ಮನೆಯಲ್ಲಿ ಕತ್ತಲು,ಕಣ್ಣಲ್ಲಿ ಬೆಳಕು

7

ಮನೆಯಲ್ಲಿ ಕತ್ತಲು,ಕಣ್ಣಲ್ಲಿ ಬೆಳಕು

Published:
Updated:

ರಾಯಬರೇಲಿ: ಇಲ್ಲಿ ಎಲ್ಲವೂ ಗಾಂಧಿಮಯ. ಈ `ಗಾಂಧಿ ಮಾಯೆ~ ಮಹಾತ್ಮ ಗಾಂಧೀಜಿಯಿಂದ ಪ್ರಾರಂಭಗೊಂಡು ಸದ್ಯಕ್ಕೆ ಸೋನಿಯಾಗಾಂಧಿ ವರೆಗೆ ಬಂದು ನಿಂತಿದೆ. ಲಖನೌ-ರಾಯಬರೇಲಿ ಹೆದ್ದಾರಿಯಲ್ಲಿ ಸಿಗುವ ಇಂದಿರಾಗಾಂಧಿ ದ್ವಾರದಿಂದ ಒಳಹೊಕ್ಕ ಕೂಡಲೇ ಸ್ವಲ್ಪದೂರದಲ್ಲಿಯೇ ಎದುರಾಗುವುದು ಗಾಂಧೀಜಿ ಪ್ರತಿಮೆ,ಅದರ ಹಿಂಭಾಗದಲ್ಲಿಯೇ ಶ್ರಿ ಗಾಂಧಿ ಶಾಲೆ, ಅಲ್ಲಿಂದ ಒಂದು ಕಿ.ಮೀ.ದೂರದಲ್ಲಿ ಕಸ್ತೂರ್ ಬಾ ಶಾಲೆ. ಪಟ್ಟಣದೊಳಗೆ ಪ್ರವೇಶಿಸಿದೊಡನೆ ಸ್ವಾಗತಿಸುವ ಫಿರೋಜ್‌ಗಾಂಧಿ ದ್ವಾರ, ಮುಂದೆ ಸಾಗಿ ಚೌಕ ದಾಟಿದೊಡನೆ ಸೋನಿಯಾಗಾಂಧಿ ತಾಂತ್ರಿಕ ಶಿಕ್ಷಣ ಸಂಸ್ಥೆ. ಒಂದೆಡೆ ಇಂದಿರಗಾಂಧಿ ಕಮಾನು, ಇನ್ನೊಂದೆಡೆ ರಾಜೀವ್‌ಗಾಂಧಿ ಯುವಜನ ಸಂಸ್ಥೆ. ಈ ಪಟ್ಟಣದಲ್ಲಿ ಸುತ್ತಾಡಿದರೆ  ನೋಡಿದಲ್ಲೆಲ್ಲ ಕಣ್ಣಿಗೆ ಬೀಳುವ ಗಾಂಧಿ ಹೆಸರು ಒಂದು ಕ್ಷಣವೂ ಗಾಂಧಿ ಪರಿವಾರವನ್ನು ಮರೆಯದಂತೆ ಮಾಡುತ್ತದೆ. ಇದಕ್ಕಾಗಿ ಸಂಬಂಧವೇ ಇಲ್ಲದ ಮಹಾತ್ಮ ಗಾಂಧೀಜಿಯವರನ್ನೂ ಬಿಡದೆ ಬಳಸಲಾಗಿದೆ.“ಚುನಾವಣಾ ಆಯೋಗ ಮಾಯಾವತಿ ಹಿಂದೆ ಬಿದ್ದಿತ್ತು.ಇದರ ಮೇಲೆ ನಿರ್ಬಂಧ ಹೇರಿಲ್ಲ, ಇದು ತಪ್ಪಲ್ಲವೇ ಸಾರ್?” ಎಂದು ಸ್ವಲ್ಪ ಸಿಟ್ಟಿನಿಂದಲೇ ಪ್ರಶ್ನಿಸಿದ ನನ್ನ ಕಾರಿನ ಚಾಲಕ ಗುಡ್ಡು. ಅವನು ಬಿಎಸ್‌ಪಿ ಬೆಂಬಲಿಗನೆಂದು ಮೊದಲೇ ಘೋಷಿಸಿ ಬಿಟ್ಟಿದ್ದ. `ನಿರ್ಬಂಧ ಹೇರಿದ್ದರೆ ಹೆಸರು ಅಳಿಸಿಹಾಕಲು ಮತ್ತೆ ಅದನ್ನು ಬರೆಸಲು ಒಂದಷ್ಟು ಲಕ್ಷವೋ ಕೋಟಿಯೋ ಆಯೋಗ ಖರ್ಚು ಮಾಡಬೇಕಾಗಿತ್ತು, ಹೋಗ್ಲಿಬಿಡು~ ಎಂದು ಅವನನ್ನು ಸಮಾಧಾನ ಮಾಡಿದೆ.ನಾವು ಪ್ರಿಯಾಂಕಾ ಗಾಂಧಿ ಸಭೆ ನಡೆಯುವ ಮುನ್ಸಿಗಂಜ್‌ಗೆ ಹೋಗಬೇಕಿತ್ತು. ಸೋನಿಯಾಗಾಂಧಿಯವರ ಎಂಪಿ ಕಚೇರಿಯಲ್ಲಿ ಕೊಟ್ಟ ಕಾರ್ಯಕ್ರಮದ ಪಟ್ಟಿಪ್ರಕಾರ ಅಲ್ಲಿಗೆ ಬೆಳಿಗ್ಗೆ ಒಂಬತ್ತುಗಂಟೆಗೆ ಪ್ರಿಯಾಂಕಾ ಬರಬೇಕಾಗಿತ್ತು. ಒಂದು ಅಂದಾಜಿನ ಮೇಲೆ ನಾವು ಹನ್ನೊಂದಕ್ಕೆ ಹೋಗಿದ್ದೆವು. ರಸ್ತೆಬದಿಯಲ್ಲಿ ಕಾಯುತ್ತಾ ನಿಂತ ಪಡ್ಡೆಹುಡುಗರ ಮುಖಗಳು  ಪ್ರೇಯಸಿಗಾಗಿ ಕಾದು ಕಾದು ಸುಸ್ತಾದ ಪ್ರೇಮಿಗಳ ರೀತಿಯಲ್ಲಿ ಬಾಡಿಹೋಗಿದ್ದವು. ಆಕೆ ಬಂದದ್ದು ಹನ್ನೆರಡು ಕಾಲು ಗಂಟೆಗೆ. ಒಂದು ಕ್ಷಣ ಇಡೀ ಸಭೆಯಲ್ಲಿ ಸಂಚಲನ. `ಪ್ರಿಯಾಂಕ ಜ್ವರ~ದಲ್ಲಿ ನರಳುತ್ತಿದ್ದ ಜನ ಆಕೆಯ ಒಂದು ಕುಡಿನೋಟಕ್ಕೆ, ಮುಗುಳು ನಗುವಿಗೆ, ಒಂದು ಟಾಟಾಕ್ಕಾಗಿ ಬೊಗಸೆಯೊಡ್ಡಿ ನಿಂತಿದ್ದರು.ಹತ್ತುನಿಮಿಷದ ಭಾಷಣದ ನಂತರ ಪ್ರಿಯಾಂಕ ಇನ್ನೊಂದಿಷ್ಟು ನಗುಚೆಲ್ಲಿ ಅಲ್ಲಿಂದ ಮುಂದಿನ ಸಭೆಗೆ ಹೊರಟರು. `ಫಿರ್ ಅಗ್ಲೆ ಚುನಾವ್ ಮೇ ಆಯೇಗಿ~ (ಇನ್ನು ಮುಂದಿನ ಚುನಾವಣೆಗೆ ಬರುತ್ತಾರೆ) ಎಂದು ನನ್ನ ಪಕ್ಕದಲ್ಲಿ ನಿಂತಿದ್ದ ವಿದ್ಯಾರ್ಥಿ ಇಂದ್ರೇಶ್ ಕುಮಾರ್ ಮುಖ ಸೊಟ್ಟಗೆ ಮಾಡಿದ. ಅವನಿಗಿನ್ನೂ ಮತದಾನ ಮಾಡುವ ವಯಸ್ಸಾಗಿಲ್ಲ.ಆದರೆ ಇಂದ್ರೇಶ್ ಕುಮಾರ್ ಅಂತಹವರು ಇಲ್ಲಿ ಇರುವುದು ಬೆರಳೆಣಿಕೆಯಷ್ಟು, ನೆಹರೂ ಕುಟುಂಬದ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ಸುಮ್ಮನೆ ಊರು ಸುತ್ತಾಡಿದರೆ ಇಂದಿರಾಗಾಂಧಿಜತೆ ಮಾತನಾಡಿದವರು, ರಾಜೀವ್‌ಗಾಂಧಿ ಜತೆ ಪೋಟೋ ತೆಗೆಸಿದವರು, ಸೋನಿಯಾಗಾಂಧಿಯ ಬರೆದ ಪತ್ರ ಇಟ್ಟುಕೊಂಡವರು ಯಾರಾದರೂ ಸಿಗುತ್ತಾರೆ.

 

ರಾಯಬರೇಲಿಗೂ ಇಂದಿರಾಗಾಂಧಿ ಕುಟುಂಬಕ್ಕೂ ದೀರ್ಘ ಸಂಬಂಧ ಇದೆ. ಇದು ಮೂಲತ: ಇಂದಿರಾ ಪತಿ ಫಿರೋಜ್‌ಗಾಂಧಿ ಕರ್ಮಭೂಮಿ. ಅವರು ಎರಡು ಬಾರಿ ಇಲ್ಲಿಂದ ಲೋಕಸಭಾ ಸದಸ್ಯರಾಗಿದ್ದರು.  ರಾಜ್ಯಸಭಾ ಸದಸ್ಯರಾಗಿದ್ದುಕೊಂಡೇ 1966ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1971ರಲ್ಲಿ ಗೆದ್ದು 1977ರಲ್ಲಿ ಸೋತ ಇಂದಿರಾಗಾಂಧಿ 1980ರಲ್ಲಿ ಎರಡು ಕ್ಷೇತ್ರಗಳಿಂದ ಗೆದ್ದಾಗ ಈ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಆಂಧ್ರಪ್ರದೇಶದ ಮೇಡಕ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.1977ರಲ್ಲಿ ರಾಜ್‌ನಾರಾಯಣ್ ವಿರುದ್ದ ಇಂದಿರಾಗಾಂಧಿ ಸೋತದ್ದನ್ನು ಹೊರತುಪಡಿಸಿದರೆ ಕಳೆದ 60ವರ್ಷಗಳಲ್ಲಿ ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನೆಹರೂ ಕುಟುಂಬದ ಸದಸ್ಯರೆಂದೂ ಸೋತಿಲ್ಲ. ಅವರು ಸ್ಪರ್ಧೆಯಲ್ಲಿ ಇಲ್ಲದೆ ಇದ್ದಾಗ (1996 ಮತ್ತು 1998) ಮಾತ್ರ ವಿರೋಧಿಗಳು ಗೆದ್ದಿದ್ದರು.ರಾಯಬರೇಲಿ ಜಿಲ್ಲಾಕೇಂದ್ರದ ಜನತೆಯ ಅಭಿಮಾನಕ್ಕೆ ಕಾರಣ ಇದೆ. ಕನಿಷ್ಠ ರಾಯಬರೇಲಿ ಪಟ್ಟಣ ಪಕ್ಕದ ಅಮೇಠಿಯಂತೆ ಇಲ್ಲ. ರಸ್ತೆಗಳು ತಕ್ಕಮಟ್ಟಿಗೆ ಚೆನ್ನಾಗಿವೆ ನೀರಿನ ಸಮಸ್ಯೆ ಇಲ್ಲ. ಸಿಮೆಂಟ್‌ನಿಂದ ಹಿಡಿದು ಕಾಗದದ ವರೆಗೆ, ಜವಳಿಯಿಂದ ಹಿಡಿದು ಕಾರ್ಪೆಟ್ ವರೆಗೆ ಇಲ್ಲಿ ಕನಿಷ್ಠ ಎರಡು ಡಜನ್ ಕಾರ್ಖಾನೆಗಳಿವೆ.ಸೋನಿಯಾಗಾಂಧಿ ಕೊಡುಗೆಯಾದ ರೈಲ್ವೆ ಕೋಚ್ ಕಾರ್ಖಾನೆ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಾರ್ಖಾನೆಗಳು ಸ್ಥಳೀಯರಿಗೆ ಒಂದಷ್ಟು ಉದ್ಯೋಗಗಳನ್ನೂ ನೀಡಿವೆ. ಆದರೆ ವಿದ್ಯುತ್‌ನದ್ದು ಇಲ್ಲಿಯೂ ಸಮಸ್ಯೆ.

ಇದರ ಹಿಂದೆ ಇರುವ ದ್ವೇಷದ ರಾಜಕಾರಣದ ಕತೆಯನ್ನು ಇಲ್ಲಿನ ಪತ್ರಕರ್ತ ಮಿತ್ರ ಅಶ್ವಿನಿ ಶ್ರಿವಾಸ್ತವ ವಿವರಿಸಿದರು.1981ರಲ್ಲಿ ಇಂದಿರಾಗಾಂಧಿ ರಾಯಬರೇಲಿಗೆ 24 ಗಂಟೆ ವಿದ್ಯುತ್‌ಪೂರೈಸಲು ಇಲ್ಲಿಗೆ ಸಮೀಪದ ಊಂಚಹಾರ್‌ನಲ್ಲಿ `ಫಿರೋಜ್‌ಗಾಂಧಿ ಉಷ್ಣವಿದ್ಯುತ್ ಸ್ಥಾವರ~ ಸ್ಥಾಪಿಸಿದ್ದರಂತೆ.1992ರಲ್ಲಿ ಅದನ್ನು ಎನ್‌ಟಿಪಿಸಿ ವಶಕ್ಕೆ ತೆಗೆದುಕೊಂಡಿತು. ಈಗ ಅದರ ಆದ್ಯತೆ ರಾಯಬರೇಲಿ ಅಲ್ಲ ಲಖನೌ.  2008ರಲ್ಲಿ ಸೋನಿಯಾಗಾಂಧಿಯವರ ಆಸಕ್ತಿಯಿಂದಾಗಿ ಅಮಾವ್ ಎಂಬಲ್ಲಿ 220 ಮೆ.ವಾ.ಉಷ್ಣವಿದ್ಯುತ್ ಘಟಕ ಸ್ಥಾಪನೆಯಾಯಿತು. ಅದು ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದ ತಕ್ಷಣ ಮುಖ್ಯಮಂತ್ರಿ ಮಾಯಾವತಿ ಆ ಘಟಕದ ವಿದ್ಯುತ್ ಅನ್ನು ಲಖನೌಗೆ ಸಾಗಿಸುವಂತೆ ಆದೇಶ ಹೊರಡಿಸಿದರು. ರಾಯಬರೇಲಿಯಲ್ಲಿ ಮತ್ತೆ ವಿದ್ಯುತ್ ಕಣ್ಣುಮುಚ್ಚಾಲೆ.ಪಟ್ಟಣದಲ್ಲಿ ಬಂದು ಹೋಗುವಷ್ಟಾದರೂ ವಿದ್ಯುತ್‌ಇದೆ. ಹೆಚ್ಚುಕಡಿಮೆ 60ವರ್ಷಗಳಿಂದ ನೆಹರೂ ಕುಟುಂಬದವರ ನಿಯಂತ್ರಣದಲ್ಲಿಯೇ ಇರುವ ಮತ್ತು  `ಸೂಪರ್ ಪ್ರಧಾನಿ~ ಎಂದೇ ಬಣ್ಣಿಸಲಾಗುವ ಸೋನಿಯಾಗಾಂಧಿ ಈಗ ಪ್ರತಿನಿಧಿಸುತ್ತಿರುವ ರಾಯಬರೇಲಿ ಕ್ಷೇತ್ರದ ಜಿಲ್ಲಾಕೇಂದ್ರದಿಂದ  ಸುಮಾರು ಎರಡು ಕಿ.ಮೀ.ದೂರದ ಮಹಾರಾಜ್‌ಗಂಜ್‌ಗೆ ವಿದ್ಯುತ್ ಸಂಪರ್ಕವೇ ಇಲ್ಲ. ಎರಡು ತಿಂಗಳುಗಳ ಹಿಂದೆಯಷ್ಟೇ ಒಂದಷ್ಟು ವಿದ್ಯುತ್ ಕಂಬಗಳು ಬಂದು ಬಿದ್ದಿವೆ. ಇದಕ್ಕೆ ಕೂಡಾ ರಾಜ್ಯ ಸರ್ಕಾರ ದುಡ್ಡು ಕೊಟ್ಟಿಲ್ಲವಂತೆ. ಅದನ್ನು ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುತ್ ಯೋಜನೆಯಿಂದ ಭರಿಸಲಾಗಿದೆ. ಈಗ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರತಿ ಕುಟುಂಬದಿಂದ 700ರೂಪಾಯಿ ಲಂಚ ಕೇಳುತ್ತಿದ್ದಾರಂತೆ. ` ಇದು ಚುನಾವಣೆಗಿಂತ ಮೊದಲಿನ ಲಂಚದ ದರ, ಚುನಾವಣೆಯ ನಂತರ ಇನ್ನೂ ಹೆಚ್ಚಾಗಬಹುದು~ ಎಂದ ಇಲ್ಲಿನ ರೈತ ಖೇದಿಲಾಲ್. ಆಗಲೇ ಸಂಜೆ ಕತ್ತಲು ಕವಿಯತೊಡಗಿತ್ತು. ಮನೆಯೊಳಗೆ ಬುಡ್ಡಿದೀಪ ಉರಿಯುತ್ತಿತ್ತು.ನಮ್ಮನ್ನು ಬೀಳ್ಕೊಡಲು ಬಂದ ಆತನನ್ನು `ಇಸ್ ಬಾರ್ ಕಿಸ್‌ಕೋ ವೋಟ್ ದೇ ರಹೆ ಹೋ?~ ಎಂದು ಮೆಲ್ಲಗೆ ಪ್ರಶ್ನಿಸಿದೆ. ಆತ ತಕ್ಷಣ `ಸೋನಿಯಾಜೀ ಕೋ ಹಮ್ ಕೈಸೇ ಚೋಡ್ ಸಕ್ತೆ ಹೈ?~ ಎಂದು ನನ್ನನ್ನು ಮರು ಪ್ರಶ್ನಿಸಿದ. ಸೋನಿಯಾಗಾಂಧಿಯೇ ಈತನ ಕುಟುಂಬವನ್ನು ಸಾಕುತ್ತಿದೆಯೇನೋ ಎನ್ನುವಷ್ಟು ಋಣದ ಭಾರ ಆತನ ಮಾತಿನಲ್ಲಿತ್ತು. ಆ ಕತ್ತಲಿನಲ್ಲಿಯೂ ಸೋನಿಯಾ ಮೇಲಿನ ಅಭಿಮಾನದಿಂದ ಆತನ ಕಣ್ಣುಗಳು ಹೊಳೆಯುತ್ತಿದ್ದುದು ಕಾಣುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry