ಮನೆಪಾಠ ಎನ್ನುವ ಶಕ್ತಿಮದ್ದು

ಬುಧವಾರ, ಜೂಲೈ 17, 2019
30 °C

ಮನೆಪಾಠ ಎನ್ನುವ ಶಕ್ತಿಮದ್ದು

Published:
Updated:

`ನಿಲ್ಲದಿರು; ಹೇಗೋ ಅವರಿವರ ತಳ್ಳಿ, ಮುನ್ನುಗ್ಗು;/ ಎಲ್ಲಾದರೂ ಸರಿಯೆ ಬೇರೂರು, ಹೀರು~. ಕವಿ ಜಿ.ಎಸ್.ಶಿವರುದ್ರಪ್ಪನವರ `ಮುಂಬೈ ಜಾತಕ~ ಕವಿತೆಯ ಸಾಲುಗಳಿವು.ಇವು, ಆಧುನಿಕತೆಯ ಓಟಕ್ಕೆ ಒಪ್ಪಿಸಿಕೊಂಡ ಬದುಕುಗಳ ಕುರಿತ ವ್ಯಾಖ್ಯೆಯಂತಿಲ್ಲವೇ? ನುಗ್ಗುವುದು, ತಳ್ಳುವುದು, ಹೀರುವುದು, ಬೇರೂರುವುದು- ಇವೆಲ್ಲ ಆಧುನೀಕರಣ ಹಾಗೂ ಜಾಗತೀಕರಣ ಸಂದರ್ಭದ ಅನಿವಾರ್ಯಗಳು ಹಾಗೂ ಸ್ಪರ್ಧಾತ್ಮಕ ಜಗತ್ತಿನ ಗುಣವಿಶೇಷಗಳೇ ಅಲ್ಲವೇ?ಭಾವುಕತೆಯನ್ನು ಮೀರಿ, ಜಾಗತೀಕರಣವನ್ನು ಒಪ್ಪಿಕೊಂಡಾಯಿತು. ಹಾಗಾಗಿ, ಜಾಗತೀಕರಣದ ಬಯಲಿನಲ್ಲಿ ಈಗ ವೇಗವಾಗಿ ಓಡದೆ ವಿಧಿಯಿಲ್ಲ. ಹೀಗೆ, ಸ್ಪರ್ಧೆಯ ಓಟಕ್ಕೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಒಂದು ಸಲಕರಣೆಯೇ `ಮನೆಪಾಠ~.`ಉಳ್ಳವರು ಮನೆಪಾಠಕ್ಕೆ ಕಳಿಸುವರು~ ಎಂದು ಸುಮ್ಮನಿರುವ ಸಂದರ್ಭ ಇಂದಿನದಲ್ಲ. `ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು~ ಎನ್ನುವ ಮಾತಿಗೂ ಈಗ ಕಿಮ್ಮತ್ತಿಲ್ಲ.ಅಪ್ಪ ಅಮ್ಮ ಎನ್ನುವ ಮನುಷ್ಯರು ಕುಟುಂಬವೆಂಬ ನೊಗಕ್ಕೆ ಕತ್ತು ಕೊಟ್ಟ ಎತ್ತುಗಳು. ನೌಕರಿಯ ಹೆಸರಿನಲ್ಲಿ, ತಮ್ಮ ಕಸುವನ್ನು ಪಾಳಿಗಳಲ್ಲಿ ಬಸಿದುಬರುವ ಈ ಅಪ್ಪಅಮ್ಮಂದಿರಿಗೆ ಮನೆಗೆ ಬರುವ ವೇಳೆಗೆ ಇನ್ನಿಲ್ಲದ ನಿತ್ರಾಣ. ಮಗುವನ್ನು ಮುದ್ದಿಸುವಷ್ಟು ಸಮಯವೂ ದುರ್ಲಭವಾಗಿರುವಾಗ, ಮಗುವಿಗೆ ಪಾಠ ಹೇಳುವ ವ್ಯವಧಾನ ಯಾರಿಗಿದೆ?

 

ಬಿಡುವು ಇದೆಯೆಂದು ಭಾವಿಸುವುದಾದರೂ, ಆಧುನಿಕ ಶಿಕ್ಷಣ ಪದ್ಧತಿಯ ಪಾಠ ಹೇಳುವಷ್ಟು ಸಾಮರ್ಥ್ಯವಾದರೂ ಎಷ್ಟು ಮಂದಿಗಿದೆ? ಶಾಲೆಯಲ್ಲಿ ಕಲಿತದ್ದು ಸಾಕು ಎಂದು ಸುಮ್ಮನಿದ್ದುಬಿಟ್ಟರೆ, ನಾಳಿನ ಓಟದಲ್ಲಿ ಮಂದೆಯಲ್ಲಿ ಮಗು ಒಂದಾಗುವುದು ಹೇಗೆ? ಇಂಥ ಪ್ರಶ್ನೆಗಳಿಗೆಲ್ಲ ಟ್ಯೂಷನ್- ಅರ್ಥಾತ್, `ಮನೆಪಾಠ~ವೇ ಮದ್ದು.ಒಂದು ಕಾಲದಲ್ಲಿ `ಮನೆಪಾಠ~ ಎನ್ನುವುದು ಉಳ್ಳವರ ಮಕ್ಕಳು ಹೊಂದುತ್ತಿದ್ದ ಹೆಚ್ಚಿನ ಸವಲತ್ತಾಗಿತ್ತು. ಆದರೆ, ಇವತ್ತು ಟ್ಯೂಷನ್ನಿನ ಗರಡಿಮನೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಮಧ್ಯಮವರ್ಗದ ಕುಟುಂಬಗಳ ಚಿಗರೆಗಳೇ. `ನಮ್ಮ ಮಕ್ಕಳು ಸಾಫ್ಟ್‌ವೇರ್ ಜಾಣರಾಗಬೇಕು, ಸ್ಟೆತಾಸ್ಕೋಪು ಹೆಗಲಿಗೆ ಜೋತು ಬಿಟ್ಟುಕೊಳ್ಳಬೇಕು~ ಎಂದು ಪೋಷಕರು ಹಂಬಲಿಸುತ್ತಾರಲ್ಲ, ಈ ಕನವರಿಕೆಗೆ ಬೆಳಕಾಗಿ ಮನೆಪಾಠದ ಕೇಂದ್ರಗಳು ಕಾಣಿಸುತ್ತಿವೆ.ಈ ಮನೆಪಾಠದಿಂದ ಮುಖ್ಯವಾಗಿ ಎರಡು ಲಾಭಗಳಿವೆ: ಮೊದಲನೆಯದು ಪೋಷಕರ ತಲೆಶೂಲೆ ಕಡಿಮೆಯಾಗುವುದು. ಎರಡನೆಯದು ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸುವುದು.

ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ವೈಯಕ್ತಿಕ ಗಮನ ನೀಡುವುದು ಕಷ್ಟ. ಸಂತೆಯಲ್ಲಿ ಒಂದಾಗಿ ಕಲಿಯುವ ಪರಿಸ್ಥಿತಿ ಅಲ್ಲಿನದು. ಹಾಗಾಗಿ, ವಿದ್ಯಾರ್ಥಿ ಹಿಂದುಳಿದಿರುವ ವಿಷಯಗಳಲ್ಲಿ ಸಮರ್ಥನಾಗಲು ಮನೆಪಾಠ ಅನಿವಾರ್ಯವಾಗುತ್ತದೆ.

 

ಅಲ್ಲದೆ, ಶಾಲೆಕಾಲೇಜಿನ ಶೈಕ್ಷಣಿಕ ನೀತಿಗೊಂದು ಚೌಕಟ್ಟಿದೆ. ಶಾಲೆ ಕಾಲೇಜು ಎನ್ನುವುದು ವಿದ್ಯಾರ್ಥಿಯ ಸರ್ವತೋಮುಖ ಜ್ಞಾನಾರ್ಜನೆಗೆ ಸಹಕಾರಿ. ಆದರೆ, ಮನೆಪಾಠ ವಿದ್ಯಾರ್ಥಿಯನ್ನು ಪರೀಕ್ಷೆಯ ನಿಟ್ಟಿನಲ್ಲಿ ಸಜ್ಜುಗೊಳಿಸುತ್ತದೆ, ಸ್ಪರ್ಧೆಗೆ ಅನುಗೊಳಿಸುತ್ತದೆ.

 

ಅಂದಹಾಗೆ, ಟ್ಯೂಷನ್ ಎಂದರೆ ತರಗತಿಯಲ್ಲಿನ ಎಲ್ಲ ವಿಷಯಗಳ ಬಗೆಗಿನ ಮರುಕಳಿಕೆಯಲ್ಲ. ನಿರ್ದಿಷ್ಟ ವಿಷಯಗಳ ಬಗ್ಗೆಯಷ್ಟೇ ಇಲ್ಲಿ ಒತ್ತು. ವಿದ್ಯಾರ್ಥಿಗಳ ಕನಸುಗಳಿಗೆ ತಕ್ಕಂತೆ ಇಲ್ಲಿ ದೊರೆಯುವುದು ಮೇವು. ಒಂದು ಪಾಠವನ್ನು ಮತ್ತೊಂದು ಸಲ ಕೇಳುವ ಅವಕಾಶವೂ ಟ್ಯೂಷನ್‌ನಿಂದ ಲಭ್ಯ. ಈ ಪುನರಾವರ್ತನೆ ವಿದ್ಯಾರ್ಥಿಗಳಿಗೆ ಅಂಕ ಗಳಿಕೆಗೆ ಸಹಕಾರಿ.ನಿಜ, ಟ್ಯೂಷನ್‌ಗೆ ಹೋಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದಿದೆ. ಆದರೆ, ಇವತ್ತು ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಿರುವ ವಿದ್ಯಾರ್ಥಿಗಳನ್ನು ಗಮನಿಸಿದರೆ ಅವರಲ್ಲಿ ಮನೆಪಾಠದ ಗರಡಿಯಲ್ಲಿ ಪಳಗಿದವರೇ ಹೆಚ್ಚು. ವಿದ್ಯಾಸಂಸ್ಥೆಗಳಷ್ಟೇ, ಪ್ರತಿಷ್ಠೆ ಪಡೆದ ಮನೆಪಾಠದ ಕೇಂದ್ರಗಳೂ ಇರುವುದನ್ನು ಗಮನಿಸಿದರೆ ಟ್ಯೂಷನ್‌ನ ಮಹತ್ವ ಸ್ಪಷ್ಟವಾಗುತ್ತದೆ.ವಿದ್ಯಾರ್ಥಿಗಳ ಅನುಕೂಲಕ್ಕೆ ಹೊರತಾದ ಮತ್ತೊಂದು ಆಯಾಮವೂ ಮನೆಪಾಠಕ್ಕಿದೆ.ಅದು ಪಾಠ ಹೇಳುವ ಮೇಷ್ಟ್ರುಗಳಿಗೆ ಸಂಬಂಧಿಸಿದ್ದು. ಶಾಲೆ-ಕಾಲೇಜುಗಳಲ್ಲಿ ಶಿಕ್ಷಕ ವೃತ್ತಿಯನ್ನು ದೊರಕಿಸಿಕೊಳ್ಳಲಾಗದ ಶಿಕ್ಷಕ ತರಬೇತಿ ಪಡೆದ ನಿರುದ್ಯೋಗಿ ಪದವೀಧರರಿಗೆ ಈ ಮನೆಪಾಠವೇ ಆಸರೆ, ಅಕ್ಷಯಪಾತ್ರೆ. ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳಲ್ಲಿ ಕೋಚಿಂಗ್ ವ್ಯವಸ್ಥೆಯನ್ನು ಅಧಿಕೃತವಾಗಿಯೇ ಮಾಡುವ ವ್ಯವಸ್ಥೆ ಇದೆ. ಇದನ್ನು ಕಾಲೇಜುಗಳೇ ಮಾಡುತ್ತವೆ. ಇದಕ್ಕೆ ಪ್ರತ್ಯೇಕ ಶುಲ್ಕ. ತರಗತಿಗಳೇ ಬೇರೆ, ಮನೆಪಾಠವೇ ಬೇರೆ.ಅಂದಹಾಗೆ, ಮನೆಪಾಠದ ಸಂಗತಿ ಶಿಕ್ಷಣದ ಭಾಷಾ ಮಾಧ್ಯಮದ ಪ್ರಶ್ನೆಯಷ್ಟೇ ಸೂಕ್ಷ್ಮವಾದುದು. ಇದು ನೈತಿಕತೆಗಿಂತ, ಭಾವುಕತೆಗಿಂತ ಅಸ್ತಿತ್ವದ ವಾಸ್ತವಕ್ಕೆ ಸಂಬಂಧಿಸಿದ ವಿಷಯ. ಇದೊಂದು ಆಯ್ಕೆಯ ಪ್ರಶ್ನೆ, ಅಷ್ಟೇ.

 

ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲಿಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದು ಅನಿವಾರ್ಯ ಎನ್ನುವ ಮನೋಭಾವ ಬಲಿಯುತ್ತಿರುವ ಸಂದರ್ಭದಲ್ಲಿ, ಈ ಧೋರಣೆಗೆ ಪೂರಕವಾಗಿಯೇ ಮನೆಪಾಠವನ್ನು ನೋಡುವ ಅಗತ್ಯವಿದೆ.ಮನೆಪಾಠ ಎನ್ನುವುದು ಒಂದು ಪೌಷ್ಟಿಕ ಔಷಧಿ. ಎದೆ ಹಾಲು ಒಂದು ಹಂತದವರೆಗೆ ಲಭ್ಯವಷ್ಟೇ. ಆಮೇಲೆ, ಆಚೆ ಕಣ್ಣುಹರಿಸಲೇಬೇಕು. ಮನೆಪಾಠದ ಸಂದರ್ಭದಲ್ಲೂ ಅಷ್ಟೇ- ವಿದ್ಯಾರ್ಥಿಗಳ ನಾಳೆಗಳು ಆರೋಗ್ಯವಾಗಿರಬೇಕಾದರೆ ತರಗತಿಗಳ ಜೊತೆಗೆ ಪೂರಕ ಪೌಷ್ಟಿಕಾಂಶಗಳೂ ಅನಿವಾರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry