ಬುಧವಾರ, ಜನವರಿ 22, 2020
22 °C
ಬರವಣಿಗೆಯ ಉದ್ದೇಶ ಬಿಡಿಸಿಟ್ಟ ನಾ. ಡಿಸೋಜ

ಮನುಷ್ಯನ ಒಳಸತ್ವದ ಹುಡುಕಾಟ

ಪ್ರಜಾವಾಣಿ ವಾರ್ತೆ / ಪ್ರಕಾಶ ಕುಗ್ವೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಾರ್‌ಬರ್ಟ್‌ ಡಿಸೋಜ ಅವರದ್ದು ನಿರಂತರ ಬರವಣಿಗೆ. ಅವರ ಕಥೆ ಪ್ರಕಟ­ವಾಗದ ಪತ್ರಿಕೆ ಇಲ್ಲ; ವಿಶೇಷಾಂಕ­ಗಳಿಲ್ಲ. ಸುಮಾರು 80 ಕಾದಂಬರಿ, 500ಕ್ಕೂ ಹೆಚ್ಚು ಕಥೆ, 50 ಮಕ್ಕಳ ಸಾಹಿತ್ಯ ಕೃತಿ, ವಿಭಿನ್ನ ಕ್ಷೇತ್ರ­ಗಳ ಕುರಿತಂತೆ ಹತ್ತಕ್ಕೂ ಹೆಚ್ಚು ಕೃತಿ, ನೂರಾರು ಬಿಡಿ ಲೇಖನಗಳು ಡಿಸೋಜ ಅವರ ಸೃಷ್ಟಿಗಳು.ಡಿಸೋಜ ಅವರ ನುಡಿ–ನಡೆ–ಬರಹ–ಬದುಕು ಎಲ್ಲವೂ ಒಂದೇ. ಅವರು ನುಡಿದಂತೆ ನಡೆದವರು, ಬರೆದಂತೆ ಬದುಕಿದವರು.  ಮಲೆನಾಡು –ಮುಳುಗಡೆ–ಮಕ್ಕಳು ಅವರ ಸಾಹಿತ್ಯದ ಜೀವದ್ರವ್ಯ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ­ರಾಗಿದ್ದು­ಕೊಂಡೇ ತಮ್ಮ ಸರಳ ಬರವಣಿಗೆ ಮೂಲಕ ನಾಡಿನ ಬಹುಜನರ ಪ್ರೀತಿ ಗಳಿಸಿಕೊಂಡಿದ್ದಾರೆ. ಜನಪರ ಹೋರಾಟಗಳನ್ನೂ ಸಂಘಟಿಸಿ, ಆಡಳಿತಕ್ಕೆ ಬಿಸಿ ಮುಟ್ಟಿ­ಸುತ್ತಲೇ, ಸಾಹಿತಿಗಳ ಸಾಮಾಜಿಕ ಜವಾಬ್ದಾರಿ ಪ್ರಶ್ನಿಸುತ್ತಾ ಬಂದಿದ್ದಾರೆ.76ರ ಹರೆಯದ ನಾ.ಡಿಸೋಜ  ಮಡಿಕೇರಿಯಲ್ಲಿ ನಡೆಯಲಿರುವ 80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ ಜತೆ ನಡೆಸಿದ ಮಾತುಕತೆ ಇಲ್ಲಿದೆ.

ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದೀರಿ; ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ?

ಪ್ರತಿವರ್ಷ ನನ್ನ ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ, ಈ ಬಾರಿ ಹೆಸರು ಪ್ರಸ್ತಾಪವಾಯಿತು; ಆಯ್ಕೆಯೂ ಆಯಿತು. ಅದರಲ್ಲೂ ಸರ್ವಾನುಮತ­ದಿಂದ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ.ಬರವಣಿಗೆ ನಿಮಗೆ ಸಾಧ್ಯವಾಗಿದ್ದು ಹೇಗೆ?

ಬರವಣಿಗೆ ಮನಸ್ಸಿಗೆ ಶಾಂತಿ, ಸಮಾಧಾನ ಕೊಡುವ ಸಂಗತಿ. ಮನಸ್ಸಿನ ಶಾಂತಿ–ಸಮಾಧಾನಕ್ಕಾಗಿ ಮತ್ತೆ­ಮತ್ತೆ ಬರೆಯುತ್ತೇನೆ. ಬರವಣಿಗೆ ಮೂಲಕ ಮನುಷ್ಯನ ಒಳಸತ್ವ ಕಂಡುಕೊಳ್ಳುವ, ಜೀವನ ಪ್ರೀತಿಯ ಹುಡುಕಾಟದ ಕೆಲಸ ಮಾಡುತ್ತೇನೆ.‘ಮುಳುಗಡೆ–ಮಲೆನಾಡು’ ನಿಮ್ಮ ಸಾಹಿತ್ಯದ ಜೀವದ್ರವ್ಯ. ಮುಳುಗಡೆ ಸಂತ್ರಸ್ತರಿಗೆ ಇಂದಿಗೂ ಪರ್ಯಾಯ ಜೀವನ ಸಾಧ್ಯವಾಗದಿರುವ ಬಗ್ಗೆ.

‘ಮುಳುಗಡೆ’ ವಿಷಯ ನನ್ನ ಪಾಲಿಗೆ ಎಂದೆಂದಿಗೂ ಮುಗಿಯದ ಕಥೆ. ಮಲೆನಾಡಿನ ಶರಾವತಿ, ವರಾಹಿ, ಚಕ್ರ–ಸಾವೆಹಕ್ಲು ಯೋಜನೆಗಳ ಸಂತ್ರಸ್ತರನ್ನು ಸರ್ಕಾರ ಮೊದಲಿನಿಂದಲೂ ನೋಡಬೇಕಾದ ರೀತಿಯಲ್ಲಿ ನೋಡುತ್ತಿಲ್ಲ. ಲಿಂಗನಮಕ್ಕಿಗೂ ಮೊದಲು ಮಡೆನೂರು ಅಣೆಕಟ್ಟೆ ಕಟ್ಟುವಾಗ ಸರ್ ಎಂ. ವಿಶ್ವೇಶ್ವರಯ್ಯನವರು ಅಲ್ಲಿನ ಹಿರಿಯರ ಸಭೆ ಕರೆದು, ಯಾವ ಕಾರಣಕ್ಕೆ ಅಣೆಕಟ್ಟೆ ಕಟ್ಟಬೇಕಾಗಿದೆ? ನಿಮಗೆ ಯಾವ ರೀತಿ ಪರ್ಯಾಯ ವ್ಯವಸ್ಥೆ ಬೇಕು ಎಂಬ ಮಾಹಿತಿಗಳನ್ನು ಕಲೆಹಾಕಿ, ಯೋಜನೆ ಜಾರಿಗೆ ಜನರನ್ನು ಒಪ್ಪಿಸಿದ್ದರು. ಆದರೆ, ಈಗಿನವರಿಗೆ ಅದು ಯಾಂತ್ರಿಕ ಕ್ರಿಯೆ. ಸರ್ಕಾರ ಸಂತ್ರಸ್ತರನ್ನು ಮಾನವೀಯತೆ ಯಿಂದ ನೋಡುತ್ತಲೇ ಇಲ್ಲ. ಹಾಗಾಗಿ, ಸಮಸ್ಯೆ ಹಾಗೇ ಉಳಿದಿದೆ. ಈ ಕಾರಣಕ್ಕೆ ಮತ್ತೆ ಮತ್ತೆ ‘ಮುಳುಗಡೆ–ಮಲೆನಾಡು’ ನನ್ನ ಸಾಹಿತ್ಯದ ಪ್ರಧಾನ ನೆಲೆಯಾಗಿ ನಿಂತಿದೆ.ಸಾಹಿತಿ, ಹೋರಾಟ– ಚಳವಳಿಗಳಲ್ಲಿ ಪಾಲ್ಗೊಂಡರೆ ಸೂಕ್ಷ್ಮತೆ ಕಳೆದುಕೊಳ್ಳುತ್ತಾನೆಂಬ ಮಾತು ಇದೆಯಲ್ಲ?

ನನಗೆ ಹಾಗೆ ಅನ್ನಿಸುತ್ತಿಲ್ಲ. ಜೀವನ ಅನುಭವವೇ ಇಲ್ಲದವರು ಎಂತಹ ಸಾಹಿತ್ಯ ರಚಿಸಬಹುದು? ಸಮಾಜದಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿ ಇರು­ವಂತೆ ಲೇಖಕನಿಗೂ ಬದ್ಧತೆ ಇರಲೇಬೇಕು. ಸಮಾಜ ಅವನಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಿ­ರುತ್ತದೆ. ಸಮಾಜದ ನಡುವೆಯೇ ಇರುವ ಆತ ಅದರ ಆಗು–ಹೋಗುಗಳಿಗೆ ಪ್ರತಿಕ್ರಿಯಿಸಲೇಬೇಕು. ನಾನು ಭಾಗ­ವಹಿಸಿದ ಹೋರಾಟ–ಚಳವಳಿಗಳು ನನಗೆ ಸಾಕಷ್ಟು ಅನುಭವಗಳನ್ನು ಕೊಟ್ಟಿವೆ. ಇದರಿಂದ  ಸಾಹಿತ್ಯ ಸೃಷ್ಟಿಗೂ ಅನುಕೂಲವಾಗಿದೆ.ಕನ್ನಡ ಭಾಷೆ ಬೆಳೆಸುವ ಬಗೆ ?

ಕನ್ನಡದ ಜನ ತಮ್ಮ ಮಾತೃಭಾಷೆ ಬಗ್ಗೆ ತೋರಿ­ಸುತ್ತಿರುವ ಆಸಕ್ತಿ ಸಾಲದು. ಕನ್ನಡ ಭಾಷೆ ಇಂದು ಬಹಳಷ್ಟು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ಆದರೆ, ಈ ಭಾಷೆಯ ಶ್ರೀಮಂತಿಕೆ ಬಗ್ಗೆ ಜನರಿಗೆ ಗೊತ್ತಿಲ್ಲ. ಬೇರೆ ಭಾಷೆಗಳಿಗೆ ಈ ಸಮಸ್ಯೆ ಇಲ್ಲ.  ನೀವು ಸಾಹಿತ್ಯದ ಯಾವುದೇ ಪಂಥಕ್ಕೆ ಸೇರಿಲ್ಲವಲ್ಲ, ಏಕೆ?

ಇಂದು ಯಾವ ಸಾಹಿತ್ಯ ಪಂಥಗಳೂ ಜೀವಂತವಾಗಿ ಉಳಿದಿಲ್ಲ. ಪಂಥ ಮತ್ತು ಗುಂಪುಗಳಿಂದ ಯಾವುದೇ ಸಾಹಿತಿ ಬೆಳೆಯುವುದಿಲ್ಲ  ಎಂಬುದು ನನ್ನ ಧೋರಣೆ. ನನ್ನ ಪ್ರಕಾರ, ಸಾಹಿತ್ಯದಲ್ಲಿರುವುದು  ಎರಡೇ. ಒಂದು ಒಳ್ಳೆಯ ಸಾಹಿತ್ಯ, ಇನ್ನೊಂದು ಕೆಟ್ಟ ಸಾಹಿತ್ಯ. ಪ್ರಭಾವ ಬೀರಿ ಜೀವನದ ಬಗ್ಗೆ ಇನ್ನಷ್ಟು ಪ್ರೀತಿ, ಆಸಕ್ತಿ ಮೂಡಿಸುತ್ತದೆಯೇ ಅದು ಒಳ್ಳೆಯ ಸಾಹಿತ್ಯ; ಪ್ರಭಾವ ಬೀರದ್ದು ಕೆಟ್ಟದ್ದು.ಇಂದಿನ ಸಾಹಿತ್ಯಕ್ಕಿರುವ ಸವಾಲುಗಳೇನು?

ಇಂದು ಸಾಹಿತ್ಯಕ್ಕೆ ದೊಡ್ಡ ಸವಾಲು ಎದುರಾಗಿದೆ. ಹಿಂದೆ ಮನೋರಂಜನೆಗೆ, ಜ್ಞಾನಾರ್ಜನೆಗೆ ಜನ ಸಾಹಿತ್ಯ­ವನ್ನು ಅವಲಂಬಿಸುತ್ತಿದ್ದರು. ಇಂದು

ಇವೆ­ರಡನ್ನೂ ಪೈಪೋಟಿಯಲ್ಲಿ ಮೊಬೈಲ್‌, ಕಂಪ್ಯೂಟರ್‌, ಟಿ.ವಿ. ಮತ್ತಿತರ ತಂತ್ರಜ್ಞಾನಗಳು ನೀಡುತ್ತಿವೆ. ಮನೋರಂಜನೆ ಮತ್ತು ಜ್ಞಾನಾರ್ಜನೆ ಬಾಗಿಲನ್ನು ಇವು ಬಹಳಷ್ಟು ವಿಶಾಲವಾಗಿ ತೆರೆದುಕೊಂಡು ನಿಂತಿವೆ. ತಂತ್ರಜ್ಞಾನ ಕ್ಷೇತ್ರಕ್ಕೆ ಸಾಹಿತ್ಯವನ್ನು ಒಗ್ಗಿಸುವ ಕೆಲಸ ಆಗಬೇಕಾಗಿದೆ. ಈಗ  ಆ ಕೆಲಸ ಆಗುತ್ತಿಲ್ಲ ಎನ್ನುವುದು ದೊಡ್ಡ ಕೊರತೆಯಾಗಿ ಕಾಡುತ್ತಿದೆ.

ಪ್ರತಿಕ್ರಿಯಿಸಿ (+)