ಮನೆಬಾಗಿಲಿಗೆ ಆಡಳಿತ: ಇಕ್ಕೇರಿ

7
`ಅಟಲ್‌ಜೀ ಜನಸ್ನೇಹಿ' ಕೇಂದ್ರ: ಜನರಿಗಿಲ್ಲ ಅಲೆದಾಟ

ಮನೆಬಾಗಿಲಿಗೆ ಆಡಳಿತ: ಇಕ್ಕೇರಿ

Published:
Updated:
ಮನೆಬಾಗಿಲಿಗೆ ಆಡಳಿತ: ಇಕ್ಕೇರಿ

ಚಿತ್ರದುರ್ಗ: ಸರ್ಕಾರ ಜನರ ಬಳಿಯೇ ಆಡಳಿತ ಸೇವೆ ನೀಡಲು ಹೋಬಳಿ ಕೇಂದ್ರಗಳಲ್ಲಿ `ಅಟಲ್‌ಜೀ ಜನಸ್ನೇಹಿ' ಕೇಂದ್ರದ ಮೂಲಕ ಕಂದಾಯ ಇಲಾಖೆಯ 36 ಸೇವೆಗಳನ್ನು ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ತಿಳಿಸಿದರು.ಶುಕ್ರವಾರ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ತಾ ಇಲಾಖೆ ಹಾಗೂ ಕಂದಾಯ ಇಲಾಖೆ ಮತ್ತು ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಅಟಲ್‌ಜೀ  ಜನಸ್ನೇಹಿ ಕೇಂದ್ರಗಳಲ್ಲಿನ ಸೇವೆಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.`ಅಟಲ್‌ಜೀ ಜನಸ್ನೇಹಿ' ಕೇಂದ್ರ ಪ್ರತಿ ಹೋಬಳಿಗಳಲ್ಲಿ ಸ್ಥಾಪಿಸಿದ್ದು, ಕಂದಾಯ ಇಲಾಖೆಯೇ  ನಿರ್ವಹಣೆ ಮಾಡಲಿದೆ. ಯಾರು ಸಹ ತಾಲ್ಲೂಕು ಕೇಂದ್ರ, ಮತ್ತು ಜಿಲ್ಲಾ ಕೇಂದ್ರಕ್ಕೆ ಸೇವೆ ಪಡೆಯಲು ಅಲೆದಾಡಬೇಕಿಲ್ಲ.ಈಗಾಗಲೇ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಜಾರಿಯಲ್ಲಿದ್ದು, ನಿಗದಿತ ಅವಧಿಯಲ್ಲಿ ಸೇವೆ ನೀಡಲಾಗುತ್ತಿದೆ. ಸರ್ಕಾರ ಜನ ಕಲ್ಯಾಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳು ಮತ್ತು ದಿನನಿತ್ಯದ ಆಗುಹೋಗುಗಳನ್ನು ತಿಳಿದುಕೊಳ್ಳಲು ವಿದ್ಯಾರ್ಥಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ತಪ್ಪದೇ ಓದುವ ಹವ್ಯಾಸ ಬೆಳೆಸಿಕೊಂಡುಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.ಐಟಿಐ ವ್ಯಾಸಂಗಕ್ಕಾಗಿ ಇಲ್ಲಿಗೆ ಬಂದಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರು. ಎಷ್ಟು ಜನರ ಮನೆಯಲ್ಲಿ ಶೌಚಾಲಯವಿದೆ ಎಂದು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ, ಬಹುಪಾಲು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲ ಎಂದರು.ಚಿತ್ರದುರ್ಗ ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿನ ಪ್ರತಿಯೊಂದು ಶಾಲೆಯಲ್ಲಿ ಪ್ರತಿ ಮಕ್ಕಳಿಂದ ಅವರ ಮನೆಯಲ್ಲಿ ಶೌಚಾಲಯ ಇಲ್ಲವೇ ಎನ್ನುವ ಬಗ್ಗೆ ಮಾಹಿತಿ ಪಡೆಯಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ್ಙ 9,200 ಪ್ರೋತ್ಸಾಹಧನ ನೀಡುತ್ತಿದೆ. ಗ್ರಾಮ ಪಂಚಾಯ್ತಿ ಮೂಲಕ ಅರ್ಜಿ ಸಲ್ಲಿಸಿ ಪ್ರೋತ್ಸಾಹಧನ ಪಡೆದು ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು. ಪಂಚಾಯ್ತಿಯಿಂದ ಪ್ರೋತ್ಸಾಹಧನ ನೀಡದಿದ್ದಲ್ಲಿ ಅದನ್ನು ಕೊಡಿಸುವ ಕೆಲಸವನ್ನು ಮಾಡಲಾಗುತ್ತದೆ. ಶೌಚಾಲಯ ನಿರ್ಮಾಣ ಮಾಡಿಕೊಂಡು ಪ್ರೋತ್ಸಾಹಧನ ನೀಡದಿದ್ದಲ್ಲಿ ತಮಗಾಗಲಿ ಅಥವಾ ನಿಮ್ಮ ಕಾಲೇಜಿನ ಪ್ರಾಂಶುಪಾಲರಿಗಾಗಲಿ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.`ಅಟಲ್‌ಜೀ ಜನಸ್ನೇಹಿ' ಕೇಂದ್ರಗಳ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಬಿ.ಟಿ. ಕುಮಾರಸ್ವಾಮಿ, ಈ  ಹಿಂದೆ ಇದ್ದ ನೆಮ್ಮದಿ ಕೇಂದ್ರಗಳ ಬದಲಾಗಿ ಕಂದಾಯ ಇಲಾಖೆಯಿಂದಲೇ `ಅಟಲ್‌ಜೀ ಜನಸ್ನೇಹಿ' ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಲಾಗುತ್ತಿದೆ. ಈ ಕೇಂದ್ರಗಳ ಮೂಲಕ ಕಂದಾಯ ಇಲಾಖೆ 36 ಸೇವೆಯನ್ನು ನೀಡಲಾಗುತ್ತಿದೆ. ಇಲ್ಲಿ ನೀಡುವ ಸೇವೆಗಳು ಸಹ ಸಕಾಲ ಕಾಯ್ದೆಯ ವ್ಯಾಪ್ತಿಯಲ್ಲಿವೆ. ಸೇವೆಯನ್ನು ಕಾಲಬದ್ಧವಾಗಿ ನೀಡಲಾಗುತ್ತದೆ ಎಂದು ವಿವರಿಸಿದರು.2007ರಿಂದ ಆರಂಭವಾದ ನೆಮ್ಮದಿ ಕೇಂದ್ರಗಳನ್ನು ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದರು. ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ಜನರಿಗೆ ಅನೇಕ ತೊಂದರೆಗಳಾಗಿದ್ದರಿಂದ ಕಂದಾಯ ಇಲಾಖೆಯಿಂದಲೇ ನಿರ್ವಹಣೆ ಮಾಡಲು ಹೋಬಳಿ ನಾಡ ಕಚೇರಿಗಳಲ್ಲಿ ಕೇಂದ್ರಗಳನ್ನು ಆರಂಭಿಸಿ ಎಲ್ಲ ಹೋಬಳಿಗಳಿಗೂ ಉಪತಹಶೀಲ್ದಾರ್, ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಲಾಗಿದೆ. ಇಲ್ಲಿ ಯಾವುದೇ ಕೈಬರಹದ ಅರ್ಜಿಗಳಿರುವುದಿಲ್ಲ.ಎಲ್ಲ ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೇ ಭರ್ತಿ ಮಾಡಲಾಗುತ್ತದೆ. ಅರ್ಜಿದಾರರು ಕೇಂದ್ರದ ಸಿಬ್ಬಂದಿ ಕೇಳಿದ ವಿವರಗಳನ್ನು ನೀಡಿದಲ್ಲಿ ಅರ್ಜಿ ತಯಾರಾಗುತ್ತದೆ. ಪ್ರಿಂಟ್ ತೆಗೆದ ನಂತರ ಸಹಿ ಮಾಡಿಕೊಟ್ಟು ಸ್ವೀಕೃತಿ ಪಡೆಯಬೇಕು. ಅರ್ಜಿಯೊಂದಿಗೆ ಸಾಮಾನ್ಯ ನಿವಾಸಿ ದಾಖಲೆ ಪ್ರತಿ, 18 ವರ್ಷದ ಒಳಗಿನವರು ತಮ್ಮ ತಂದೆ, ತಾಯಿಯ ನಿವಾಸಿ ಪತ್ರ ಅಥವಾ ಜಮೀನು ಹೊಂದಿದ್ದಲ್ಲಿ ಈ ದಾಖಲೆ ಪ್ರತಿಯನ್ನು ನೀಡಬಹುದಾಗಿದೆ. ಜನರು ಯಾವ ಕೇಂದ್ರದಲ್ಲಿ ಸೇವೆಗಾಗಿ ಅರ್ಜಿ ಸಲ್ಲಿಸುತ್ತಾರೋ ಅಲ್ಲಿಯೇ ಪಡೆಯಬೇಕು ಎಂದರು.ಸಕಾಲ ಕಾಯ್ದೆ ಅಡಿ ಕಂದಾಯ ಇಲಾಖೆಯ 49 ಸೇವೆಗಳನ್ನು ಸೇರಿಸಲಾಗಿದ್ದು, ಇದಕ್ಕೆ ಕಾಲವನ್ನು ನಿಗದಿ ಮಾಡಲಾಗಿದೆ. ನಿಗದಿತ ಕಾಲದಲ್ಲಿ ಸೇವೆ ನೀಡದ ಅಧಿಕಾರಿಯಿಂದ ಅವರ ವೇತನದಲ್ಲಿ ಪ್ರತಿದಿನ ್ಙ  20ಗಳಂತೆ ಅರ್ಜಿದಾರರಿಗೆ ಪರಿಹಾರ ನೀಡಲಾಗುತ್ತದೆ. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಮೊಬೈಲ್ ನಂಬರ್ ನೀಡಬೇಕು. ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಗತಿಯ ಮಾಹಿತಿಯನ್ನು ಮೊಬೈಲ್‌ಗೆ ಎಸ್‌ಎಂಎಸ್ ಮಾಡಲಾಗುತ್ತದೆ. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಕಾಯ್ದೆಯ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮ ಕುಟುಂಬಗಳಿಗೆ ಮತ್ತು ನೆರೆಹೊರೆಯವರಿಗೆ ಸಹಾಯ ಮಾಡಬಹುದಾಗಿದೆ ಎಂದರು.ಸಕಾಲ ಜಿಲ್ಲಾ ಸಲಹೆಗಾರ ಅರವಿಂದ ರೆಡ್ಡಿ ಸಕಾಲ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ, 18 ಇಲಾಖೆಗಳ 265 ಸೇವೆಗಳನ್ನು ಸಕಾಲ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ. ಅರ್ಜಿ ಸಲ್ಲಿಸುವಾಗ ಚೆಕ್‌ಲಿಸ್ಟ್‌ನಂತೆ ದಾಖಲೆಗಳನ್ನು ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಕೆಲವು ಸಂದರ್ಭದಲ್ಲಿ ಅರ್ಜಿ ಸ್ವೀಕರಿಸಿದ್ದಲ್ಲಿ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ. ಇವರು ಸಹ ಸ್ಪಂದಿಸದಿದ್ದಲ್ಲಿ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದರು.ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎನ್. ಏಕನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಸ್. ಮಹೇಶ್ವರಯ್ಯ ಸ್ವಾಗತಿಸಿದರು. ವಾರ್ತಾ ಸಹಾಯಕ ಧನಂಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry