ಶುಕ್ರವಾರ, ಡಿಸೆಂಬರ್ 6, 2019
21 °C

ಮನೆಯೆಂದರೆ ಸ್ಪರ್ಗ!

Published:
Updated:
ಮನೆಯೆಂದರೆ  ಸ್ಪರ್ಗ!

ನಮ್ಮದೇ ಆದ ಮನೆಯೊಂದಿದ್ದರೆ ಎನ್ನುವ ಹಂಬಲ ಯಾರಿಗೆ ಕಾಡಿಲ್ಲ? ರಾಷ್ಟ್ರಕವಿ ಕುವೆಂಪು ಅವರು `ಓ ನನ್ನ ಚೇತನ ಆಗು ನೀ ಅನಿಕೇತನ~ ಎಂದು ಹಾಡಿದರೂ, ಅವರು ಹಾಡಿ, ಆಡಿ ಬೆಳೆದ ಕುಪ್ಪಳ್ಳಿಯ ಮನೆ ಯಾರನ್ನು  ಆಕರ್ಷಿಸಿಲ್ಲ? ಎಷ್ಟು ಅದ್ಭುತ, ರಮ್ಯವಾದ ಮನೆಯಲ್ಲಿದ್ದರೂ, ಆ ಮನೆಯಿಂದ ನಮಗೆಷ್ಟು ಅದೃಷ್ಟ ಒಲಿದು ಬಂದರೂ, ಅಂತರಾತ್ಮ ನಮ್ಮದೇ ಕನಸಿನ, ನಾವೇ ನಿಂತು ಕಟ್ಟಿಸುವ ಮನೆಗಾಗಿ ಹಾತೊರೆಯುತ್ತಿರುತ್ತದೆ.ಹೊಲದ ಮಧ್ಯೆಯಲ್ಲಿ ಮನೆ ಕಟ್ಟಿಸಿಕೊಂಡವರೋ, ಗಿಜಿಗುಡುವ ನಗರದ ಮಧ್ಯಭಾಗವೇ ಬೇಕೆಂದವರೋ, ನೆಲವೂ-ಮುಗಿಲೂ ನನಗೆ ಬೇಡವೆಂಬಂತೆ ಫ್ಲಾಟ್‌ಗೆ ತೃಪ್ತಿಪಟ್ಟುಕೊಂಡವರೋ, ಕನಸಿನ ಮನೆಕಟ್ಟಿ ಬಾಡಿಗೆಗೆ ಬಿಟ್ಟುಕೊಟ್ಟಿರುವವರೋ ಅಂತೂ ಮನೆಗಳು ನಮ್ಮ ಮನಗಳನ್ನು ಆಳುತ್ತವೆ. ಮನೆಯೆಂದರೆ ಅದು ಸ್ಪರ್ಗ!ವಿಶೇಷವಾಗಿ ನಾವು ಆಡಿ ಬೆಳೆದ ಬಾಲ್ಯದ ನೆನಪುಗಳನ್ನು ಹೊತ್ತ ಮನೆ. ದೊಡ್ಡ ಬಾಗಿಲ ಹೊಸ್ತಿಲ ಮೇಲೆ ಕೂತು ಅತ್ತಿದ್ದೋ, ಅಟ್ಟದ ಮೇಲೆ ಕತ್ತಲಲ್ಲಿ ಬಚ್ಚಿಟ್ಟುಕೊಂಡದ್ದೋ, ದೊಡ್ಡ ಪಡಸಾಲೆಯಲ್ಲಿ ಹಬ್ಬಕ್ಕೆಂದು ಬಂದ ನೆಂಟರು-ಬಂಧುಗಳ ಸಡಗರವೋ, ಟೆರೇಸಿನ ಮೇಲೆ ಒಣಗಿದ ಹಪ್ಪಳ-ಸಂಡಿಗೆಗಳೋ, ಗಾಳಿಪಟದಾಟವೋ- ಬೇಸಿಗೆ ರಾತ್ರಿಯ ನಿದ್ರೆಯೋ, ಹಿತ್ತಲಿನ ಬಾವಿ-ಕೈತೋಟವೋ- ಮನೆಯೆಂದರೆ ಅದು ಸ್ಪರ್ಗ! ಅದರಲ್ಲೂ ವಿಶೇಷವಾಗಿ ಸುಂದರವಾಗಿ ಕಟ್ಟಿಸಿದ ಎತ್ತರದ ತುಳಸಿಕಟ್ಟೆಗಳು, ಅಗಲವಾದ ಹೊರಗಿನ ಕಟ್ಟೆಗಳು, ಮುಂದಕ್ಕೆ ಚಾಚಿಕೊಂಡ ಮಾಡುಗಳು, ಅಟ್ಟದ ಬೆಳಕನ್ನು ಸೂಸುವ ಮೆಟ್ಟಿಲುಗಳು ತೀರಾ ಆತ್ಮೀಯ ವಲಯದ ಭಾಗಗಳು.ಅತ್ಯಾಧುನಿಕ ತಂತ್ರಜ್ಞಾನದ ಕಟ್ಟಡಗಳೂ ಈ ಎಲ್ಲಾ ಅಂಶಗಳನ್ನು ಒಳಗೊಂಡು ರೂಪಿತವಾಗುತ್ತಿವೆ. ಅಪಾರ್ಟ್‌ಮೆಂಟ್‌ಗಳಲ್ಲಿ ಬದುಕುವವರು ವಂಚಿತರಾಗುವ  ಮೇಲಿನ ಸಂಗತಿಗಳಿಗೆ ಬದಲಾಗಿ ದೊಡ್ಡ ಸ್ವಿಮ್ಮಿಂಗ್‌ಪೂಲ್, ಟೆನ್ನಿಸ್ ಕೋರ್ಟ್,      ಪಾರ್ಕ್ ಹಾಗೂ ಇತರೆ ಸೌಲಭ್ಯಗಳು ಹುಟ್ಟಿಕೊಂಡಿವೆ. ದೊಡ್ಡ ಕೆಳಮಟ್ಟದ ವಿಶೇಷವಾಗಿ ಗಾಜಿನ ಸ್ಲೈಡಿಂಗ್ ವಿಂಡೋಸ್ ಹೊರಗಿನ ಸುಂದರ ನೋಟಕ್ಕೆ ಅತೀಸುಂದರ ಚೌಕಟ್ಟು ನಿರ್ಮಿಸಿದಂತೆ. ಎಲ್ಲರ ನೆಚ್ಚಿನ-ಕನಸಿನ ಮನೆ ಸಾಲದ ಹೊರೆ ಸೃಷ್ಟಿಸದೇ, ಮನಮುಟ್ಟುವಂತೆ ಇರಲಿ. ಸಣ್ಣಪುಟ್ಟ ಸುಖ ನೀಡುವ ಅಂಶಗಳೂ ಸೇರಿರಲಿ. ಎಷ್ಟಾದರೂ ಮನೆಯೇ ಮಂತ್ರಾಲಯ ಅಲ್ಲವೇ? 

 

ಪ್ರತಿಕ್ರಿಯಿಸಿ (+)