ಮನುಷ್ಯರನ್ನು ಮೆದು ಮಾಡುವ ಕ್ಷಣಗಳು...

7

ಮನುಷ್ಯರನ್ನು ಮೆದು ಮಾಡುವ ಕ್ಷಣಗಳು...

Published:
Updated:
ಮನುಷ್ಯರನ್ನು ಮೆದು ಮಾಡುವ ಕ್ಷಣಗಳು...

ಈ ಕಲಾಕೃತಿಯನ್ನು ಸುಮ್ಮನೆ ನೋಡೋಣ. ಇದನ್ನು ಯಾವ ಕಲಾವಿದ, ಯಾಕೆ, ಹೇಗೆ, ಯಾವ ಲಹರಿಯಲ್ಲಿ ರಚಿಸಿದ್ದಾನೆ ಎಂಬೆಲ್ಲಾ ಆಲೋಚನೆಗಳನ್ನು ಬದಿಗಿಟ್ಟು `ಕಲಾಕೃತಿ~ ಎನ್ನುವ ದೃಶ್ಯಾಭಿವ್ಯಕ್ತಿಯಲ್ಲಿನ ಏನೆಲ್ಲಾ ವಸ್ತುಗಳು, ನಮ್ಮ ಕಣ್ಣುಗಳ ಮೂಲಕ ನಮ್ಮ ಮನಸ್ಸನ್ನು ತಾಗಿ, ನಮ್ಮಳಗಾಗುವ ಕಲಾನುಭೂತಿಗೆ ತೆರೆದುಕೊಳ್ಳುವ ಪ್ರಯತ್ನ ಮಾಡೋಣ.ನೋಡಿ, ಕಲೆಯ ಬಗ್ಗೆ ಏನೂ ತಿಳಿಯದ ಒಬ್ಬ ಪ್ರೇಕ್ಷಕ ಆಕಸ್ಮಿಕವಾಗಿ ಒಂದು ಕಲಾಕೃತಿಯನ್ನು ಕಂಡಾಗ ಅಥವಾ ನೋಡುವ ಮನಸ್ಸಿನಿಂದ ಕೃತಿಯ ಮುಂದೆ ನಿಂತಾಗ ಆಗುವ ಪ್ರಕ್ರಿಯೆಯಂತೆಯೇ ಈ ಕೃತಿಯನ್ನು ನಾನು ಪ್ರವೇಶ ಮಾಡುತ್ತಾ, ಇಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ.ಚೌಕಾಕಾರವಾಗಿ ಕಾಣುವ ಆದರೆ ಸ್ವಲ್ಪ ಅಗಲ ಹೆಚ್ಚಿರುವ ಈ ಕೃತಿಯು ಕಣ್ಣಿಗೆ ರಾಚುವ ಬಣ್ಣಗಳಿಲ್ಲದೆ, ಮಂದ ಬಣ್ಣಗಳಿಂದ ಬೆಳದಿಂಗಳ ರಾತ್ರಿಯನ್ನು ಯಶಸ್ವಿಯಾಗಿ ಚಿತ್ರಿಸಲ್ಪಟ್ಟಿದೆ. ಕೃತಿಯ ಪ್ರವೇಶ ಮಾಡಲು ನನ್ನ ಕಣ್ಣುಗಳು ಮೊದಲು ಮುಟ್ಟುವುದು, ಮಲಗಿದಂತಿರುವ ವ್ಯಕ್ತಿಯ ಪಕ್ಕದಲ್ಲಿರುವ ಮ್ಯಾಂಡೊಲಿನ್ ವಾದ್ಯ, ನಿಜಕ್ಕೂ ಹೇಳುವುದಾದರೆ ನನ್ನ ಕಣ್ಣುಗಳು ಮೊದಲು ಕಂಡದ್ದು ಮ್ಯಾಂಡೊಲಿನ್ ವಾದ್ಯದ ತಂತಿಗಳನ್ನು.

 

ಬಿಳಿಯ ಗೆರೆಗಳ ತಂತಿಗಳು, ಬಿಳಿಯ ಬಿಂದುಗಳಂತೆ ಕಾಣುವ ತಂತಿ ಸುತ್ತಿಕೊಂಡ ತಿರುಗಣೆಗಳ ಮೂಲಕ ಇಡೀ ವಾದ್ಯವನ್ನು ಕ್ಷಣಾರ್ಧದಲ್ಲಿ ನನ್ನ ಕಣ್ಣುಗಳು ಸವರಿ ಮುಂದೆ ಸಾಗಿಬಿಡುತ್ತದೆ.ಹೀಗೇ ಸಾಗುತ್ತಾ, ಅದರ ಅಕ್ಕಪಕ್ಕದಲ್ಲಿ ಸಾಗದೆ, ವಾದ್ಯದ ಲಂಬಕ್ಕೆ ಸಾಗಿ ಶುಭ್ರ ಆಕಾಶದಲ್ಲಿ ಹೊಳೆವ ಬೆಳದಿಂಗಳ ಚಂದ್ರನಲ್ಲಿ ನಿಲ್ಲುತ್ತದೆ. ಅಲ್ಲಿಂದ ಒಟ್ಟಾರೆ ಕಲಾಕೃತಿಯನ್ನು ನೋಡುವ ನೋಟದಿಂದ ಮತ್ತೆ ಕೃತಿಯನ್ನು ಮರುಪ್ರವೇಶ ಮಾಡುವ ಹಂತದಲ್ಲಿ ನನಗೆ ಮುಖ್ಯವಾಗುವ ಆಕೃತಿ ಎಂದರೆ - ಸಿಂಹ, ಅದರ ಹೊಳೆವ ಕಣ್ಣುಗಳು, ರೋಮಗಳು, ಬಾಲ, ಇದರೊಂದಿಗೆ ಇದಾವುದರ ಪರಿವೆಯೇ ಇಲ್ಲದೆ ತನ್ನ ಕನಸಿನಲ್ಲಿ ಮುಳುಗಿ, ಮಲಗಿರುವ ಮನುಷ್ಯನನ್ನು, ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿರುವ ಅದರ ಭಾವ.ಕಾಮನಬಿಲ್ಲಿನ ಬಣ್ಣಗಳ ಪಟ್ಟೆ ಹೊಂದಿದ ಗೌನು ಧರಿಸಿ, ಅಂಥದೇ ಬಣ್ಣದ ಇನ್ನೊಂದನ್ನು ಹಾಸಿಕೊಂಡು ನಿಶ್ಚಿಂತೆಯಿಂದ ಮುಸುಕು ಹಾಕಿ ಮಲಗಿ ಕನಸು ಕಾಣುತ್ತಿರುವ ಅವಳೋ, ಅವನೋ ಸ್ಪಷ್ಟವಾಗದ ಕಪ್ಪು ಮನುಷ್ಯಾಕೃತಿ, ಕನಸಿನ ನಗು, ಕೈಯಲ್ಲಿ ಕೋಲು. ಇಷ್ಟನ್ನು ಕಾಣಿಸುವಷ್ಟರಲ್ಲಿ ಕಣ್ಣಿನ ಈ ಎಲ್ಲಾ ದೃಶ್ಯಗಳ ಮಾಹಿತಿಗಳಿಗೆ ಮನಸ್ಸು ತನ್ನ ತಕರಾರನ್ನು ತೆಗೆಯಲು ಪ್ರಾರಂಭಿಸುತ್ತದೆ.ಅದೇನೆಂದರೆ ಇದು ವಾಸ್ತವಕ್ಕೆ ಹತ್ತಿರವಿದೆಯೋ, ಇಲ್ಲವೋ, ಆಗ ನಮ್ಮ ತಿಳಿವಳಿಕೆಯ ತರ್ಕ, ನಂಬಿಕೆ, ಗ್ರಹಿಕೆಗಳು ಸಹಾಯಕ್ಕೆ ಬಂದು ನಮ್ಮಲ್ಲೊಂದು ರುಚಿಗೂ ಮನಸ್ಸಿನ ಪ್ರಶ್ನೆಗಳಿಗೂ ಒಂದು ಒಡಂಬಡಿಕೆಯ ಅನುಸಂಧಾನ ಸಾಧ್ಯವಾಗುತ್ತದೆ. ಈ ಹಂತದಿಂದ ಕಲಾಕೃತಿಯ ಮತ್ತು ನಮ್ಮ ಬದುಕಿನ ನೆನಪುಗಳ ಹೋಲಿಕೆ ಪ್ರಾರಂಭವಾಗುತ್ತದೆ. ನಂತರ ಕೃತಿಯು ನಮ್ಮಂದಿಗೆ ಆಪ್ತತೆಯನ್ನು ಸಾಧಿಸುತ್ತಾ, ಸಮೀಪವಾಗುತ್ತದೆ.ಈಗ ಬಹುಶಃ ಈ ಕಲಾಕೃತಿಯೂ ನಾವು ನೋಡಿದ ನಮ್ಮ ಊರಿನ ಬಯಲಲ್ಲಿ ದನ ಅಥವಾ ಕುರಿ ಕಾಯುವವರ ಚಿತ್ರಣವನ್ನು ನೆನಪಿಗೆ ತರುವುದಿಲ್ಲವೇ? ಇಷ್ಟು ಆಲೋಚನೆಗಳನ್ನು ನನ್ನಲ್ಲಿ ತುಂಬಿದ ಕೃತಿಯು ತನ್ನನ್ನು ಇನ್ನಷ್ಟು ವಿವರವಾಗಿ ಕಾಣಲು ನನ್ನನ್ನು ಸಹಜವಾಗಿಯೇ ಪ್ರೇರೇಪಿಸುತ್ತದೆ. ನನ್ನ ಕಣ್ಣುಗಳು ಕೃತಿಯಲ್ಲಿ ಮಣ್ಣಿನ ಹೂಜಿ- ನೀರಿನದೋ, ಮದ್ಯದ್ದೋ...?

 

ಮದ್ಯ ಎನ್ನಲು ಸಾಕಷ್ಟು ಪುರಾವೆಗಳು ಮಲಗಿದ ವ್ಯಕ್ತಿಯ ನಶೆಯ ಭಾವದ ಮೂಲಕ  ಸಂಬಂಧ ಕಲ್ಪಿಸಬಹುದು, ಅದರ ಮೇಲಿನ ತಿಳಿ ನೀರು ನದಿಯೋ, ಕೆರೆಯೋ? ಅದರ ಮೇಲೆ ಕಾಣುವ ತಿಳಿ ನೀಲಿಯ ಆಕಾಶದಲ್ಲಿನ ಆರು ನಕ್ಷತ್ರಗಳು... ಬೆಳ್ಳನೆ ಬೆಟ್ಟ ಸಾಲು... ಸಮೀಪ ಎನ್ನುವಷ್ಟು ಅಂತರದಲ್ಲಿ ಆಕೃತಿಗಳನ್ನು ಓದಿದ್ದು, ತಿಳಿದದ್ದು ಆಯಿತು.ಕಲಾಕೃತಿಯನ್ನು ಒಟ್ಟಾರೆಯಾಗಿ ಕಾಣುವ ಅನುಕೂಲಕ್ಕಾಗಿ ಸ್ವಲ್ಪ ದೂರದಲ್ಲಿ ನಿಂತು ನೋಡುವ ನೋಟ ಈಗ ಮುಖ್ಯವಾಗುತ್ತದೆ. ದೂರದ ಈ ನೋಡುವಿಕೆಯ ಮೂಲಕ ನಮಗೆ ಕೃತಿಯು ಸಂಪೂರ್ಣ ನಗ್ನವಾಗಿ, ಆಡಂಬರವಿಲ್ಲದೆ, ಸಹಜವಾಗಿ ತೆರೆದುಕೊಳ್ಳುತ್ತದೆ. ನಾವು ಅಲ್ಲಿಯವರೆಗೂ ಸಂಯಮದಿಂದ ತೆರೆದುಕೊಂಡಿದ್ದರೆ ಹತ್ತಿರದಲ್ಲಿ ವಸ್ತು ವಿವರಗಳ ಮೂಲಕ ಸೃಷ್ಟಿಸುವ ಭ್ರಮೆ, ಕಡಿಮೆಯಾಗಿ ಒಂದು ಕೃತಿಯ ನಿಜವಾದ, ಅನನ್ಯತೆಯ ಸ್ವರೂಪ ಈ ಹಂತದಲ್ಲಿ ನೋಡುಗನಿಗೆ ಸ್ಪಷ್ಟವಾಗುತ್ತದೆ.ಆಕೃತಿಗಳು ಪರಸ್ಪರ ಪೂರಕವಾಗಿರುವ ಭಾವ ಪ್ರಪಂಚವೊಂದು ನಮ್ಮೆದುರು ನಿಲ್ಲುತ್ತದೆ. ಇದು ಕೂಡ ನಮ್ಮ, ನಮ್ಮ ಅನುಭವದ ಭಾವ ಪ್ರಪಂಚವನ್ನು ಆಧರಿಸಿರುತ್ತದೆ ಎನ್ನುವುದು ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ. ಇದಕ್ಕೂ, ಕಲಾವಿದನ ಕೃತಿ ರಚನೆಗೆ ಪ್ರೇರಣೆಯಾದ ಅಂಶಕ್ಕೂ ತಾಳೆಯಾಗಬಹುದು, ಆಗದೆಯೂ ಇರಬಹುದು.ಅಪರಿಚಿತ ಸ್ಥಳದಲ್ಲಿ, ಅಪರಿಚಿತರನ್ನು ಭೇಟಿಯಾಗುವ ಸಂದರ್ಭ ಒದಗಿದಾಗ ನಾವು, ನಮ್ಮ ಸಂಬಂಧ  ಕಲ್ಪಿಸಿಕೊಳ್ಳುವುದಿಲ್ಲವೇ ಹಾಗೇ ಇಲ್ಲೂ ಕೂಡ ನಮ್ಮ ಮತ್ತು ಕಲಾಕೃತಿಯ ಆಕೃತಿಗಳೊಡನೆ ಒಂದು ತಾದ್ಯಾತ್ಮಕ್ಕಾಗಿ ಮನಸ್ಸು ತವಕಿಸುತ್ತದೆ.ಇಲ್ಲಿ ಮಲಗಿದ ವ್ಯಕ್ತಿ ಕುಡಿದ ನಶೆಯಲ್ಲಿ ಎಲ್ಲವನ್ನೂ ಮರೆತು ಆನಂದದ ಕನಸು ಕಾಣುತ್ತಿರಬಹುದು, ಅದನ್ನು ಕಂಡ `ವ್ಯಗ್ರತೆ~ಯೇ ಇವನ ಭಾವ ಪ್ರಪಂಚ ಕಂಡು ಆಶ್ಚರ್ಯಗೊಂಡಿರಬಹುದು. ಅಸಂಗತವೆನಿಸಿದರೂ ಇದೊಂದು ವಾಸ್ತವ ಕೃತಿ. ಕಲೆಯ ಸಾಫಲ್ಯತೆ ಇರುವುದೇ ಮನುಷ್ಯನೊಳಗಿನ ವಿಕೃತಿಗಳನ್ನು ಹೊರ ಸುರಿದು,ಸುಕೃತಿಯೆಡೆಗೆ ವಿಕಾಸ ಹೊಂದುವ ರೂಪಾಂತರದಲ್ಲಿ. ಹಾಗಾಗಿಯೇ ಕಲೆಯ ಅನುಭೂತಿಯನ್ನು ಅಧ್ಯಾತ್ಮದ ದರ್ಶನದ ಭಾಗವಾಗಿ ನೋಡುವ, ತಿಳಿಯುವ, ಗ್ರಹಿಸುವ ರೂಢಿ ಭಾರತೀಯ ಸಂಸ್ಕೃತಿಯಲ್ಲಿದೆ. ಇಂತಹ ಆಯಾಮಕ್ಕೆ ತೆರೆದುಕೊಳ್ಳುವ ವ್ಯಕ್ತಿತ್ವವನ್ನೇ `ದಾರ್ಶನಿಕ~ ಎಂದು ನಮ್ಮ ಸಂಸ್ಕೃತಿ ಗುರುತಿಸುತ್ತದೆ. ಈ ಮಾತುಗಳಿಗೆ ಸಮೀಪ ಎನ್ನುವಂತೆ ಕಲಾಕೃತಿ ಇದೆ.

 

ಅಂತಹುದೇ ಸಾವಧಾನದ ತಿಳಿ ಮನಸ್ಸು ಇಂತಹ ಕೃತಿ ರಚಿಸಬಲ್ಲುದು. ಅಂದಹಾಗೆ ಈ ಎಲ್ಲಾ ಮಾತುಗಳನ್ನು ಆಡಲು ನನ್ನನು ಪ್ರೇರೇಪಿಸಿದ ಕಲಾವಿದನ ಹೆಸರು -ಹೆನ್ರಿ ರುಸೊ, ಫ್ರೆಂಚ್ ನಾಡಿನ ಈ ಕಲಾವಿದ ಸಿದ್ಧ ಮಾದರಿಗಳಿಗೆ ಒತ್ತು ಕೊಡದೆ, ಸ್ವಯಂ ಕಲಿಕೆಯಲ್ಲಿ ಹೆಚ್ಚು ನಂಬಿಕೆ ಇರಿಸಿಕೊಂಡು ಕೃತಿ ರಚಿಸಿದವನು.ರುಸೊ ತನ್ನ 53ನೇ ವಯಸ್ಸಿನಲ್ಲಿ ಅಂದರೆ 1897ರಲ್ಲಿ ರಚಿಸಿದ `ದಿ ಸ್ಲೀಪಿಂಗ್ ಜಿಪ್ಸಿ~ ಎಂಬ ಇಲ್ಲಿನ ಕಲಾಕೃತಿ ಸಹೃದಯರ ಹಾಗೂ ವಿಮರ್ಶಕರ ಗಮನಸೆಳೆದ ಕಲಾಕೃತಿ. ಸಾಕಷ್ಟು ಜನಪ್ರಿಯವಾದ ಈ ಕೃತಿಯನ್ನು ಕುರಿತು ಅನೇಕರು ಪದ್ಯಗಳನ್ನು ರಚಿಸಿದ್ದಾರೆ.ಮಾತಿನ ಅಗತ್ಯವಿಲ್ಲದೆ ಅನುಭವಿಸಬೇಕಿದ್ದ ಈ ಕಲಾಕೃತಿಯ ಕುರಿತಂತೆ ಅನಿವಾರ್ಯವಾಗಿ ಇಷ್ಟೊಂದು  ಮಾತುಗಳನ್ನು ಆಡಬೇಕಾಯಿತು, ಇದೆಲ್ಲವನ್ನು ಒಪ್ಪದಿದ್ದಲ್ಲಿ ಅಥವಾ ಒಪ್ಪಿಕೊಂಡಲ್ಲಿ ನೀವೂ ಕಲಾಕೃತಿಯನ್ನು ನೋಡಲು ಪ್ರಾರಂಭಿಸಿದ್ದೀರಿ ಎಂದೇ ಅರ್ಥ. ಲಾಭ-ನಷ್ಟವಿಲ್ಲದ ಈ ಲೋಕದ ಅನುಭವ ಮಾತಿಗೆ ದೂರ - ಮೌನಕ್ಕೆ ಹತ್ತಿರ, ಬದುಕಿಗೆ ಸಮೀಪ.

(ಲೇಖಕರು ಖ್ಯಾತ ಕಲಾವಿದರು ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry