ಮನೆಯ ಅಂದಕ್ಕೆ

7

ಮನೆಯ ಅಂದಕ್ಕೆ

Published:
Updated:

ಮನೆಯೊಳಗೆ ಸ್ವಾಗತಿಸಲು ಕೆಂಪು ರತ್ನಗಂಬಳಿ, ಕುಳಿತು ಸುಸ್ತು ನಿವಾರಿಸಿಕೊಳ್ಳಲು ಮೆತ್ತನೆಯ ಸೋಫಾ, ಸಮಯ ಕಳೆಯಲು ಮನೆ ಮಧ್ಯದಲ್ಲಿ ತೂಗುಯ್ಯಾಲೆ, ಅರ್ಧಕೊರೆದ ದೊಡ್ಡ ಕಲ್ಲಂಗಡಿ ಹಣ್ಣಿನ ಗಾತ್ರದ ಕುರ್ಚಿಯೊಳಗೆ ಕುಳಿತು ಪತ್ರಿಕೆ ಓದುತ್ತ ಕಾಫಿ ಕುಡಿಯುವ ಸುಖ, ರಾತ್ರಿಯ ಸಿಹಿನಿದ್ದೆಗೆ ಹಾಸಿಟ್ಟ ಮೃದು ಹಾಸಿಗೆ... ಕನಸಿನ ಮನೆಯಂತಿಲ್ಲವೇ ಚಿತ್ರಣ?ಈ ಎಲ್ಲ ಕನಸುಗಳೂ ಸಾಕಾರಗೊಂಡಂತೆ ಅರಮನೆ ಮೈದಾನದಲ್ಲಿ ಮೈತಳೆದಿವೆ. ಅವರವರ ಅಭಿರುಚಿ, ಆಸಕ್ತಿ ಹಾಗೂ ಆರ್ಥಿಕ ಶಕ್ತಿಯನ್ನು ಅವಲಂಬಿಸಿ ಪೀಠೋಪಕರಣಗಳ ಮೇಳವೇ ಆರಂಭವಾಗಿದ್ದು, ಇಂದೇ (ಸೋಮವಾರ) ಕೊನೆಗೊಳ್ಳಲಿದೆ. ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಅಲಂಕಾರಿಕ ವಸ್ತುಗಳು ದೊರಕಬೇಕೆಂಬ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. ಮನೆಯ ಅಲಂಕಾರಕ್ಕೆ ಬಳಸುವ ಎಲ್ಲಾ ವಸ್ತುಗಳು ಒಂದೇ ಛಾವಣಿ ಕೆಳಗೆ ಸಿಗಲಿದೆ. ಇದು ದೇಶದ ಅತಿದೊಡ್ಡ ಪೀಠೋಪರಣಗಳ ಮೇಳವೂ ಹೌದು ಎನ್ನುತ್ತಾರೆ ಆಯೋಜಕರು.ಬೆಳೆಯುತ್ತಿರುವ ನಗರಿಗರ ನಾಡಿಮಿಡಿತ ಅರಿತಿರುವ ಪ್ರತಿಷ್ಠಿತ ಸಂಸ್ಥೆಗಳು ಮನೆಯ ಅಂದ ಹೆಚ್ಚಿಸಲು ಮೇಜು, ಕುರ್ಚಿ, ಸೋಫಾ, ಬೆಡ್‌ಸೆಟ್, ಡೈನಿಂಗ್ ಟೇಬಲ್‌ಗಳನ್ನು ಪ್ರದರ್ಶನಕ್ಕಿಟ್ಟಿವೆ. ಈಗಾಗಲೇ ಅಲಂಕಾರ ಪ್ರಿಯರನ್ನು ಸೆಳೆಯುವಲ್ಲಿ ಸಫಲವಾದ ಮೇಳದಲ್ಲಿ 150ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಂಡಿವೆ. ಮರದಲ್ಲಿ ಕೆತ್ತಿದ ಹಾಗೂ ಗ್ಲಾಸ್‌ನಿಂತ ನಿರ್ಮಿಸಿದ ನೂತನ ವಿನ್ಯಾಸದ ಡೈನಿಂಗ್ ಟೇಬಲ್‌ಗಳು ಗಮನ ಸೆಳೆಯುತ್ತಿವೆ. ಕಲಾವಿದರ ಕುಸುರಿ ಕೆತ್ತನೆ ಕೆಲಸಗಳಿಗೂ ಇಲ್ಲಿ ಪ್ರಾಮುಖ್ಯತೆ ನೀಡಲಾಗಿದೆ.ಬಹುತೇಕ ಜನರಿಗೀಗ ಮನೆಯಲ್ಲಿ ಆಶ್ರಯತಾಣವೆನ್ನಿಸುವುದೇ ಬೆಡ್‌ರೂಂ. ಮನೆಯಲ್ಲಿರುವ ಬಹುತೇಕ ಹೊತ್ತನ್ನು ಶಾಂತವಾಗಿರಿಸುವಂತೆ ಮಲಗುವ ಕೋಣೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಮನಸ್ಸನ್ನು ಆಹ್ಲಾದಗೊಳಿಸುವಂತೆ ಅಲಂಕಾರವೂ ಪ್ರಾಮುಖ್ಯ ಪಡೆದಿದೆ. ಬೆಡ್‌ರೂಂ ಪೀಠೋಪಕರಣಗಳಲ್ಲಿ ಪ್ರಾಚೀನ ಹಾಗೂ ಆಧುನಿಕ ವಿನ್ಯಾಸಗಳೆಂದು ವರ್ಗೀಕರಿಸಲಾಗಿದ್ದು ಡ್ರೆಸ್ಸಿಂಗ್ ಟೇಬಲ್, ಚೆಸ್ಟ್ ಆಫ್ ಡ್ರಾವರ್ಸ್‌, ಜ್ಯುವೆಲ್ಲರಿ ಅಲ್ಮೆರಾ, ಬ್ಲಾಂಕೆಟ್ ರ‌್ಯಾಕ್ಸ್, ಬೆಡ್‌ಬೆಂಚಸ್‌ಗಳೂ ದೊರೆಯಲಿವೆ. ಕೆಂಪು, ಕಡುಕೆಂಪು, ಗುಲಾಬಿ ಬಣ್ಣದ ಬೆಡ್‌ಗಳು ಶೃಂಗಾರಕ್ಕೆ ಸಿಂಗರಿಸಿಕೊಂಡಂತಿವೆ.ಚಳಿಗಾಲದಲ್ಲಿ ಕೋಣೆಯನ್ನು ಬೆಚ್ಚಗಿಡುವ ಕರ್ಟನ್‌ಗಳೂ ಮನೆಯ ಸೌಂದರ್ಯವನ್ನು ಹೆಚ್ಚಿಸಬಲ್ಲವು. ಉಲ್ಲನ್, ಥರ್ಮಲ್, ರಬ್ಬರ್ ಲೈನಿಂಗ್, ವೆಲ್ವೆಟ್, ಟಾಪೆಸ್ಟ್ರಿ, ಲೆನಿನ್ ಕರ್ಟನ್‌ಗಳು ಸದಾ ಕಾಲ ಮನೆಯನ್ನು ರಕ್ಷಿಸುತ್ತವೆ. ಬೇಸಿಗೆಯಲ್ಲಿ ವಾತಾವರಣವನ್ನು ತಣ್ಣಗಿರಿಸುವ ಈ ಕರ್ಟನ್‌ಗಳು ಚಳಿಗಾಲದಲ್ಲಿ ಬೆಚ್ಚಗಿರಿಸುವ ಶಕ್ತಿಯನ್ನೂ ಹೊಂದಿವೆ.ಇದರೊಂದಿಗೆ ಕೈಮಗ್ಗದ ವಸ್ತುಗಳಾದ ಬೆಡ್‌ಶೀಟ್, ಪಿಲ್ಲೋ ಕವರ್, ಕರ್ಟನ್, ಟವಲ್ಸ್, ಡೋರ್‌ಮ್ಯಾಟ್, ಬೆಡ್‌ಸ್ಪ್ರೆಡ್, ಕಾರ್ಪೆಟ್ಸ್‌ಗಳೂ ಲಭ್ಯ. ಮನೆಯ ಒಳಾಂಗಣದ ಅಂದವನ್ನು ಹೆಚ್ಚಿಸುವ ಕರಕುಶಲ ವಸ್ತುಗಳೂ ಪ್ರದರ್ಶನದಲ್ಲಿರುವುದು ವಿಶೇಷ. ಆಕರ್ಷಕ ಗಡಿಯಾರ, ಗೋಡೆ ಚಿತ್ರ, ಹೂಕುಂಡ, ಟೀಪಾಯಿ ಮೊದಲಾದ ಅಲಂಕಾರಿಕ ವಸ್ತುಗಳೂ ಈ ಮೇಳದಲ್ಲಿ ಜಾಗ ಪಡೆದಿವೆ.ಟೈಲ್ಸ್‌ಗಳ ಹಾಗೂ ಗೋಡೆಯ ಬಣ್ಣವನ್ನೇ ಹೋಲುವ ಸೋಫಾಗಳನ್ನು ಖರೀದಿಸುವುದು, ಅದೇ ಬಣ್ಣದ ಕರ್ಟನ್, ಭಿತ್ತಿಚಿತ್ರ ನೇತು ಹಾಕಿ  ಇಂದಿನ ಫ್ಯಾಶನ್. ನಾವು ಹೊಸದಾಗಿ ಜಯನಗರದಲ್ಲಿ ಖರೀದಿಸಿರುವ ಫ್ಲಾಟ್‌ಗೆ ಸೋಫಾ ಸೆಟ್ ಖರೀದಿಸಲು ಬಂದಿದ್ದೇವೆ. ಸಾಮಾನ್ಯ ಅಂಗಡಿಗಳಿಗೆ ಹೋಲಿಸಿದರೆ ಇಲ್ಲಿ ಆಯ್ಕೆಗೆ ವಿಫುಲ ಅವಕಾಶಗಳಿವೆ ಎನ್ನುತ್ತಾರೆ ಗೃಹಿಣಿ ಲತಾ.ನಿಮ್ಮ ಮನೆಗೂ ಒಂದಷ್ಟು ಕುರ್ಚಿ, ಸೋಫಾ, ಖರೀದಿಸುವ ಯೋಜನೆಗಳಿದ್ದರೆ, ಸಿದ್ಧರಾಗಿ ಬನ್ನಿ. ಇಲ್ಲದಿದ್ದರೂ ವಿನ್ಯಾಸಗಳನ್ನು ಕಣ್ತುಂಬಿಕೊಳ್ಳಲಾದರೂ ಭೇಟಿ ನೀಡಿ. ಬದುಕು ಎಲ್ಲದಕ್ಕೂ ಅವಕಾಶ ನೀಡುತ್ತದೆ. ಈಗ ನೋಡಲು, ಮುಂದೆ ಖರೀದಿಸಲು...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry