ಶುಕ್ರವಾರ, ಜನವರಿ 24, 2020
21 °C

ಮನೆ;ನಮ್ಮನೆ ಆಗುವ ಬಗೆ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಅನ್ನುವುದು ಜನಜನಿತ ಸೂಕ್ತಿ. ಆದರೆ, ಮನೆ ಕಟ್ಟಿದ ನಂತರ ಎಲ್ಲರೂ ನೋಡುವುಂತೆ ಕಟ್ಟುವುದು, ಕಟ್ಟಿದ್ದನ್ನು ನಿಂತು ನೋಡುವುದು ನಮ್ಮ ಸೃಜನಶೀಲ ಮನಸಿನ ಶಕ್ತಿ, ಸಾಮರ್ಥ್ಯದ ಪ್ರತಿಬಿಂಬವಾಗಿರುತ್ತದೆ.ಮನೆ `ನಮ್ಮನೆ~ ಎನಿಸುವುದು ಯಾವಾಗ. ಪ್ರತಿಯೊಬ್ಬರಿಗೂ ಮನೆ ಎಂದರೆ ಒಂದೊಂದು ಬಗೆಯ ಅವ್ಯಕ್ತ ಪರಿಕಲ್ಪನೆ ಇರುತ್ತದೆ. ಅಜ್ಜನ ಮನೆಯ ಅಟ್ಟ ನೆನಪಾದರೆ, ಅಮ್ಮನ ಮನೆಯ ಅಂಗಳ, ಇನ್ನೆಲ್ಲೊ ಅಜ್ಜಿ ಕೋಣೆಯಲ್ಲಿ ನಾಣ್ಯ ಇಡುತ್ತಿದ್ದ ಮಾಡೆಗಳು, ಜಂತಿ ಹೀಗೆ ಒಂದೊಂದು ಕನಸುಗಳು, ನೆನಪುಗಳು.ಇವೆಲ್ಲವನ್ನೂ ಕ್ರೋಡೀಕರಿಸುತ್ತ, ಎಲ್ಲವನ್ನೂ ಒಂದು ಸ್ವರೂಪಕ್ಕೆ ತರುವಲ್ಲಿ, ನಮ್ಮೆಲ್ಲ ನೆನಪು, ಕನಸುಗಳು, ಇನ್ನಾವುದೋ ರೂಪ ತಳೆದಿರುತ್ತವೆ. ಆದರೆ ಇಂಥ `ನಮ್ಮ~ ಭಾವ ಬೆಳೆಸುವುದೇ ಮಹತ್ವದ ವಿಷಯ.ಪ್ರತಿಯೊಂದರಲ್ಲಿಯೂ `ನಮ್ಮತನ~ದ ಛಾಯೆ ಮೂಡಿಸುವಲ್ಲಿ ಪೀಠೋಪಕರಣಗಳ ಪಾತ್ರವೂ ಅತಿ ಮಹತ್ವದ್ದು. ಆದರೆ, ಮನೆ ನಿರ್ಮಾಣದಲ್ಲಿಯೇ ಹಣ, ಬೆವರು ಬಸಿದವರಿಗೆ ಈ ಕೊನೆಯ ಹಂತದಲ್ಲಿ `ಹೇಗಾದರೂ ಮುಗಿದರೆ ಸಾಕು~ ಎನ್ನಿಸುವಂತಾಗಿರುತ್ತದೆ.

ಆದರೆ, ಒಳಾಲಂಕಾರ ತಜ್ಞರು ನಮ್ಮಂದಿಗೆ ಇದ್ದರೆ, ನಮ್ಮೆಲ್ಲ ಹಣದ ಗಂಟು, ಕನಸಿನ ನಂಟು ಎರಡಕ್ಕೂ ನಡುವೆ ಬೆಸುಗೆಯ ರೇಖೆ ಎಳೆಯುತ್ತಾರೆ. ಇಲ್ಲದಿದ್ದರೆ ಇವೆರಡೂ ಸಮಾನಾಂತರವಾಗಿ ಸಾಗುವುದೇ ಹೆಚ್ಚು.ಒಳಾಲಂಕಾರ ಹಾಗೂ ಅಗತ್ಯದ ಪೀಠೋಪಕರಣಗಳನ್ನು ಸಿದ್ಧ ಪಡಿಸುವಾಗ ಹೆಚ್ಚಾಗಿ ಗಮನದಲ್ಲಿ ಇರಿಸಿಕೊಳ್ಳಬೇಕಾದ ಸಂಗತಿಗಳು ಎರಡು.  1. ಲಭ್ಯ ಇರುವ ಸ್ಥಳಾವಕಾಶ 2. ಸಂಪನ್ಮೂಲಗಳ ಸದ್ಬಳಕೆ ಮತ್ತು ಇವೆರಡನ್ನೂ ಒಳಗೊಳ್ಳವಂಥ ಸಮರ್ಥ ವಿನ್ಯಾಸ.

ಈ ಮೂರೂ ಸಂಗತಿಗಳನ್ನು ಸಮನ್ವಯ ಗೊಳಿಸುವುದೇ ಉತ್ತಮ ವಿನ್ಯಾಸದ ಮನೆ ಎನಿಸಿಕೊಳ್ಳುತ್ತದೆ ಎನ್ನುತ್ತಾರೆ ಬೆಂಗಳೂರಿನ ನೋವಾ ಇಂಟೆರಿಯರ್ಸ್‌ನ ಪ್ರಿಯದರ್ಶನ್ ಅವರು.ಅವರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ವ್ಯವಸ್ಥೆಗೆ ಹೊಂದುವಂಥ ವಿನ್ಯಾಸಗಳನ್ನು ಸಿದ್ಧ ಪಡಿಸಬಹುದು. ಕಡಿಮೆ ಸ್ಥಳಾವಕಾಶವಿದ್ದಲ್ಲಿ ಕೇವಲ ಹಲಗೆಗಳ ಬಳಕೆಯಿಂದಲೇ ಸುಂದರವಾಗಿ ಅಲಂಕರಿಸಬಹುದು. ಸ್ಥಳಾವಕಾಶವಿದ್ದಲ್ಲಿ ಗಾಜು, ಕಾಷ್ಠ, ಬೆಳಕಿನ ಸಂಯೋಜನೆಯಿಂದ ವಿನ್ಯಾಸಗೊಳಿಸಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.ಕನಿಷ್ಠ ಒಂದು ಮನೆಗೆ ಬಹು ಬಳಕೆ ಉದ್ದೇಶದ ದೊಡ್ಡ ಕೋಣೆ (ಹಾಲ್), ಅಡುಗೆ ಮನೆ, ಮಾಸ್ಟರ್ ಬೆಡ್‌ರೂಂ, ಅತಿಥಿ ಕೋಣೆ ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡರೂ ಪ್ರತಿಯೊಬ್ಬರ ಹಣಕ್ಕೆ ತಕ್ಕಂತೆ, ಗುಣಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ, ವಿನ್ಯಾಸಗಳಲ್ಲಿ ಹೊಸತನ ತಂದರೆ ಎಲ್ಲರೂ ತಮ್ಮ ಇಷ್ಟಕ್ಕೆ ತಕ್ಕಂಥ ಪೀಠೋಪಕರಣಗಳನ್ನು ಸಿದ್ಧ ಪಡಿಸಬಹುದು ಎನ್ನುತ್ತಾರೆ ಅವರು. ನಮ್ಮ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸುವುದರಿಂದಲೇ ಅದು `ನಮ್ಮನೆ~ ಎಂಬ ಭಾವ ತರುತ್ತದೆ. ಪ್ರತಿಯೊಂದು ಹಂತದಲ್ಲಿಯೂ  ನಮ್ಮ ಅಗತ್ಯವನ್ನೇ ಗಮನದಲ್ಲಿ ಇರಿಸಿಕೊಳ್ಳುವುದರಿಂದ ಇಲ್ಲಿ ಯಾವುದೇ  ಕೊರತೆಗಳಿಗೆ ಅವಕಾಶಗಳೇ ಕಡಿಮೆ.

ಆದರೆ, ಹೆಚ್ಚಾಗಿ ಪೀಠೋಪಕರಣಗಳನ್ನು ಮಾರುಕಟ್ಟೆಯಿಂದ ಕೊಂಡು ತರುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಡಿಮೆ ಬಂಡವಾಳ ಹಾಗೂ ಸಮಯದ ಉಳಿತಾಯಕ್ಕೆ ಹೆಚ್ಚು ಮಹತ್ವ ನೀಡುವವರು ಈ ನಿಟ್ಟಿನಲ್ಲಿಯೇ ಯೋಚಿಸುತ್ತಾರೆ.ಆದರೆ, ಮಾರುಕಟ್ಟೆಯಲ್ಲಿ ದೊರೆಯುವ ಪೀಠೋಪಕರಣಗಳಲ್ಲಿ ಗಟ್ಟಿತನದ ಕೊರತೆ ಇರುತ್ತದೆ. ಬೆಲೆ ಕಡಿತಗೊಳಿಸುವ ಭರದಲ್ಲಿ ಪೀಠೋಪಕರಣಕ್ಕೆ ಬಳಸುವ ಕಟ್ಟಿಗೆಯ ಗಾತ್ರದಲ್ಲಿ ಕಡಿಮೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಉತ್ಕೃಷ್ಟ ಮಟ್ಟದ ವಸ್ತುಗಳ ನಿರ್ಮಾಣಕ್ಕೆ 18 ಎಂ.ಎಂ. ಗಾತ್ರದ ಕಾಷ್ಠದ ಹಾಸುಗಳನ್ನು ಬಳಸುತ್ತಾರೆ. ಈ ಷೀಟ್‌ಗಳಲ್ಲಿ ಉತ್ತಮ ಅಥವಾ ಗೃಹಬಳಕೆಗೆ 15 ಎಂ.ಎಂ. ಸಹ ಸಾಕಾಗಿರುತ್ತದೆ.

 

ಆದರೆ, ಮಾರುಕಟ್ಟೆಯಲ್ಲಿ 12 ಎಂ.ಎಂಗೆ ಇಳಿಸಿರುತ್ತಾರೆ. ಅವರ ಪ್ರಕಾರ ಬಟ್ಟೆಗಳ ಭಾರವನ್ನು ತಡೆಯುವಷ್ಟು ದಪ್ಪದ ಕಪಾಟುಗಳಿದ್ದರೆ ಸಾಕು! ಎಂಬ ನಿಲುವು ಅವರದ್ದು.

ಮನೆ ಇರುವಷ್ಟೂ ಕಾಲ, ದೀರ್ಘ ಬಾಳಿಕೆಯ ಕಪಾಟುಗಳು ಬೇಕೆಂದರೆ ಉತ್ತಮ ಗುಣಮಟ್ಟದ ಕಟ್ಟಿಗೆ ಮತ್ತು ಗಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ.ಆದರೆ, ಈಗ ಸುದೀರ್ಘ ಕಾಲದ ಬಳಕೆ ಎಂಬ ಪರಿಕಲ್ಪನೆಯೇ ಬದಲಾಗುತ್ತಿದೆ. ಎಲ್ಲರಿಗೂ ಬದಲಾವಣೆ ಬೇಕು. ನಮ್ಮ ಕಾಲಕ್ಕೆ ಒಂದ್ಹತ್ತು ವರ್ಷ ಇದು ಬಂದರೆ ಸಾಕು, ಮತ್ತೆ ಮಕ್ಕಳು ದೊಡ್ಡವರಾದಾಗ ಅವರ ಅಭಿರುಚಿಗೆ ತಕ್ಕ ವಸ್ತುಗಳನ್ನು ಕೊಂಡರೆ ಆಯಿತು ಎಂಬಂಥ ಮನೋಭಾವದವರ ಬಯಕೆ ತೀರಿಸಲು ಈ ಮಾರುಕಟ್ಟೆಯ ವಸ್ತುಗಳು ಸಮರ್ಥವಾಗಿರುತ್ತವೆ.ಮನೆ ನಿರ್ಮಾಣವಾದ ನಂತರ ಮನೆಯ ಗಾಳಿ ಬೆಳಕಿಗೆ ತೊಂದರೆಯಾಗದಂತೆ ಒಳಾಂಗಣವನ್ನು ವಿನ್ಯಾಸಗೊಳಿಸಬೇಕು. ಉಳ್ಳವರು ಮನೆಗೆ ಕುಶಲ ಕರ್ಮಿಗಳನ್ನು ಕರೆಯಿಸಿ ತಮ್ಮ ಅಗತ್ಯಗಳನ್ನು ಈಡೇರಿಸಿಕೊಳ್ಳುತ್ತಾರೆ. ದಿನಗೂಲಿಯ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದರೆ, ಹೆಚ್ಚಿನ ಹಣ ಕೂಲಿಗಾಗಿಯೇ ಮೀಸಲಿಡಬೇಕಾಗುತ್ತದೆ. ಅದರ ಬದಲು ಗುತ್ತಿಗೆ ಆಧಾರದ ಮೇಲೆಯೂ ಕೆಲಸ ನೀಡಬಹುದಾಗಿದೆ. ಈ ಸಾಂಪ್ರದಾಯಿಕ ವಿಧಾನದಲ್ಲಿ ಮನೆಯಲ್ಲಿ ದೂಳು, ಹೊಟ್ಟು ಸಹಿಸಿಕೊಳ್ಳುವುದರ ಜತೆಗೆ ಹೆಚ್ಚು ಖರ್ಚಿನ ಹೊರೆಯನ್ನೂ ಹೊರಬೇಕಾಗುತ್ತದೆ.ಕೆಲ ಪ್ರತಿಷ್ಠಿತ ಕಂಪೆನಿಗಳು ನಿಮ್ಮ ಅಗತ್ಯ ಹಾಗೂ ಆದ್ಯತೆಗೆ ತಕ್ಕಂತೆಯೇ ವಿನ್ಯಾಸಗೊಳಿಸಿ ನೀಡುತ್ತಾರೆ. ಆದರೆ, ಜೇಬು ಭದ್ರವಾಗಿರಬೇಕು ಅಷ್ಟೆ! ಇನ್ನೂ ಕೆಲವೆಡೆ ಹೊರ ರಾಜ್ಯದ ಕುಶಲಕರ್ಮಿಗಳೂ, ಸ್ಥಳೀಯ ಕುಶಲ ಕರ್ಮಿಗಳೂ ನಿರ್ಮಿಸಿಕೊಡುತ್ತಾರೆ. ಇವೆಲ್ಲವೂ ಅವರವರ ಭಾವಕ್ಕೆ ತಕ್ಕಂತೆ, ಅಭಿರುಚಿ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ಮಿಸಿ ಕೊಡುತ್ತಾರೆ.  ಅಂತಿಮ ನಿರ್ಧಾರ, ಅಂತಿಮ ಆಯ್ಕೆ   ಏನಿದ್ದರೂ ಮನೆಯ  ಮಾಲೀಕರದ್ದೆೀ!

 

   

ಪ್ರತಿಕ್ರಿಯಿಸಿ (+)