ಸೋಮವಾರ, ಆಗಸ್ಟ್ 26, 2019
28 °C
ಮೂಡಿಗೆರೆ: ಭಾರಿ ಗಾಳಿ ಮಳೆ

ಮನೆಗಳು ಜಖಂ, ಜನಜೀವನ ಸ್ತಬ್ಧ

Published:
Updated:

ಮೂಡಿಗೆರೆ: ತಾಲ್ಲೂಕಿನಾದ್ಯಂತ ಗುರುವಾರ ಮುಂಜಾನೆಯಿಂದಲೇ ಭಾರಿ ಗಾಳಿ ಮಳೆಯಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸ್ತಬ್ಧವಾಗಿದೆ.ಬುಧವಾರ ತಡರಾತ್ರಿ ಸುರಿದ ಗಾಲಿ ಮಳೆಗೆ, ಬಹಳಷ್ಟು ಹಾನಿ ಸಂಭವಿಸಿದ್ದು, ಒಂದೇ ದಿನದಲ್ಲಿ ತಾಲ್ಲೂಕಿನಾದ್ಯಂತ 28 ಕ್ಕೂ ಹೆಚ್ಚು ಮನೆಗಳು ಕುಸಿತಕಂಡಿವೆ. ತಾಲ್ಲೂಕಿನ ಕಳಸ ಮತ್ತು ಕೊಟ್ಟಿಗೆಹಾರ ಭಾಗಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 16 ಇಂಚಿನಷ್ಟು ಮಳೆಯಾಗಿದೆ. ವಿಪರೀತ ಮಳೆಗೆ ಕೊಟ್ಟಿಗೆಹಾರದಲ್ಲಿ ಹರಿಯುವ ಹೇಮಾವತಿಯ ಉಪನದಿಯು ಉಕ್ಕಿದ್ದರಿಂದ ಕೊಟ್ಟಿಗೆಹಾರದ ಅನೇಕ ಮನೆಗಳಿಗೆ ನೀರುನುಗ್ಗಿದ್ದು, ಮನೆಯ ಮತ್ತು ಅಂಗಡಿ ಮುಂಗಟ್ಟುಗಳ ದಿನಸಿ ಸಾಮಾನುಗಳು, ಮನೆಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಾತ್ರಿಯೇ ತಾಲ್ಲೂಕು ಆಡಳಿತದಿಂದ ರಕ್ಷಣಾ ಕಾರ್ಯವನ್ನು ನಡೆಸಲಾಗಿದೆ. ಸ್ಥಳದಲ್ಲಿ ಗ್ರಾಮಲೆಕ್ಕಾಧಿಕಾರಿ ಬಸವೇಗೌಡ ಮತ್ತು ತಂಡದವರನ್ನು ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.ಕೊಟ್ಟಿಗೆಹಾರದಲ್ಲಿ ಸುರಿದ ಮಳೆಗೆ ಸುತ್ತಮುತ್ತಲ ಗ್ರಾಮದ ವೆಂಕಟೇಶ್ ಆಚಾರ್, ದ್ಯಾವಯ್ಯ, ಸುಶೀಲಮ್ಮ, ಅಮಿನಾಭಿ, ನಾಗರಾಜ, ಮಂಜುನಾಥ್ ಎಂಬುವವರ ಮನೆಗಳು ಕುಸಿದಿದ್ದು, ಗುರುವಾರ ಸ್ಥಳಕ್ಕೆ ತಹಶೀಲ್ದಾರ್ ಎ.ವಿ. ರುದ್ರಪ್ಪಾಜಿರಾವ್ ಮತ್ತು ತಾ.ಪಂ. ಅಧ್ಯಕ್ಷ ಎಂ.ಎ. ಶೇಷಗಿರಿ ಕಳಸ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುರಿಯುತ್ತಿರುವ ಮಳೆಯಿಂದಾಗಿ ತರುವೇ ಚೌಡೇಶ್ವರಿಗುಡ್ಡದಲ್ಲಿರುವ ಕೆರೆಯೊಡೆದು ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸುಮಾರು ಆರು ಕಿ.ಮೀ ಯಷ್ಟು ಡಾಂಬಾರು ರಸ್ತೆ ಸಂಪೂರ್ಣ ಕೊಚ್ಚಿಹೋಗಿದೆ. ಬಣಕಲ್ ಸಮೀಪದ ಬಿನ್ನಾಡಿ ಗ್ರಾಮದಲ್ಲಿ ಪ್ರಾಕೃತಿಕ ಕೆರೆ ತುಂಬಿ ಕೋಡಿಬಿದ್ದಿರುವುದರಿಂದ ಬಿನ್ನಾಡಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ಪಾರ ಹಾನಿ ಸಂಭವಿಸಿದೆ. ಹೊರಟ್ಟಿ, ಗುತ್ತಿ, ಭೈರಾಪುರ, ದೇವರುಂದ, ತರುವೆ, ಉಗ್ಗೆಹಳ್ಳಿ ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ, ನಾಟಿ ಮಾಡಿದ್ದ ಗದ್ದೆಗಳು ಸಂಪೂರ್ಣ ಮುಳುಗಿವೆ.  ಉಗ್ಗೆಹಳ್ಳಿಯಲ್ಲಿ ಹೇಮಾವತಿ ನದಿನೀರು ಏರಿಕೆ ಕಂಡಿದ್ದು, ಗದ್ದೆಬಯಲೆಲ್ಲವೂ ಜಲಾವೃತಗೊಂಡಿದೆ. ಗ್ರಾಮದ ಅಂಗನವಾಡಿ ಕಟ್ಟಡ ಮತ್ತು ಸುತ್ತಮುತ್ತಲ ಗ್ರಾಮದ ನಾಲ್ಕು ಮನೆಗಳು, ಫಲ್ಗುಣಿಯ, ಹ್ಯಾರಗುಡ್ಡೆ, ಏರಿಕೆಯಲ್ಲಿ ತಲಾ ಒಂದು ಮನೆಗಳು ಕುಸಿದಿವೆ.ಹೇಮಾವತಿ ನದಿಯಲ್ಲಿ ನೀರು ಹೆಚ್ಚಳವಾಗಿರುವ ಕಾರಣ ಬಂಕೇನಹಳ್ಳಿ ಮತ್ತು ಬಕ್ಕಿ ಗ್ರಾಮಗಳಲ್ಲಿ ಸೇತುವೆಯ ಸಮೀಪಕ್ಕೆ ನೀರು ಬಂದಿದ್ದು, ಬಂಕೇನಹಳ್ಳಿಯ ಸೇತುವೆ ಕೊಚ್ಚಿ ತುಂಡಾಗುವಂತಾಗಿದ್ದು, ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಗೌಡಳ್ಳಿ, ಊರುಬಗೆ, ಯು. ಹೊಸಳ್ಳಿಯಲ್ಲಿ ಸೇತುವೆ ಸಂಪೂರ್ಣ ಮುಳುಗಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದೆಲ್ಲೆಡೆ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಸ್ಥಗಿತಗೊಂಡಿದೆ.ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮೇಲೆ ಮರ ಬಿದ್ದಿದ್ದರಿಂದ ಬೆಳಗ್ಗೆ ಕೆಲವು ಗಂಟೆಗಳವರೆಗೆ ಸಂಚಾರದಲ್ಲಿ ವ್ಯತಾಯ ಉಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿತ್ತು. ರಜೆಯನ್ನು ಶುಕ್ರವಾರಕ್ಕೂ ವಿಸ್ತರಿಸಿ ತಹಶೀಲ್ದಾರರು ಆದೇಶಿಸಿದ್ದಾರೆ.

Post Comments (+)