ಬುಧವಾರ, ಏಪ್ರಿಲ್ 21, 2021
31 °C

ಮನುಷ್ಯತ್ವ ಮೂಡಿಸಿದ ಆ ಕ್ಷಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದು ಮಧ್ಯಾಹ್ನದ ಇಳಿಹೊತ್ತು. ನಾವೆಲ್ಲ 40 ಮಹಡಿಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಇಡೀ ಕಟ್ಟಡ ನಡುಗಲಾರಂಭಿಸಿತು.ಭೂಕಂಪ ಪೀಡಿತ ಟೋಕಿಯೊದಲ್ಲಿ ಐಟಿ ಉದ್ಯೋಗಿಯಾಗಿರುವ ಚೆನ್ನೈ ಮೂಲದ ಎಲ್. ಪ್ರಕಾಶ್ (ಬೆಂಗಳೂರಿನಲ್ಲೂ ಕೆಲಕಾಲ ಉದ್ಯೋಗದಲ್ಲಿದ್ದರು) ಅವರು ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭಗಳನ್ನು ಬಿಚ್ಚಿಟ್ಟಿದ್ದಾರೆ.ಈ ದೇಶ ದುರಂತವನ್ನು ಎದುರಿಸಲು ಅಗತ್ಯ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ ಎಂದೆನಿಸಿತು. ಭೂಕಂಪದ ನಂತರ ಮೊದಲ ಬಾರಿಗೆ ಇಲ್ಲಿನ ಅಧಿಕಾರಿಗಳು ಮಾನವೀಯರೂ ಆಗಿದ್ದಾರೆಂಬುದು ತಿಳಿಯಿತು. ಕರ್ತವ್ಯದಲ್ಲಿ ಸಾಮಾನ್ಯವಾಗಿ ದಕ್ಷರಾಗಿರುವ ಅವರು ತಮ್ಮ ಮಾನವೀಯ ಮುಖವನ್ನು ಇಲ್ಲಿಯವರೆಗೂ ತೋರಿಸಿರಲಿಲ್ಲ.ನನ್ನ ಸಹೋದ್ಯೋಗಿಯಾಗಿದ್ದ ಆ ದೇಶದ ಮಹಿಳೆಯೊಬ್ಬಳು ಹಲವು ತಿಂಗಳಿಂದಲೂ ಕಾಟಾಚಾರಕ್ಕೆ (ಜಪಾನಿನಲ್ಲಿ) ಹೇಳುತ್ತಿದ್ದ ‘ಗುಡ್ ಮಾರ್ನಿಂಗ್’ ಮತ್ತು ‘ಸೀ ಯು’ ಎಂಬ ಶಬ್ದದ ಹೊರತಾಗಿ ಬೇರೆ ಮಾತಾಡಿದ್ದು ಕಂಡಿರಲಿಲ್ಲ.ಆದರೆ ಅವಳಿಗೂ ಮಾನವೀಯತೆ ಇದೆಯೆಂದು ಇಂದು ಗೊತ್ತಾಯಿತು. ಭೂಕಂಪದ ತೀವ್ರತೆ ಹೆಚ್ಚುತ್ತಿದ್ದಂತೆ ಆಕೆ ನನ್ನೆಡೆ ತಿರುಗಿ ‘ನನಗೆ ವಾಂತಿ ಬಂದಂತೆ ಆಗುತ್ತಿದೆ. ಬಹಳ ಸಂಕಟವೆನಿಸುತ್ತಿದೆ. ನಿಮಗೂ ಹೀಗೆಯೇ ಅನಿಸುತ್ತಿದೆಯೇ?’ ಎಂದು ಕೇಳಿದಳು.ನಾನು ಮತ್ತು ಅವಳು ಬದುಕಲು ಹೋರಾಡುತ್ತಿದ್ದೆವು. ಇನ್ನೇನು ನಮ್ಮ ಕಚೇರಿ ಕಟ್ಟಡ ಕುಸಿದು ಬೀಳುತ್ತಿದೆ ಎನ್ನುವಂತೆ ಭಾಸವಾಗುತ್ತಿತ್ತು. ಈ ಭಯದ ಮಧ್ಯೆಯೂ ನನ್ನೊಂದಿಗೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದರಿಂದ ಸಮಾಧಾನ ಮೂಡಿತು.ಆಗ ನನಗೆ ಅವಳು ದಕ್ಷ ಕೆಲಸಗಾರ್ತಿ ಎನ್ನುವುದಕ್ಕಿಂತ ಅವಳ ಮಾನವೀಯ ಮುಖ ಹೆಚ್ಚು ಅರ್ಥಪೂರ್ಣವೆನಿಸಿತು.ಈ ಘಟನೆಯ ನಂತರ ಇಡೀ ಟೋಕಿಯೊ ಮಲಗಿದಂತೆ ಭಾಸವಾಗುತ್ತಿದೆ. ಬರುವ ಸೋಮವಾರ ಎಲ್ಲ ಸರಿಹೋಗಬಹುದು ಎಂಬ ಆಶಾವಾದ ಹೊಂದಿದ್ದೇವೆ. ಆದರೆ ವಾಣಿಜ್ಯ ಚಟುವಟಿಕೆ ಈ ನತದೃಷ್ಟ ನಗರಿಯಲ್ಲಿ ಮತ್ತೆ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ವಿಶ್ವಾಸವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.