ಶನಿವಾರ, ಆಗಸ್ಟ್ 15, 2020
24 °C

ಮನೆಯಂಗಳದಲ್ಲಿ ಮಾತುಕತೆ: ಸರ್ಕಾರ ಗುರುತಿಸದ ನೋವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಯಂಗಳದಲ್ಲಿ ಮಾತುಕತೆ: ಸರ್ಕಾರ ಗುರುತಿಸದ ನೋವು

ಬೆಂಗಳೂರು: `ವಿದೇಶಿ ವಾದ್ಯಗಳನ್ನು ಕನ್ನಡ ನೆಲದ ಸಂಗೀತಕ್ಕೆ ಹೊಂದಿಸಿ, ನುಡಿಸಿದ್ದರಿಂದ ವಿವಿಧ ದೇಶಗಳಿಂದ ಗೌರವ ಪಡೆದಿದ್ದೇನೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಗುರುತಿಸಲಿಲ್ಲವೆಂಬ ನೋವು ನನ್ನನ್ನು ಕಾಡುತ್ತದೆ~ ಎಂದು ಅಂಕ್ರಂಗ್ ವಾದಕಿ ಡಾ. ಎಚ್.ಎಸ್. ಅನುಸೂಯ ಕುಲಕರ್ಣಿ ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಮನೆಯಂಗಳದಲ್ಲಿ ಮಾತುಕತೆ~ಯಲ್ಲಿ ಅವರು ಮಾತನಾಡಿ, `ಗಾಯನ ಸಮಾಜದಿಂದ ವರ್ಷದ ಪ್ರಶಸ್ತಿ ಪಡೆದಿದ್ದೇನೆ. ಉಳಿದಂತೆ ಸಂಗೀತ ಸಮ್ಮೇಳನಗಳಲ್ಲಿ ನನಗಿಂತ ಕಿರಿಯರನ್ನು ಅಧ್ಯಕ್ಷರನ್ನು ಮಾಡಲಾಗಿದೆ. ಆದರೆ ಪ್ರಶಸ್ತಿ, ಅಧ್ಯಕ್ಷತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆತ್ಮಸಂತೋಷಕ್ಕಾಗಿಯೇ ಸಂಗೀತವನ್ನು ಉಸಿರಾಗಿಸಿಕೊಂಡಿದ್ದೇನೆ~ ಎಂದು ಉತ್ತರಿಸಿದರು. `ಪತಿ ನಾರಾಯಣ ಕುಲಕರ್ಣಿ ಅವರು ವಿಶ್ವಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ವಿವಿಧ ದೇಶಗಳಲ್ಲಿ ನೆಲೆಸುವ ಮತ್ತು ಆ ನೆಲದ ವಾದ್ಯಗಳ ಪರಿಚಯ ಮಾಡಿಕೊಳ್ಳುವ ಅವಕಾಶ ದೊರಕಿತ್ತು. ನನಗೆ ಚಿಕ್ಕಂದಿನಿಂದಲೂ ಕರ್ಣಾಟಕ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ವಿಶೇಷ ಆಸಕ್ತಿ ಇದ್ದಿದ್ದರಿಂದ ಇಂಡೋನೇಷಿಯಾ, ಇಥೋಪಿಯಾ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ವಾದ್ಯಗಳನ್ನು ನುಡಿಸುವುದನ್ನೇ ಕಲಿತಿದ್ದೇನೆ. ಈ ವಿಚಾರದಲ್ಲಿ ಒದಗಿದ ಅವಕಾಶ ಮತ್ತು ಪತಿಯ ಸಹಕಾರವನ್ನು ನೆನೆಯಲೆಬೇಕು~ ಎಂದು ಹೇಳಿದರು.`ಸಂಗೀತ ಸಾಧನಗಳು ಆ ದೇಶದ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುತ್ತದೆ. ಹಾಗಾಗಿ ಭಾರತೀಯರಂತೆ ವಿದೇಶಿಯರೂ ಸಹ ಸಂಗೀತ ಸಾಧನಗಳಿಗೆ ವಿಶೇಷ ಗೌರವ ನೀಡುತ್ತಾರೆ. ಅಗೋಚರ ಶಕ್ತಿಯೊಂದು ಸಾಧನದಲ್ಲಿ ಇರುವುದರಿಂದ ಸಂಗೀತ ಹೊಮ್ಮುತ್ತಿದೆ ಎಂದು ಭಾವಿಸುತ್ತಾರೆ~ ಎಂದು ಹೇಳಿದರು.`ನನ್ನ ಮನೆಯಲ್ಲಿ ಅಪ್ಪ, ಅಮ್ಮ ಎಲ್ಲರೂ ಸಂಗೀತ ಕಲಿತವರು. ಹಾಗಾಗಿ ಚಿಕ್ಕಂದಿನಿಂದಲೇ ಸಂಗೀತಾಭ್ಯಾಸ ಮಾಡಿದ್ದೆ. ಆದರೆ ನನ್ನಮ್ಮನಿಗೆ ಒಳ್ಳೆಯ ಹಾಡುಗಾರ್ತಿಯಾಗಬೇಕು, ಸಂಗೀತ ಕಛೇರಿಗಳನ್ನು ನೀಡಬೇಕು ಎಂಬ ಮಹಾದಾಸೆಯಿತ್ತು. ಹಾಗಾಗಿ ಸಂಗೀತ ಗುರುಗಳಾದ ಆರ್.ಆರ್.ಕೇಶವಮೂರ್ತಿ ಮತ್ತು ಪಿಟೀಲು ಚೌಡಯ್ಯ ಅವರ ಮಾರ್ಗದರ್ಶನದಲ್ಲಿ ಸಂಗೀತದಲ್ಲಿ ವಿದ್ವತ್ ಸಾಧಿಸಿದೆ. ಉನ್ನತ ಹುದ್ದೆಯಲ್ಲಿರುವ ವರನನ್ನು ಮದುವೆಯಾಗಬೇಕೆಂಬ ಆಸೆಯಿದ್ದರಿಂದಲೇ ವಿದೇಶಿ ನೆಲದ ತರಹೇವಾರಿ ವಾದ್ಯಗಳನ್ನು ನುಡಿಸಲು ಸಾಧ್ಯವಾಗಿದೆ~ ಎಂದು ನೆನಪಿಸಿಕೊಂಡರು.`ಇಂದಿಗೂ ನನಗೆ ಬಿದಿರಿನಿಂದ ತಯಾರಿಸಿದ ವಾದ್ಯಗಳ ಬಗ್ಗೆ ಕುತೂಹಲ ಮತ್ತು ಗೌರವವಿದೆ. ಇಂಡೊನೇಷಿಯಾದ ಆಂಕ್ಲುಂಗ್ ಬಿದಿರಿನ ವಾದ್ಯವನ್ನು ನನ್ನದೇ ಶೈಲಿಯಲ್ಲಿ ಸರಳೀಕರಿಸಿ ಅದಕ್ಕೆ ಅಂಕ್ರಂಗ್ ಎಂದು ಹೆಸರಿಸಿದ್ದೇನೆ. `ಇನ್‌ಸ್ಟಿಟ್ಯೂಟ್ ಆಫ್ ಎಥ್ನೋ ಮ್ಯೂಸಿಕ್~ ಎಂಬ ಹೆಸರಿನಲ್ಲಿರುವ ನನ್ನ ಸಂಗ್ರಹಾಲಯದಲ್ಲಿ ಸುಮಾರು 300ಕ್ಕೂ ಹೆಚ್ಚು ವಾದ್ಯಗಳಿದ್ದು, ಅವುಗಳನ್ನು ಸಂಗೀತ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದೇನೆ~ ಎಂದು ತಿಳಿಸಿದರು. ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.