ಮನೆಗೇ ಡ್ರೈವಿಂಗ್ ಲೈಸನ್ಸ್

7

ಮನೆಗೇ ಡ್ರೈವಿಂಗ್ ಲೈಸನ್ಸ್

Published:
Updated:

ಬೆಂಗಳೂರು: ‘ಮಧ್ಯವರ್ತಿಗಳ ಹಾವಳಿ ತಡೆಯುವ ಉದ್ದೇಶದಿಂದ ಚಾಲನಾ ಪರವಾನಗಿಯನ್ನು ಅರ್ಜಿದಾರರ ಮನೆಗಳಿಗೇ ತಲುಪಿಸುವ ವ್ಯವಸ್ಥೆಯನ್ನು ರಾಜ್ಯದೆಲ್ಲೆಡೆಗೆ ವಿಸ್ತರಿಸಲಾಗುವುದು’ ಎಂದು ಸಾರಿಗೆ ಸಚಿವ ಆರ್. ಅಶೋಕ ತಿಳಿಸಿದರು.ನಗರದ ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇ- ಟೋಕನ್ ವ್ಯವಸ್ಥೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.‘ವಾಹನ ಪರವಾನಗಿಯನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆ ಮನೆಗೆ ತಲುಪಿಸುವ ಯೋಜನೆಯನ್ನು ಕೋರ್ಟ್ ಕೂಡ ಎತ್ತಿ ಹಿಡಿದಿದೆ. ರಾಜ್ಯದ ಎಲ್ಲೆಡೆಗೆ ಈ ಯೋಜನೆಯನ್ನು ವಿಸ್ತರಿಸುವುದರಿಂದ ಅಕ್ರಮವನ್ನು ತಪ್ಪಿಸಬಹುದು’ ಎಂದರು.‘ಇ- ಟೋಕನ್ ವ್ಯವಸ್ಥೆಯಿಂದ ಜನರು ಸರತಿ ಸಾಲಿನಲ್ಲಿ ಕಾಯಬೇಕಾದ ಕಷ್ಟ ತಪ್ಪುತ್ತದೆ. ಟೋಕನ್ ಪಡೆದು ತಮ್ಮ ಸರತಿ ಬಂದಾಗ ಸಾರ್ವಜನಿಕರು ಸಿಬ್ಬಂದಿಯನ್ನು ಸಂಪರ್ಕಿಸುವ ವ್ಯವಸ್ಥೆ ಇದಾಗಿದೆ. ಪಾಸ್‌ಪೋರ್ಟ್ ಕಚೇರಿಗಳಲ್ಲಿ ಈ ರೀತಿಯ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ  ಅಶಕ್ತರು, ವೃದ್ಧರಿಗೆ ಅನುಕೂಲಕರವಾಗಿದೆ. ಅಲ್ಲದೇ ಮಧ್ಯವರ್ತಿಗಳಿಗೆ ಕೂಡ ಅವಕಾಶ ಇಲ್ಲದಂತಾಗುತ್ತದೆ’ ಎಂದರು.‘ದೇಶದಲ್ಲಿಯೇ ಮೊದಲ ಬಾರಿಗೆ 28 ಲಕ್ಷ ಸ್ಮಾರ್ಟ್‌ಕಾರ್ಡ್ ಹಾಗೂ ಚಾಲನಾ ಪರವಾನಗಿಯನ್ನು ವಿತರಿಸಲಾಗಿದೆ. ಚಾಲನಾ ಪರವಾನಗಿ ಪತ್ರದಲ್ಲಿರುವ ಲೋಪದೋಷಗಳನ್ನು ತಪ್ಪಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಟಿ.ಹಾಲಸ್ವಾಮಿ ಮತ್ತಿತರರು ಈ ಸಂದರ್ಭದದಲ್ಲಿ   ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry