು ನಡೆಸುತ್ತಿದ್ದಾರೆ.ಪ್ರ.ವಾ: ಉಳಿದ ಆಧ್ಯಾತ್ಮಿಕ ಸಂಸ್ಥೆಗಳಿಗಿಂತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹೇಗೆ ಭಿನ್ನ?

ದಾದೀಜಿ: ನಮ್ಮ ಸಂಸ್ಥೆ ಯಾವುದೇ ಧರ್ಮ ಆಚರಣೆಯನ್ನು ಬೋಧಿಸುವುದಿಲ್ಲ. ಭಾರತದ ಪ್ರಾಚೀನ ರಾಜಯೋಗ ಹಾಗೂ ಅಧ್ಯಾತ್ಮಿಕ ಜ್ಞಾನದ ಮೂಲಕ ಮನುಷ್ಯರನ್ನು ಉತ್ತಮ ಮನುಷ್ಯನನ್ನಾಗಿ ಪರಿವರ್ತಿಸುತ್ತದೆ.ಪ್ರ.ವಾ: ನೂರಾರು ದೇಶಗಳಲ್ಲಿ ನೂರಾರು ಕಾರ್ಯಕ್ರಮಗಳು! ಇದರ ಜತೆಗೆ ಸಂಸ್ಥೆಯನ್ನು ನಿರ್ವಹಿಸುವ ಬಗೆ ಹೇಗೆ?

ದಾದೀಜಿ: ಇಂದು ನಮ್ಮ ಸಂಸ್ಥೆಯ ಸಂಪೂರ್ಣ ನಿರ್ವಹಣೆಗೆ ನಿಮಿತ್ಯರಾದ 96 ವರುಷದ ದಾದಿ ಜಾನಕಿಜಿ ಅವರು ಪರಮಪಿತ ಪರಮಾತ್ಮನಿಂದ ನಿಯೋಜಿಸಲ್ಪಟ್ಟವರು. ಸಂಸ್ಥೆಯ ಆಡಳಿತ ಹೊಣೆಗಾರಿಕೆ ಹೊತ್ತು ಎಲ್ಲಾ ಅಣ್ಣ-ಅಕ್ಕಂದಿರು `ಎಲ್ಲವೂ ಪರಮಾತ್ಮನದು~ ಎಂಬ ಭಾವನೆಯಿಂದ ಕಾರ್ಯ ನಿರ್ವಹಿಸುತ್ತಾರೆ.ಪ್ರ.ವಾ: ಅಮೃತ ಮಹೋತ್ಸವದ ಸಂದರ್ಭದಲ್ಲಿ ಜನತೆಗೆ ನೀಡುವ ಸಂದೇಶ..?

ದಾದೀಜಿ: ಜಗಕ್ಕೊಬ್ಬ ದೇವರು- ನಮ್ಮದು ವಿಶ್ವ ಕುಟುಂಬ. ನಾವೆಲ್ಲರೂ ಪರಮಪಿತನ ಮುದ್ದಿನ ಮಕ್ಕಳು, ಪರಸ್ಪರ ಪ್ರೀತಿ-ಸಹಕಾರದಿಂದ ಬಾಳಬೇಕು. ಈ ವಸುಂಧರೆ ಮೇಲೆ ಸ್ವರ್ಗ ಸಮಾನ ಸುಖಮಯ ಸಂಸಾರ ನಿರ್ಮಿಸಬೇಕು ಎಂಬುದು ನಮ್ಮ ಸಂದೇಶ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry