ಮನುಷ್ಯನು ಹಂದಿಯಾದ ಬಗೆ...

7
ಚಿತ್ರಪಟ

ಮನುಷ್ಯನು ಹಂದಿಯಾದ ಬಗೆ...

Published:
Updated:

‘ಎಲ್ಲರೂ ಸಮಾನರು, ಕೆಲವರು ಕತ್ತೆಗಳಿಗೆ– ಇನ್ನು ಕೆಲವರು ಕುದುರೆಗಳಿಗೆ’ ಎನ್ನುವುದೊಂದು ಮಾತು. ಪ್ರಜೆಗಳ ಪ್ರಭುತ್ವದಲ್ಲಿ ಎಲ್ಲರಿಗೂ ಸಮಾನತೆ ಇದ್ದರೂ ಜಾತಿ ಮತ್ತು ಶ್ರೀಮಂತಿಕೆಯ ಅಧಿಕಾರ ಹೊಂದಿರುವವರು ಹೆಚ್ಚು ಎತ್ತರದಲ್ಲಿ ಇರುತ್ತಾರೆ. ಹಾಗೆಯೇ ಭಾರತದ ಜಾತಿವ್ಯವಸ್ಥೆಯೂ.

ನೂರಾರು ಸಮಾಜ ಸುಧಾರಕರು ಬಂದು ಹೋದರೂ, ಬಿಗಿ ಕಾನೂನುಗಳನ್ನು ಜಾರಿಗೊಳಿಸಿದರೂ ನಮ್ಮ ಜಾತಿವ್ಯವಸ್ಥೆ ತನ್ನ ಅಸಮಾನತೆಯ ಕಬಂಧಬಾಹುಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಹೊಸ ಸ್ವರೂಪದಲ್ಲಿ ಗಟ್ಟಿಯಾಗಿದೆ. ಇಲ್ಲಿ ಎಲ್ಲರೂ ಸಮಾನರು– ಕೆಲವರು ಮನುಷ್ಯರಿಗೆ, ಇನ್ನು ಕೆಲವರು ಹಂದಿಗಳಿಗೆ!ಈ ಸಲದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರೇಕ್ಷಕರಿಗೆ ಶಾಕ್ ನೀಡಿದ ಮರಾಠಿ ಚಿತ್ರವೆಂದರೆ ಫಂದ್ರಿ. ಹಳ್ಳಿಗಳಲ್ಲಿ ಘನೀಭೂತವಾಗಿರುವ ನಮ್ಮ ಜಾತಿ ವ್ಯವಸ್ಥೆಯನ್ನು ಎಲ್ಲ ಜಾತಿಯ ಜನರೂ ಯಾವ ಅಳುಕೂ ಇಲ್ಲದೆ ಎಷ್ಟೊಂದು ಸಹಜವಾಗಿ ಅಪ್ಪಿಕೊಂಡಿದ್ದಾರೆ ಎನ್ನುವುದನ್ನು ಮನಕಲಕುವಂತೆ ಈ ಸಿನಿಮಾ ಚಿತ್ರಿಸಿದೆ. ಇಷ್ಟೇ ಆಗಿದ್ದರೆ ಈ ಚಿತ್ರ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತೇನೋ.

ಆದರೆ ಜಾತಿ ವ್ಯವಸ್ಥೆಯ ಕೊಳಕನ್ನು ಹೇಳುತ್ತಿರುವಂತೆಯೇ, ತರುಣನೊಬ್ಬನ ಪ್ರೇಮದ ತಾಕಲಾಟಗಳನ್ನು ಅತ್ಯಂತ ಮನೋಜ್ಞವಾಗಿ, ಕಾವ್ಯಾತ್ಮಕವಾಗಿ ಕಟ್ಟಿಕೊಡುವುದು ಚಿತ್ರದ ವಿಶೇಷ. ಯಾವ ಉದ್ವೇಗ, ಆಕ್ರೋಶವೂ ಇಲ್ಲದೆ ವ್ಯವಸ್ಥೆಯ ಕೊಳಕುಗಳನ್ನು ನಿರ್ಲಿಪ್ತತೆಯಿಂದ ಪ್ರೇಕ್ಷಕರ ಮುಂದಿಡುವ ನಿರೂಪಣಾ ಕ್ರಮ ನಿರ್ದೇಶಕ ನಾಗರಾಜ್ ಪೋಪಟ್‌ರಾವ್ ಮಂಜುಳೆ ಅವರ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ.ಚಿತ್ರದ ಕಥೆ ಬಹಳ ಸರಳವಾಗಿದೆ. ಜಬ್ಯಾ ಎಂಬ ಹೈಸ್ಕೂಲ್ ಹುಡುಗ ತನ್ನ ಸಹಪಾಠಿ ಶಾಲುವನ್ನು ಪ್ರೀತಿಸುತ್ತಿದ್ದಾನೆ. ಆದರೆ ಆತನ ಪ್ರೀತಿ ಒನ್‌ವೇ. ಜಬ್ಯಾ ಸಮಾಜದಲ್ಲಿ ಅತ್ಯಂತ ಕೆಳಜಾತಿಗೆ ಸೇರಿದವನು. ಆತನ ಅಪ್ಪ, ಅಮ್ಮ, ತಂಗಿ ಎಲ್ಲರೂ ಊರಿನ ಕೊಳಕು ಎತ್ತುವ, ಹಂದಿಗಳನ್ನು ಹಿಡಿಯುವ ಕನಿಷ್ಠ ಕೆಲಸಗಳನ್ನು ಮಾಡಿಕೊಂಡಿರುವವರು. ಶಾಲೆಗೆ ಹೋಗುತ್ತಿದ್ದರೂ ಮಗ ತನ್ನ ವೃತ್ತಿಯಲ್ಲಿ ಸಹಾಯ ಮಾಡುತ್ತಿರಬೇಕೆಂಬುದು ಅಪ್ಪನ ನಿಲುವು.

ಜಬ್ಯಾ ಕರ್ರಗಿನ ಹುಡುಗ; ಆದರೆ ಶಾಲು ಮೇಲ್ಜಾತಿಗೆ ಸೇರಿದ ಬೆಳ್ಳನೆಯ ಸುಂದರಿ. ಆಕೆಯ ಅಪ್ಪ ಊರಿನ ಸ್ಥಿತಿವಂತ. ಕಾಡಿನಲ್ಲಿ ಸಿಗುವ ಉದ್ದ ಬಾಲದ, ಕಪ್ಪನೆಯ ಗುಬ್ಬಚ್ಚಿಯೊಂದನ್ನು ಹಿಡಿದು ಸುಟ್ಟು ಅದರ ಬೂದಿಯನ್ನು ಹುಡುಗಿಯ ಮೇಲೆ ಎಸೆದರೆ ಆಕೆ ಪ್ರೀತಿಸುವವರಿಗೆ ಒಲಿಯುತ್ತಾಳೆ ಎಂದು ಯಾರೋ ಹೇಳಿದ್ದನ್ನು ಜಬ್ಯಾ ಬಲವಾಗಿ ನಂಬಿರುತ್ತಾನೆ.ಒಂದೆಡೆ ಶಾಲೆಯ ಓದು, ಇನ್ನೊಂದೆಡೆ ಕಪ್ಪುಹಕ್ಕಿಯ ಹುಡುಕಾಟದಲ್ಲಿ ಜಬ್ಯಾನ ತಾರುಣ್ಯ ಅರಳುತ್ತಾ ಹೋಗುತ್ತದೆ. ಆದರೆ ಬಡತನ ಮತ್ತು ಜಾತೀಯ ಅವಮಾನಗಳು ಈ ಪ್ರೀತಿಯ ಕುಡಿಯನ್ನು ಪದೇ ಪದೇ ಕರ್ರಗಾಗಿಸುತ್ತದೆ. ಶಾಲೆಗೆ ರಜೆ ಇದ್ದಾಗ ಕುಟುಂಬದ ವೃತ್ತಿಯನ್ನು ಬಿಟ್ಟು, ಪಕ್ಕದ ಪೇಟೆಗೆ ಹೋಗಿ ಐಸ್‌ಕ್ಯಾಂಡಿ ಮಾರುತ್ತಾನೆ. ಸ್ವಲ್ಪ ಹಣ ಗಳಿಸಿ ಒಂದು ಜೀನ್ಸ್ ಪ್ಯಾಂಟು ಖರೀದಿಸಿ, ತನ್ನ ಹುಡುಗಿಯ ಮನ ಗೆಲ್ಲಬೇಕೆಂಬುದು ಆತನ ಬಯಕೆ. ಆದರೆ ವಾಹನವೊಂದು ಆತನ ಐಸ್‌ಕ್ಯಾಂಡಿ ಸೈಕಲನ್ನು ನುಜ್ಜುಗುಜ್ಜಾಗಿಸಿ ಆ ಕನಸೂ ಗಾಯಗೊಳ್ಳುತ್ತದೆ.ಪ್ರೀತಿಯ ರೋಮಾಂಚನ ಮತ್ತು ಜಾತೀಯ ಅವಮಾನ ಎರಡೂ ಒಬ್ಬ ತರುಣನ ಮನಸ್ಸಿನಲ್ಲಿ ಅದೆಂತಹ ಕೋಲಾಹಲಗಳನ್ನು ಉಂಟುಮಾಡುತ್ತದೆ! ಕಪ್ಪು ಹಕ್ಕಿಯ ಪ್ರತಿಮೆ ಚಿತ್ರದ ಉದ್ದಕ್ಕೂ ಕಾವ್ಯಾತ್ಮಕವಾಗಿ ಕಾಡುತ್ತದೆ. ತನ್ನ ಹುಡುಗಿ ತನಗೆ ಒಲಿದು ಬರುವುದನ್ನು ಜಬ್ಯಾ ಕಲ್ಪಿಸಿಕೊಳ್ಳುವ ದೃಶ್ಯವಂತೂ ಯಾವ ಅತ್ಯುತ್ತಮ ಕವಿತೆಗೂ ಕಡಿಮೆಯಿಲ್ಲದಂತೆ ತೆರೆಯ ಮೇಲೆ ಬಂದಿದೆ. ಇಲ್ಲಿ ಪ್ರಿಯಕರ ಮಾತೇ ಆಡುವುದಿಲ್ಲ; ಆತನದೇನಿದ್ದರೂ ಕಣ್ಣ ಭಾಷೆ. ಆದರೆ ಇದ್ಯಾವುದೂ ಗೊತ್ತಾಗದ ಹುಡುಗಿಯದ್ದು ಮುಗ್ಧ ನಗು.ಕೊನೆಯ ಎರಡು--–ಮೂರು ದೃಶ್ಯಗಳಂತೂ ಪ್ರೇಕ್ಷಕರನ್ನು ದಿಗ್ಮೂಢಗೊಳಿಸುತ್ತವೆ. ಜಬ್ಯಾನ ಅಕ್ಕನ ಮದುವೆ ನಿಶ್ಚಯವಾಗಿದೆ. ೨೦ ಸಾವಿರ ರೂಪಾಯಿ ವರದಕ್ಷಿಣೆ ನೀಡಬೇಕು. ಮೇಲ್ಜಾತಿಯ ಶ್ರೀಮಂತರು ಜಬ್ಯಾನ ಅಪ್ಪನಿಗೆ ಅಲ್ಪ ಸ್ವಲ್ಪ ಹಣ ಸಹಾಯ ಮಾಡುತ್ತಾರೆ. ಈ ಮಧ್ಯೆ ಊರಿನ ಜಾತ್ರೆಯ ಸಮಯದಲ್ಲಿ ಜನರ ನಡುವೆ ನುಗ್ಗಿ ಕೋಲಾಹಲ ಉಂಟು ಮಾಡಿದ ಹಂದಿಯೊಂದನ್ನು ಹಿಡಿದು ಹೆಡೆಮುರಿಕಟ್ಟಲು ಊರ ಪ್ರಮುಖರು ಜಬ್ಯಾನ ಅಪ್ಪನಿಗೆ ಆದೇಶ ನೀಡುತ್ತಾರೆ.

ಮದುವೆ ಮುಗಿದ ಬಳಿಕ ಎರಡು ದಿನ ಬಿಟ್ಟು ಹಿಡಿಯುತ್ತೇನೆ ಅಂದರೂ ಅವರು ಕೇಳುವುದಿಲ್ಲ. ಜಬ್ಯಾನ ಅಪ್ಪ, ಅಮ್ಮ, ಅಕ್ಕ ಎಲ್ಲರೂ ಕೋಲು, ಹಗ್ಗ ಹಿಡಿದುಕೊಂಡು ಹಂದಿ ಬೇಟೆಗೆ ಹೊರಡುತ್ತಾರೆ. ಊರವರು ಹೇಲು ಮಾಡುವ ಕೋಟೆಯ ಹೊರಗಿನ ಇಳಿಜಾರಿನಲ್ಲಿ ಆ ಹಂದಿ ಅಡಗಿಕೊಂಡಿದೆ. ಗುಟುರು ಹಾಕುತ್ತಾ ಆ ಹೇಲಿನ ಪೊದೆಗಳ ಮಧ್ಯೆಯೇ ಓಡಾಡುತ್ತಿದೆ.ಜಬ್ಯಾನದ್ದು ಉಭಯ ಸಂಕಟ. ಇಳಿವಯಸ್ಸಿನ ಅಪ್ಪನ ಕೆಲಸದಲ್ಲಿ ಸಹಾಯ ಮಾಡಲೇಬೇಕು. ಆದರೆ ಎದುರಿಗೇ ತಾನು ಕಲಿಯುತ್ತಿರುವ ಶಾಲೆಯಿದೆ. ಅಲ್ಲಿನ ತನ್ನ ಸಹಪಾಠಿಗಳು ಗುಂಪು ಗುಂಪಾಗಿ ಬಂದು ನಿಂತು ನೋಡುತ್ತಿದ್ದಾರೆ. ಅವರ ಮಧ್ಯೆ ತನ್ನ ಪ್ರೀತಿಪಾತ್ರ ಹುಡುಗಿಯೂ ಇದ್ದಾಳೆ! ಈ ಮಧ್ಯೆ ಚೊಂಬು ಹಿಡಿದುಕೊಂಡು ಬಹಿರ್ದೆಸೆಗೆ ಬಂದಿದ್ದ ಊರಿನ ಮೇಲ್ಜಾತಿ ಯುವಕರು ಅಲ್ಲೇ ಕುಳಿತು ಈ ‘ಹಂದಿ ಕುಟುಂಬ’ವನ್ನು ಗೇಲಿ ಮಾಡುತ್ತಿದ್ದಾರೆ. ಜಬ್ಯಾ ಅರೆಮನಸ್ಸಿನಿಂದಲೇ ಕೆಲಸದಲ್ಲಿ ತೊಡಗುತ್ತಾನೆ.

ಶಾಲೆಯ ಹುಡುಗರಿಗೆ ಕಾಣಿಸದಂತೆ ಅಡಗಿಕೊಳ್ಳಲು ನೋಡುತ್ತಾನೆ. ಆದರೆ ಅಪ್ಪ ಕೂಗಾಡುತ್ತಾನೆ. ಒಂದು ಹಂತದಲ್ಲಂತೂ ಜಬ್ಯಾನ ಕಾಲಬುಡದಿಂದಲೇ ಹಂದಿ ತಪ್ಪಿಸಿಕೊಂಡು ಓಡಿದಾಗ ಮಗನನ್ನು ಎಳೆದು ತಂದು ಎಲ್ಲರೆದುರು ತದುಕುತ್ತಾನೆ. ಅವಮಾನ, ಸಂಕೋಚ, ಅಸಹಾಯಕತೆ ಮತ್ತು ಕ್ರೋಧ ಮಡುಗಟ್ಟಿದ ಜಬ್ಯಾ ಕೊನೆಗೂ ಹಂದಿಯನ್ನು ಅಟ್ಟಿಸುತ್ತಾ ಕೊರಳಿಗೆ ಹಗ್ಗ ಎಸೆದು ಬಂಧಿಸುತ್ತಾನೆ. ಆತ ಮತ್ತು ಆತನ ಅಕ್ಕ ದೊಡ್ಡದೊಂದು ಕೋಲಿಗೆ ಹಂದಿಯ ಕಾಲುಗಳನ್ನು ಕಟ್ಟಿ ಹೆಗಲ ಮೇಲೆ ರಸ್ತೆಯಲ್ಲಿ ಹೊತ್ತೊಯ್ಯುತ್ತಾರೆ.

ಹಂದಿಯ ಮೆರವಣಿಗೆಯ ಹಿನ್ನೆಲೆಯಲ್ಲಿ ಶಾಲೆಯ ಗೋಡೆಯ ಮೇಲೆ ಸಾಲು ಸಾಲಾಗಿ ಬಿಡಿಸಿರುವ ಅಂಬೇಡ್ಕರ್, ಶಾಹು ಮಹಾರಾಜ್, ಜ್ಯೋತಿಭಾ ಪುಲೆ ಅವರ ಚಿತ್ರಗಳು ನಗುತ್ತಿವೆ! ಮೇಲ್ಜಾತಿಯ ತರುಣರು ಹಂದಿಯ ಮೆರವಣಿಗೆಯ ಹಿಂದೆಯೇ ಗೇಲಿ ಮಾಡುತ್ತಿದ್ದಾರೆ. ಒಬ್ಬನಂತೂ ಜಬ್ಯಾನ ಅಕ್ಕನ ಬಗ್ಗೆ ಅಶ್ಲೀಲವಾಗಿ ಕಾಮೆಂಟು ಮಾಡುತ್ತಿದ್ದಾನೆ.ಅಲ್ಲಿಯವರೆಗೆ ಮನಸ್ಸಿನ ಒಳಗೇ ಮಡುಗಟ್ಟಿದ್ದ ಜಬ್ಯಾನ ಅವಮಾನ, ಆಕ್ರೋಶ, ಹತಾಶೆಗಳೆಲ್ಲವೂ ಒಮ್ಮೆಲೆ ಭುಗಿಲೇಳುತ್ತದೆ. ಜ್ವಾಲಾಮುಖಿಯಂತೆ ಜಬ್ಯಾ ಸ್ಪೋಟಿಸುತ್ತಾನೆ. ಹಂದಿಯನ್ನು ಕೆಳಕ್ಕೆಸೆದು ರಸ್ತೆಯಲ್ಲಿದ್ದ ಜಲ್ಲಿ ಕಲ್ಲುಗಳನ್ನು ಮೇಲ್ಜಾತಿಯ ತರುಣರತ್ತ ಬೀಸುತ್ತಾನೆ. ಒಬ್ಬನ ಹಣೆಗೆ ಕಲ್ಲು ತಾಕಿ ರಕ್ತ ಸುರಿಯುತ್ತದೆ. ಹೆದರಿದ ತರುಣರ ಗುಂಪು ದೂರ ಓಡುತ್ತದೆ. ಆದರೆ ರಕ್ತ ಬಸಿದ ಆ ಮೇಲ್ಜಾತಿಯ ತರುಣ ‘ಹಂದೀಮಗನ ಸೊಕ್ಕು ಮುರಿಯುತ್ತೇನೆ’ ಎಂದು ಸಿಟ್ಟಿಗೆದ್ದು ಜಬ್ಯಾನತ್ತ ನುಗ್ಗುತ್ತಾನೆ.

ಅಕ್ಕ ತಡೆದರೂ ಕೇಳಿಸಿಕೊಳ್ಳದ ಜಬ್ಯಾ ಅವನಿಗಿಂತ ಹೆಚ್ಚಿನ ಸಿಟ್ಟಿನಲ್ಲಿ ‘ಬಾ... ಇವತ್ತು ಎರಡರಲ್ಲಿ ಒಂದು ತೀರ್ಮಾನ ಆಗಿಯೇಬಿಡಲಿ’ ಎಂಬಂತೆ ಕೈಯಲ್ಲಿ ದೊಡ್ಡದೊಂದು ಕಲ್ಲು ಎತ್ತಿಕೊಂಡು ಮುಂದೆ ಬರುತ್ತಾನೆ. ಆತನ ಕಣ್ಣುಗಳಲ್ಲಿ ಅಗ್ನಿಪರ್ವತ! ಆ ಕೊನೆಯ ದೃಶ್ಯ ಇಡೀ ಚಿತ್ರಕ್ಕೆ ಹೊಸ ಭಾಷ್ಯವೊಂದನ್ನು ಬರೆಯುತ್ತದೆ. ಇನ್ನೇನು ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ ಎಂದು ಪ್ರೇಕ್ಷಕ ಊಹಿಸುತ್ತಿರುವಂತೆಯೇ ಜಬ್ಯಾ ಎಸೆದ ಆ ದೊಡ್ಡ ಕಲ್ಲು ವೇಗವಾಗಿ ಬಂದು ಕ್ಯಾಮೆರಾಗೆ ಬಡಿಯುತ್ತದೆ.

ಧಡ್... ಎಂಬ ಶಬ್ದದೊಡನೆ ಕ್ಯಾಮೆರಾ ಒಡೆದು ಬೆಳ್ಳಿತೆರೆಯ ಮೇಲೆ ಪೂರ್ಣ ಕತ್ತಲು ಆವರಿಸುತ್ತದೆ. ಅಲ್ಲಿಗೆ ಸಿನಿಮಾ ಮುಗಿಯಿತು. ಕನಸಿನಲ್ಲೂ ಕಲ್ಪಿಸಿಕೊಳ್ಳಲಾಗದ ಈ ಕೊನೆಯ ದೃಶ್ಯ ನೂರಾರು ಅರ್ಥಗಳನ್ನು ಹುಟ್ಟಿಸುತ್ತಾ ಪ್ರೇಕ್ಷಕ ಶಾಕ್‌ಗೆ ಒಳಗಾಗುತ್ತಾನೆ!

ಆ ಕೊನೆಯ ಶಾಟ್ ಮೂಲಕ ನಿರ್ದೇಶಕರು ಹೊಳೆಯಿಸುವ ಅರ್ಥಗಳು ಒಂದೆರಡಲ್ಲ. ಭಾರತದ ಜಾತೀಯ ಅವಮಾನಗಳನ್ನು ಸಂತೋಷದಿಂದ ಚಿತ್ರಿಸುತ್ತಿರುವ ಸಿನಿಮಾ ಮಾಧ್ಯಮಕ್ಕೇ ಧಿಕ್ಕಾರ ಎಂದೂ ಅರ್ಥ ಮಾಡಿಕೊಳ್ಳಬಹುದು.

ಅಥವಾ ತಮ್ಮ ಬದುಕಿನಲ್ಲಿ ಇಂತಹ ಜಾತೀಯ ತಾರತಮ್ಯಗಳ ಬಗ್ಗೆ ನಿರುಮ್ಮಳರಾಗಿರುತ್ತಾ ಸಿನಿಮಾದಲ್ಲಿ ಮಾತ್ರ ಅದನ್ನು ಅರ್ಥೈಸಿಕೊಳ್ಳುವ, ಬೆರಗು ಹೊಂದುವ ಪ್ರೇಕ್ಷಕರ ಮುಖಕ್ಕೇ ಕಲ್ಲು ತೂರಿದಂತೆಯೂ ಆಗಬಹುದು! ಕಣ್ಣುಗಳಲ್ಲೇ ಮಾತನಾಡುವ ಕಿಶೋರ್ ಕದಮ್ (ಜಬ್ಯಾ) ಮತ್ತು ಛಾಯಾ ಕದಮ್ (ಶಾಲು) ಅಭಿನಯ ಅತ್ಯಂತ ಸಹಜವಾಗಿದೆ. ಅದಕ್ಕಿಂತ ಮುಖ್ಯವಾಗಿ ಜಬ್ಯಾನ ಅಪ್ಪ-ಅಮ್ಮನ ಪಾತ್ರಗಳಲ್ಲಿ ಸೋಮನಾಥ ಅವಘಡೆ ಮತ್ತು ರಾಜೇಶ್ವರಿ ಕರಾಟ್ ಅದ್ಭುತ ಅಭಿನಯ ನೀಡಿದ್ದಾರೆ.

ವಿಕ್ರಂ ಅಮ್ಲಾಡಿಯ ಛಾಯಾಗ್ರಹಣ, ಅಲೋಕಾನಂದ ದಾಸ್ ಗುಪ್ತಾರ ಸಂಗೀತ, ಸಂತೋಷ್ ಸಂಕದ್ ಅವರ ಕಲಾನಿರ್ದೇಶನ ಎಲ್ಲವೂ ಸಿನಿಮಾವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಿರ್ದೇಶಕ ನಾಗರಾಜ ಮಂಜುಳೆ ಮರಾಠಿ ಸಾಹಿತ್ಯದಲ್ಲಿ ಹೆಸರು ಮಾಡಿರುವ ದೊಡ್ಡ ಕವಿಯೂ ಹೌದು. ಪುಣೆ ವಿಶ್ವವಿದ್ಯಾಲಯದಿಂದ ಮರಾಠಿ ಸಾಹಿತ್ಯದಲ್ಲಿ ಎಂ.ಎ ಮಾಡಿರುವ ಅವರ ‘ಉನ್ಹಾಚ್ಯ ಕಥಾವಿರುದ್ಧ’ ಎಂಬ ಕವನ ಸಂಕಲನ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಲ್ಲದೆ, ದಮಾನಿ ಸಾಹಿತ್ಯ ಪುರಸ್ಕಾರವನ್ನು ತಂದುಕೊಟ್ಟದೆ.

ಈ ಹಿಂದೆ ಅವರು ‘ಪಿಸ್ತೂಲ್ಯ’ ಎಂಬ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದು ಅದು ರಾಷ್ಟ್ರಪ್ರಶಸ್ತಿ ಗೆದ್ದಿತ್ತು. ‘ಫಂದ್ರಿ’ ಕಳೆದ ವರ್ಷ ಅತ್ಯುತ್ತಮ ಮರಾಠಿ ಚಿತ್ರ ಎಂಬ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದಲ್ಲದೇ, ರಾಜ್ಯ ಸರಕಾರದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಗೆದ್ದಿದೆ. ಇತ್ತೀಚೆಗೆ ನಡೆದ ಮುಂಬೈ ಚಿತ್ರೋತ್ಸವದಲ್ಲೂ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಗೆದ್ದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry