ಶುಕ್ರವಾರ, ನವೆಂಬರ್ 22, 2019
22 °C

`ಮನೆಗೆ ಮರಳಿದ ಶಂಕರಲಿಂಗೇಗೌಡ'

Published:
Updated:

ಬೆಂಗಳೂರು: ಬಿಜೆಪಿ ತೊರೆದಿರುವ ಮಾಜಿ ಶಾಸಕರಾದ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ, ಚಾಮರಾಜ ಕ್ಷೇತ್ರದ ಎಚ್.ಎಸ್.ಶಂಕರಲಿಂಗೇಗೌಡ ಶನಿವಾರ ಇಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರಿದರು.ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇಬ್ಬರೂ ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.ಮೈಸೂರಿನ ಚಾಮರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಂಕರಲಿಂಗೇಗೌಡ ಬೆಂಬಲಿಗರು ಸಹ ಜೆಡಿಎಸ್‌ಗೆ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, `ಶಂಕರಲಿಂಗೇಗೌಡ ಮರಳಿ ಮನೆಗೆ ಬಂದಿದ್ದಾರೆ. ಮುಂಚೆ ಅವರು ಜೆಡಿಎಸ್‌ನಲ್ಲೇ ಇದ್ದರು. ಸ್ಥಳೀಯ ಮಟ್ಟದಲ್ಲಿ ಆದ ವ್ಯತ್ಯಾಸಗಳಿಂದಾಗಿ ಪಕ್ಷದಿಂದ ದೂರವಾಗಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದ ಅವರ ಸೇರ್ಪಡೆಯಿಂದ ಪಕ್ಷ ಮತ್ತಷ್ಟು ಬಲಿಷ್ಠವಾಗಿದೆ' ಎಂದರು.ಆಡಳಿತ ಪಕ್ಷದ ಶಾಸಕರಾಗಿದ್ದರೂ, ಕ್ಷೇತ್ರದ ಕೆಲಸಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ವಜ್ಜಲ ಅವರು ಎರಡು ವರ್ಷಗಳಿಂದ ಹೇಳುತ್ತಿದ್ದರು. ಬಿಜೆಪಿ ಸರ್ಕಾರ ಕ್ಷೇತ್ರವನ್ನು ನಿರ್ಲಕ್ಷಿಸಿತು ಎಂಬ ಬೇಸರದಿಂದ ಜೆಡಿಎಸ್ ಸೇರಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಾನಪ್ಪ, ಶಂಕರಲಿಂಗೇಗೌಡ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಕಾರ್ಯಕ್ರಮವನ್ನು ಪಕ್ಷದ ಕಚೇರಿ ಒಳಗೆ ನಡೆಸಬೇಕೊ ಅಥವಾ ಹೊರಗೆ ನಡೆಸಬೇಕೊ ಎಂಬ ಬಗ್ಗೆ ಕೆಲಕಾಲ ಗೊಂದಲ ಉಂಟಾಗಿತ್ತು.ಚುನಾವಣಾ ಆಯೋಗದ ಅನುಮತಿ ಇಲ್ಲದೆ ಹೊರಗೆ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ವೀಕ್ಷಕರು ಆಕ್ಷೇಪಿಸಿದರು. ಕೊನೆಗೆ ಕಚೇರಿ ಆವರಣದಲ್ಲೇ ಸೇರ್ಪಡೆ ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)