ಮನೆಯೇ ದೇಗುಲ

7

ಮನೆಯೇ ದೇಗುಲ

Published:
Updated:

ಹೊರನೋಟಕ್ಕೆ ಇದು ಬಂಗಲೆ. ಒಳಹೊಕ್ಕರೆ ದೇಗುಲ. ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳು, 40ಕ್ಕೂ ಹೆಚ್ಚು ಬಗೆಯ ದೇವರ ವಿಗ್ರಹಗಳ ಅನಾವರಣ!

ಇದು ಬೆಂಗಳೂರಿನ ಜೆ.ಪಿ.ನಗರ, ಐಟಿಐ ಲೇಔಟ್ 30ನೇ ಮುಖ್ಯರಸ್ತೆಯಲ್ಲಿರುವ ಆರ್.ಮಂಜುನಾಥ್ ಅವರ ಮನೆಯ ನೋಟ.ಮನೆ ಮುಂದಿನ ದ್ವಾರದಲ್ಲಿ ಎರಡು ಮರದ ಶಿಲ್ಪಗಳಿಂದ ಸ್ವಾಗತ. ಹಾಗೆಯೇ ಮುಂದೆ ನಡೆದರೆ ಮುಖ್ಯ ದ್ವಾರದ ಮೇಲೆ ವಾಸ್ತು ಗಣೇಶನ ಉಬ್ಬು ಶಿಲ್ಪ. ಮನೆ ಒಳಭಾಗಕ್ಕೆ ಕಾಲಿಡುತ್ತಿದ್ದಂತೆ ಆವರಣದ ಗೋಡೆಯಲ್ಲಿ 12 ಅಡಿ ಎತ್ತರದಲ್ಲಿ ನಿಂತ ಅದ್ಭುತ ಗಣೇಶನ ಮೂರ್ತಿ. ಕೃಷ್ಣಶಿಲೆಯಲ್ಲಿ ಮಾಡಿದ ಈ ಮೂರ್ತಿ ಮನೆಯ ಇತರ ವಿಗ್ರಹಗಳ ಕೇಂದ್ರಬಿಂದು.ಗಣೇಶನ ಮೇಲೆ ಭಕ್ತಿ

38 ವರ್ಷಗಳಿಂದ ಒಳಾಂಗಣ ವಿನ್ಯಾಸದ ಕಂಪೆನಿ ನಡೆಸುತ್ತಿರುವ ಮಂಜುನಾಥ್ ಅವರಿಗೆ ಗಣೇಶನಲ್ಲಿ ಅಪಾರ ಭಕ್ತಿ. ಮೊದಲ ಬಾರಿ ಮನೆಯಲ್ಲಿ ಪೇಪರ್‌ನಿಂದ ತಯಾರಿಸಿದ ಒಂದು ಗಣೇಶನನ್ನು ತಂದಿಟ್ಟುಕೊಂಡರಂತೆ. ಅಂದಿನಿಂದ ಗಣೇಶ ಶಿಲ್ಪಗಳ ಸಂಗ್ರಹದ ಹವ್ಯಾಸ ಆರಂಭವಾಗಿದೆ. ಈಗ ಈ ಶಿಲ್ಪಗಳು ಸಾವಿರದ ಗಡಿ ದಾಟಿ ಮನೆಯಲ್ಲೆಲ್ಲ ಕಂಗೊಳಿಸುತ್ತಿವೆ.ನಾಲ್ಕು ಮಹಡಿಯ ಕಟ್ಟಡದ ಮೂಲೆ ಮೂಲೆಯಲ್ಲೂ ಶಿಲ್ಪಕಲಾಕೃತಿಗಳಿವೆ. ಗಣೇಶ ವಿಗ್ರಹಗಳಷ್ಟೇ ಅಲ್ಲದೇ ಸೂರ್ಯ, ಮಹಿಷ ಮರ್ದಿನಿ, ಕುಬೇರ, ಚನ್ನಕೇಶವ ಸೇರಿದಂತೆ ಅತ್ಯದ್ಭುತ ಕಲಾಕೃತಿಗಳ ಸಂಗ್ರಹವಿದೆ. ಇಲ್ಲಿನ ಬಹುತೇಕ ಶಿಲ್ಪಗಳು ಹೆಗ್ಗಡದೇವನ ಕೋಟೆಯಿಂದ ತಂದ ಕಪ್ಪುಕಲ್ಲುಗಳಿಂದ ತಯಾರಾಗಿವೆ. ಬೇಲೂರು, ಹಳೆಬೀಡುಗಳಲ್ಲಿನ ಹೊಯ್ಸಳ ಶೈಲಿಯ ಶಿಲಾಬಾಲಿಕೆಯರನ್ನು ಹೋಲುವ ಮೂರ್ತಿಗಳನ್ನು ಕೆತ್ತಿಸಿದ್ದಾರೆ.ಉಚಿತ ತರಬೇತಿ

ಶಿಲ್ಪಗ್ರಾಮವೆಂಬ ತರಬೇತಿ ಶಾಲೆಯನ್ನು ನಡೆಸುತ್ತಿರುವ ಮಂಜುನಾಥ, ಉಚಿತವಾಗಿ ಶಿಲ್ಪಗಳ ಕೆತ್ತನೆ ಬಗ್ಗೆ ತರಬೇತಿ ನೀಡಲಾಗುತ್ತಿದ್ದಾರೆ. ಇಲ್ಲಿ ರೂಪ ತಾಳಿದ ಆಕರ್ಷಕ ಶಿಲೆಗಳು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿವೆ. ಇಲ್ಲಿಯವರೆಗೆ ಶಿಲ್ಪಗ್ರಾಮದಿಂದ ಸುಮಾರು ಇನ್ನೂರು ಶಿಲ್ಪ ಕಲಾವಿದರು ಜೀವನ ಕಂಡುಕೊಂಡಿದ್ದಾರೆ.`ಕಲಾವಿದ ಕಮಲೇಶ್ ಸೇರಿದಂತೆ ನಾಲ್ವರು ಕಲಾವಿದರಿಂದ ತರಬೇತಿ ನೀಡುತ್ತಿದ್ದೇವೆ. 5ರಿಂದ 10 ವರ್ಷಗಳಲ್ಲಿ ವಿದ್ಯಾರ್ಥಿಗಳು ಸಿದ್ಧರಾಗುತ್ತಾರೆ. ಎಲ್ಲಾ ಖರ್ಚು ವೆಚ್ಚ ನಾವೇ ನೋಡಿಕೊಳ್ಳುತ್ತೇವೆ. ಆದರೆ ಅವರ ಕೈಯಿಂದ ಜೀವತಳೆದ ಶಿಲ್ಪಗಳು ಮಾತ್ರ ನಾವು ಸಂಗ್ರಹಿಸಿ ಇಟ್ಟುಕೊಳ್ಳುತ್ತೇವೆ' ಎಂದು ಹೇಳುತ್ತಾರೆ ಮಂಜುನಾಥ್.`ಕಪ್ಪುಕಲ್ಲಿನ ಶಿಲ್ಪಗಳಲ್ಲದೇ ಮರ, ಹಿತ್ತಾಳೆ ಹಾಗೂ ಕಂಚಿನ ಶಿಲ್ಪಗಳೂ ಇಲ್ಲಿವೆ. ಪತ್ನಿ ಕನ್ನಿಕಾ ಸೇರಿದಂತೆ ಆರು ಮಂದಿ ಈ ವಿಗ್ರಹಗಳನ್ನು ನೋಡಿಕೊಳ್ಳುತ್ತಾರೆ. ಪ್ರತಿದಿನ ದೂಳು ಒರೆಸುವುದೇ ಇವರ ಕಾಯಕ. ಜೊತೆಗೆ ವರ್ಷಕ್ಕೊಮ್ಮೆ ಮರದ ಶಿಲ್ಪಗಳಿಗೆ ಪಾಲಿಶ್ ಮಾಡಿಸಲಾಗುತ್ತದೆ. ಈ `ಕಲಾಗ್ಯಾಲರಿ'ಯ ಮನೆಯ ವೀಕ್ಷಣೆಗೆ ಬಡಾವಣೆ ಸುತ್ತಮುತ್ತಲಿನ ಮಂದಿ ಬಂದು ನೋಡಿಕೊಂಡು ಹೋಗುತ್ತಾರೆ. ಆದರೆ ಇಲ್ಲಿರುವ ಶಿಲ್ಪಗಳನ್ನು ಮಾರಾಟ ಮಾಡುವುದಿಲ್ಲ. ಈ ಸಂಗ್ರಹದ ಉದ್ದೇಶ ಶಿಲ್ಪಕಲೆಯನ್ನು ಪ್ರೋತ್ಸಾಹಿಸುವುದಷ್ಟೇ' ಎಂದು ಮುಗುಳ್ನಗುತ್ತಾರೆ ಮಂಜುನಾಥ್.ಗಮನ ಸೆಳೆಯುವ ವಿಗ್ರಹಗಳು

ಕಲ್ಲಿನ ಶಿಲ್ಪಗಳ ಜೊತೆಗೆ ಉಬ್ಬುಶಿಲ್ಪಗಳು ಗಮನ ಸೆಳೆಯುತ್ತವೆ. ಮೋದಕ ಹಿಡಿದ ಅಂಬೆಗಾಲು ಗಣಪ, ಸಿಲ್ವರ್, ರೋಸ್‌ವುಡ್‌ನಿಂದ ಮಾಡಿದ ನಾಟ್ಯ ಗಣೇಶ, ವ್ಯಾಸಭಾರತ ಬರೆಯುತ್ತಿರುವ ಉಯ್ಯಾಲೆ ಗಜಮುಖ, ಇದರಲ್ಲಿ ಹೊಟ್ಟೆಗೆ ಕಟ್ಟಿಕೊಂಡ ಹಾವನ್ನು ತೆಗೆದಿಟ್ಟು ದಿಂಬಿನ ಮೇಲೆ ಮಲಗಿರುವ ಭಂಗಿ ಆಕರ್ಷಕವಾಗಿದೆ. ವ್ಯಾಸಭಾರತ ಬರೆಯುವುದಕ್ಕೆ ಅಡ್ಡಿಪಡಿಸುತ್ತಿರುವ ಒಂಬತ್ತು ಗಣಗಳು (ಪ್ಯಾರಿಸ್‌ನಿಂದ ತಂದ ಮರದ ಶಿಲ್ಪಗಳು) ಆಕರ್ಷಿಸುತ್ತವೆ.ಕಿಕ್ಕೇರಿ ಬ್ರಹ್ಮೇಶ್ವರ ದೇವಸ್ಥಾನದ ಕಲ್ಲಿನ ಕಂಬದ ಮೇಲ್ಭಾಗದಲ್ಲಿರುವ ಶಿಲ್ಪಗಳ ರೀತಿಯಲ್ಲೇ ಎರಡು ಕಂಬಗಳಿದ್ದು, ಮೇಲ್ಭಾಗದಲ್ಲಿ ಮಧುಪಾನ ಸುಂದರಿ, ನಾಟ್ಯ ಸುಂದರಿ ಸೇರಿದಂತೆ ವಿವಿಧ ಭಂಗಿಯ ಶಿಲ್ಪಗಳು ಕಣ್ಮನ ಸೆಳೆಯುತ್ತವೆ. ಬನವಾಸಿಯಿಂದ ತಂದ ಆನೆಗಳು, ಇಂಡೋನೇಷ್ಯಾದ ಹಸಿರು ಕಲ್ಲಿನ ಗಣಪ, ಇಡಗುಂಜಿಯಲ್ಲಿರುವಷ್ಟೇ ಎತ್ತರ ಹಾಗೂ ಅದೇ ಮಾದರಿಯ ಗಣನಾಯಕ ಹಾಗೂ ಕರ್ಣನ ಹುಟ್ಟಿನಿಂದ ಮರಣವನ್ನಪ್ಪಿದ ಕ್ಷಣದವರೆಗೂ ವಿವಿಧ ಸನ್ನಿವೇಶಗಳ ಸೂಕ್ಷ್ಮ ಕೆತ್ತನೆಗಳಿರುವ ಏಕಶಿಲಾ ವಿಗ್ರಹ... ಹೀಗೆ ನೋಡುತ್ತಿದ್ದರೆ ಕಾಲ ಸರಿಯುವುದೇ ತಿಳಿಯುವುದಿಲ್ಲ!ಕೇರಳ, ಆಂಧ್ರ, ತಮಿಳುನಾಡು ಹಾಗೂ ಮಹರಾಷ್ಟ್ರದ ಕೆಲ ಪ್ರದೇಶಗಳಿಂದ ತಂದ ಸಾವಿರಕ್ಕೂ ಹೆಚ್ಚಿನ ದೀಪಗಳ ಸಂಗ್ರಹ ಇವರಲ್ಲಿವೆ. ಒಂದಿಷ್ಟು ಜಾಗವಿದ್ದರೇ ಸಾಕು ಮನೆ ಕಟ್ಟಿಸಿ ಬಾಡಿಗೆ ನೀಡುವ ಬೆಂಗಳೂರಿಗರ ನಡುವೆ ಶಿಲ್ಪಕಲೆಯನ್ನು ಪ್ರೋತ್ಸಾಹಿಸಲೆಂದು ಮನೆಯನ್ನೇ ಮುಡುಪಾಗಿಟ್ಟಿರುವ ಮಂಜುನಾಥ್ ವಿಶೇಷವೆನಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry