ಮನೆಗಳ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ

7

ಮನೆಗಳ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ

Published:
Updated:

ಕುಷ್ಟಗಿ: ಮನೆ ನಿರ್ಮಾಣ ಪಡಿತರ ಚೀಟಿ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಇಲ್ಲಿ ಪ್ರತಿಭಟನೆ ನಡೆಸಿದ ಸಂತ ಶಿಶುನಾಳ ಶರೀಫ ನಗರದ ಗುಡಿಸಲು ನಿವಾಸಿಗಳು ನಂತರ ತಹಸೀಲ್ದಾರರ ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು. ಬುತ್ತಿಬಸವೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ ಪುರಸಭೆಯಲ್ಲಿ ಮುಖ್ಯಾಧಿಕಾರಿ ವಿಠಲ ಲಾಟ್ನಿ ಅವರಿಗೆ ಮನವಿ ಸಲ್ಲಿಸಿದರು. ನಂತರ ತಹಸೀಲ್ದಾರರ ಕಚೇರಿಗೆ ತೆರಳಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಸೂರು ರಹಿತ ನೂರಾರು ಜನರು ಅದರಲ್ಲಿ ಪಾಲ್ಗೊಂಡಿದ್ದರು.ನಿರ್ವಸಿತರಾಗಿರುವ ಸುಮಾರು ಇನ್ನೂರಕ್ಕೂ ಅಧಿಕ ಅಲೆಮಾರಿ ಕುಟುಂಬಗಳು ಮನೆಗಳಿಲ್ಲದೇ ಹರಕು ಮುರುಕು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ವಾಜಪೇಯಿ ನಗರ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ಈ ಹಿಂದಿನಿಂದಲೂ ಮನವಿ ಮಾಡುತ್ತ ಬಂದಿದ್ದೇವೆ, ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಿರುವ ಸರ್ಕಾರ ಸದರಿ ಯೋಜನೆಯಲ್ಲಿ ಅರ್ಹರಿಗೆ ಮನೆಗಳನ್ನು ನಿರ್ಮಿಸಿಕೊಡುವ ಪ್ರಸ್ತಾವನೆಗೆ ಮಂಜೂರಾತಿ ನೀಡಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಕೆಲಸಕ್ಕೆ ಮುಂದಾಗಿಲ್ಲ.ಫಲಾನುಭವಿಗಳ ಆಯ್ಕೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರ ಅಧ್ಯಕ್ಷತೆಯ ಸಮಿತಿ ಈವರೆಗೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ ಎಂದು ದೂರಿದರು. ಅಲೆಮಾರಿಗಳ ಸಂಘದ ಅಧ್ಯಕ್ಷ ಮೆಹಬೂಬಸಾಬ್ ಮದಾರಿ, ಪುಟ್ಟಪ್ಪ ಕರಿ, ಮೋಹನಲಾಲ ಜೈನ್ ಮತ್ತು ಪುರಸಭೆ ಸದಸ್ಯ ವಸಂತ ಮೇಲಿನಮನಿ ಧರಣಿ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry