ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಜಿಮ್ ಹೀಗಿರಬೇಕು...

Last Updated 28 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನಂತಹ ‘ಮೆಟ್ರೊ’ ನಗರಗಳಲ್ಲಿ ವಾಸಿಸುವವರಿಗೆ ಕೆಲಸದ ಒತ್ತಡ, ಟ್ರಾಫಿಕ್‌ ಕಿರಿಕಿರಿ, ಬದಲಾದ ಜೀವನಶೈಲಿ ಹಾಗೂ ಆಹಾರ ಅಭ್ಯಾಸಗಳಿಂದಾಗಿ ಸ್ಥೂಲಕಾಯ ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಈ ಸಮಸ್ಯೆಯಿಂದ ಹೊರಬರಲು ನಿತ್ಯ ವ್ಯಾಯಾಮ ಅತ್ಯಗತ್ಯವಾಗಿದೆ.  ವ್ಯಾಯಾಮ ಮಾಡಲು ಹಲವರು ಜಿಮ್‌ಗಳ ಮೊರೆಹೋಗುತ್ತಾರೆ. ಆದರೆ ಸಮಯದ ಅಭಾವ ಇರುವವರು ಈಗ ಮನೆಗಳಲ್ಲೇ ಮಿನಿ ಜಿಮ್‌ಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಹೀಗಾಗಿಯೇ ಮಧ್ಯಮವರ್ಗದವರೂ  ಮನೆಗಳಲ್ಲಿ ಜಿಮ್‌ಗಳನ್ನು ಮಾಡಿಕೊಳ್ಳುವುದು ಈಗ ಟ್ರೆಂಡ್‌ ಆಗಿಹೋಗಿದೆ. 
 
ನಗರಗಳಲ್ಲಿ ಹೊಸದಾಗಿ ಮನೆ ಕಟ್ಟಿಸುವವರು ಜಿಮ್‌ಗಾಗಿಯೇ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲು ಮೊದಲೇ ಯೋಜಿಸುತ್ತಿದ್ದಾರೆ. ಕೇವಲ ಮನೆಗಳಲ್ಲೇ ಅಲ್ಲದೆ ಲಕ್ಷುರಿ ವಿಲ್ಲಾಗಳಲ್ಲಿ ಜಿಮ್‌ಗಳಿಗಾಗಿ ಪ್ರತ್ಯೇಕ ಕೊಠಡಿಗಳನ್ನು ಕಟ್ಟಿ, ಖಾಲಿ ಬಿಟ್ಟಿರುತ್ತಾರೆ. ಕಾರಣ ವಿಲ್ಲಾ ಖರೀದಿಸುವವರೂ ಮಿನಿ ಜಿಮ್‌ಗಾಗಿ ಸ್ಥಳಾವಕಾಶ ಕೇಳುವುದು ಈಗ ಹೆಚ್ಚಾಗುತ್ತಿದೆ.

ಮಿನಿ ಜಿಮ್‌ ಮಾಡಿಕೊಳ್ಳುವವರಿಗೆ  ವಾಸ್ತುಶಿಲ್ಪಿ ಪಲ್ಲವಿ ಕೆಲವು ಸಲಹೆಗಳನ್ನು ನೀಡಿದ್ದಾರೆ: 
ಎಷ್ಟೋ ಜನ ವಿಭಿನ್ನವಾಗಿ ಮನೆಯಲ್ಲಿ ಜಿಮ್‌ಗಳನ್ನು ನಿರ್ಮಿಸಲು ಇಷ್ಟಪಡುತ್ತಾರೆ. ಬಾಡಿಗೆ ಮನೆಗಳಿಗಿಂತ ಸ್ವಂತ ಮನೆ ಹೊಂದಿರುವವರೇ ಈ ಬೇಡಿಕೆಗಳನ್ನು ಇಡುವುದು ಹೆಚ್ಚು. 

ನಮ್ಮ ಕ್ಲೈಂಟ್ಸ್‌ ಅವರ ಅವಶ್ಯಕತೆಗಳನ್ನು ಹೇಳುತ್ತಾರೆ ಅದರ ಪ್ರಕಾರ ಜಿಮ್‌  ರೂಂಗಳನ್ನು ಪ್ಲ್ಯಾನ್‌ ಮಾಡಿಕೊಡುತ್ತೇವೆ. ಬರೀ ಜಿಮ್‌ ಅಂದರೆ ಅದು ಜಾಗದ ವ್ಯರ್ಥ ಎನ್ನಬಹುದು. ಹಾಗಾಗಿ ಸ್ಥಳವನ್ನು ಸದುಪಯೋಗ ಪಡಿಸಿಕೊಳ್ಳುವುದಕ್ಕಾಗಿ ನಾವು ಹೋಮ್‌ ಥಿಯೇಟರ್‌ ಹಾಗೂ ಜಿಮ್‌ ಅನ್ನು ಒಂದೇ ಸೂರಿನಡಿ ನಿರ್ಮಿಸಲು ಯೋಜಿಸುವ ಮಲ್ಟಿಪರ್ಪಸ್‌ ಯೋಜನೆಯನ್ನು ಸಲಹೆ ನೀಡುತ್ತೇವೆ.  ಇದಕ್ಕೆ 14/20 ಅಡಿಗಳಷ್ಟು ಜಾಗ ಬೇಕಾಗುತ್ತದೆ. ಮನರಂಜನೆ ಹಾಗೂ ಕಸರತ್ತು ಒಂದೇ ಸೂರಿನಡಿಲ್ಲಿದ್ದರೂ ಅದಕ್ಕೆ ಸ್ಲೈಡಿಂಗ್‌ ಡೋರ್‌ ಕೊಟ್ಟು ಅದನ್ನು ವಿಭಾಗಿಸುತ್ತೇವೆ. 

ಹೆಚ್ಚಿನ ಜನ ಮನೆಯ ಬೇಸ್‌ಮೆಂಟ್‌, 2ನೇ ಮಹಡಿ ಅಥವಾ ಟೆರೇಸ್‌ಗಳಲ್ಲಿ ಜಿಮ್ ನಿರ್ಮಿಸಲು ಇಚ್ಛಿಸುತ್ತಾರೆ. ಹಳೆ ಮನೆಗಳ ನವೀಕರಣದಲ್ಲಿ ಹೆಚ್ಚು ಮಂದಿ ಟೆರೇಸ್‌ನಲ್ಲಿ ಜಿಮ್‌ಗಾಗಿ ಒಂದು ಕೊಠಡಿ ನಿರ್ಮಿಸಿಕೊಡಿ ಎಂದು ಕೇಳುತ್ತಾರೆ.

ಸಾಮಾನ್ಯವಾಗಿ ಇಬ್ಬರಿಗೆಂದರೆ 10/10 ಜಾಗವಾದರೆ ಸಾಕು. ಎಷ್ಟೇ ದೊಡ್ಡ ಜಾಗವಿದ್ದರೂ ಜಿಮ್‌ಗೆ ಹೆಚ್ಚಿನ ಜಾಗ ನೀಡುವುದು ಮನೆಯ ಅಂದವನ್ನು ಕೆಡಿಸುತ್ತದೆ.

ಮನೆಯ ಯಾವುದಾದರೂ ಮೂಲೆಯಲ್ಲಿ ಜಿಮ್‌ ಆರಂಭಿಸಿಬಿಡಬಹುದು ಎಂಬುದು ತಪ್ಪು ತಿಳಿವಳಿಕೆ. ಅನೇಕರು ಬಂದು ನಮ್ಮನ್ನು ಕೇಳುತ್ತಾರೆ. ನಮ್ಮ ಮನೆಯಲ್ಲಿ ಒಂದು ಸ್ಟೋರ್‌ ರೂಂ ಇದೆ, ಅದನ್ನು ಜಿಮ್‌ ರೂಂ ಮಾಡಬಹುದೇ ಎಂದು. ಆದರೆ ಹಾಗಾಗುವುದಿಲ್ಲ. ಮೊದಲಿಗೆ ಅಲ್ಲಿ ಗಾಳಿ ಮತ್ತು ಬೆಳಕು ಹೇಗಿದೆ ಎಂಬುದನ್ನು ನೋಡಬೇಕಾಗುತ್ತದೆ. ಇವೆರಡೂ ಅತೀ ಮುಖ್ಯವಾದದ್ದು. ಇದರ ಜೊತೆಗೆ ವಿದ್ಯುತ್‌ ಕೂಡ ಅಷ್ಟೇ ಮುಖ್ಯ. ಇಷ್ಟು ಇದ್ದರೆ 10/14 ಅಡಿ ಜಾಗದಲ್ಲಿ ಟ್ರೆಡ್‌ಮಿಲ್‌ ಹಾಗೂ ಮಲ್ಟಿ ಜಿಮ್‌ಗಳಂತಹ ಉಪಕರಣಗಳನ್ನು ಹಾಕಿ ಉತ್ತಮ ಜಿಮ್‌ ನಿರ್ಮಿಸಬಹುದು. ಮನೆ ಮಾಲೀಕರಿಗೆ ಅವಶ್ಯವಿದ್ದಲ್ಲಿ ಜಿಮ್‌ರೂಂಗಳಲ್ಲಿ ಕನ್ನಡಿಗಳನ್ನು ಅಳವಡಿಸುವುದು, ಸಂಗೀತಕ್ಕಾಗಿ ಸ್ಪೀಕರ್‌ ವ್ಯವಸ್ಥೆ, ತೂಕ ಹಾಕುವ ಮಷಿನ್‌, ಮ್ಯಾಟ್‌ಗಳಂತಹ ಮೂಲಭೂತ ವಸ್ತುಗಳನ್ನು ಇಡುವುದರ ಕುರಿತು ಸಲಹೆ ನೀಡಲಾಗುತ್ತದೆ.

ಮನೆಯಲ್ಲಿ ಜಿಮ್‌ ನಿರ್ಮಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಇದಕ್ಕೆ ಅನುಕೂಲಕರ ವಾತಾವರಣ ಇರಬೇಕು ಅಷ್ಟೆ. ಹೋಂ ಥಿಯೇಟರ್‌ ಜತೆ ಜಿಮ್‌ ನಿರ್ಮಿಸಿಕೊಡಿ ಎಂದು ಹೆಚ್ಚಿನ ಮಂದಿ ಕೇಳುತ್ತಿದ್ದಾರೆ. ಪಾರ್ಟಿಹಾಲ್‌ಗಳ ಜೊತೆ ಜಿಮ್‌, ಯೋಗ ಹಾಗೂ ಜಿಮ್‌ಗಳನ್ನು ಕ್ಲಬ್‌ ಮಾಡಿ ಅವರಿಗೆ ಅನುಕೂಲವಾಗುವ ರೀತಿ ಜಿಮ್‌ ನಿರ್ಮಿಸಿಕೊಡು ತ್ತೇವೆ. ಕೆಲವರು ತಾವು ಮಲಗುವ ಕೋಣೆಯಲ್ಲಿಯೇ ಜಿಮ್‌ ಕೇಳಿದರೆ ಇನ್ನೂ ಹಲವರು ಟೆರೇಸ್‌ನಲ್ಲಿ  ಗಾರ್ಡನ್‌ ಮಾಡಿ ಅದರ ಮುಂದೆ ಕೇವಲ ಒಂದು ರೂಫ್‌ ಹಾಕಿ ಓಪನ್‌ ಜಿಮ್‌ ನಿರ್ಮಿಸಿಕೊಡಿ ಎಂದೂ ಕೇಳುತ್ತಾರೆ. ಅವರ ಆರ್ಥಿಕ ಪರಿಸ್ಥಿತಿಯನ್ನೂ ಪರಿಗಣಿಸಿ  ಜಿಮ್‌ ನಿರ್ಮಿಸಲು ಸಲಹೆ ನೀಡುತ್ತೇವೆ.

ಹೋಮ್‌ ಜಿಮ್‌ ಆರಂಭಿಸುವ ಮುನ್ನ ಎಷ್ಟು ಮಂದಿ ಅದನ್ನು ಬಳಸುತ್ತಾರೆ ಎಂದು ಮೊದಲು ಅರಿಯಬೇಕು. ಇದರ ಆಧಾರದ ಮೇಲೆ ಮಿನಿ ಜಿಮ್‌ಗೆ ಎಷ್ಟು ಜಾಗ ಕೊಡಬೇಕು ಎಂಬುದನ್ನು ನಿರ್ಧರಿಸಬಹುದು. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಟ್ರೆಡ್‌ಮಿಲ್‌‌, ಸೈಕ್ಲಿಂಗ್‌ನಂತಹ ಒಂದೆರೆಡು ಸಾಧನಗಳಿದ್ದರೆ ಸಾಕು. ಇನ್ನು ತೂಕವನ್ನು ಇಳಿಸಿಕೊಳ್ಳುವವರು ಆಪರೇಟ್‌ ಬೈಕ್, ವೈಬ್ರೇಟಿಂಗ್‌ ಮಷಿನ್‌ ಅನ್ನು ಇಟ್ಟುಕೊಳ್ಳಬಹುದು. ಹೀಗೆ ಅಗತ್ಯಕ್ಕೆ ತಕ್ಕಂತೆ ಉಪಕರಣಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಮಿನಿ ಜಿಮ್‌ ಸೆಟ್‌ಅಪ್‌ ಮಾಡುವಾಗ ಆದಷ್ಟು ಸ್ಥಳವನ್ನು ಉಳಿಸಿಕೊಳ್ಳಬಹುದು. 

ಅದರಲ್ಲೂ ಮನೆಬಳಕೆಗೆಂದೇ ಉಪಕರಣಗಳನ್ನು ತಯಾರಿಸಲಾಗಿದೆ. ಇವುಗಳಲ್ಲಿ ಡಿಸಿ ಮೋಟರ್‌ಗಳನ್ನು ಬಳಸಲಾಗಿದ್ದು, ಅತಿಯಾದ ವಿದ್ಯುತ್‌ ಬಳಕೆಯನ್ನು ತಡೆಯಬಹುದು.

ಕಳೆದ ಮೂರ್ನಾಲ್ಕು ವರ್ಷಗಳಿಂದ ನಮ್ಮ ಬಳಿ ಹೆಚ್ಚಾಗಿ ವ್ಯಾಪಾರ ಆಗುತ್ತಿರುವುದು ಟ್ರೆಡ್‌ಮಿಲ್‌ಗಳೇ. ₹22,000ದಿಂದ ₹80,000ದವರೆಗೂ ಟ್ರೆಡ್‌ಮಿಲ್‌ಗಳು ಲಭ್ಯ. ಆದರೆ ಹೆಚ್ಚು ಜನ ಆಯ್ಕೆ ಮಾಡಿಕೊಳ್ಳುವುದು ಮೂವತ್ತರಿಂದ ಐವತ್ತು ಸಾವಿರ ರೂಪಾಯಿ ಬೆಲೆಯದ್ದು.

ನಾವು ಜಿಮ್‌ ಸಲಕರಣೆಗಳನ್ನು ಮಾರುವುದರ ಜೊತೆಗೆ ಅವರ ಮನೆಗೇ ಹೋಗಿ ಅವುಗಳನ್ನು ಉಪಯೋಗಿಸುವ ಬಗ್ಗೆ ಹೇಳಿಕೊಡುತ್ತೇವೆ. ಇದಕ್ಕೆ ನಮ್ಮ  ‘ಪೀಪಲ್‌ ಫಿಟ್‌ನೆಸ್‌’ನಿಂದ ಜಿಮ್‌ ತರಬೇತುದಾರರನ್ನೇ ಕಳುಹಿಸಿಕೊಡುತ್ತೇವೆ. ಗ್ರಾಹಕರು ಬೇಡಿಕೆಯಿಟ್ಟರೆ ಅವರ ಅನುಕೂಲಕ್ಕೆ ತಕ್ಕಂತೆ ಮನೆಯಲ್ಲಿಯೇ ಜಿಮ್‌ ತರಬೇತಿಯನ್ನೂ ನೀಡುತ್ತೇವೆ. ಜಿಮ್‌ ಪರಿಕರಗಳನ್ನು ಆಗಾಗ್ಗೆ ಸರ್ವಿಸ್‌ ಮಾಡಿಸಬೇಕು. ಇಲ್ಲದಿದ್ದರೆ ಅವುಗಳು ಹಾಳಾಗುವ ಸಾಧ್ಯತೆ ಹೆಚ್ಚು.

ಗ್ರಾಹಕರ ಅಗತ್ಯ ಅರಿತ ನಂತರ ಅವರಿಗೆ ಮಂಡಿ ಹಾಗೂ ಬೆನ್ನು ನೋವುಗಳಿವೆಯೇ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳುತ್ತೇವೆ. ಈ ರೀತಿ ತೊಂದರೆಯುಳ್ಳವರು ಟ್ರೆಡ್‌ಮಿಲ್‌ಗಳನ್ನು ಬಳಸಲೇಬಾರದು. ಇಂತಹವರಿಗೆ ಆಪರೇಟ್‌ ಬೈಕ್‌ಗಳು ಉತ್ತಮ ಫಿಟ್‌ನೆಸ್‌ ಸಲಕರಣೆ. ಇದನ್ನು ಹೊರತು ಪಡಿಸಿ ವಯಸ್ಸಿಗನುಗುಣವಾಗಿ ಜಿಮ್‌ ಸಲಕರಣೆಗಳನ್ನು ಬಳಸುವ ಬಗೆಯನ್ನೂ ನಾವು ಗ್ರಾಹಕರಿಗೆ ತಿಳಿಸಿಕೊಡುತ್ತೇವೆ. 

***
ಮನೆಗೆ ಕೊಂಡೊಯ್ದ ಹದಿನೈದು ದಿನ ಚೆನ್ನಾಗಿ ಟ್ರೆಡ್‌ಮಿಲ್‌ ಬಳಸುತ್ತಾರೆ. ನಾವು ಅದಕ್ಕೆ ಸರ್ವಿಸ್‌ ನೀಡಲು ಹೋಗುವಷ್ಟರಲ್ಲಿ ಅದು ದೂಳು ಹಿಡಿದಿರುತ್ತದೆ ಅಥವಾ ಅದರ ಮೇಲೆ ಬಟ್ಟೆ ಒಣಗಿಹಾಕಿರುತ್ತಾರೆ. ಕೆಲವು ಗ್ರಾಹಕರು ಟ್ರೆಡ್‌ಮಿಲ್‌ ಕೊಂಡುಕೊಂಡ ಮೂರು ತಿಂಗಳಿಗೇ ನಮ್ಮ ಬಳಿ ಬಂದು ಅದನ್ನು ಬೇರೆಯಾರಿಗಾದರೂ ಮಾರಿಬಿಡಿ ಎಂದು ಕೇಳಿಕೊಳ್ಳುತ್ತಾರೆ. ನನ್ನ ನೂರು ಗ್ರಾಹಕರಲ್ಲಿ ಅರವತ್ತರಿಂದ ಅರವತ್ತೈದು ಮಂದಿ ಮಾಡುವುದೇ ಹೀಗೆ. ಇಂತಹವರಿಗೆ ನಾವು ಜಿಮ್‌ಗಳಿಗೆ ಬರುವಂತೆ ಮನವೊಲಿಸುತ್ತೇವೆ. ಯಾರದೋ ಮನೆಯಲ್ಲಿ ಜಿಮ್‌ ಇರುತ್ತದೆ. ಅದಕ್ಕಾಗಿ ತಾವೂ ಜಿಮ್‌ ಆರಂಭಿಸುತ್ತೇವೆ ಎಂದು ಸುಮ್ಮನೆ ಜಿಮ್‌ ನಿರ್ಮಿಸಿದರೆ ಅದರಿಂದ ಮನೆಯ ಜಾಗದ ಜೊತೆ ಹಣವೂ ವ್ಯರ್ಥ. 
ಹರೀಶ್‌ ಕೃಷ್ಣಪ್ಪ, ಜಿಮ್‌ ತರಬೇತುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT